Homeಅಂತರಾಷ್ಟ್ರೀಯಇಂದು ಹಿಟ್ಲರ್ ಸತ್ತದಿನ. ಗೊಬೆಲ್ಸ್ ಸಹಾ ಆತ್ಮಹತ್ಯೆ ಮಾಡಿಕೊಂಡೇ ಸತ್ತಿದ್ದು.

ಇಂದು ಹಿಟ್ಲರ್ ಸತ್ತದಿನ. ಗೊಬೆಲ್ಸ್ ಸಹಾ ಆತ್ಮಹತ್ಯೆ ಮಾಡಿಕೊಂಡೇ ಸತ್ತಿದ್ದು.

- Advertisement -
- Advertisement -

ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡು ಸತ್ತ ಈ ದಿನದಂದು ಗೊಬೆಲ್ಸ್ ಕುರಿತಾದ ಲೇಖನ. ಆತನೂ ಆತ್ಮಹತ್ಯೆ ಮಾಡಿಕೊಂಡೇ ಸತ್ತದ್ದು.

ಏಪ್ರಿಲ್ 30 1945ರಂದು ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಅಷ್ಟು ಹೊತ್ತಿಗೆ ಸೋವಿಯತ್ ಒಕ್ಕೂಟದ ಸೈನ್ಯ ಜರ್ಮನಿಯನ್ನು ಸೋಲಿಸಿಯಾಗಿತ್ತು. ಬರ್ಲಿನ್ ನಗರವನ್ನು ಸಂಪೂರ್ಣ ವಶ ಮಾಡಿಕೊಳ್ಳುವುದಷ್ಟೇ ಬಾಕಿಯಿತ್ತು. ಹಿಂದಿನ ರಾತ್ರಿ ಹಿಟ್ಲರನೆಂಬ ಈ ವಿಕ್ಷಿಪ್ತ ವ್ಯಕ್ತಿ ಇವಾ ಬ್ರೌನ್ ಎಂಬಾಕೆಯನ್ನು ಮದುವೆಯಾಗಿದ್ದ! ಮದುವೆಯ ನಂತರ ‘ವೆಡ್ಡಿಂಗ್ ಬ್ರೇಕ್‍ಫಾಸ್ಟ್’ ಸೇವಿಸಿ, ತನ್ನ ಕಡೆಯ ಆದೇಶವನ್ನೂ, ವಿಲ್ ಅನ್ನೂ ಕಾರ್ಯದರ್ಶಿಗೆ ಹೇಳಿ ಬರೆಸಿದ. ಅದರಲ್ಲಿದ್ದ ಹಲವು ಸಂಗತಿಗಳಲ್ಲಿ ಗೊಬೆಲ್ಸ್‍ಅನ್ನು ಜರ್ಮನಿಯ ಛಾನ್ಸೆಲರ್ ಮಾಡಿ ಆದೇಶಿಸಿದ್ದೂ ಒಂದಾಗಿತ್ತು. ಅದೇ ದಿನ ಮಧ್ಯಾಹ್ನ ಹಿಟ್ಲರ್ ತನಗೆ ತಾನೇ ಗುಂಡಿಕ್ಕಿಕೊಂಡು ಸತ್ತ.

ಇವಾ ಬ್ರೌನ್ ಳೊಂದಿಗೆ ಹಿಟ್ಲರ್

ಮೇ 1ರಂದು ಗೊಬೆಲ್ಸ್ ಜರ್ಮನಿಯ ಛಾನ್ಸೆಲರ್ ಆದ. ಜರ್ಮನಿಯ ಅತೀ ದೊಡ್ಡ ಕಾರ್ಯನಿರ್ವಾಹಕ ಹುದ್ದೆಯಿಂದ ಆತ ಮಾಡಿದ ಒಂದೇ ಕೆಲಸವೆಂದರೆ, ಸೋವಿಯತ್ ಒಕ್ಕೂಟದ ಸೈನ್ಯದ ಕಮ್ಯಾಂಡೆರ್‍ಗೆ ಪತ್ರ ಬರೆದಿದ್ದು. ಹಿಟ್ಲರ್ ಸತ್ತನೆಂದೂ, ಕದನವಿರಾಮ ಘೋಷಿಸಬೇಕೆಂದೂ ಅದರಲ್ಲಿ ಕೋರಲಾಗಿತ್ತು. ಸೋವಿಯತ್ ಕಮ್ಯಾಂಡರ್ ಚ್ಯುಕೊವ್ ಅದನ್ನು ಒಪ್ಪದೇ, ಸೈನ್ಯವನ್ನು ಮುನ್ನಡೆಸಿದ್ದರಿಂದ ಬರ್ಲಿನ್ ಸಂಪೂರ್ಣ ಅವರ ವಶವಾಯಿತು. ಅದೇ ದಿನ ಸಂಜೆ ಗೊಬೆಲ್ಸ್‍ನ ಸೂಚನೆಯಂತೆ ಆತನ ಆರೂ ಮಕ್ಕಳಿಗೆ ಮತ್ತು ಬರಿಸುವ ಔಷಧ ನೀಡಿ, ಅವರು ಮಲಗಿದ ನಂತರ ಬಾಯೊಳಗೆ ಸಯನೈಡ್ ತುರುಕಿ ಸಾಯಿಸಲಾಯಿತು. ಅದರ ನಂತರ ರಾತ್ರಿ ಗೊಬೆಲ್ಸ್ ಮತ್ತು ಆತನ ಪತ್ನಿ ಪಕ್ಕದ ಪ್ರತಿಷ್ಠಿತ ಉದ್ಯಾನದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತರು.

ಗೊಬೆಲ್ಸ್ ನ ಕುಟುಂಬ

ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಹಿಟ್ಲರನ ಸುಳ್ಳಿನ ಫ್ಯಾಕ್ಟರಿಯನ್ನು ನಿರ್ವಹಿಸುತ್ತಿದ್ದ ಮತ್ತು ಅದರಲ್ಲಿ ವಿಶೇಷ ಪರಿಣಿತ ಪಡೆದಿದ್ದ ಗೊಬೆಲ್ಸ್ ಒಂದು ದಿನದ ಮಟ್ಟಿಗೆ ಜರ್ಮನಿಯ ಛಾನ್ಸೆಲರ್ ಆಗಿದ್ದ ಸಂಗತಿ ಹೆಚ್ಚಿನವರಿಗೆ ಗೊತ್ತಿಲ್ಲ. ಆತ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಂತೂ ಬಹುತೇಕರು ಕೇಳಿಲ್ಲ.

ನಮ್ಮ ದೇಶದಲ್ಲಿ ಸುಳ್ಳಿನ ಫ್ಯಾಕ್ಟರಿಗಳು ದೊಡ್ಡ ಪ್ರಮಾಣದಲ್ಲಿ ಚಾಲೂ ಆಗಿ ಬಹಳ ಕಾಲವಾಯಿತು. ಬಹುಶಃ ಅವು ಇತಿಹಾಸದಲ್ಲೇ ಅತೀ ಹೆಚ್ಚು ಸಕ್ರಿಯವಾಗಿರುವುದು ಈಗಲೇ ಆಗಿದೆ. ದುರಂತವೆಂದರೆ, ಅದು ಕೇವಲ ಒಬ್ಬ ವ್ಯಕ್ತಿಯ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಒಂದು ಫ್ಯಾಕ್ಟರಿಯಾಗಿಲ್ಲ. ನೂರಾರು ಫ್ಯಾಕ್ಟರಿಗಳು ಸಕ್ರಿಯವಾಗಿವೆ ಮತ್ತು ದೇಶದ ಗಣನೀಯ ಸಂಖ್ಯೆಯ ಮಾಧ್ಯಮಗಳು (ಅದರಲ್ಲೂ ಟಿವಿ ಚಾನೆಲ್‍ಗಳು) ಅವನ್ನು ಉತ್ಪಾದಿಸುವ ಮತ್ತು ಹರಡುವ ಕೆಲಸ ಮಾಡುತ್ತಿವೆ. ಅವನ್ನು ಪುನರುತ್ಪಾದಿಸುವ ಕೆಲಸದಲ್ಲಿ ದೇಶದ ಅತ್ಯಂತ ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳ ಮೂಲಕ ತೊಡಗಿಕೊಂಡಿದ್ದಾರೆ. ಈ ಹಸೀ ಸುಳ್ಳುಗಳಿಗೆದುರಾಗಿ, ಪುರಾವೆಯ ಸಮೇತ ಹಾಗೂ ತರ್ಕದ ಸಮೇತ ಸತ್ಯವನ್ನು ಮುಂದಿಟ್ಟರೂ ಒಪ್ಪದೇ ಇರಲು ಬೇಕಾದ ತರ್ಕವನ್ನು ಮತ್ತು ಕುರುಡನ್ನು ಬೆಳೆಸಿಕೊಂಡಿರುವ ‘ಸುಶಿಕ್ಷಿತ ಜನ’ರ ಸಮೂಹ ದೇಶದಲ್ಲಿದೆ. ಸತ್ಯವನ್ನು ಒಪ್ಪದಿರಲು ಅವರಲ್ಲಿ ಸಿದ್ಧ ಅತಾರ್ಕಿಕ ವಾದಗಳಿರುತ್ತವೆ.

ಇದನ್ನು ಸತ್ಯದಿಂದ ಎದುರಿಸುವುದಲ್ಲದೇ ಬೇರೆ ದಾರಿ ಇಲ್ಲ. ಆದರೆ ತರ್ಕ ಮತ್ತು ನಿಜವಾದ ಮಾಹಿತಿಯನ್ನು ಮುಂದಿಡುವುದರಿಂದಷ್ಟೇ ಅದನ್ನು ಎದುರಿಸಲು ಸಾಧ್ಯವಾಗದು ಎಂದು ಬಗೆದಿರುವ ಕೆಲವರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಬಯಸಿ, ಅಲ್ಪ ಸ್ವಲ್ಪ ಸುಳ್ಳು ಸೇರಿಸಿ ತಿರುಗೇಟು ಕೊಡುತ್ತಿರುವುದೂ ಉಂಟು. ಮೊನ್ನಿನ ಪಾಟ್ನಾ ರ್ಯಾಲಿಯ ಕುರಿತಾಗಿ ಲಾಲೂ ಪ್ರಸಾದ್ ಯಾದವ್ ಅವರ ಅಕೌಂಟಿನಿಂದ ಅಂತಹದೊಂದು ಸುಳ್ಳನ್ನು ಸೇರಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಯಿತು. ನಮ್ಮ ಸಂಪಾದಕರು ಅದನ್ನು ಷೇರ್ ಮಾಡಿದ್ದರು. ಆದರೆ, ಆ ಫೋಟೋ ಅಸಲೀ ಫೋಟೋ ಅಲ್ಲ; ಫೋಟೋಷಾಪ್ ಬಳಸಿ ಜನರ ಪ್ರಮಾಣವನ್ನು ಹಿಗ್ಗಿಸಲಾಯಿತೆಂದು ಗೊತ್ತಾದ ತಕ್ಷಣ ಮೂಲ ಫೋಟೋ ಮತ್ತು ಫೋಟೋಷಾಪ್ ಮಾಡಿದ ಫೋಟೋ ಎರಡನ್ನೂ ಹಾಕಿ ಇನ್ನೊಮ್ಮೆ ಬರೆದರು. ನೀವು ಮೊದಲು ಹಾಕಿದ್ದ ಫೋಟೋ ಸರಿಯಿಲ್ಲ ಎಂದು ಬೇರೆಯವರು ಹೇಳಿ, ಇವರನ್ನೇನೂ ಟ್ರೋಲ್ ಮಾಡಿರಲಿಲ್ಲ. ತಾವೇ ಮುಂದಾಗಿ ಸತ್ಯ ತಿಳಿಸುವ ಕೆಲಸ ಮಾಡಿದರು. ಹಾಗೆ ನೋಡಿದರೆ ಲಾಲೂ ಅವರ ರ್ಯಾಲಿಗೆ ನಿಜವಾಗಲೂ ಸೇರಿದ ಜನರ ಸಂಖ್ಯೆಯೂ ಬಹಳ ದೊಡ್ಡದಾಗಿತ್ತು! ಅಷ್ಟರಮಟ್ಟಿಗಿನ ವ್ಯತ್ಯಾಸವೂ ಉಂಟಾಗಬಾರದೆಂಬ ಕಾಳಜಿ ಅವರದ್ದಾಗಿತ್ತು. ಇದು ಸುಳ್ಳನ್ನು ಎದುರಿಸುವ ನಿಜವಾದ ದಾರಿಯಾಗಿದೆ.

ವಾಸ್ತವದಲ್ಲಿ, ನಿಜಕ್ಕೂ ನಡೆದಿರುವ ಸಂಗತಿಯನ್ನೇ ಕಚ್ಚಾವಸ್ತುವನ್ನಾಗಿ ತೆಗೆದುಕೊಂಡು, ಅದನ್ನು ಸಾವಿರಾರು ಪಟ್ಟು ಹಿಗ್ಗಿಸುವುದು ಮಾತ್ರವಲ್ಲದೇ, ಇರದೇ ಇರುವ ಸಂಗತಿಯನ್ನು ಇದ್ದಂತೆ ಬರೆಯುವುದರಲ್ಲಿ ಪ್ರಾವೀಣ್ಯ ಪಡೆದಿರುವ ದೊಡ್ಡ ಪಡೆ ದೇಶದಲ್ಲಿದೆ. ಆದರೆ, ಬೇರೆಯವರು ಉದ್ದೇಶಪೂರ್ವಕವಾಗಿಯೋ, ಅಕಸ್ಮಾತ್ತಾಗಿಯೋ ಒಂದು ಸಣ್ಣ ತಪ್ಪನ್ನು ಮಾಡಿದರೂ ಈ ಪಡೆ ಅದನ್ನೇ ಹಿಗ್ಗಿಸಿ ಪ್ರಚಾರ ಮಾಡುತ್ತಾರೆ. ಇದರಿಂದ ಎರಡರಲ್ಲಿ ಒಂದು ಉದ್ದೇಶ ಸಾಧನೆಯಾಗುತ್ತದೆ. ಒಂದು, ತಮ್ಮ ಪರಿವಾರವು ದೇಶವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತಿದ್ದರೆ ಉಳಿದವರು ತೊಂದರೆ ಕೊಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತದೆ. ಎರಡು, ಎಲ್ಲರೂ ಸುಳ್ಳು ಹೇಳುವವರೇ ಬಿಡಿ ಎಂಬ ಸಾರಾಸಗಟು ಅಭಿಪ್ರಾಯ ಮೂಡುವಂತೆ ಆಗುತ್ತದೆ. ಹೀಗಾಗಿ ಸುಳ್ಳನ್ನು ಸತ್ಯದಿಂದ ಎದುರಿಸುವ ಮಾರ್ಗ ಮಾತ್ರ ಗೆಲ್ಲಲು ಸಾಧ್ಯ. ಈ ಸತ್ಯ ಗೆದ್ದೇ ಗೆಲ್ಲುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಆದರೆ, ನಮ್ಮನ್ನು ಕಾಡಬೇಕಾದ ಮತ್ತೊಂದು ಸಂಗತಿಯಿದೆ. ಅದೇನೆಂದರೆ, ಗೊಬೆಲ್ಸ್ ಎಂಬ ಸುಳ್ಳಿನ ಫ್ಯಾಕ್ಟರಿಯು ಅಂತಿಮವಾಗಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಗೊಬೆಲ್ಸ್‍ನ ಖಾತೆಯ ಹೆಸರೇ ‘ಪ್ರಾಪಗಾಂಡಾ ಮಿನಿಸ್ಟ್ರಿ’ (ಪ್ರಸಾರ ಖಾತೆ). ಇದು ನಮ್ಮ ವಾರ್ತಾ ಮತ್ತು ಪ್ರಸಾರ ಇಲಾಖೆಯ ರೀತಿಯದ್ದಲ್ಲ. ಅದು ಪರ್ಯಾಯ ಸಾಂಸ್ಕೃತಿಕ ಮಾದರಿಯನ್ನು ನಿರ್ಮಿಸುವುದು. ಪರ್ಯಾಯ ನಾಗರಿಕತೆಯ ಮಾದರಿಯನ್ನು ಮುಂದಿಡುವುದು. ಸುಳ್ಳುಗಳ ಅಡಿಪಾಯದ ಮೇಲೆ ಸುಳ್ಳುಗಳ ಸೌಧಗಳನ್ನು ಕಟ್ಟಿ, ನರಮೇಧಕ್ಕೂ ಹೇಸದ ಸಾರ್ವಜನಿಕ ಮನಸ್ಥಿತಿಯನ್ನು ರೂಪಿಸುವುದು. ಇದನ್ನು ಗೊಬೆಲ್ಸ್ ಮತ್ತು ನಾಝೀ ಸಂಘಟನೆಗಳು ಎಷ್ಟು ವ್ಯವಸ್ಥಿತವಾಗಿ ಮಾಡಿದರೆಂದರೆ, ಇಡೀ ಜಗತ್ತು ಹತ್ಯಾಕಾಂಡ ಕೇಳಿ ಬೆಚ್ಚಿ ಬಿದ್ದರೆ, ಅದನ್ನು ಕಣ್ಣಾರೆ ಕಂಡ ಜರ್ಮನಿಯ ಜನರಿಗೆ ಆ ರೀತಿಯ ಆಘಾತ ಆಗಿರಲಿಲ್ಲ. ಅವರಿಗೆ ಜರ್ಮನಿ ಮಾತ್ರವಲ್ಲಾ, ಇಡೀ ಜಗತ್ತನ್ನು ಆಳುವ ಶಕ್ತಿ ಸಾಮಥ್ರ್ಯಗಳಿರುವ ಮಹಾನ್ ಜನಾಂಗ ತಾವೆಂಬ ಅಫೀಮನ್ನೂ ತಿನ್ನಿಸಲಾಗಿತ್ತು! ಆದರೆ, ಅದರ ನೇತಾರ ಕೊನೆಯಲ್ಲಿ ತನಗೆ ತಾನೇ ಗುಂಡಿಕ್ಕಿಕೊಂಡ. ಕಡೆಯವರೆಗೂ ಆತನನ್ನು ಬಿಟ್ಟು ಓಡದ ನಿಷ್ಠಾವಂತ ಸುಳ್ಳಿನ ಫ್ಯಾಕ್ಟರಿ ಗೊಬೆಲ್ಸ್ ಸಹಾ ತಾನೇ ಕೈಯ್ಯಾರೆ ಕೊಂದುಕೊಂಡ. ಅದಕ್ಕೆ ಮುಂಚೆ ಆತನ ಮಕ್ಕಳಿಗೆ ಅಫೀಮು ತಿನ್ನಿಸಿ, ಅವರ ಸಾವನ್ನು ಅವರು ಕಾಣದಂತೆ ಮಾಡಿದರು. ಜರ್ಮನಿಯ ಸಾಮಾನ್ಯ ಜನರ ಮನಸ್ಥಿತಿಯೂ ಜನಾಂಗ ಶ್ರೇಷ್ಠತೆ ಮತ್ತು ದ್ವೇಷದ ಅಫೀಮನ್ನು ತಿಂದು ಅದಕ್ಕಿಂತ ಮುಂಚೆಯೇ ಸತ್ತು ಹೋಗಿತ್ತು.

ಭಾರತದ ಪರಿಸ್ಥಿತಿ ಸಂಕೀರ್ಣವಾದುದು. ಜರ್ಮನಿಗೆ ಹೋಲಿಸಿದರೆ ಇದು ಭಾರೀ ದೊಡ್ಡ ದೇಶ. ಈ ಕಾಲವೂ ಬೇರೆ. ಸಾವಿರಾರು ಜಾತಿಗಳು, ನೂರಾರು ಭಾಷೆಗಳು, ಸುಲಭದಲ್ಲಿ ಏಕರೂಪಕ್ಕೆ ಎಳೆದು ತರಲಾಗದ ವೈವಿಧ್ಯಮಯ ಸಂಸ್ಕೃತಿಗಳು. ಈ ದೇಶದ ಈ ಕಾಲದ ಆರ್ಥಿಕತೆಯೂ ಸಂಕೀರ್ಣವಾದುದು. ಏಕಕಾಲದಲ್ಲಿ ಎಲ್ಲರನ್ನೂ ಯಾಮಾರಿಸುವುದು ಸುಲಭವಲ್ಲ. ನೋಟು ರದ್ದತಿಯಂತಹ ಹುಸಿ ಸರ್ಜಿಕಲ್ ಸ್ಟ್ರೈಕ್‍ಗಳನ್ನು ಆಗಾಗ್ಗೆ ಮಾಡುತ್ತಿರಲೇಬೇಕಾಗುತ್ತದೆ. ಏಕೆಂದರೆ, ಸುಳ್ಳಿನ ಫ್ಯಾಕ್ಟರಿಯ ಮಾಲೀಕರು ಹುಲಿ ಸವಾರಿ ಮಾಡುತ್ತಿದ್ದಾರೆ. ಅವರೇ ಸಾಕಿದ ಹುಲಿಯಾದರೂ, ನರಮಾಂಸದ ರುಚಿ ಹತ್ತಿಸಿರುವ ಹುಲಿ. ಅವರು ಇಳಿದೊಡನೆ ಅದು ಅವರನ್ನೇ ಬೇಟೆಯಾಡುತ್ತದೆ. ಆ ಹುಲಿಯು ಅವರದ್ದೇ ವ್ಯಕ್ತಿತ್ವದ ವಿಸ್ತರಣೆಯಾದ್ದರಿಂದ, ಆ ಬೇಟೆಯೂ ಆತ್ಮಹತ್ಯೆಯೇ ಆಗಿರುತ್ತದೆ.

ಜರ್ಮನಿಯಲ್ಲಿ ಒಬ್ಬ ಗೊಬೆಲ್ಸ್ ಮತ್ತು ಆತನದ್ದೊಂದು ಯಂತ್ರಾಂಗವಿತ್ತು. ಇಲ್ಲಿ ಸಾವಿರಾರು ಫ್ಯಾಕ್ಟರಿಗಳು, ಲಕ್ಷಾಂತರ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಸೀ ಹಸೀ ಸುಳ್ಳನ್ನು ಯಾವ ಮುಜುಗರವೂ ಇಲ್ಲದೇ ಹರಡುವ ಕೋಟ್ಯಾಂತರ ಸುಶಿಕ್ಷಿತರು ಇದ್ದಾರೆ. ಅಂದರೆ ನಮ್ಮ ಮನೆ ಮನೆಗಳಲ್ಲೂ ಇದ್ದಾರೆ. ಅಂದು ಸಾಪೇಕ್ಷವಾಗಿ ಹೊಸ ಮಾಧ್ಯಮಗಳಾಗಿದ್ದ ರೇಡಿಯೋ ಹಾಗೂ ಸಿನೆಮಾವನ್ನು ಅವರು ವ್ಯವಸ್ಥಿತವಾಗಿ ಬಳಸಿದ್ದರು. ಇಂದೂ ಹಾಗೆಯೇ, ಸಾಪೇಕ್ಷವಾಗಿ ಹೊಸ ಮಾಧ್ಯಮವಾಗಿರುವ ಟಿವಿ ಚಾನೆಲ್‍ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಇವೆಲ್ಲಾ ಏನೇ ಇರಲಿ, ನಮ್ಮನ್ನು ಕಾಡಬೇಕಾದ ಸಂಗತಿಯ ವಿಚಾರಕ್ಕೆ ಮರಳಿ ಬರುವುದಾದರೆ – ಕೊನೆಗೊಂದು ದಿನ ಸುಳ್ಳುಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಈ ಫ್ಯಾಕ್ಟರಿಗಳು, ಅವುಗಳಲ್ಲಿ ಸಿದ್ಧಪಡಿಸಿದ ವಸ್ತುಗಳನ್ನು ವಿತರಣೆ ಮಾಡುತ್ತಿರುವ ಕೋಟ್ಯಾಂತರ ಜನರ ಕಥೆ ಏನಾಗುತ್ತದೆ? ನಮ್ಮ ಮನೆ ಮನೆಗಳಲ್ಲೂ ಇರುವ, ನಮ್ಮ ನೆರೆಯವರೇ ಆಗಿರುವ ಇವರೆಲ್ಲರ ಕಥೆ ಏನಾಗುತ್ತದೆ? ಈ ದೇಶದಲ್ಲಿ ದೊಡ್ಡದೊಂದು ಮಾರಣಹೋಮ ಮತ್ತೆ ಮತ್ತೆ ನಡೆಯಬಹುದು; ನಡೆಯದಿರಬಹುದು. ಆದರೆ, ಈ ದೊಡ್ಡ ಸಂಖ್ಯೆಯ ವಿತರಣೆಗಾರರಂತೂ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಅವರು ದೈಹಿಕವಾಗಿ ಬದುಕಿರಬಹುದಾದರೂ, ನರಮಾಂಸದ ರುಚಿ ಹತ್ತಿದ ಹುಲಿಯ ಮನಸ್ಥಿತಿಯಲ್ಲಿ ಇರುತ್ತಾರಾದ್ದರಿಂದ ದಿಕ್ಕೆಟ್ಟು ಹೋಗುತ್ತಾರೆ. ಎಡಬಿಡದೇ ಅಫೀಮನ್ನು ಒದಗಿಸುತ್ತಿದ್ದ ಸವಾರಿಗಾರರು ಕೊಳೆತು ತಿಪ್ಪೆ ಸೇರಿರುತ್ತಾರೆ. ಅಸಾಧ್ಯವಾಗಿ ನಾರುವ, ಹುಳುಗಳು ಪಿತಗುಡುವ ಆ ತಿಪ್ಪೆಗಳಲ್ಲಿ, ಅಫೀಮಿನ ಹುಡುಕಾಟ ಮಾಡುತ್ತಾ, ಕೆದಕುತ್ತಾ ಕೆದಕುತ್ತಾ ಆಳಕ್ಕಿಳಿಯಬೇಕಾಗುತ್ತದೆ. ಅದು ಸಾವೋ, ಸತ್ತ ನಂತರ ಭೀಕರ ಸ್ಥಿತಿಗೆ ತಲುಪಿರುವ ಭೂತಗಳೋ ಎಂಬಂತೆ ಕಾಣುತ್ತಿರುತ್ತದೆ.
ನಮ್ಮ ದೇಶದ, ಸಹ ವಾಸಿಗಳಿಗೆ ಈ ಸ್ಥಿತಿ ಬರಬಾರದು. ಕಾರುಣ್ಯವನ್ನೂ, ದಯೆಯನ್ನೂ ಬೋಧಿಸಿದ ಬುದ್ಧ ಬಸವರ ಧರ್ಮ ನೆಲೆತಾಳಿದ ನಾಡಿದು. ಇಲ್ಲಿ ನಮ್ಮ ಜೊತೆಗೇ ಹುಟ್ಟಿ ಬೆಳೆದ ಬಂಧುಗಳಿಗೆ ಅಂತಹ ಸ್ಥಿತಿ ಬಾರದಂತೆ ನೋಡಿಕೊಳ್ಳುವ ಕರ್ತವ್ಯ ನಮ್ಮದೇ ಆಗಿದೆ.
ಹಾಗಾಗಿ ಅಸಹನೆಗೆ ಪ್ರತಿಯಾಗಿ ಅಸಹನೆ, ಸುಳ್ಳಿಗೆ ಬದಲಿಗೆ ಸುಳ್ಳು, ದ್ವೇಷಕ್ಕೆ ಬದಲಿ ದ್ವೇಷವನ್ನು ನಾವು ಹರಡುವುದು ಬೇಡ. ನಮ್ಮ ಸಹ ವಾಸಿಗಳ ಬಗ್ಗೆ ಪ್ರೀತಿಯಿಟ್ಟುಕೊಳ್ಳೋಣ. ನಿಷ್ಠುರ ಸತ್ಯ ಮತ್ತು ಪ್ರೀತಿಯಿಂದ ಅಸತ್ಯವನ್ನು ಎದುರಿಸುವುದು ಸಾಧ್ಯವಾಗಲಿ.

(ಗೌರಿ ಲಂಕೇಶ್ ಅವರ ಪತ್ರಿಕೆಯಲ್ಲಿ ‘ಅಂಚಿನಿಂದ’ ಕಾಲಂ ಬರೆಯುತ್ತಿದ್ದ ಡಾ.ವಾಸು.ಎಚ್.ವಿ. ಅವರು ಮೇಡಂ ಬದುಕಿದ್ದಾಗ ಬರೆದ ಕಡೆಯ ಲೇಖನ. ನಂತರದ ಸಂಚಿಕೆಗೆ ಅವರ ಕುರಿತ ಶ್ರದ್ಧಾಂಜಲಿ ಬರಹವನ್ನು ಬರೆಯಬೇಕಾಯಿತು. ಗೌರಿ ಲಂಕೇಶರು ಅವರ ಸಂಪಾದಕೀಯದಲ್ಲಿ ಈ ಬರಹದ ಕುರಿತೂ ಬರೆದಿದ್ದರು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...