ರಾಜ್ಯದಲ್ಲಿ ಸರ್ಕಾರ ರಚಿಸಲು ಬೇಕಾಗುವ ಅಗತ್ಯ ಸಂಖ್ಯೆಯಲ್ಲಿ ಕೊರತೆಯಾದತೆ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕೈಜೋಡಿಸಬಹುದು ಎಂದು ಸಿಪಿಐ(ಎಂ) ಪಶ್ಚಿಮ ಬಂಗಾಳದ ಕಾರ್ಯದರ್ಶಿ ಸೂರ್ಯ ಕಾಂತ ಮಿಶ್ರಾ ಹೇಳಿದ್ದು, ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಕೂಡಾ ಅವರು ಪ್ರಶ್ನಿಸಿದ್ದಾರೆ.
ಎಡಪಕ್ಷಗಳು, ಕಾಂಗ್ರೆಸ್ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಚುನಾವಣಾ ದುಷ್ಕೃತ್ಯದ ಬಗ್ಗೆ ಚುನಾವಣಾ ಆಯೋಗಕ್ಕೆ ಹಲವಾರು ದೂರುಗಳನ್ನು ನೀಡಿದ್ದರೂ, “ಅವುಗಳಲ್ಲಿ ಯಾವುದನ್ನೂ ಪರಿಹರಿಸಲಾಗಿಲ್ಲ, ಆಯೋಗವು ಟಿಎಂಸಿ ಮತ್ತು ಬಿಜೆಪಿ ಪಕ್ಷಗಳನ್ನು ಸಂತೋಷಪಡಿಸುವಲ್ಲಿ ಮಾತ್ರ ಆಸಕ್ತಿ ಹೊಂದಿದೆ” ಎಂದು ಸೂರ್ಯ ಕಾಂತ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಬಹುಮತ ಇಲ್ಲದಿದ್ದ ಸಂದರ್ಭದಲ್ಲಿ ಎಡಪಕ್ಷಗಳ ಮೈತ್ರಿಕೂಟವು ಟಿಎಂಸಿಯೊಂದಿಗೆ ಕೈಜೋಡಿಸುವ ಸಾಧ್ಯತೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಅದೊಂದು ಕಾಲ್ಪನಿಕ ಪ್ರಶ್ನೆ” ಎಂದರು.
ಇದನ್ನೂ ಓದಿ: ಛತ್ತೀಸ್‌ಗಢ: ಅಪಹರಿಸಿದ್ದ ಯೋಧನನ್ನು ಬಿಡುಗಡೆ ಮಾಡಿದ ಮಾವೋವಾದಿಗಳು
“ಎಡಪಕ್ಷಗಳ ಮೈತ್ರಿಯು ರಾಜ್ಯದಲ್ಲಿ ಸರ್ಕಾರ ರಚಿಸಲು ಹೋರಾಡುತ್ತಿದೆ. ಬಹುಮತ ಇಲ್ಲದ ಫಲಿತಾಂಶ ಬಂದರೆ, ಟಿಎಂಸಿ ಮತ್ತು ಬಿಜೆಪಿ ಕೈಜೋಡಿಸಿ ಸರ್ಕಾರ ರಚನೆ ಮಾಡುವುದನ್ನು ನೀವು ಕಾಣಬಹುದು” ಎಂದು ಮಿಶ್ರಾ ಹೇಳಿದ್ದಾರೆ.
“ಅದಕ್ಕಾಗಿಯೇ ಎರಡು ಪಕ್ಷಗಳು ಕೈಜೋಡಿಸಿದರೂ ಸರ್ಕಾರ ರಚಿಸಲು ಸಾಧ್ಯವಾಗಬಾರದು ಎಂದು ನಾವು ಜನರಿಗೆ ಮನವಿ ಮಾಡುತ್ತಿದ್ದೇವೆ” ಎಂದು ಮಿಶ್ರಾ ಹೇಳಿದ್ದಾರೆ.
ಈ ಬಾರಿ ಚುನಾವಣಾ ಆಯೋಗದ ತಟಸ್ಥತೆಯ ಬಗ್ಗೆ ಗಂಭೀರ ಪ್ರಶ್ನೆಗಳೆದ್ದಿವೆ ಎಂದು ಅವರು ಆರೋಪಿಸಿದ್ದಾರೆ.
“ನಾವು ಹಲವಾರು ದೂರುಗಳನ್ನು ದಾಖಲಿಸಿದ್ದೇವೆ, ಆದರೆ ಅವುಗಳಲ್ಲಿ ಯಾವುದನ್ನೂ ಪರಿಹರಿಸಲಾಗಿಲ್ಲ. ಹಲವಾರು ಘಟನೆಗಳು ನಡೆದಿವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವು ಟಿಎಂಸಿ ಮತ್ತು ಬಿಜೆಪಿಯನ್ನು ಸಂತೋಷಪಡಿಸುವ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ತೋರುತ್ತದೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯು ಟಿಎಂಸಿಯನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸುತ್ತಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಎಂಟು ಹಂತಗಳಲ್ಲಿ ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಈಗಾಗಲೆ ಮೂರು ಹಂತಗಳು ಪೂರ್ಣಗೊಂಡಿವೆ.
ಇದನ್ನೂ ಓದಿ: ‘ವಿಮೆ, ಪರ್ಮಿಟ್ ಇಲ್ಲದೆ ಖಾಸಗಿ ಬಸ್‌ಗಳ ಓಡಾಟ’ – ಪತ್ರಕರ್ತರ ಪ್ರಶ್ನೆ ಸಿಟ್ಟಾದ ಮುಖ್ಯಮಂತ್ರಿ


