ಬೆಳಗಾವಿ ಜಿಲ್ಲೆಯ ರಾಜಕಾರಣವೆಂದರೆ ಆಯ್ದ ಕೆಲ ಪಾಳೇಗಾರ ಕುಟುಂಬಗಳ ರಾಜಕಾರಣ. ಇಂತಹ ಊರಿನಲ್ಲಿ ಇಲ್ಲಿವರೆಗೂ ಎಂಪಿ ಇಲೆಕ್ಷನ್ ಅನ್ನು ಗಂಭೀರವಾಗಿ ಪರಿಗಣಿಸದೇ ಇದ್ದ ಕಾಂಗ್ರೆಸ್ ಈ ಸಲ ಶಾಸಕ ಸತೀಶ್ ಜಾರಕಿಹೊಳಿಯವರನ್ನು ಕಣಕ್ಕೆ ಇಳಿಸುತ್ತಿದೆ. ಅಂದರೆ ಆಟ ಚಾಲೂ ಅಂತಿವೆ ಗೋಕಾಕ್, ಅರಭಾವಿ, ಯಮಕನಮರಡಿ ಕಡೆಯ ಪಡ್ಡೆ ಯುವಕರು..

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್‌ವೊಂದರ ಲಾಬಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ತಾಳ್ಮೆ ಕಳೆದುಕೊಂಡರು. ನಗರಕ್ಕೆ ರಾಷ್ಟ್ರಮುಟ್ಟದ ನಾಯಕರನ್ನು ಸ್ವಾಗತಿಸುವ ಕೆಲವು ಬ್ಯಾನರ್‌ಗಳಲ್ಲಿ “ಸುರೇಶ್ ಅಂಗಡಿ ಅಭಿಮಾನಿಗಳ ಸಂಘ” ಎಂದು ಹಾಕಲಾಗಿದೆ ಎಂದು ಫುಲ್ ಗರಂ ಆಗಿದ್ದರು.

ತಕ್ಷಣ ಅವುಗಳನ್ನು ತೆಗೆದುಹಾಕುವಂತೆ ತಾಕೀತು ಮಾಡಿದ್ದ ಅವರು “ಯಾರೂ ಮತ್ತೆ ಅಂತಹ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಬಾರದು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಸ್ಥಾನವಿಲ್ಲ. ನಮ್ಮ ಪಾಲಿಗೆ ಸಾಮೂಹಿಕ ನಾಯಕತ್ವವೇ ಫೈನಲ್” ಎಂದಿದ್ದರು. ಆದರೆ ನಳೀನ್ ಸಾಹೇಬರ ಆಟಾಟೋಪ ಈಗ ಏನಾಯಿತು? ಈಗ ಬಿಜೆಪಿ ಅಭ್ಯರ್ಥಿ ಯಾರು? ಮೃತ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಮೇಡಂ!

ಸುರೇಶ ಅಂಗಡಿಯವರ ಎರಡನೇ ಮಗಳು ಅಭ್ಯರ್ಥಿಯಾಗುವ ಚಾನ್ಸ್ ಇತ್ತು. ಆಕೆ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಅವರ ಸೊಸೆ ಕೂಡ! ಅದ್ಯಾಕೋ ಕೊನೆ ಕ್ಷಣದಲ್ಲಿ ಅಂಗಡಿಯವರ ಪತ್ನಿ ಮಂಗಳಮ್ಮರಿಗೆ ಬಿಜೆಪಿ ಟಿಕೇಟ್ ನೀಡಲಾಗಿತು. ನಳಿನ್ ಕುಮಾರ್ ಕಟೀಲ್ ಅವರೇ, ಇದು ವಂಶ ಪಾರಂಪರ್ಯದ ಅಚ್ಚಿನಲ್ಲಿ ಬರುವುದಿಲ್ಲವೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

ಕ್ಯಾಂಡಿಡೇಟ್ ಕೊರತೆಯಲ್ಲಿ ಕಾಂಗ್ರೆಸ್

ಬೆಳಗಾವಿ ಜಿಲ್ಲೆಯ ರಾಜಕಾರಣವೆಂದರೆ ಅದೊಂದು ಸಿಂಡಿಕೇಟ್ ದಂಧೆ. ಜಾರಕಿಹೊಳಿ, ಎ.ಬಿ ಪಾಟೀಲ್ ಮತ್ತು ಹುಕ್ಕೇರಿ ಕುಟುಂಬಗಳು ಪಕ್ಷಭೇಧ ಮರೆತು ಅಲ್ಲಿ ತಮ್ಮ ರಾಜಕೀಯ ಪ್ರಾಬಲ್ಯ ಮೆರೆಯಲು ತಮ್ಮ ತಮ್ಮ ಏರಿಯಾದಲ್ಲಿ ವೇದಿಕೆ ರೂಪಿಸಿಕೊಂಡಿವೆ ಎಂಬುದೇನೂ ಹೊಸ ವಿಷಯವಲ್ಲ. ಲಕ್ಷ್ಮೀ ಹೆಬ್ಬಾಳಕರ್ ಈ ಸಿಂಡಿಕೇಟ್ ಬುಡವನ್ನು ಕೊಂಚ ಅಲ್ಲಾಡಿಸಿದ್ದು ಕೂಡ ಸತ್ಯವೇ!

ಆದರೆ, ಕಳೆದ 15 ವರ್ಷದಿಂದ ಬೆಳಗಾವಿ ಸಂಸದ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನೇ ಹಾಕದೆ ಬಿಜೆಪಿಗೆ ನೆರವಾಗುತ್ತ ಬಂದಿದೆ. ಪ್ರಬಲ ಅಭ್ಯರ್ಥಿ ಇದ್ದರೆ ತಾನೇ ಹಾಕಲು? ಪಕ್ಷದ ಇತರ ಕಾರ್ಯಕರ್ತರನ್ನು ಇವರು ಬೆಳೆಯಲು ಬಿಟ್ಟರೆ ತಾನೇ? ಎಂಬ ಪ್ರಶ್ನೆಗಳು ಸಹಜ.

ಈಗ ಅನಿವಾರ್ಯವಾಗಿ, ಇದ್ದುದರಲ್ಲಿ ಸ್ವಲ್ಪ ಪ್ರಗತಿಪರ ನಾಯಕ ಎಂದು ಕರೆಸಿಕೊಂಡಿರುವ ‘ದೊಡ್’ ಸಾಹುಕಾರ್ ಸತೀಶ ಜಾರಕಿಹೊಳಿಯವರನ್ನೇ ಕಾಂಗ್ರೆಸ್ ಕಣಕ್ಕೆ ಇಳಿಸುತ್ತಿದೆ. ಸದ್ಯ ಶಾಸಕರಾಗಿರುವ ಅವರು ರಾಜ್ಯ ರಾಜಕಾರಣದಲ್ಲಿಯೇ ಹೆಚ್ಚು ಆಸಕ್ತಿಯುಳ್ಳವರಾಗಿದ್ದರು. ಆದರೆ ಕಾಂಗ್ರೆಸ್‌ಗೆ ಕ್ಯಾಂಡಿಡೇಟ್‌ ಕೊರತೆ ಇರುವುದರಿಂದ ಈ ಕ್ಷೇತ್ರ ಗೆಲ್ಲಬೇಕಾದರೆ ಬೇರೆ ಮುಖ ಕಾಣುತ್ತಿಲ್ಲ.

ಆದರೆ ಈ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಯ ಲೈಂಗಿಕ ಸಿ.ಡಿ ಪ್ರಕರಣ, ಎಂಇಎಸ್ ಇತ್ಯಾದಿ ಪಾತ್ರಗಳೂ ಯಾವ ಮಟ್ಟಿಗೆ ಪ್ರಭಾವ ಬೀರಬಹುದು ಎಂಬ ಪ್ರಶ್ನೆಗಳಿವೆ. ಅದು ಸ್ವಲ್ಪ ದಿನಗಳಲ್ಲಿಯೇ ಬಹಿರಂಗಗೊಳ್ಳಲ್ಲಿದೆ.

  • ಮಲ್ಲನಗೌಡರ್ ಪಿ.ಕೆ

ಇದನ್ನೂ ಓದಿ; ಮಸ್ಕಿ ಉಪಚುನಾವಣೆ| ಅಭ್ಯರ್ಥಿಗಳು ಅದಲು-ಬದಲು: ಮೀಸಲು ಕ್ಷೇತ್ರದಲ್ಲಿ ‘ಗೌಡರ’ ಸ್ಪರ್ಧೆ!

LEAVE A REPLY

Please enter your comment!
Please enter your name here