ರಸಗೊಬ್ಬರ ಬೆಲೆ ಏರಿಕೆಯ ವಿಷಯದಲ್ಲಿ ಭುಗಿಲೆದ್ದಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರ ನೇತೃತ್ವದಲ್ಲಿ ನಡೆದ ಸಭೆ ಸ್ಪಷ್ಟ ನಿಲುವು ತಾಳದೆ ಅಂತ್ಯಗೊಂಡಿದೆ.
ಇತ್ತೀಚೆಗೆ ಇಫ್ಕೊ, ರಸಗೊಬ್ಬರದ ಮೇಲೆ ಶೇ. 58ರಷ್ಟು ಬೆಲೆ ಹೆಚ್ಚಳ ಪ್ರಕಟಿಸಿದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರೈತ ಸಂಘಟನೆಗಳು ಮತ್ತು ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಚಿವರು ಸಭೆ ಕರೆದಿದ್ದರು.
ಸಭೆ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಚಿವರು, ಇಫ್ಕೋದೊಂದಿಗೆ ನಡೆಸಿದ ಚರ್ಚೆಯ ಬಳಿಕ ಡಿಎಪಿ ಮತ್ತು ಎನ್‌ಪಿಕೆ ಗೊಬ್ಬರದ ಹಳೆಯ ಸ್ಟಾಕ್ಅನ್ನು ಹಳೆಯ ದರದಲ್ಲೇ ಮಾರಲು ಒಪ್ಪಿದ್ದಾರೆ ಎಂದು ತಿಳಿಸಿದರು.
After due discussion with IFFCO, they have agreed to sell stock of DAP and NPKs fertilizers with unrevised MRP till the available stocks are exhausted. Copy of the letter written by @IFFCO_PR has been forwarded to various state governments for information and necessary actions. pic.twitter.com/Z3EWGke7ZO
— Sadananda Gowda (@DVSadanandGowda) April 12, 2021
ದೇಶದ ರೈತರ ಹಿತದೃಷ್ಟಿಯಿಂದ ಸರ್ಕಾರವು ಉತ್ಪಾದನೆ, ಗೊಬ್ಬರದ ಲಭ್ಯತೆ ಮತ್ತು ವಹಿವಾಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.
ಟ್ವೀಟ್‌ನೊಂದಿಗೆ ಇಫ್ಕೋ ಸಂಸ್ಥೆ ಬರೆದ ಪತ್ರವೊಂದನ್ನು ಲಗತ್ತಿಸಿದ್ದು, ಅದರಲ್ಲಿ, ಮಾರ್ಚ್ 31ರವರೆಗೆ ಡಿಎಪಿ, ಎನ್‌ಪಿಕೆ ಗೊಬ್ಬರ ದರವನ್ನು ಹೆಚ್ಚು ಮಾಡಿಲ್ಲ. ಡಿಎಪಿ ದರ 1200 ರೂ ಮತ್ತು ಎನ್‌ಪಿಕೆ ದರ 1185 ರೂ ಹಾಗೂ ಎನ್‌ಪಿ ದರ 925 ರೂ ಇದ್ದು ಇದೇ ದರದಲ್ಲಿ ಹಳೆಯ ಸ್ಟಾಕ್ ಮುಗಿಯುವವರೆಗೆ ನೀಡಲಾಗುವುದು. ಆದರೆ ಗೊಬ್ಬರ ತಯಾರಿಕೆಗೆ ಬಳಕೆಯಾಗುವ ಕಚ್ಚಾ ವಸ್ತುಗಳ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇದೇ ತಿಂಗಳಲ್ಲಿ ದರ ಹೆಚ್ಚಿಸುವುದಾಗಿ ಹೇಳಿದೆ.
ಏಪ್ರಿಲ್ 1ರ ವರೆಗೆ ದೇಶದಲ್ಲಿ ಲಭ್ಯವಿರುವ ಒಟ್ಟು ಗೊಬ್ಬರ ದಾಸ್ತಾನಿನ ವಿವರಗಳನ್ನು ಪತ್ರದಲ್ಲಿ ನೀಡಿದೆ. ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಬಳಿ 67,241 ಮೆಟ್ರಿಕ್ ಟನ್, ವೇರ್‌ಹೌಸ್‌ಗಳಲ್ಲಿ 55,315 ಮಟ್ರಿಕ್ ಟನ್ ಸೇರಿ ಒಟ್ಟು 1,22,556 ಮೆಟ್ರಿಕ್ ಟನ್‌ನಷ್ಟು ಗೊಬ್ಬರವಿದ್ದು, ಇದು ಈಗ ಹಳೆಯ ದರದಲ್ಲಿ ಲಭ್ಯವಾಗಲಿದೆ.
ಆದರೆ ಈಗಾಗಲೇ ಹೊಸದರ ಮುದ್ರಿಸಿದ ಬ್ಯಾಗ್‌ಗಳನ್ನು ದಾಸ್ತಾನು ಮಳಿಗೆಗಳಿಗೆ ಪೂರೈಸಲಾಗಿದ್ದು, ಅದು ಯಾವ ದರದಲ್ಲಿ ಮಾರಟವಾಗಲಿದೆ ಎಂಬ ಬಗ್ಗೆ ಗೊಂದಲಗಳು ಉಂಟಾಗಿವೆ. ಈ ಕುರಿತು ಸರ್ಕಾರದ ನಡೆಯ ಬಗ್ಗೆ ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತ ಸಂಘಟನೆಗಳು ಪ್ರತಿಕ್ರಿಯಿಸಿವೆ.
ಇದನ್ನೂ ಓದಿ: ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ


