ಈ ಎರಡು ದಶಕಗಳಲ್ಲಿ ಕಾಂಗ್ರೆಸ್ ಈ ಸಲ ಮೊದಲ ಬಾರಿಗೆ ಬೆಳಗಾವಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗುತ್ತಿದೆ. ಅದಕ್ಕೇ ಈ ಸಲ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಕಾಂಗ್ರೆಸ್ ಪ್ರಭಾವಿ ಮುಖಂಡ ಸತೀಶ್ ಜಾರಕಿಹೊಳಿಯವರನ್ನು ಅಖಾಡಕ್ಕೆ ಇಳಿಸಿದೆ.
ಇತ್ತ ಸುರೇಶ ಅಂಗಡಿಯವರ ಅಕಾಲಿಕ ನಿಧನದ ಕಾರಣಕ್ಕೆ ಬಿಜೆಪಿ ಅನುಕಂಪದ ಮತಗಳ ಬೇಟೆಯಲ್ಲಿ ಸುರೇಶ ಅಂಗಡಿಯವರ ಪತ್ನಿ ಮಂಗಳಾ ಅಂಗಡಿಯವರನ್ನು ಕಣಕ್ಕಿಳಿಸಿದೆ.
ಸತೀಶ್ ಜಾರಕಿಹೊಳಿ ಈಗ ಈ ಇರಬಹುದಯ ಎನ್ನಲಾದ ಅನುಕಂಪದ ಅಲೆಯನ್ನು ಹಿಮ್ಮೆಟ್ಟಿಸಬಹುದೇನೊ, ಆದರೆ, ಇಲ್ಲಿ ಲಿಂಗಾಯತರೇ ಮತಗಳೇ ಕಳೆದ ಎರಡು ದಶಕಗಳಿಂದ ಡಿಸೈಡಿಂಗ್ ಫ್ಯಾಕ್ಟರ್ ಆಗಿವೆ. ಹಳೆ ಲೆಕ್ಕದ ಪ್ರಕಾರ ಇಲ್ಲಿ ಲಿಂಗಾಯತರು 4 ಲಕ್ಷ 40 ಸಾವಿರ ಮತದಾರರಿದ್ದಾರೆ. ಇವರಲ್ಲಿ ಬಹುಪಾಲು ಜನ ಇಲ್ಲಿ ಬಿಜೆಪಿಯ ಬೆಂಬಲಿಗರೇ ಆಗಿದ್ದಾರೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಜನ ಮೋದಿಯ ಕಟ್ಟಾ ಬೆಂಬಲಿಗರೂ ಹೌದು ಎನ್ನುವ ಮಾತುಗಳಿವೆ.
ಅಂದರೆ ಈ ಲಿಂಗಾಯತರ ಕೋಟೆ ಭೇದಿಸಲು ಸತೀಶ್ ಜಾರಕಿಹೊಳಿ ಹೋರಾಟ ನಡೆಸಿದ್ದಾರೆ. ಹಿಂದೆಲ್ಲ ಅವರು ಯಮಕನಮರಡಿ ಅಸೆಂಬ್ಲಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಹೋಗದೇ ಗೆದ್ದು ಬಂದಿದ್ದಾರೆ ಎಂಬುದು ಅವರ ಅಭಿಮಾನಿಗಳ ‘ಹೆಮ್ಮೆ’. ಈ ಸಲವೂ ‘ಸಾಹೇಬ್ರು’ ಪ್ರಚಾರಕ್ಕೆ ಇಳಿಯದೇ ಗೆಲ್ಲುತ್ತಾರೆ ಎಂಬುದು ಅವರ ಅಭಿಮಾನಿಗಳ ಅತಿ ಆತ್ಮವಿಶ್ವಾಸವಾಗಿತ್ತು.
ಆದರೆ ವಾಸ್ತವವೇ ಬೇರೆ ಇದೆ, ಸತೀಶ್ ಕಳೆದ ಸಲದ ವಿಧಾನಸಭಾ ಚುನಾವಣೆಯಲ್ಲಿಯೂ ಯಮಕನಮರಡಿಯ ಕೆಲವು ಕಡೆ ಪ್ರಚಾರ ಕೈಗೊಂಡಿದ್ದರು. ಈ ಸಲ ಬೆಳಗಾವಿ ಕ್ಷೇತ್ರದ ಎಂಟೂ ಕೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರು ಮಕ್ಕಳು ಪ್ರಚಾರದ ನೇತೃತ್ವ ಹೊತ್ತು ಎಲ್ಲಾ ಕಡೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ.
ಅಂದರೆ ಆಟ ಕಠಿಣವಾಗಿದೆ ಎಂದರ್ಥ. ಬಿಜೆಪಿಯ ಪಕ್ಕಾ ಮತದಾರರನ್ನು ಬದಲಿಸಲು ಸತೀಶ್ ಕಡೆಯಿಂದ ಸಾಧ್ಯವಿಲ್ಲ. ಏಕೆಂದರೆ ಕಳೆದ ನಾಲ್ಕೈದು ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿಯೇ ಇಲ್ಲ! ಒಮ್ಮೆ ಮಾತ್ರ ಲಿಂಗಾಯತ ಲಕ್ಷ್ಮಿ ಹೆಬ್ಬಾಳಕರ್ ಕಾಂಗ್ರೆಸ್‌ನಿಂದ ನಿಂತಾಗ ಟಫ್ ಕಾಂಪಿಟೇಷನ್ ಕೊಟ್ಟಿದ್ದರು ಎಂಬ ಅಂಶ ಸತೀಶ್‌ಗೆ ನೆರವಾಗಬಲ್ಲದೇ?
ಲಿಂಗಾಯತರ ನಂತರ ಇಲ್ಲಿ ಮರಾಠಾ ಮತದಾರರು (2.25 ಲಕ್ಷ) ಹೆಚ್ಚಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಇವರೆಲ್ಲ ಬಹುತೇಕ ಬಿಜೆಪಿ ಬೆಂಬಲಿಸಿದ್ದಾರೆ. ಆದರೆ ಈ ಸಲ ಹಾಗಿಲ್ಲ. ಜಾರಕಿಹೊಳಿ ಕುಟುಂಬ ಅದರಲ್ಲೂ ಮುಖ್ಯವಾಗಿ ಸತೀಶ್ ಜೊತೆ ಮರಾಠಿ ಸಮುದಾಯದ ಒಂದು ‘ಆಪ್ತ ಸಂಬಂಧವಿದೆ. ಹೀಗಾಗಿ ಈ ಸಲ ಎಲ್ಲ ಮರಾಠಾ ಮತಗಳು ಬಿಜೆಪಿಗೆ ಇಡುಗಂಟಲ್ಲ.
ಇಷ್ಟಾದರೂ ಸತೀಶ್ ಜಾರಕಿಹೊಳಿ ಹೋರಾಟ ಯಾವುದರ ಮೇಲೆ ನಿಂತಿದೆ:
• ಇಲ್ಲಿ 1.80 ಲಕ್ಷ ಮುಸ್ಲಿಂ ಮತಗಳಿವೆ, 1.50 ಲಕ್ಷ ಕುರುಬರ ಮತಗಳು, 1.50 ಲಕ್ಷ ಎಸ್‌ಸಿ ಮತಗಳು ಮತ್ತು 85 ಸಾವಿರ ಎಸ್‌ಟಿ ಮತಗಳಿವೆ. ಅಹಿಂದ ಶಕ್ತಿ ಒಂದಾದರೆ ಗೆಲವು ಸುಲಭ ಎಂಬುದು ಒಂದು ಲೆಕ್ಕಾಚಾರ.
• ಈ ಕೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರು ಇರುವುದು ಮೇಲ್ನೋಟಕ್ಕೆ ಮಂಜುಳಾ ಅಂಗಡಿಯವರಿಗೆ ಅಡ್ವಾಂಟೇಜ್ ಅನಿಸುತ್ತಿದೆ. ಆದರೆ ಕೆಲವು ಬಿಜೆಪಿ ಶಾಸಕರಿಗೆ ಮಂಜುಳಾರನ್ನು ಕಣಕ್ಕೆ ಇಳಿಸಿದ್ದು ಅತೃಪ್ತಿ ಮೂಡಿಸಿದೆ.
• ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಮತ್ತು ಪಕ್ಕದ ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಿಂದ ಗೆದ್ದವರು. ಆದರೆ ಈ ಕುಟುಂಬದ ‘ಆಟ’ ಹೇಗಿರುತ್ತೇ ಅಂದರೆ ಈ ಸಲ ಸತೀಶ್ ಜಾರಕಿಹೊಳಿ ಗೆಲುವಿಗೆ ಅವರು ಪರೋಕ್ಷವಾಗಿ ಶ್ರಮಿಸಲಿದ್ದಾರೆ ಎಂಬ ಆಸೆ ಅಭಿಮಾನಿಗಳದ್ದು!

ಸತೀಶ್ ಜಾರಕಿಹೊಳಿಯವರಿಗೆ ರಾಜ್ಯ ರಾಜಕೀಯ ಬೇಡವಾಯಿತೆ?
ಈ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಹಿಂದೊಮ್ಮೆ ಸಿದ್ದರಾಮಯ್ಯರ ಪರಮಾಪ್ತರಾಗಿದ್ದ ಸತೀಶ್ ಜಾರಕಿಹೊಳಿ ಡಿಸಿಎಂ ಆಕಾಂಕ್ಷಿ ಎನ್ನಲಾಗಿತ್ತು. ಆದರೆ ಈಗ ಅವರನ್ನು ದೆಹಲಿಗೆ ಕಳಿಸಲು ಕಾಂಗ್ರೆಸ್ ಯೋಚಿಸಿದೆ. ಸತೀಶ್‌ಗೆ ಇದು ಇಷ್ಟವಿಲ್ಲ ಎಂಬುದು ಅರ್ಧಸತ್ಯವಷ್ಟೇ.
ಏಕೆಂದರೆ ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರನ್ನು ರಾಜಕೀಯಕ್ಕೆ ತರುವ ಒಂದು ಯೋಜನೆ ಚಾಲ್ತಿಯಲ್ಲಿದೆ. ಸತೀಶ್ ಗೆದ್ದರೆ, ಯಮನಕಮರಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಮಗಳು ಪ್ರಿಯಾಂಕಾ ಕಾಂಗ್ರೆಸ್ ಕ್ಯಾಂಡಿಡೇಟ್ ಎಂದು ಅವರು ಆಪ್ತರು ಮಾತಾಡಿಕೊಳ್ಳುತ್ತಿದ್ದಾರೆ. ಇವೆಲ್ಲಕ್ಕೂ ನಾವು ಮೇ 02 ರ ಉಪಚುನಾವಣೆ ಫಲಿತಾಂಶದವರೆಗೂ ಕಾಯಬೇಕಿದೆ.
ಇದನ್ನೂ ಓದಿ: ಬೆಳಗಾವಿ ಬೈ ಎಲೆಕ್ಷನ್: ಕಾಂಗ್ರೆಸ್ ಈ ಬಾರಿ ಗಂಭೀರವಾಗಿ ಪರಿಗಣಿಸಿದೆಯೇ?


