Homeಕರ್ನಾಟಕಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

- Advertisement -
- Advertisement -

| ಡಾ. ಎಚ್.ವಿ. ವಾಸು |

ಈ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾರಿಗೆಷ್ಟು ಸೀಟು ಎಂಬುದರ ಸುತ್ತ ಇದುವರೆಗೆ ಬಂದಿರುವ ಸಮೀಕ್ಷೆಗಳು ಮತ್ತು ಮಾಡಿರುವ ವಿಶ್ಲೇಷಣೆಗಳೆಲ್ಲವೂ ಸುಳ್ಳಾಗುವ ಸಾಧ್ಯತೆಗಳಿವೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಮತದಾರ ಸಮಷ್ಟಿಯ ಒಟ್ಟಭಿಪ್ರಾಯದ ಸುಳಿವೂ ಯಾರಿಗೂ ಸಿಕ್ಕಿಲ್ಲ ಎಂಬ ಸುಳಿವಂತೂ ಸ್ಪಷ್ಟವಾಗಿದೆ. ಇದುವರೆಗೆ ಬಂದಿರುವ ಹಲವು ‘ಸಮೀಕ್ಷೆ’ಗಳು ಬಿಡಿಬಿಡಿ ಅಂಶಗಳನ್ನಷ್ಟೇ ಆಧರಿಸಿವೆ. ಆ ಬಿಡಿ ಅಂಶಗಳಲ್ಲಿ ಹುರುಳಿದೆ. ಆದರೆ, ಈ ಬಿಡಿ ಅಂಶಗಳು ಒಟ್ಟು ಸೇರುವ ಸಮೀಕರಣ ಯಾವ ಸೂತ್ರವನ್ನು ಆಧರಿಸಿರುತ್ತದೆ ಮತ್ತು ಅದರ ಫಲಿತ ಏನಾಗಿರುತ್ತದೆ ಎಂಬುದು ಖಂಡಿತವಾಗಿ ಸ್ಪಷ್ಟವಾಗಿಲ್ಲ.


ಬಿಜೆಪಿಗೆ 15, ಮೈತ್ರಿಗೆ 13 ಎಂಬುದು ಈವರೆಗೆ ಬಂದಿರುವ ಸಮೀಕ್ಷೆಗಳ ಸರಾಸರಿ ಎಂದು ಹೇಳಬಹುದು. ಬಹಳ ಜನ ‘ರಾಜಕೀಯ ವಿಶ್ಲೇಷಕರೂ’ ಸಹಾ ಈ ಸಂಖ್ಯೆ ಹೇಳುತ್ತಿದ್ದಾರೆ. ಆ 15 ಕ್ಷೇತ್ರಗಳು ಮತ್ತು ಈ 13 ಕ್ಷೇತ್ರಗಳು ಯಾವುವು ಎಂಬ ಕುರಿತು ಕರಾರುವಾಕ್ಕಾಗಿ ಹೇಳಿ ಎಂದರೆ, ಒಂದೋ ಅವರವರ ಆಶಯವನ್ನು ಮುಂದಿಡಬಹುದು, ಇಲ್ಲವೇ ಅವರ ಬಯಕೆಗೆ ತಕ್ಕ ತರ್ಕಗಳನ್ನೂ ಮುಂದಿಡಬಹುದು. ಇದರ ಅರ್ಥ ಯಾವುದೇ ಚುನಾವಣೆಯ ಫಲಿತಾಂಶವನ್ನು ಎಣಿಕೆಗೆ ಮುಂಚೆಯೇ ವಿಶ್ಲೇಷಣೆಯ ಮೂಲಕ ಊಹಿಸುವುದು ಅಸಾಧ್ಯ ಎಂದಲ್ಲ. ಅದರಲ್ಲೂ ಚುನಾವಣಾ ಶಾಸ್ತ್ರ (ಸೆಫಾಲಜಿ) ಒಂದು ವಿಜ್ಞಾನವಾಗಿ ಬೆಳವಣಿಗೆ ಹೊಂದುತ್ತಿರುವ ಸಂದರ್ಭದಲ್ಲಿ ಫಲಿತಾಂಶದ ದಿಕ್ಕಿನ ಅಂದಾಜು ಸಾಧ್ಯವಿದೆ. ಹೀಗೆ ಹೇಳುವಾಗಲೂ ಸೆಫಾಲಜಿಸ್ಟ್ ಗಳ ನಡುವೆಯೂ ಹಲವು ಸಂಗತಿಗಳ ಬಗ್ಗೆ ಒಮ್ಮತವಿಲ್ಲವೆಂಬುದನ್ನೂ ಗಮನಿಸಬೇಕು.

ಸೆಫಾಲಜಿಯನ್ನು ಶಾಸ್ತ್ರೀಯವಾಗಿ ಬೆಳೆಸುತ್ತಿರುವ ದೆಹಲಿಯ ಸಂಸ್ಥೆ ಸಿಎಸ್‌ಡಿಎಸ್‌ನವರು ಇದುವರೆಗೂ ಫಲಿತಾಂಶದ ದಿಕ್ಕು, ಜನರ ಮೂಡ್ ಬದಲಾಗುತ್ತಿರುವ ಪರಿ ಮತ್ತು ಅದರ ಆಧಾರದ ಮೇಲೆ ಮತ ಪ್ರಮಾಣದ ಅಂದಾಜುಗಳನ್ನು ಮುಂದಿಡುತ್ತಿತ್ತು. ಈ ಚುನಾವಣೆಯ ಸಂದರ್ಭದಲ್ಲಿ ಅವರು ಯರ‍್ಯಾರಿಗೆ ಎಷ್ಟೆಷ್ಟು ಸೀಟುಗಳು ಬರಬಹುದು ಎಂಬ ಅಂದಾಜನ್ನೂ ಮಾಡುತ್ತಿದ್ದಾರೆ. ಮೊದಲ ಹಂತದ ಚುನಾವಣೆಯ ನಂತರ ಮತದಾನದ ಪ್ರಮಾಣವನ್ನು ಆಧರಿಸಿ, ಬಿಜೆಪಿಯು ಹಿಂದೆ ಅಂದಾಜಿಸಿದ್ದಕ್ಕಿಂತ ಕಡಿಮೆ ಸೀಟುಗಳನ್ನು ಪಡೆಯಬಹುದು ಎಂದು ಸಿಎಸ್‌ಡಿಎಸ್‌ನ ನಿರ್ದೇಶಕ ಸಂಜಯ್‌ಕುಮಾರ್ ಹೇಳಿದರು. ಸ್ವಾರಸ್ಯಕರ ಸಂಗತಿಯೆಂದರೆ, ಭಾರತದ ಪ್ರಸಿದ್ಧ ಸೆಫಾಲಜಿಸ್ಟ್ ಪ್ರಣಯ್‌ರಾಯ್ ಅದಕ್ಕೆ ವಿರುದ್ಧವಾದ ಮಾತನ್ನು ಹೇಳುತ್ತಿದ್ದಾರೆ. ‘ಮತದಾನದ ಪ್ರಮಾಣವನ್ನು ಆಧರಿಸಿ ಇಂತಹುದೇ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಫಲಿತಾಂಶಕ್ಕೆ ಮುಂಚೆ ಹೇಳಬಲ್ಲ ವಿಧಾನ ಇಲ್ಲವೇ ಇಲ್ಲ’.

ಇದೇ ಪ್ರಣಯ್‌ರಾಯ್ ಕ್ವಿಂಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೀಗೆ ಹೇಳಿದ್ದರು. ‘ಮೈತ್ರಿ ಮಾಡಿಕೊಳ್ಳುವುದರಿಂದ ಎರಡು ಪಕ್ಷಗಳ ಮತಗಳು ಒಂದಕ್ಕೊಂದು ಸೇರ್ಪಡೆಯಾಗುವುದಿಲ್ಲವೆಂದು ಹಲವರು ಹೇಳುತ್ತಾರೆ. ಅದು ವಾಸ್ತವವಲ್ಲ. ಅವು ಜೊತೆಗೂಡುತ್ತವೆ ಮಾತ್ರವಲ್ಲಾ,
ಜೊತೆಗೂಡುವುದರಿಂದ ಬರುವ ಶಕ್ತಿಯ ಕಾರಣಕ್ಕೆ ಇನ್ನೂ ಹೆಚ್ಚಿನ ಮತಗಳನ್ನು ತರುತ್ತವೆ’. ಆದರೆ, ಮೂರು ದಿನಗಳ ಕೆಳಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿಯೊಂದರಿಂದ ಲೈವ್ ಕಾರ್ಯಕ್ರಮ ನಡೆಸಿದ ಅದೇ ಪ್ರಣಯ್‌ರಾಯ್, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಗೂಡಿರುವುದರಿಂದ ಒಳ್ಳೆಯದಾಗುತ್ತದೋ, ಕೆಟ್ಟದ್ದೋ ಗೊತ್ತಿಲ್ಲ ಎಂದರು! ಅಂದರೆ, ಯಾವ ಸೂತ್ರವೂ ಎಲ್ಲೆಡೆಯೂ ಅನ್ವಯವಾಗುವುದಿಲ್ಲ!!

ಅದೇ ಕಾರ್ಯಕ್ರಮದಲ್ಲಿ ಪದೇ ಪದೇ ಕೇಳಿಬಂದ ಇನ್ನೊಂದು ಮಾತೂ ಇದೆ. ಅದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಮತ ನೀಡಿದರೆ, ಲೋಕಸಭೆಗೆ ಇನ್ನೊಂದು ಪಕ್ಷಕ್ಕೆ ಮತ ನೀಡುತ್ತಾರೆ ಎಂದು. ಇದೂ ಸಹಾ ಎಲ್ಲಾ ಸಂದರ್ಭಗಳಲ್ಲೂ ನಿಜವಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿದ್ದ ಕರ್ನಾಟಕದ ಮತದಾರರು, 2009ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೇ ಅತಿಹೆಚ್ಚು ಸೀಟುಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದ ವರ್ಷವಾದ್ದರಿಂದ ಅದೇ ಪಕ್ಷವನ್ನು ಬೆಂಬಲಿಸಿರಬಹುದು ಎಂಬ ಕಾರಣ ಹೇಳುವುದಾದರೆ, ಮುಂದಿನ ಸಾಲಿನಲ್ಲಿ ಹಾಗಾಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದ ಮತದಾರರು, 2014ರಲ್ಲಿ 28 ಸೀಟುಗಳ ಪೈಕಿ 9ರಲ್ಲಿ ಮಾತ್ರ ಆ ಪಕ್ಷವನ್ನು ಗೆಲ್ಲಿಸಿದ್ದರು.

ಚುನಾವಣೋತ್ತರ ವಿಶ್ಲೇಷಣೆ ಮಾಡುವಷ್ಟು ಸುಲಭವಾಗಿ ಚುನಾವಣಾಪೂರ್ವ ಅಂದಾಜು ಮಾಡಲಾಗುವುದಿಲ್ಲ. ಈ ಸಾರಿಯ ಕರ್ನಾಟಕದ ಚುನಾವಣೆಯಲ್ಲಂತೂ ಅದು ಇನ್ನೂ ಕಷ್ಟ. ಆದರೆ, ಈ ಫ್ಯಾಕ್ಟರ್‌ಗಳು ಕೆಲಸ ಮಾಡಿದರೆ ಒಂದು ರೀತಿ ಫಲಿತಾಂಶ ಬರುತ್ತದೆ. ಆ ರೀತಿ ಆಗದಿದ್ದರೆ, ಇನ್ನೊಂದು ಬಗೆಯ ಫಲಿತಾಂಶ ಬರುತ್ತದೆ ಎಂದಷ್ಟೇ ಹೇಳುವುದು ಸಾಧ್ಯ. ಮತದಾರರ ಮೇಲೆ ಪ್ರಭಾವ ಬೀರಬಲ್ಲ ಅಂತಹ ಅಂಶಗಳು ಈ ಚುನಾವಣೆಯಲ್ಲಿ ಯಾವಿದ್ದವು? ಅದರ ಪರಿಣಾಮಗಳು ಏನಾಗಬಹುದು ಎಂಬುದನ್ನು ನೋಡೋಣ.

1. ಕರ್ನಾಟಕದಲ್ಲಿ ಹಾಲಿ ಸಂಸದರ ವಿರುದ್ಧ ಅಸಮಾಧಾನ ವ್ಯಾಪಕವಾಗಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ರಾಯಚೂರು ಮತ್ತು ಚಿತ್ರದುರ್ಗ (ಮುದ್ದಹನುಮೇಗೌಡರಿಗೇ ಟಿಕೆಟ್ ಸಿಕ್ಕಿದ್ದಿದ್ದರೆ ತುಮಕೂರು, 8 ತಿಂಗಳಿಗೆ ಮಾತ್ರ ಸಂಸದರಾಗಿರುವ ಉಗ್ರಪ್ಪರೂ ಸೇರಿದಂತೆ) ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳಲ್ಲೂ ಹಿಂದಿನ ಸಂಸದರ ಕಾರ್ಯಕ್ಷಮತೆಯ ಬಗ್ಗೆ ಅಸಮಾಧಾನವಿದೆ. ಕೆಲವೆಡೆ ಅದು ಅಲೆಯ ರೂಪದಲ್ಲಿದೆ. ಅಸಮಾಧಾನವಿಲ್ಲವೆಂದು ಹೇಳಲಾಗುವ ಅಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರಿದ್ದರು ಎಂಬುದನ್ನು ಗಮನಿಸಬೇಕು. ಆದರೆ, ಕಾಂಗ್ರೆಸ್‌ನ ಹಿರಿಯ ನಾಯಕರೇ ಸಂಸದರಾಗಿದ್ದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕಲಬುರ್ಗಿಗಳಲ್ಲೂ ಅಸಮಾಧಾನ ತೀವ್ರವಾಗಿದ್ದು, ಕನಿಷ್ಠ ಒಬ್ಬರಾದರೂ ಸೋಲುವುದು ಗ್ಯಾರಂಟಿ. ಇನ್ನು ಸಂಸದರ ಬಗ್ಗೆ ಅಸಮಾಧಾನವಿರದ ಕ್ಷೇತ್ರಗಳಲ್ಲೂ (ಉದಾ. ಚಾಮರಾಜನಗರ) ಬೇರೆ ಕಾರಣಗಳಿಂದಾಗಿ ಹಾಲಿ ಸಂಸದರೂ ಗೆಲ್ಲಲು ಕಷ್ಟಪಡಬೇಕಾಗಿ ಬಂದಿದೆ.

2. ಹೀಗಾಗಿ ಬೆಂಗಳೂರು ಗ್ರಾಮಾಂತರವೊಂದನ್ನು ಹೊರತುಪಡಿಸಿ ಬೇರೆ ಇನ್ನು ಯಾವ ಕ್ಷೇತ್ರದಲ್ಲೂ ಯಾವುದೇ ಪಕ್ಷದ ಪ್ರಬಲ ಅಭ್ಯರ್ಥಿಗಳು ತಾವು ಗೆದ್ದೇ ಗೆಲ್ಲುತ್ತೇವೆ ಎಂದು ನಂಬಿಕೊಳ್ಳುವ ಸ್ಥಿತಿಯಲ್ಲಿಲ್ಲ. ಕನಿಷ್ಠ 25 ಕ್ಷೇತ್ರಗಳಲ್ಲಿ ಪ್ರಬಲವಾದ ಪೈಪೋಟಿ ಇದೆ.

3. ಯುವಜನರು ಹೆಚ್ಚು ಮೋದಿಯ ಪರವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಅದರಲ್ಲೂ ಸುಶಿಕ್ಷಿತ ಮತದಾರರು ಮತ್ತು ಮಾಧ್ಯಮಗಳ ಸುದ್ದಿಗಳನ್ನು ಹೆಚ್ಚೆಚ್ಚು ನೋಡುವವರು/ಓದುವವರು ಹೆಚ್ಚು ಬಿಜೆಪಿಯ ಪರ ಇರುತ್ತಾರೆ. ಏಕೆಂದರೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಏಕಪಕ್ಷೀಯವಾದ ಮತ್ತು ಉದ್ದೇಶಪೂರ್ವಕ ಸುಳ್ಳುಗಳಿಂದ ಅವರು ಹೆಚ್ಚು ಪ್ರಭಾವಿತರಾಗಿರುತ್ತಾರೆ. ಹೊಸ ಮತದಾರರು ಯಾರಿಗೆ ಮತ ಹಾಕುತ್ತಾರೆಂಬುದು ಏಕೆ ಮುಖ್ಯವಾಗುತ್ತೆಂದರೆ, ಅವರು ಸಾಂಪ್ರದಾಯಿಕವಾಗಿ ಫಿಕ್ಸ್ ಆದ ಮತದಾರರಿಗಿಂತ ಭಿನ್ನ ರೀತಿಯಲ್ಲಿ ಮತ ಹಾಕುವ ಸಾಧ್ಯತೆ ಇರುತ್ತದೆ. ತೀವ್ರ ಹಣಾಹಣಿ ಇರುವಾಗ ಅದು ಭಾರೀ ಪರಿಣಾಮ ಬೀರುತ್ತದೆ.

4. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಜೆಡಿಎಸ್‌ನ ಪರವಾಗಿ ಮತ್ತು ಆ ಕಾರಣದಿಂದ ಮೈತ್ರಿಯ ಪರವಾಗಿ ಇದ್ದಾರೆ ಹಾಗೂ ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರು ಬಿಜೆಪಿಯ ಪರವಾಗಿದ್ದಾರೆಂಬ ಜನರಲ್ ಸತ್ಯವನ್ನು ಹಲವರು, ಅದರಲ್ಲೂ ಇಂಗ್ಲಿಷ್ ಚಾನೆಲ್‌ಗಳು ಹೆಚ್ಚು ಒತ್ತು ಕೊಟ್ಟು ಹೇಳುತ್ತಿದ್ದಾರೆ ಮತ್ತು ಅದೇ ಈ ಚುನಾವಣೆಯ ನಿರ್ಣಾಯಕ ಸಂಗತಿ ಎನ್ನುತ್ತಿದ್ದಾರೆ. ಆದರೆ, ಅವರು ಉಪೇಕ್ಷಿಸುತ್ತಿರುವ ಒಂದು ಸಂಗತಿ ಇದೆ. ಇಲ್ಲಿ ಇವೆರಡು ಜಾತಿಗಳು ಸೇರಿದರೆ ಕರ್ನಾಟಕದ ಕಾಲುಭಾಗ ಇರಬಹುದಾದರೆ, ಅಹಿಂದ ಸಮುದಾಯಗಳಲ್ಲಿ ಕಾಂಗ್ರೆಸ್‌ನ ಪರವಾಗಿ ಈಗಾಗಲೇ ಕ್ರೋಢೀಕೃತವಾಗಿರುವ ಮತಗಳು ಹೆಚ್ಚು ಕಡಿಮೆ ಅಷ್ಟೇ ಇವೆ. ಹಾಗಾಗಿಯೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸೀಟುಗಳು ಕಡಿಮೆಯಾದರೂ, ಮತ ಪ್ರಮಾಣ ಹಿಂದಿಗಿಂತಲೂ ಹೆಚ್ಚಾಗಿತ್ತು.

ಅದರಲ್ಲೂ ಕುರುಬರ ಸಂಖ್ಯೆಯು, ಪ್ರಬಲ ಎಂದು ಹೇಳಲಾಗುತ್ತಿರುವ ಎರಡು ಜಾತಿಗಳಿಗಿಂತ ಬಹಳ ಕಡಿಮೆ ಏನಿಲ್ಲ. ಎರಡು ಕಾರಣಗಳಿಂದ ಕುರುಬರು ರಾಜಕೀಯವಾಗಿ ದುರ್ಬಲರಿದ್ದಾರೆ. ಒಂದು, ಅವರು ಒಂದೇ ಕಡೆ ಸಾಂದ್ರವಾಗಿಲ್ಲ. ಎರಡನೆಯದು ಪ್ರತಿ ಊರಿನಲ್ಲೂ ಮಿಕ್ಕಿತರ ಸಮುದಾಯಗಳನ್ನೂ ಲೀಡ್ ಮಾಡುವ ಸ್ಥಾನ ಕೆಲವೆಡೆ ಈಗೀಗಷ್ಟೇ ದಕ್ಕುತ್ತಿದೆ. ಅದೇನೇ ಇದ್ದರೂ, ಮುಸ್ಲಿಮರು, ಕುರುಬರು, ದಲಿತರ ಗಣನೀಯ ಭಾಗ ಸೇರಿದರೆ ಅದು ಮಿಕ್ಕೆಲ್ಲರಿಗಿಂತ ದೊಡ್ಡ ಶಕ್ತಿ. ಸಮೀಕ್ಷೆಗಳಿಗೆ ಸಿಗದ ಲೆಕ್ಕ ಇದು. ಕರ್ನಾಟಕದ ಮತದಾರರ ಶೇ.40ರಷ್ಟಿರುವ ಈ ನಿರ್ಣಾಯಕ ಸಮೂಹ ಸಾರ್ವಜನಿಕವಾಗಿ ಗಟ್ಟಿಯಾಗಿ ಮಾತನಾಡದವರು.

5. ಕರ್ನಾಟಕದಲ್ಲಿ ನಿಸ್ಸಂದೇಹವಾಗಿ ಮೋದಿ ಅಲೆ ಇದೆ, ಆದರೆ ಅದು ಚುನಾವಣೆಯ ಲೆಕ್ಕಾಚಾರಗಳ ಮೇಲೆ ಪರಿಣಾಮ ಬೀರುವಷ್ಟು ದೊಡ್ಡದಾಗಿದೆಯೇ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಏಕೆಂದರೆ, ಮೋದಿಯ ಪರವಾಗಿ ಮಾತನಾಡುವವರು ಹೆಚ್ಚು ವಾಚಾಳಿಗಳಾಗಿದ್ದು, ಅದಷ್ಟೇ ಎದ್ದು ಕಾಣುವ ಸಾಧ್ಯತೆ ಇರುತ್ತದೆ. ಜೊತೆಗೆ ಮೇಲ್ಜಾತಿಗಳು ಒಂದೆಡೆಗೆ ನಿಂತು ಗಟ್ಟಿ ದನಿಯಲ್ಲಿ ಮಾತಾಡಲು ಆರಂಭಿಸಿದರೆ, ಅವರ ವಿರುದ್ಧ ಯಾವ ಬಗೆಯ ಧ್ರುವೀಕರಣ ಆಗುತ್ತದೆಂದು ಹೇಳಲಾಗದು. ಇದೇ ಸಂದರ್ಭದಲ್ಲಿ ಹೇಳಬಹುದಾದ ಇನ್ನೊಂದು ಅಂಶವೆಂದರೆ, ಮೋದಿ ವಿರೋಧಿ ಅಲೆಯಂತೂ ಕರ್ನಾಟಕದಲ್ಲಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಮತ ಹಾಕಿರಬಹುದಾದವರೂ, ದೇಶಕ್ಕೆ ಮೋದಿ ಎಂದು ಹೇಳುತ್ತಿರುವುದು ಕಾಣುತ್ತದೆ.

6. ಬಿಜೆಪಿಗೆ ಈ ಸಾರಿ ಅವರು ಮಾಡಿದ ಜನಪರವಾದ ಕೆಲಸದ ಸಾಧನೆಯನ್ನು ಹೇಳಿಕೊಂಡು ಹೋಗುವ ಅಗತ್ಯವಿಲ್ಲ. ಮೊದಲನೆಯದಾಗಿ ಜನರ ಬದುಕಿಗೆ ಸಂಬಂಧಿಸಿದ ಸಂಗತಿಗಳಲ್ಲಿ ಅವರು ಹೇಳಿಕೊಳ್ಳಬಹುದಾದ ಹೆಚ್ಚಿನ ಸಾಧನೆಗಳಿಲ್ಲ. ಆದರೆ ಜನರು ಹೌದೌದು ಎಂದು ನಂಬುವಂತಹ ಅರ್ಧ ಸತ್ಯಗಳು, ಸುಳ್ಳುಗಳನ್ನು ವಾಟ್ಸಾಪ್ ಮೂಲಕ ಕಳೆದ 5 ವರ್ಷಗಳಿಂದ ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ. ಈಗಾಗಲೇ ಒಂದಷ್ಟು ಜನರನ್ನು ಮೋದಿಯ ಬಹಳಷ್ಟು ಸಾಧನೆ ಮಾಡಿದ್ದಾರೆ, ಅಧಿಕಾರಕ್ಕೆ ಬಂದರೆ ಇನ್ನೂ ಬಹಳಷ್ಟನ್ನು ಮಾಡಲಿದ್ದಾರೆ ಎಂದು ನಂಬಿಸಿರುವುದರಿಂದ ಪ್ರಣಾಳಿಕೆಯ ಅಗತ್ಯ ಅವರಿಗಿಲ್ಲ. ಜೊತೆಗೆ ಅವರ ಪ್ರಣಾಳಿಕೆಯಲ್ಲಿ ಈ ಸಾರಿ ಜನರಿಗೆ ಹುರುಪು ತರುವಂಥವೂ ಇಲ್ಲ. ಅಂಥಹವು ನಿಜಕ್ಕೂ ಇರುವ ಕಾಂಗ್ರೆಸ್ ಪ್ರಣಾಳಿಕೆಯನ್ನು ಜನರಿಗೆ ತಲುಪಿಸಲು ಬೇಕಾದ ಪ್ರಯತ್ನವೇ ಕಾಣುವುದಿಲ್ಲ. ಹೀಗಾಗಿ ಜನರ ಬದುಕಿಗೆ ಸಂಬಂಧಿಸಿದ ಅಸಲೀ ಸಂಗತಿಗಳನ್ನು ಮುನ್ನೆಲೆಗೆ ತರದೇ, ಭಾವನಾತ್ಮಕ ಅಂಶಗಳ ಮೇಲೆಯೇ ಚುನಾವಣೆ ನಡೆಯುವಂತಾಗಲು ಎಲ್ಲಾ ರಾಜಕೀಯ ಪಕ್ಷಗಳೂ ಕೊಡುಗೆ ನೀಡಿವೆ.

7. ಮೈತ್ರಿಯಿಂದ ದಕ್ಷಿಣ ಕರ್ನಾಟಕದ 7 ಸೀಟುಗಳು, ಮಧ್ಯ ಕರ್ನಾಟಕದ 3 ಮತ್ತು ಉತ್ತರ ಕರ್ನಾಟಕದ 3 ಸೀಟುಗಳಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆಯಿತ್ತು. ಸೀಟುಗಳ ಹಂಚಿಕೆಯ ಸಂದರ್ಭದಿಂದಲೇ ಅಸಮಾಧಾನ ಶುರುವಾಯಿತು. ಜೊತೆಗೆ, ಈ ಮೈತ್ರಿಯು ದೇಶದ ಹಿತದೃಷ್ಟಿಯಿಂದ ಎಂದು ತಮ್ಮ ತಮ್ಮ ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಎರಡೂ ಪಕ್ಷಗಳೂ ಸಫಲವಾಗಿಲ್ಲ. ಹೆಚ್ಚಿನ ಸೀಟುಗಳನ್ನು ಗೆಲ್ಲದಿದ್ದರೆ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಮಾತುಗಳನ್ನು ಆಡುವ ಮೂಲಕ, ಈ ಮೈತ್ರಿಯು ಇವೆರಡು ಪಕ್ಷಗಳು ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶಕ್ಕಾಗಿ ಇದೆ ಎಂಬ ಸಂದೇಶವನ್ನಷ್ಟೇ ನೀಡಿದ್ದಾರೆ. ಒಟ್ಟಾರೆಯಾಗಿ, ಮೈತ್ರಿಯಿಂದ ಆಗಬಹುದಾದಷ್ಟು ಲಾಭ ಆಗುತ್ತದೆಯೇ ಎಂಬ ಪ್ರಶ್ನೆ ಮೈತ್ರಿ ಪಕ್ಷಗಳ ನಾಯಕರಿಗೂ ಇದೆ.

8. ಹಲವು ಕಾರಣಗಳಿಂದಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ನೊಳಗಿರುವ ಅಸಮಾಧಾನದ ಪ್ರಮಾಣ ಎಷ್ಟು ಮತ್ತು ಅದರ ಪರಿಣಾಮ ಏನು ಎಂಬ ಅಂದಾಜು ಮಾಡಲಾಗುತ್ತಿಲ್ಲ. ಆದರೆ, ಒಂದಂತೂ ಸತ್ಯ, ಈ ಚುನಾವಣೆಯಲ್ಲಿ ಬಿಜೆಪಿ ಪರಿವಾರದೊಳಗೆ ಇರಬೇಕಿದ್ದ ದೊಡ್ಡ ಉತ್ಸಾಹ ಕಾಣುತ್ತಿಲ್ಲ. ಒಳೇಟುಗಳು ಬಿಜೆಪಿಯೊಳಗೂ ಆಗಿರುವ ಸಾಧ್ಯತೆ ಇದೆ.

9. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಒಂದು ಸಣ್ಣ ಅನುಕೂಲವಾದರೂ ಸಾಮಾನ್ಯವಾಗಿ ಇರುತ್ತದೆ. ಆದರೆ, ಈ ಚುನಾವಣೆಯ ನಂತರ ಮೈತ್ರಿ ಸರ್ಕಾರ ಇರುತ್ತದಾ ಇಲ್ಲವಾ ಎಂಬುದನ್ನು ಮೈತ್ರಿ ಪಕ್ಷಗಳೇ ಗಟ್ಟಿ ದನಿಯಲ್ಲಿ ಹೇಳುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಬಂದರೆ, ಈ ಸರ್ಕಾರ ಬಿದ್ದು ಹೋಗುವುದು ಖಚಿತ ಎಂದು ಬಿಜೆಪಿಯವರು ಹೇಳುತ್ತಿರುವುದು ನಿಜ ಎಂದು ಜನರೂ ನಂಬುವ ಸ್ಥಿತಿಯಿದೆ. ಹಾಗಾಗಿ ಹಾಲಿ ಸರ್ಕಾರದ ಅನುಕೂಲವಂತೂ ಮೈತ್ರಿ ಪಕ್ಷಗಳಿಗೆ ದಕ್ಕಿಲ್ಲ.

ಮೇಲಿನ ಎಲ್ಲಾ ಅಂಶಗಳೂ ನಮಗೆ ಸಾಬೀತುಪಡಿಸುತ್ತಿರುವುದೇನೆಂದರೆ, ಒಟ್ಟಾರೆ ಟ್ರೆಂಡ್‌ಅನ್ನಾಗಲೀ, ಯಾವ್ಯಾವ ಕ್ಷೇತ್ರಗಳಲ್ಲಿ ಯಾರು ಎಷ್ಟು ಸೀಟ್ ಗೆಲ್ಲುತ್ತಾರೆಂಬುದನ್ನಾಗಲೀ ಹೇಳುವ ಸಾಧ್ಯತೆಯಿಲ್ಲ. ಆದರೂ ಎರಡು ಸಾಧ್ಯತೆಗಳು ನಮ್ಮ ಮುಂದೆ ಕಾಣುತ್ತಿವೆ. ಬಹುತೇಕ ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ ಇರುವುದರಿಂದ ಯಾವುದಾದರೂ ಕಾರಣಕ್ಕೆ ಶೇ.5ರಷ್ಟು ಮತಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋದರೆ (ಸ್ವಿಂಗ್ ಆದರೆ), ಬಿಜೆಪಿ 20 ಸೀಟುಗಳನ್ನು ಪಡೆದುಕೊಳ್ಳುತ್ತದೆ, ಇಲ್ಲದಿದ್ದರೆ ಮೈತ್ರಿ ಪಕ್ಷಗಳು 20 ಸೀಟುಗಳನ್ನು ಪಡೆದುಕೊಳ್ಳುತ್ತವೆ.

ಅಂತಹ ಯಾವ ಅಂಶ ಬಿಜೆಪಿಯ ಪರವಾಗಿದೆ? ಅದು ಮೋದಿ ಅಲೆ. ಬಿಜೆಪಿಗಿರುವ ಅನಾನುಕೂಲ (ಅದರಲ್ಲೂ ಮರಳಿ ಟಿಕೆಟ್ ಪಡೆದಿರುವ 15 ಹಾಲಿ ಸಂಸದರು – ಈ ಸಾರಿ ಸ್ಪರ್ಧಿಸದ ಬಳ್ಳಾರಿಯ ಮಾಜಿ ಸಂಸದ ಮತ್ತು ನಿಧನರಾದ ಅನಂತಕುಮಾರ್ ಹೊರತುಪಡಿಸಿ ಮಿಕ್ಕೆಲ್ಲರೂ – ಎದುರಿಸುತ್ತಿರುವ ಅಸಮಾಧಾನ ಮತ್ತು ಪಕ್ಷದೊಳಗಿನ ಒಳೇಟು)ಗಳನ್ನು ಮೆಟ್ಟಿ ನಿಲ್ಲುವ ಪ್ರಮಾಣದಲ್ಲಿ ಮೋದಿ ಅಲೆ ಇದ್ದರೆ, ಅದು ಬಿಜೆಪಿಗೆ 20 ಸೀಟುಗಳನ್ನು ತಂದುಕೊಡುತ್ತದೆ.

ಮೈತ್ರಿಯ ಪರವಾಗಿ 5% ಸ್ವಿಂಗ್ ಮಾಡುವ ಸಾಮರ್ಥ್ಯ ರಾಹುಲ್‌ಗಾಂಧಿಗೂ ಇಲ್ಲ, ಉತ್ತಮವಾಗಿದ್ದ ಪ್ರಣಾಳಿಕೆಯನ್ನೂ ಜನರ ಬಳಿಗೆ ತೆಗೆದುಕೊಂಡು ಹೋಗಲಿಲ್ಲ. ಜೊತೆಗೆ ಮೈತ್ರಿಯಾಗಿದ್ದೇವೆ ಎಂಬ ಆತ್ಮವಿಶ್ವಾಸ ಇಲ್ಲದಂತೆ ಆಗಲು ಸ್ವತಃ ಕಾಂಗ್ರೆಸ್ ನಾಯಕರೇ ಕಾರಣರಾದರು. ಹಾಗಾಗಿ ಮೈತ್ರಿಯ ಪರವಾಗಿ ಅಲೆಯಂಥದ್ದೇನೂ ಈ ಸಾರಿ ಕಾಣುತ್ತಿಲ್ಲ. ಆದರೆ, 8 ಕ್ಷೇತ್ರಗಳಲ್ಲಿ ಓಬಿಸಿಗೆ ಟಿಕೆಟ್ ಕೊಟ್ಟಿರುವ ಮೈತ್ರಿಗೆದುರಾಗಿ, ಕೇವಲ 1 ಕ್ಷೇತ್ರದಲ್ಲಿ ಮಾತ್ರ ಟಿಕೆಟ್ ಕೊಟ್ಟಿರುವ ಬಿಜೆಪಿಯ ನಡೆ, ಮೇಲ್ಜಾತಿಗಳು ಮತ್ತು ಮಾಧ್ಯಮಗಳ ಮೋದಿ ಪರವಾದ ಅಬ್ಬರದ ಕಾರಣದಿಂದ ಉಂಟಾಗಬಹುದಾದ ಪ್ರತಿಧ್ರುವೀಕರಣ (ಕೌಂಟರ್ ಪೋಲರೈಸೇಷನ್)ವು ಅಂತಹ ಒಂದು ಸಾಧ್ಯತೆಯನ್ನು ತಂದುಕೊಡಬಹುದೇ? ಈಗಲೇ ಹೇಳುವುದು ಕಷ್ಟವಾದರೂ, ತಳ್ಳಿ ಹಾಕಲಾಗದು. ಮಾಧ್ಯಮಗಳು ಅಥವಾ ರಾಜಕೀಯ ವಿಶ್ಲೆÃಷಕರು ಇದನ್ನು ಕಾಣದಿದ್ದರೂ, ಕೆಲವು ಕ್ಷೇತ್ರಗಳಲ್ಲಿ ಅಂತಹ ಸಾಧ್ಯತೆಯನ್ನು ರಾಜಕಾರಣಿಗಳು ಗುರುತಿಸುತ್ತಿದ್ದಾರೆ. ಈ ಸಾಧ್ಯತೆಯ ಹೊರತಾಗಿ ಇನ್ನಾವುದಾದರೂ ಅಂಡರ್ ಕರೆಂಟ್ ಪವಾಡ ನಡೆಯಬೇಕೇ ಹೊರತು, ಮೈತ್ರಿಯ ಪರವಾಗಿ ಅಲೆ ಬೀಸುವ ಸಾಧ್ಯತೆ ಕಾಣುತ್ತಿಲ್ಲ.

ಯಾವ ಕಡೆಗೂ ಅಲೆ ಇರದಿದ್ದರೆ ಅಥವಾ ಒಂದು ಅಲೆಯನ್ನು ಇನ್ನೊಂದು ಅಂಡರ್ ಕರೆಂಟ್ ಗುಡಿಸಿ ಹಾಕಿದರೆ, ಆಗ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು? ಅಲೆ ಇಲ್ಲವಾದಲ್ಲಿ ಇದು ಸೀಟ್ ಬೈ ಸೀಟ್ ಲೆಕ್ಕಾಚಾರವೇ ಹೊರತು ಬೇರೇನಿಲ್ಲ. ಒಟ್ಟಾರೆ ನೋಡಿದರೆ, ಅಂತಹ ಸಂದರ್ಭದಲ್ಲಿ ಮೈತ್ರಿಗೆ ಸಾಪೇಕ್ಷವಾಗಿ ಹೆಚ್ಚು ಅನುಕೂಲ. ಏಕೆಂದರೆ, ಕಡೆಯ ಮೂರ‍್ನಾಲ್ಕು ದಿನಗಳಲ್ಲಿ ಅಸಮಾಧಾನಗಳನ್ನು ಒಂದು ಮಟ್ಟಿಗೆ ತಣಿಸಲಾಗಿದ್ದು, ಕಡೆಯ ದಿನಗಳಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮೇಲಿನ ಅಭಿಮಾನ ಜೆಡಿಎಸ್ ಪ್ರಭಾವವಿರುವ ಭಾಗದಲ್ಲಿ ಮತ್ತು ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರು ಮೈತ್ರಿಯ ಪರವಾಗಿ ನಿಂತಿರುವ ಸಾಧ್ಯತೆಯಿದೆ. ಇದರ ಜೊತೆಗೆ ಜನರಲ್ಲಿ ಅಭ್ಯರ್ಥಿಯ ಕುರಿತ ಅಸಮಾಧಾನ ಹೆಚ್ಚಿರುವುದು ಹಾಲಿ ಸಂಸದರ ಮೇಲೆಯೇ. ಹಾಲಿ ಸಂಸದರು ಬಿಜೆಪಿಯಲ್ಲೇ ಹೆಚ್ಚಿರುವುದರಿಂದ ಸಹಜವಾಗಿ ಅವರ ವಿರುದ್ಧವೇ ಅಸಮಾಧಾನವೂ ಹೆಚ್ಚಿದೆ. ಇಷ್ಟು ಹೇಳಿದ ಮೇಲೂ ಅಂತಿಮವಾಗಿ ಸೀಟ್ ಬೈ ಸೀಟ್ ಫೈಟ್‌ನಲ್ಲಿ ಫಲಿತಾಂಶ ನಿರ್ಧಾರವಾಗುವುದು ಆ ಕ್ಷೇತ್ರದ ನಿರ್ದಿಷ್ಟ ಅಂಶಗಳ ಮೇಲೆಯೇ ಆಗಿರುತ್ತದೆ ಎಂಬುದೇ ಸತ್ಯ. ಹಾಗಾಗಿ ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶವನ್ನು ಎದುರು ನೋಡಬಹುದು.

ಇಷ್ಟು ಬಿಟ್ಟರೆ, ಅಲೆಯಿತ್ತಾ ಇಲ್ಲವಾ ಎಂಬುದನ್ನು ಅಳೆಯುವ ಸರಿಯಾದ ಸಾಧ್ಯತೆ ಏರ್ಪಡುವುದು ಮೇ 23ರ ನಂತರವೇ. ಅಲ್ಲಿಯವರೆಗೂ ಅವರವರ ಭಾವ ಮತ್ತು ಬಯಕೆಗೆ ತಕ್ಕಂತೆ ಊಹೆಗಳನ್ನು ಮಾಡುತ್ತಾ ಹೋಗಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...