ತಮಿಳುನಾಡು ಚುನಾವಣೆಗೆ 4 ದಿನ ಬಾಕಿ ಇರುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅಳಿಯ ಸಬರೀಸನ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ನಾಲ್ಕು ಮನೆಗಳಲ್ಲಿ ಶೋಧ ಕಾರ್ಯ ನಡೆಯತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸ್ಟಾಲಿನ್ ಅವರ ಮಗಳು ಸೆಂಥಮರಾಯ್ ಮತ್ತು ಅವರ ಪತಿ ಸಬರೀಸನ್ ವಾಸಿಸುತ್ತಿರುವ ನೀಲಂಗರೈನಲ್ಲಿರುವ ಮನೆಯ ಮೇಲೆ ಕೂಡ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಏಪ್ರಿಲ್ 06 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ಐಟಿ ದಾಳಿ ನಡೆದಿರುವುದು ಹಲವರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದು ತಿಂಗಳಷ್ಟೇ ಡಿಎಂಕೆ ಹಿರಿಯ ಮುಖಂಡ ಮತ್ತು ಅಭ್ಯರ್ಥಿ ಇ.ವಿ ವೇಲುರವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ಚುನಾವಣಾ ಹಿನ್ನೆಲ್ಲೆಯಲ್ಲಿ ಭಾರೀ ಹಣಕಾಸಿನ ವಹಿವಾಟು ನಡೆದಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ನಾವು ಇ.ವಿ ವೇಲುರವರ ಮನೆ ಮೇಲೆ ದಾಳಿ ನಡೆಸಿದ್ದೆವು. ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದೇವೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ತಿರುವಣ್ಣಾಮಲೈ ಕ್ಷೇತ್ರದ ಡಿಎಂಕೆ ಅಭ್ಯರ್ಥಿಯಾದ ಇ.ವಿ.ವೇಲು ಅವರ ಪರವಾಗಿ ಎಂ.ಕೆ ಸ್ಟಾಲಿನ್‌ರವರು ಪ್ರಚಾರ ನಡೆಸುತ್ತಿದ್ದ ವೇಳೆಯೇ ಅವರ ಮನೆ ಸೇರಿದಂತೆ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.
“ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತಂಗಿದ್ದ ಕೋಣೆಯಲ್ಲಿ ಸಹ ಹುಡುಕಾಟ ನಡೆಸಿದ್ದು ಐಟಿ ಅಧಿಕಾರಿಗಳ ಉದ್ದೇಶವೇನೆಂದು ತೋರಿಸುತ್ತದೆ. ಆದರೆ ಅಲ್ಲಿ ಅವರು ವಶಪಡಿಸಿಕೊಳ್ಳಲು ಏನೂ ಇರಲಿಲ್ಲ. ಈ ಐಟಿ ದಾಳಿಯು ನಮ್ಮ ವಿಜಯವನ್ನು ತಡೆಯಲಾಗುವುದಿಲ್ಲ” ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದರೆ ಕೃಷಿ ಕಾಯ್ದೆಗಳ ವಿರುದ್ದ ನಿರ್ಣಯ; ಡಿಎಂಕೆ ನಾಯಕ ಸ್ಟಾಲಿನ್


