‘ಕೊರೊನಾ ಸೋಂಕು ರಾತ್ರಿ ಹೊತ್ತು ಮಾತ್ರ ಹರಡುತ್ತದೆಯೇ? ಹಗಲಲ್ಲಿ ಹರಡುವುದಿಲ್ಲವೇ? ಸರ್ಕಾರದ ನೈಟ್ ಕರ್ಫ್ಯು ನಿರ್ಧಾರ ಅವೈಜ್ಞಾನಿಕ’ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಳಗಾವಿಯಲ್ಲಿ ಶನಿವಾರ ತಿಳಿಸಿದ್ದಾರೆ. ಬಸವಕಲ್ಯಾಣದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು ಅಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
“ಕೊರೊನಾ ಸೋಂಕು ಹಗಲು ವೇಳೆ ಹರಡುವುದಿಲ್ಲ ರಾತ್ರಿ ಮಾತ್ರ ಹರಡುತ್ತದೆ ಅಂತಾ ಅದ್ಯಾವ ವಿಜ್ಞಾನಿ ಹೇಳಿದ ಎಂದು ನಮಗೂ ಹೇಳಿದರೆ ನಾವು ಅವರ ಫೋಟೋ ಹಾಕೊಂಡು ಇಟ್ಟುಕೊಳ್ಳುತ್ತೇವೆ. ರಾತ್ರಿವೇಳೆ ಎಲ್ಲಿ ಜನ ಸೇರುತ್ತಾರೆ? ರಾತ್ರಿ ವೇಳೆ ಜನ ಕಡಿಮೆ ಆಗುತ್ತಾರೆ. ಈ ಸಮಯದಲ್ಲಿ ಕರ್ಫ್ಯೂ ಹೇರಿ ಆರ್ಥಿಕತೆಯನ್ನು ಹಾಳು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ವಶಕ್ಕೆ ಪಡೆದ ಪೊಲೀಸರು
“ಸರ್ಕಾರ ಜನರನ್ನು ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ. ರಾತ್ರಿ ವೇಳೆ ಓಡಾಡುವ ರೈಲು, ವಿಮಾನ ನಿಲ್ಲಿಸುತ್ತೀರಾ? ಇದೆಲ್ಲವೂ ಅವೈಜ್ಞಾನಿಕ. ಇದು ಯಾವ ಸಂದೇಶ ಅಂತಾ ನೀವು ಸರ್ಕಾರವನ್ನು ಕೇಳಬೇಕು. ಇದೇ ಕಾರಣಕ್ಕೆ ಈ ಸರ್ಕಾರವನ್ನು ಜನ ಕಿತ್ತು ಹಾಕಬೇಕು. ಮೂರು ಉಪಚುನಾವಣೆಯಲ್ಲಿ ಇವರ ವಿರುದ್ಧ ಮತ ಹಾಕಬೇಕು ಆಗ ಇವರಿಗೆ ಬುದ್ಧಿ ಬರುತ್ತದೆ” ಎಂದು ಅವರು ಹೇಳಿದ್ದಾರೆ.
ನಂತರ ಸಾರಿಗೆ ನೌಕರರ ಸಂಘದ ಗೌರವಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, “ಇದು ಪ್ರಜಾಪ್ರಭುತ್ವ, ರೈತ ಮುಖಂಡರಿರಲಿ, ಕಾರ್ಮಿಕ ಮುಖಂಡರಿರಲಿ ಅವರ ಪ್ರತಿಭಟನೆ ಹತ್ತಿಕ್ಕಲು ಕಾನೂನು ದುರ್ಬಳಕೆ ಸರಿಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಗೂ, ಪ್ರಧಾನಿ ಮೋದಿಗೂ ಒಂದಷ್ಟು ಮಾನಸಿಕ ಚಿಕಿತ್ಸೆಯ ಅಗತ್ಯವಿದೆ: ಕಾಂಗ್ರೆಸ್ ತೀವ್ರ ವಾಗ್ದಾಳಿ
“ನಾವು ರಾಜಕೀಯದವರು ನಾವು ಸಭೆ ಮಾಡುತ್ತಿದ್ದೇವೆ. ಇದು ಕೂಡ ಸರ್ಕಾರದ ವಿರುದ್ಧದ ಪ್ರತಿಭಟನೆಯೆ. ಅವರನ್ನು ಹೊಗಳುವುದು ಸಭೆ, ಬೈದರೇ ಕೆಟ್ಟದ್ದಾ? ಅವರು ಮಾಡಿರುವ ತಪ್ಪನ್ನು ವಿರೋಧಿಸುತ್ತೇವೆ. ಈ ಸಂಘಟನೆಗಳು ಅವರ ಕಷ್ಟಗಳನ್ನು ಹೇಳಿಕೊಂಡು ಚರ್ಚೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ನೀಡಲಾಗಿರುವ ಹಕ್ಕನ್ನು ಮೊಟಕು ಮಾಡುತ್ತಿರುವುದು ಸರಿಯಲ್ಲ. ನಾನು ಇದನ್ನು ಖಂಡಿಸುತ್ತೇನೆ” ಎಂದು ಖಂಡನೆ ವ್ಯಕ್ತಪಡಿಸಿದರು.
“ಸರ್ಕಾರವೇ ನೌಕರರ ಬಳಿ ಹೋಗಿ ಮಾತನಾಡಲಿ. ಅಥವಾ ಅವರನ್ನು ಕರೆಸಿಕೊಂಡು ಮಾತನಾಡಲಿ. ಅದನ್ನು ಬಿಟ್ಟು ಅವರನ್ನು ಬಂಧಿಸುವುದು ಸರಿಯಲ್ಲ. ದೆಹಲಿಯಲ್ಲಿ ನಡೆಯುತ್ತಿರುವ ರೀತಿಯಲ್ಲೇ ಇಲ್ಲೂ ಪ್ರತಿಭಟನೆ ಮಾಡಲಿ ಅಂತಾ ಈ ರೀತಿ ಮಾಡುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯಲ್ಲ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಪ್ರತಿಭಟನೆ ಹತ್ತಿಕ್ಕುತ್ತಿರುವುದಕ್ಕೆ ನಾವು ಯಾವ ದರ್ಬಾರ್ ಎಂದು ಕರೆಯೋಣ. ಇದಕ್ಕೆ ಹೊಸ ಪದ ಹುಡುಕಿಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಿಲ್ಲಿಯಲ್ಲೊಬ್ಬ ಪಾಳೆಯಗಾರ, ಕರ್ನಾಟಕದಲ್ಲೊಬ್ಬ ಮಾಂಡಲಿಕ; ಭಲೇ ಜೋಡಿ: ಸಿದ್ದರಾಮಯ್ಯ


