ಪಶ್ಚಿಮ ಬಂಗಾಳ ಚುನಾವಣೆಯ ಬಿಜೆಪಿಯ ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ತೊರೆದು, ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹೆಸರಿರದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಶ್‌ಬೆಹರಿ ಕ್ಷೇತ್ರದಿಂದ ಮಿಥುನ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಆ ಸ್ಥಾನಕ್ಕೆ ಕಾಶ್ಮೀರದ ಉಸ್ತುವಾರಿ ವಹಿಸಿಕೊಂಡಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇನ್ನು ದಕ್ಷಿಣ ಕೋಲ್ಕತ್ತದ ಸ್ಥಾನವನ್ನು ಮಿಥುನ್‌ಗೆ ಬಿಟ್ಟುಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಅದೇ ಕಾರಣಕ್ಕೆ ಅವರು ತಮ್ಮ ಮತದಾರರ ಗುರುತಿನ ಚೀಟಿಯ ವಿಳಾಸವನ್ನು ಮುಂಬೈನಿಂದ ಕೋಲ್ಕತ್ತಾಗೆ ವರ್ಗಾಯಿಸಿಕೊಂಡಿದ್ದರು. ಆದರೆ ಅಲ್ಲಿಯೂ ಅವರ ಹೆಸರನ್ನು ಪ್ರಕಟಿಸಿಲ್ಲ.
ಆದರೂ ಅವರು ಕಣಕ್ಕಿಳಿಯಲೇಬೇಕೆಂದು ಬಯಸಿದರೆ ಈಗಿರುವ ಅಭ್ಯರ್ಥಿಗಳ ಬದಲಿಗೆ ಅವರನ್ನು ಕಣಕ್ಕಿಳಿಸಬಹುದು. ಅಂತಿಮ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಏಪ್ರಿಲ್ ಮಧ್ಯದವರೆಗೂ ಸಮಯವಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
‘ನಾನು ಪಕ್ಕಾ ಕೋಬ್ರಾ. ಒಂದ್ಸಲ ಕಚ್ಚಿದರೆ ಅಷ್ಟೇ, ಫಿನಿಷ್’ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ್ದ ನಟ ಮಿಥುನ್ ಚಕ್ರವರ್ತಿ ಈಗ ಬಿಜೆಪಿ ಪಾಲಿಗೆ ಸ್ಟಾರ್ ಪ್ರಚಾರಕ ಅಷ್ಟೇ ಆಗಿದ್ದಾರೆ. ಮಾರ್ಚ್ 30 ರಂದು ನಂದಿಗ್ರಾಮದಲ್ಲಿ ಸುವೇಂಧು ಅಧಿಕಾರಿ ಪರವಾಗಿ ಅಮಿತ್ ಶಾ ಜೊತೆಗೂಡಿ ಮಿಥುನ್ ಚಕ್ರವರ್ತಿ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಇದನ್ನೂ ಓದಿ: ಗಂಗೂಲಿ ಕ್ಯಾಚ್ ಮಾಡಲು ಹೋಗಿ ‘ಕೋಬ್ರಾ’ ಹಿಡಿದ ಬಿಜೆಪಿ


