ಡಾ.ಕೆ.ಶಿವರಾಮ ಕಾರಂತ್ ಲೇಔಟ್‌ಗಾಗಿ ಭೂಮಿಯನ್ನು ಕಳೆದುಕೊಳ್ಳಲಿರುವ ರೈತರು ಮತ್ತು ಭೂಮಾಲೀಕರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಬುಧವಾರ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಲೇಔಟ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಮೂರು ಸದಸ್ಯರ ಸಮಿತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರೈತರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯು ಅರಮನೆ ಮೈದಾನದ 9ನೇ ಗೇಟ್ ಬಳಿಯ ಬಿಡಿಎ ಕೇಂದ್ರ ಕಚೇರಿ ಮುಂದೆ ಆಯೋಜನೆಗೊಂಡಿತ್ತಾದರೂ, ಅಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಾಗಿ ಪ್ರತಿಭಟನೆ ಮೌರ್ಯಸರ್ಕಲ್ ಬಳಿಗೆ ಸ್ಥಳಾಂತರಗೊಂಡಿದೆ.
ಇದನ್ನೂ ಓದಿ: ಲಾಕ್‌ಡೌನ್ 1 ವರ್ಷ: ಬೀದಿ ವ್ಯಾಪಾರಿಗಳಿಗೆ ಇನ್ನೂ ಕಾಡುತ್ತಿರುವ ಲಾಕ್‌ಡೌನ್ ಭೂತ
ಬಿಡಿಎ ವಿರುದ್ದ ರೈತರ ಆಕ್ರೋಶ ಹೆಚ್ಚುತ್ತಿರುವುದನ್ನು ಮನಗಂಡಿದ್ದ ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ನಿನ್ನೆ ರಾತ್ರಿಯೇ ಲೇಔಟ್ ಇರುವ 16 ಹಳ್ಳಿಯ ರೈತರಿಗೆ ಪ್ರತಿಭಟನೆಗೆ ತೆರಳದಂತೆ ಪೊಲೀಸರ ಮುಖಾಂತರ ಕೇಳಿಕೊಂಡಿದ್ದರು. ಇಂದು ಮುಂಜಾನೆ ಕೂಡಾ ಪೊಲೀಸರು ಪ್ರತಿಭಟನೆಗೆ ತೆರಳದಂತೆ ರೈತರಿಗೆ ತಡೆ ಒಡ್ಡಿದ್ದರು ಎನ್ನಲಾಗಿದೆ. ಆದರೂ ಇದನ್ನು ಮೀರಿ ರೈತರು ಬೆಂಗಳೂರಿನ ಮೌರ್ಯ ಸರ್ಕಲ್‌ಗೆ ತಲುಪಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಹೋರಾಟಗಾರರಾದ ಪ್ರಸನ್ನ ಲಕ್ಷ್ಮೀಪುರ, “ಪ್ರತಿಭಟನೆಗೆ ಹೊರಡುತ್ತಿದ್ದ ರೈತರನ್ನು ಅವರ ಹಳ್ಳಿಯಲ್ಲೆ ತಡೆದು ಲೇಔಟ್‌ಗೆ ಯಾರದ್ದೂ ವಿರೋಧವಿಲ್ಲ ಎಂದು ತೋರಿಸಿಕೊಳ್ಳುವ ಉಪಾಯವನ್ನು ಶಾಸಕ ವಿಶ್ವನಾಥ್ ಹೂಂದಿದ್ದರು. ಅದಕ್ಕಾಗಿ ಹಳ್ಳಿಗಳಲ್ಲೇ ರೈತರನ್ನು ಪೊಲೀಸರು ತಡೆದಿದ್ದರು, ಆದರೆ ಇಲ್ಲಿ ಯಾವ ರೈತರು ಲೇಔಟ್ ಪರವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾವೇದ್ ಅಖ್ತರ್ V/s ಕಂಗನಾ: ವಾರೆಂಟ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ನಟಿ
“ರೈತರು ತಮ್ಮ ಭೂಮಿಯನ್ನು ಲೇಔಟ್‌ಗೆ ನೀಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ನಮ್ಮ ಬಳಿಯಿಂದ ಭೂಮಿಯನ್ನು ಪಡೆದುಕೊಂಡು ಬೇರೆಯವರಿಗೆ ಮನೆ ಕಟ್ಟಲು ನೀಡುತ್ತಿದ್ದಾರೆ. ಹೀಗೆ ನೀಡಲು ಬಿಡಿಎ ಯಾಕೆ ಬೇಕು? ಜನರೆ ನೇರವಾಗಿ ತಮಗೆ ಬೇಕಾದವರಿಗೆ ಭೂಮಿ ನೀಡುವುದಿಲ್ಲವೆ?. ಬಿಡಿಎ ಪ್ರಸ್ತುತ ಅಲ್ಲಿರುವ ಮನೆಗಳನ್ನು ಒಡೆದು ಹಾಕಲು ಹೊರಟಿದೆ. ಅಲ್ಲಿರುವ ಮನೆಗಳನ್ನು ಒಡೆದು ಹಾಕಿ ಅಲ್ಲಿ ಬೇರೆ ಮನೆಗಳನ್ನು ಕಟ್ಟಿ ಬೇರೆ ಜನರಿಗೆ ಮನೆ ನೀಡುತ್ತೇವೆ ಅಂದರೆ ಅದು ಅನ್ಯಾಯವಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
“ಬಿಡಿಎ ಉದ್ದೇಶವೆ ಸೈಟುಗಳನ್ನು ಮಾರಿ ಮನೆ ಕಟ್ಟುವುದಾದರೆ, ಸೈಟುಗಳಲ್ಲಿ ಈಗಾಗಲೆ ಇರುವ ಮನೆಗಳನ್ನು ಒಡೆಯುವುದು ಯಾಕೆ? ಅದು ಅಲ್ಲದೆ ರೈತರೊಂದಿಗೆ ಬಲವಂತವಾಗಿ ಜಮೀನನ್ನು ಪಡೆಯುವುದು ಯಾತಕ್ಕಾಗಿ? ಇಲ್ಲಿನ ಯಾವುದೇ ರೈತರಿಗೆ ತಮ್ಮ ಭೂಮಿಯನ್ನು ಬಿಡಿಎಗೆ ನೀಡಲು ಮನಸ್ಸಿಲ್ಲ. ಈ ಹಿನ್ನಲೆಯಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಮತ್ತಿಬ್ಬರು ಯುವ ಸಹೋದರಿಯರ ಸಂಶಯಾಸ್ಪದ ಸಾವು: ಕೊಲೆ ಶಂಕೆ


