| ಮಹಾಲಿಂಗಪ್ಪ ಆಲಬಾಳ |
ಸತೀಶ ಜಾರಕಿಹೊಳಿಯಂತಹ ಪ್ರಬುದ್ಧ, ಜನಬೆಂಬಲಿತ ರಾಜಕಾರಣಿಯ ವಿರುದ್ಧ ತಮ್ಮ ಸಮುದಾಯವನ್ನು ಅವಹೇಳನ ಮಾಡಿದ್ದಾರೆಂದು ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಮುನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ವಲ್ಪ ವಿವೇಚನೆಯಿಂದ ಆಲೋಚಿಸಿದ್ದರೆ ಇಂತಹ ಒಂದು ಮುಜುಗರ ಅನುಭವಿಸುವ ಸಂದರ್ಭವನ್ನು ಎದುರಿಸುತ್ತಿರಲಿಲ್ಲ. ಆದರೆ ಅದರ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅವಸರಕ್ಕೆ ಬಿದ್ದು ಇಡೀ ಸಮುದಾಯ ಸಂಘಟನೆಯೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ. ಆದರೆ ಇಂಥ ಒಂದು ಸಂದರ್ಭಕ್ಕೆ ಸಿಲುಕಿಕೊಳ್ಳಲು ಕಾರಣವೇನು ಎಂಬುದನ್ನು ಬ್ರಾಹ್ಮಣ ಮಹಾಸಭಾ ಪರಾಮರ್ಶಿಸಿಕೊಳ್ಳಲೇಬೇಕಿದೆ. ಅಷ್ಟಕ್ಕೂ ನಡೆದ್ದಾದರೂ ಏನು ಎಂಬುದನ್ನು ಕಂಡುಕೊಂಡರೆ ಈ ನಡೆಯ ಹಿಂದಿನ ಅಪ್ರಬುದ್ಧತೆ ಎದ್ದು ಕಾಣುತ್ತದೆ.
ಎಲ್ಲರಿಗೂ ಗೊತ್ತಿರುವಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಹಾಗು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿಯವರ ಮೇಲಿದೆ. ಅಣ್ಣ ರಮೇಶ ಜಾರಕಿಹೊಳಿ ಬಿ.ಜೆ.ಪಿಯ ಬಾಗಿಲಲ್ಲಿ ನಿಂತಿರುವುದರಿಂದ ಇವರ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕು ಮತ್ತು ಬಿ.ಜೆ.ಪಿಯ ಕೋಮು ರಾಜಕಾರಣವನ್ನು ಸೋಲಿಸಬೇಕು ಎಂದು ಹಟಕ್ಕೆ ಬಿದ್ದಿರುವ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಹಗಲೂ ರಾತ್ರಿ ಎನ್ನದೇ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ.
ಹಾಗೆಯೇ ಇದೇ 16 ನೇ ತಾರಿಖು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತ “ಬಿಜೆಪಿ ಸೇನೆಯನ್ನು ಮತ್ತು ಸೇನಾ ಕಾರ್ಯಾಚರಣೆಯನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತಿದೆ. ದಲಿತರು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರ ಭದ್ರ ನೆಲೆ ಹೊಂದಿರುವ ಕಾಂಗ್ರೇಸ್ ಪಕ್ಷ ಎಂದೂ ಕೂಡ ಸೈನಿಕರನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಹಾಗೇ ನೋಡಿದರೇ ದೇಶಕ್ಕಾಗಿ ಹುತಾತ್ಮರಾದ ಸೈನಿಕರಲ್ಲಿ ಬಹುಪಾಲು ಕೆಳವರ್ಗದವರೇ ಆಗಿರುತ್ತಾರೆ. ಕುಲಕರ್ಣಿ, ದೇಸಾಯಿ, ದೇಶಪಾಂಡೆ ಇಂಥ ಅಡ್ಡ ಹೆಸರು ಕೇಳುವುದು ಕಡಿಮೆ. ನಾವು ನಿಜವಾದ ಅರ್ಥದಲ್ಲಿ ದೇಶ ಭಕ್ತರಾದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಂಡು ಸೇನೆಯ ಘನತೆಗೆ ಕುಂದು ತರುವುದಿಲ್ಲ. ಆದರೇ ಯಾವ ಜನಪರ ಕೆಲಸವನ್ನೂ ಮಾಡದವರು ಇಂದು ಸೇನೆಯ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ” ಎಂದು ಮಾತನಾಡಿದ್ದಾರೆ.
ಇದರಲ್ಲಿ ಬ್ರಾಹ್ಮಣ ಮಹಾಸಭಾದವರಿಗೆ ತಮ್ಮ ಸಮುದಾಯವನ್ನು ಅವಹೇಳನ ಮಾಡಿರುವಂತದ್ದು ಏನು ಕಂಡು ಬಂತು ಎಂಬುದು ಎಂಬುದು ಬಹುಮುಖ್ಯವಾದ ಪ್ರಶ್ನೆ. ಆದರೂ ಅದರ ಅಧ್ಯಕ್ಷರಾದ ಕೆ.ಎನ್. ವೆಂಕಟನಾರಾಯಣರವರು ತಮ್ಮ ಸಮುದಾಯದ ಕುರಿತು ಸತೀಶ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸತೀಶ ಜಾರಕಿಹೊಳಿ ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ. ಅಧಿಕಾರದ ಆಸೆಗಾಗಿ ಸ್ವಾಭಿಮಾನ ಬಿಟ್ಟು ಇನ್ನೊಬ್ಬರ ಹಿಂದೆ ಅಲೆಯುವುದು ಅವರ ಜಾಯಮಾನವಲ್ಲ. ಅವರು ಮಾನವ ಬಂಧುತ್ವ ವೇದಿಕೆಯನ್ನು ಕಟ್ಟಿ ರಾಜ್ಯಾದ್ಯಂತ ಅಂಬೇಡ್ಕರ್ ಸಿದ್ಧಾಂತದ ಆಧಾರದ ಮೇಲೆ ಚಳುವಳಿ ನಡೆಸುತ್ತಿರುವವರು.
ಲಕ್ಷಾಂತರ ಜನರನ್ನು ಸ್ಮಶಾನಕ್ಕೆ ಕರೆಸಿ ಹಗಲು-ರಾತ್ರಿ ಮೂಢನಂಬಿಕೆ ವಿರುದ್ಧ ಕಾರ್ಯಕ್ರಮ ಮಾಡುವ ಛಾತಿ ಇರುವ ವ್ಯಕ್ತಿ. ಅವರಿಗಿರುವ ಕಳಕಳಿ, ಬದುಕಿನ ಸರಳ ಸಹಜತೆಯ ಕಾರಣಕ್ಕೆ ನಾಡಿನ ಮೂಲೆ ಮೂಲೆಯಲ್ಲಿ ಕಾರ್ಯಕರ್ತರ ಪಡೆಹೊಂದಿರುವ, ಹಳ್ಳಿಗಳ ಮಟ್ಟದಲ್ಲೂ ಅಂಬೇಡ್ಕರ, ಬುದ್ಧ, ಬಸವಣ್ಣನವರ ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕುತ್ತಿರುವ ಇವರು ಸಹಜವಾಗಿಯೇ ಸಂಘ ಪರಿವಾರದ ಕೋಮುವಾದಿ, ಜಾತಿವಾದಿ ರಾಜಕಾರಣವನ್ನು ವಿರೋಧಿಸುತ್ತ ಬಂದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಂತೂ ಮಾನವ ಬಂಧುತ್ವ ವೇದಿಕೆ ಆರ್.ಎಸ್.ಎಸ್ ಮತ್ತು ಅದರ ಪರಿವಾರಕ್ಕಿಂತಲೂ ಬಲಿಷ್ಟವಾಗಿ ಬೆಳೆದು ನಿಂತಿದೆ. ಇದು ಬ್ರಾಹ್ಮಣ ಮಹಾಸಭಾದ ವೆಂಕಟನಾರಾಯಣರನ್ನು ಸತೀಶ ಜಾರಕಿಹೊಳಿಯವರ ವಿರುದ್ಧ ದೂರು ನೀಡುವ ಅವಸರಕ್ಕೆ ದೂಡಿತೇ? ಅಥವಾ ಬಿಜೆಪಿ, ಸಂಘ ಪರಿವಾರದ ಅನತಿಯಂತೆ ಹಗೆತನಕ್ಕೆ ಇಳಿದರಾ? ಸಮುದಾಯದ ಸಂಘಟನೆಯೊಂದು ಪಕ್ಷಾತೀತವಾಗಿರಬೇಕು ಆದರೆ ಅದರ ಅಧ್ಯಕ್ಷರು ಸಮುದಾಯ ಸಂಘಟನೆಯನ್ನು ವೈಯಕ್ತಿಕ ರಾಜಕಾರಣಕ್ಕೆ ಬಳಸಿಕೊಂಡರಾ? ಇದನ್ನೆಲ್ಲ ಗಮನಿಸಬೇಕಾದದ್ದು ಸಂಘಟನೆಯ ಹೊಣೆಗಾರಿಕೆ. ಇವರು ನೀಡಿದ ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ಚುನಾವಣಾ ಆಯೋಗ ಸತೀಶ ಜಾರಕಿಹೊಳಿಯವರು ಮಾಡಿದ ಇಡೀ ಭಾಷಣದಲ್ಲಿ ಯಾವುದೇ ಸಮುದಾಯದ ಕುರಿತು ಅವಹೇಳನಕಾರಿಯಾದ ಯಾವುದೇ ಮಾತುಗಳೂ ಇಲ್ಲ ಎಂದು ತಿಳಿಸಿದೆ. ಸುಳ್ಳು ಆರೋಪ ಮಾಡಿ ಪ್ರಚಾರ ಮಾಡಿ ತೇಜೋವಧೆ ಮಾಡಿದ ಸ್ಥಾನದಲ್ಲೀಗ ಬ್ರಾಹ್ಮಣ ಮಹಾಸಭಾ ಬಂದು ನಿಂತಿದೆ. ಅದಕ್ಕಾಗಿ ಅದರ ಅಧ್ಯಕ್ಷ ವೆಂಕಟನಾರಾಯಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಪ್ರಕರಣ ದಾಖಲಿಸುತ್ತಾರೋ ಇಲ್ಲವೋ ಏಕೆಂದರೆ ಬ್ರಾಹ್ಮಣ ಸಮುದಾಯದಲ್ಲೂ ಬಹಳಷ್ಟು ಜನ ಅವರ ಬೆಂಬಲಿಗರಿದ್ದಾರೆ. ಆದರೆ ಸಮುದಾಯವೊಂದನ್ನು ಪ್ರತಿನಿಧಿಸುವ ಸಂಘಟನೆಯ ಅಧ್ಯಕ್ಷನ ಅವಸರ ಮತ್ತು ಅವಿವೇಕದ ನಡೆಯಿಂದಾಗಿ ಕೆಳಸಮುದಾಯಗಳ ಆಕ್ರೋಶಕ್ಕೆ ತುತ್ತಾಗಿದ್ದು ಮಾತ್ರ ಸತ್ಯ. ಕೋಮುರಾಜಕಾರಣದ ಸುಳಿಗೆ ಬಲಿಯಾಗಿ ಜನರ ವಿರೋಧವನ್ನು ಎದರಿಸುವ ಮುನ್ನ ಇಂಥ ಸಂಘಟನೆಗಳು ಮತ್ತೇ ಮತ್ತೇ ಯೋಚಿಸುವ ಅಗತ್ಯವಿದೆ.
ಸಂಘಕ್ಕೆ ಎದುರು ನಿಂತ ಯುವ ಪಡೆ.
ಬೆಳಗಾವಿ ಜಿಲ್ಲೆ ತುಂಬ ತನ್ನ ಬೇರುಗಳನ್ನು ಚಾಚಲು ಸಂಘಪರಿವಾರದ ಸಂಘಟನೆಗಳು ಕೆಳಸಮುದಾಯದ ಅಮಾಯಕ ಯುವಕರನ್ನು ಬಳಸಿಕೊಂಡು ಕೈಬಿಡುವುದು ಹೆಚ್ಚಾಗುತ್ತಿದ್ದ ಸಮಯದಲ್ಲಿಯೇ ಯುವಕರನ್ನು ಸಂಘಪರಿವಾರಕ್ಕೆ ಬಲಿಯಾಗದಂತೆ ತಡೆದು ಅವರನ್ನು ಅಂಬೇಡ್ಕರ, ಬುದ್ಧ, ಬಸವಣ್ಣನವರ ಆದರ್ಶ ಮಾರ್ಗದಲ್ಲಿ ಮುನ್ನಡೆಸುತ್ತೇವೆ ಎಂದು ಐದು ವರ್ಷಗಳ ಹಿಂದೇ ಆರಂಭವಾದ ಮಾನವ ಬಂಧುತ್ವ ವೇದಿಕೆ ಇಂದು ಸಂಘಪರಿವಾರವನ್ನು ಎದುರಿಸುವ ಮಟ್ಟದಲ್ಲಿ ಬೆಳೆದು ನಿಂತಿದೆ. 
ಯಾವುದೇ ಕೋಮು, ಜಾತಿ ಗಲಭೆಗಳಿಗೆ ಪ್ರಚೋಧಿಸದೇ ಅಂಬೇಡ್ಕರ್ ತತ್ವಗಳನ್ನು ಹರಡುತ್ತ, ಯುವ ಜನರು ಬದುಕು ಕಟ್ಟಿಕೊಳ್ಳಲು ವ್ಯಾಪಾರ ಮಾಡುವ, ಸಣ್ಣ ಪುಟ್ಟ ಉದ್ಯಮಗಳನ್ನು ಸ್ಥಾಪಿಸಿ ಕೆಲಸ ನೀಡುವ ಕುರಿತು ತರಬೇತಿ ನೀಡುತ್ತ ಅದು ಬೆಳೆದು ನಿಂತ ಪರಿ ಸಂಘಪರಿವಾರಕ್ಕೆ ಸವಾಲಾಗಿದೆ. ಇದರಿಂದಾಗಿ ಕೆಳಸಮುದಾಯಗಳಲ್ಲಿ ಅದರ ಆಟ ನಿಂತು ಹೋಗುವ ಮಟ್ಟಕ್ಕೆ ಬಂದು ನಿಂತಿದೆ. ಮೂಢ ನಂಬಿಕೆಯ ವಿರುದ್ಧದ ಹೋರಾಟವಂತೂ ಕೆಸರಿ ಪಡೆಗಳ ನಿದ್ದೆಗೆಡಿಸಿದೆ. ಚಕ್ರವರ್ತಿ ಸೂಲಿಬೆಲಿಯಂತಹ ಕೋಮು ದ್ವೇಷದ ಭಾಷಣಕಾರರನ್ನು ಜಿಲ್ಲೆಗೆ ಕಾಲಿಡದಂತೆ ತಡೆಯುವ ತಾಕತ್ತು ಅವರನ್ನು ಚಿಂತೆಗೀಡು ಮಾಡಿರುವುದು ಕೂಡ ಜಾರಕಿಹೊಳಿಯವರ ಮೇಲೆ ಹಗೇ ಸಾಧಿಸಿ ತೇಜೋವಧೆಗಿಳಿಯುವ ಕೆಲಸಕ್ಕೆ ಕಾರಣವಾಯಿತೇ……ಎಲ್ಲಕ್ಕೂ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳೇ ಉತ್ತರಿಸಬೇಕು.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)


