ಕಲ್ಲುಬಂಡೆ ಸಿಡಿದ ಶಬ್ದಕ್ಕೆ ಬೆಚ್ಚಿಬಿದ್ದು ಮೃತಪಟ್ಟಿದ್ದ ದಲಿತ ಕೂಲಿಕಾರ ಕುಟುಂಬವೊಂದರ ಮೂರು ತಿಂಗಳ ಶಿಶುವೊಂದರ ಶವವನ್ನು ಗುಂಡಿಯಿಂದ ಹೊರತೆಗೆಸಿ ಶವ ಸಂಸ್ಕಾರಕ್ಕೆ ಬೇರೆಡೆಗೆ ಕಳುಹಿಸಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನ ಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎತ್ತಿನಹೊಳೆ ಪೈಪ್‌ಲೈನ್ ಕಾಮಗಾರಿಗಾಗಿ ನಡೆದ ಕಲ್ಲುಬಂಡೆ ಸಿಡಿದ ಶಬ್ದಕ್ಕೆ ಮೂರು ತಿಂಗಳ ಶಿಶು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತಪಟ್ಟ ಶಿಶುವನ್ನು ಗ್ರಾಮದ ಕ್ರಾಸ್ ಬಳಿಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಗುಂಡಿ ತೋಡಿ, ವಿಧಿ ವಿಧಾನ ಮುಗಿಸಿ ಗುಂಡಿಯಲ್ಲಿಟ್ಟ ನಂತರ ಪಕ್ಕದ ಜಮೀನಿನ ಕಾವಲುಗಾರನೊಬ್ಬ ಆಗಮಿಸಿ ಹಸುಳೆಯ ಮೃತ ದೇಹವನ್ನು ಗುಂಡಿಯಿಂದ ಹೊರತೆಗೆಸಿ, ದಲಿತ ಕುಟುಂಬವನ್ನು ಬೆದರಿಸಿ ಬೇರೆಡೆಗೆ ಕಳುಹಿಸಿದ್ದಾನೆ.
ಇದನ್ನೂ ಓದಿ: ಎಲ್ಲೆಲ್ಲೋ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗಾಗಿ ಬಟ್ಟೆ ಖರೀದಿ- ಸಿದ್ದರಾಮಯ್ಯ
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಮುಖಂಡ ಅಗ್ರಹಾರ ನಾಗರಾಜ್, “ಅದೇ ಸ್ಮಶಾನದಲ್ಲಿ ಹಿಂದಿನಿಂದಲೂ ಶವಸಂಸ್ಕಾರ ಮಾಡುತ್ತಿದ್ದಾರೆ. ಹಲವಾರು ಸಮಾಧಿಗಳು ಈಗಲೂ ಅಲ್ಲಿ ಇವೆ. ಆದರೆ ಈಗ ಆ ಜಮೀನನ್ನು ‘ಶಾಹಿ ಗಾರ್ಮೆಂಟ್ಸ್’ ಅವರು ತಮ್ಮದು ಎಂದು ವಾದಿಸುತ್ತಿದ್ದಾರೆ. ಹೀಗಾದರೆ ಜಮೀನು ಇಲ್ಲದ ಬಡ ದಲಿತ ಕುಟುಂಬಗಳು ಏನು ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿಡಿಯೋ ನೋಡಿ►►
ಘಟನೆಯ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಕೊರಟಗೆರೆ ತಾಲೂಕಿನ ತಹಸೀಲ್ದಾರ್ ಗೋವಿಂದರಾಜು ಅವರು, “ಘಟನೆ ಗಮನಕ್ಕೆ ಬಂದ ಕೂಡಲೆ ಅಲ್ಲಿಗೆ ತೆರಳಿದ್ದು, ಶವವನ್ನು ಹೊರತೆಗೆಸಿರುವ ಕಾವಲುಗಾರ ಪರಾರಿಯಾಗಿದ್ದ. ಶವ ಸಂಸ್ಕಾರ ಮಾಡಲು ಪ್ರಯತ್ನಪಟ್ಟ ಜಮೀನಿನಲ್ಲಿ ಹಿಂದಿನಿಂದಲೂ ಸಮಾಧಿ ಮಾಡುತ್ತಾ ಬರುತ್ತಿದ್ದರಾದರೂ, ಅದು ಖಾಸಗಿ ಹಿಡುವಳಿಯ ಜಮೀನಾಗಿದೆ. ಅದನ್ನು ಈಗ ಶಾಹಿ ಗಾರ್ಮೆಂಟ್ಸ್ ಅವರು ಖರೀದಿಸಿದ್ದು, ಅದಕ್ಕೆ ಕಾಂಪೌಂಡ್ ಹಾಕಿದ್ದಾರೆ ಎಂದು ತಿಳಿದುಬಂದಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಖಾಸಗೀಕರಣ ವಿರೋಧಿ ದಿನಕ್ಕೆ ರೈತರು, ಕಾರ್ಮಿಕರು ಒಂದಾಗಿದ್ದಾರೆ- ಸಂಯುಕ್ತ ಕಿಸಾನ್ ಮೋರ್ಚಾ
“ನಮ್ಮ ಇಲಾಖೆಯಿಂದ ‘ಶಾಹಿ ಗಾರ್ಮೆಟ್ಸ್’ ಜಮೀನುನಿರುವ ಹಳ್ಳವು ಒತ್ತುವರಿ ಆಗಿದೆಯೆ ಎಂದು ಸರ್ವೆ ಮಾಡಿಸಿ ತನಿಖೆ ಮಾಡುತ್ತೇವೆ. ಮಗುವಿನ ಪೋಷಕರು ವ್ಯಕ್ತಿಯ ವಿರುದ್ದ ದೂರು ದಾಖಲಿಸಲಿದ್ದೇವೆ ಎಂದು ತಿಳಿಸಿದ್ದಾರೆ. ನಾವು ಸಮಾಜ ಕಲ್ಯಾಣ ಇಲಾಖೆಯ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಮಗುವೊಂದು ಮೃತಪಡುವಷ್ಟು ಶಬ್ದ ಹೇಗೆ ಉಂಟಾಯಿತು ಎಂಬ ಬಗ್ಗೆ ಪ್ರಶ್ನೆ ಉತ್ತರಿಸಿದ ಅವರು, “ಸ್ಥಳದಲ್ಲಿ ಎತ್ತಿನ ಹೊಳೆ ಪೈಪ್‌ಲೈನ್ ಕೆಲಸ ನಡೆಯುತ್ತಿದೆ. ಸ್ಪೋಟವನ್ನು ಯಾವ ದಿನ ಮಾಡಿದರು ಎಂಬ ಬಗ್ಗೆ ಪರಿಶೀಲಿಸುತ್ತೇವೆ” ಎಂದು ತಿಳಿಸಿದ್ದಾರೆ.
ಘಟನೆಯ ನಂತರ ದಲಿತ ಕುಟುಂಬವು ಶವವನ್ನು ಪಕ್ಕದ ರಾಜಕಾಲುವೆಯ ಬಳಿ ಸಂಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ಆಟ ಶುರು – ಬಂಗಾಳದಲ್ಲಿ ಬಿಜೆಪಿ ತೊಲಗಿಸಿ’: ರಾಕೇಶ್ ಟಿಕಾಯತ್ ಕರೆ


