ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಅವರು ಮಂಗಳವಾರ ಪಿಣರಾಯಿ ವಿಜಯನ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಸಂಬಂಧಿಕರ ಪರವಾಗಿ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ ಎಂದು ರಾಜ್ಯ ಲೋಕಾಯುಕ್ತವು ಹೇಳಿದ ನಂತರ ಅವರು ರಾಜೀನಾಮೆ ನೀಡಿದ್ದಾರೆ.
ಸಚಿವ ಜಲೀಲ್ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದಾರೆ ಮತ್ತು ಅದನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಜೊತೆಗೆ ಈ ಬೆಳವಣಿಗೆಯನ್ನು ಸಚಿವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಮೇ 2 ರೊಳಗೆ ರಾಜ್ಯಸಭಾ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಕೇರಳ ಹೈಕೋರ್ಟ್ ಆದೇಶ
ಜಲೀಲ್ ಅವರು ತಮ್ಮ ವಿರುದ್ದದ ಲೋಕಾಯುಕ್ತ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಕೇರಳ ಹೈಕೋರ್ಟ್‌ಗೆ ತೆರಳಿದ ಒಂದು ದಿನದ ನಂತರ ರಾಜೀನಾಮೆ ನೀಡಲಾಗಿದೆ.
ಲೋಕಾಯುಕ್ತ ವಿಭಾಗೀಯ ಪೀಠವು ಶುಕ್ರವಾರ ಜಲೀಲ್ ವಿರುದ್ಧದ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ, ಸಚಿವರು ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಹೇಳಿದ್ದರು.
ಸಚಿವರ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಆರೋಪ ಸಾಬೀತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಜಲೀಲ್ ಅವರ ಸೋದರ ಸಂಬಂಧಿ ಆದೀಬ್ ಅವರನ್ನು ಕೇರಳ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಯೂತ್ ಲೀಗ್ ಮುಖಂಡರು 2018 ರ ನವೆಂಬರ್‌ನಲ್ಲಿ ಸಲ್ಲಿಸಿದ್ದ ದೂರಿನ ಮೇರೆಗೆ ಲೋಕಾಯುಕ್ತ ತೀರ್ಪು ನೀಡಿತ್ತು.
ನೇಮಕಾತಿ ಮಾಡಿದಾಗ ಆದೀಬ್ ಖಾಸಗಿ ಬ್ಯಾಂಕಿನ ವ್ಯವಸ್ಥಾಪಕರಾಗಿದ್ದರು.
ಇದನ್ನೂ ಓದಿ: ಕೊರೊನಾ ಉಲ್ಬಣ: ನಿರ್ಬಂಧಗಳನ್ನು ಹೆಚ್ಚಿಸಿದ ಕೇರಳ ಸರ್ಕಾರ
ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರಿಗೆ ಕೇರಳ ಪ್ರತಿರೋಧಿಸಿದ್ದು ಹೇಗೆ ಗೊತ್ತೇ? ವಿಡಿಯೋ ನೋಡಿ>>


