ದೆಹಲಿಯ ಎಎಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ನಾವು ಮನೆ ಮನೆಗೆ ಹೋಗುತ್ತಿದ್ದೇವೆ. ಅವರು ಆಡಳಿತದ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸಿದ್ದಾರೆ ಮತ್ತು ಚುನಾವಣೆಯನ್ನು ಗೆಲ್ಲಲು ಕೋಮು ತಂತ್ರಗಳನ್ನು ಬಳಸಿದ್ದಾರೆ ಎಂದು ದೆಹಲಿ ಬಿಜೆಪಿಯ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಭಾನುವಾರ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜಧಾನಿಯ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡುವ ಮಸೂದೆಯ ಪ್ರಸ್ತಾಪವನ್ನು ಆಮ್ ಆದ್ಮಿ ಪಕ್ಷ ಟೀಕಿಸಿದೆ. ಬಿಜೆಪಿಯ ದೆಹಲಿ ಘಟಕವು ಮನೆ ಮನೆಗೆ ತೆರಳಿ ಚುನಾಯಿತ ಸರ್ಕಾರದ ಬದಲು ಲೆಪ್ಟಿನೆಂಟ್ ಗವರ್ನರ್ ಆಡಳಿತದ ದೆಹಲಿಯ ಕಲ್ಪನೆಯನ್ನು ಅನುಮೋದಿಸುತ್ತಿದೆ ಎಂದು ಆರೋಪಿಸಿದೆ.
“ಬಿಜೆಪಿ ಸ್ವಯಂಸೇವಕರನ್ನು ಮನೆಮನೆಗಳಿಗೆ ಕಳುಹಿಸಿ, ಚುನಾಯಿತ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ದೆಹಲಿಯನ್ನು ಆಳುವುದು ಉತ್ತಮ ಎಂದು ಜನರಿಗೆ ಹೇಳುತ್ತಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಪುರಸಭೆಯ ಮಟ್ಟದಲ್ಲಿಯೂ ಅವರು ವಿಫಲರಾಗುತ್ತಿದ್ದಾರೆ” ಎಂದು ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಬಿಜೆಪಿ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದ ಪಿ.ವಿ ನರಸಿಂಹ ರಾವ್ ಪುತ್ರಿ
“ದೆಹಲಿಯಲ್ಲಿ ಚುನಾಯಿತ ಸರ್ಕಾರದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವ ಕಲ್ಪನೆಯನ್ನು ಅವರು ಅನುಮೋದಿಸಲು ಇದು ಒಂದೇ ಕಾರಣವಾಗಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ನಾನು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರಿಗೆ ಸವಾಲು ಹಾಕುತ್ತೇನೆ” ಎಂದು ಭಾರದ್ವಾಜ್ ಹೇಳಿದ್ದಾರೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಸೂದೆಯನ್ನು “ಅಸಂವಿಧಾನಿಕ” ಮತ್ತು “ಪ್ರಜಾಪ್ರಭುತ್ವ ವಿರೋಧಿ” ಎಂದು ಕರೆದಿದ್ದರು.
ಈ ಬಗ್ಗೆ ಪ್ರತಿಕ್ರಿಯಸಿರುವ ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್, “ಲೆಫ್ಟಿನೆಂಟ್ ಗವರ್ನರ್ ಆಡಳಿತದ ದೆಹಲಿಯ ಕಲ್ಪನೆಯನ್ನು ನಾವು ಎಂದಿಗೂ ಅನುಮೋದಿಸಿಲ್ಲ. ದೆಹಲಿಯ ಎಎಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ನಾವು ಮನೆ ಮನೆಗೆ ಹೋಗುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಅವರು ಆಡಳಿತದ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸಿದ್ದಾರೆ ಮತ್ತು ಚುನಾವಣೆಯನ್ನು ಗೆಲ್ಲಲು ಕೋಮು ತಂತ್ರಗಳನ್ನು ಬಳಸಿದ್ದಾರೆ. ನಮ್ಮ ಘಟಕದ ಅಧ್ಯಕ್ಷರಿಗೆ ಸವಾಲು ಹಾಕುವ ಬದಲು, ಆಡಳಿತದ ಮುಂಚೂಣಿಯಲ್ಲಿ ಎಎಪಿ ಹೇಗೆ ಕಾರ್ಯನಿರ್ವಹಿಸಿದೆ ಎಂಬುದರ ಕುರಿತು ಚರ್ಚೆಗೆ ಭಾರದ್ವಾಜ್ ಸಿದ್ಧರಾಗಬೇಕು” ಎಂದು ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾ ಭಾಷಣದಲ್ಲಿ ಮೋದಿ, ಶಾ ಮತ್ತು ಪ್ರಿಯಾಂಕಾ ಗಾಂಧಿ ಹೇಳಿದ್ದೇನು?


