Homeಕರ್ನಾಟಕಹಿಂದುತ್ವದ ಉತ್ಕರ್ಷ ಮತ್ತು ಮುಸ್ಲಿಂ ಜನಪ್ರಾತಿನಿಧ್ಯಕ್ಕೆ ಹೊಡೆತ: ಇದೊಂದು ಗಂಭೀರ ಸಾಮಾಜಿಕ ದುರಂತ

ಹಿಂದುತ್ವದ ಉತ್ಕರ್ಷ ಮತ್ತು ಮುಸ್ಲಿಂ ಜನಪ್ರಾತಿನಿಧ್ಯಕ್ಕೆ ಹೊಡೆತ: ಇದೊಂದು ಗಂಭೀರ ಸಾಮಾಜಿಕ ದುರಂತ

- Advertisement -
- Advertisement -

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪಕ್ಷವು ಲೋಕಸಭೆಯಲ್ಲಿ ತನ್ನ ಸಂಸದೀಯ ಸದಸ್ಯರಲ್ಲಿ ಒಬ್ಬ ಮುಸ್ಲಿಂ ಧರ್ಮೀಯನನ್ನೂ ಹೊಂದಿರಲಿಲ್ಲ!
ಈಗ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳ ಪೈಕಿ ಬಸವಕಲ್ಯಾಣದಲ್ಲಿ ಮಾತ್ರ ಅಭ್ಯರ್ಥಿ ಹಾಕಿರುವ ಜೆಡಿಎಸ್ ಅಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಬಸವಕಲ್ಯಾಣದಲ್ಲಿ ಮತದಾರರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿರುವುದು ಸ್ವಾಗತಾರ್ಹ ಕ್ರಮವೇ, ಆದರೆ ಒಟ್ಟೂ ಜೆಡಿಎಸ್ ನಡವಳಿಕೆ ನೋಡಿದಾಗ ಈ ಕ್ರಮದ ಹಿಂದೆ ಬಿಜೆಪಿಗೆ ಲಾಭ ಮಾಡಿಕೊಡುವ ಆಶಯವೇ ಎದ್ದು ಕಾಣುತ್ತದೆ.

ಸುಮಾರು 3 ದಶಕಗಳ ಹಿಂದೆ ಕರ್ನಾಟಕದಿಂದ ಕನಿಷ್ಠ ಮೂವರು ಮುಸ್ಲಿಂ ಸಂಸದರು ಆಯ್ಕೆಯಾಗುತ್ತಿದ್ದರು. ಆದರೆ, 1990ರ ನಂತರ ಇಲ್ಲಿಂದ ಒಬ್ಬರೂ ಮುಸ್ಲಿಂ ಸಂಸದರಿಲ್ಲ. ಕರ್ನಾಟಕದಲ್ಲಿ ಹಿಂದೆಲ್ಲ 18 ಮುಸ್ಲಿಂ ಶಾಸಕರು ಇರುವುದು ಸಾಮಾನ್ಯವಾಗಿತ್ತು. ಒಮ್ಮೆ ಇದು 24ರವರೆಗೂ ತಲುಪಿತ್ತು. ಆದರೆ ಈಗ ಕೇವಲ 7 ಮುಸ್ಲಿಂ ಶಾಸಕರಿದ್ದಾರೆ ಮತ್ತು ಅವರೆಲ್ಲ ಕಾಂಗ್ರೆಸ್‌ನವರು. ಬೆಂಗಳೂರಿನ ಶಿವಾಜಿನಗರ, ಕಲಬುರ್ಗಿ ಉತ್ತರ, ಬೀದರ್ ಉತ್ತರ- ಈ ಕ್ಷೇತ್ರಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾದ ಕಾರಣಕ್ಕೆ ಅಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ.

ಈ ಅವಧಿಯಲ್ಲೇ ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ರಾಷ್ಟ್ರೀಯತೆಯು ಇಲ್ಲಿ ಉತ್ಕರ್ಷಕ್ಕೆ ಏರಿತು. ಹಾಗಾದರೆ ಇವೆರಡರ ನಡುವೆ ಸಂಬಂಧವಿದೆಯೇ?

ಇದು ಕೇವಲ ಕರ್ನಾಟಕದ ವಿದ್ಯಮಾನವಲ್ಲ, ಇದು ರಾಷ್ಟ್ರೀಯ ವಿದ್ಯಮಾನವೂ ಹೌದು. ಬಿಜೆಪಿ ಪಕ್ಷದ ಹಲವು ಮುಖಂಡರು ಇತ್ತೀಚೆಗೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಹಲವಾರು ಸಲ ಬಹಿರಂಗವಾಗಿಯೇ ಹೇಳಿದೆ. ಅದನ್ನು ಬಿಡಿ, ಉಳಿದ ಪ್ರಮುಖ ಪಕ್ಷಗಳು ಕೂಡ ಮುಸ್ಲಿಂರಿಗೆ ಮೊದಲಿಗೆ ನೀಡುತ್ತಿದ್ದ ಅವಕಾಶವನ್ನು ಕಡಿತ ಮಾಡುತ್ತ ಬಂದಿವೆ. ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದರೆ ಬಿಜೆಪಿ ಧ್ರುವೀಕರಣ ಮಾಡಿ ಸುಲಭವಾಗಿ ಗೆಲ್ಲುತ್ತದೆ ಎಂಬ ಗುಮ್ಮ ಅವನ್ನು ಕಾಡುತ್ತಿದೆ.

ಈ ಕುರಿತು ನ್ಯಾಯಪಥವು ಹಿರಿಯ ರಾಜಕಾರಣಿ, ಎರಡು ಸಲ ಲೋಕಸಭಾ ಸದಸ್ಯರಾಗಿದ್ದ, ಒಮ್ಮೆ ಎಂಎಲ್‌ಎ ಆಗಿದ್ದ ಮತ್ತು ಒಮ್ಮೆ ರಾಜ್ಯಸಭೆ ಸದಸ್ಯರಾಗಿದ್ದ ಹುಬ್ಬಳ್ಳಿಯ ಐ.ಜಿ. ಸನದಿಯವರನ್ನು ಕೇಳಿದಾಗ, “ಅಲ್ರೀ, ಧರ್ಮ ಭಾವನೆಯ ಉತ್ಕರ್ಷದ ಸಮಯವಿದು. ನಿಜಕ್ಕೂ ಆತಂಕಕಾರಿ. ಹಿಂದೆಲ್ಲ ನಮ್ಮ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮತ್ತು ಕೆಲವೊಮ್ಮೆ ಬಿಜೆಪಿ ಕೂಡ ಮುಸ್ಲಿಂರಿಗೆ ಟಿಕೆಟ್ ಕೊಡುವಾಗ ಹಿಂದೆಮುಂದೆ ನೋಡ್ತಾ ಇರಲಿಲ್ಲ. ಆದ್ರ ಈಗ ಪರಿಸ್ಥಿತಿ ಬದ್ಲಾಗೈತಿ” ಎಂದರು.

“ಪರಿಸ್ಥಿತಿ ಬದ್ಲು ಅಂದ್ರ ಅದಕ್ಕ ಹಿಂದುತ್ವದ ರಾಷ್ಟ್ರೀಯತೆಯ ಅಬ್ಬರವಷ್ಟೇ ಕಾರಣ ಅಲ್ಲವಲ್ಲ, ನಿಮ್ಮ ಪಾರ್ಟಿ ಸೇರಿ ಇತರ ಪಾರ್ಟಿಗಳೂ ಕೂಡ ಈ ಅಬ್ಬರಕ್ಕೆ ಬೆಚ್ಚಿಬಿದ್ದು ಮುಸ್ಲಿಮರನ್ನು ಕಡೆಗಣಿಸಿಬಿಟ್ಟಿವೆ ಅನಿಸುತ್ತದೆ” ಎಂದು ಪ್ರಶ್ನಿಸಿದಾಗ, “ಹೌದು ನಮ್ ಪಾರ್ಟಿ ಸೇರಿದಂಗ ಇತರ ಪಾರ್ಟಿಯ ಒಳಗಿನ ಕೆಲವು ಮುಸ್ಲಿಂ ನಾಯಕರೇ ಸಾಮಾನ್ಯ ಮುಸ್ಲಿಂ ಜನರ ಆಶಯದ ವಿರುದ್ಧ ಇದ್ದಾರೆ. ಆದರೆ ನಮ್ಮ ಹೈಕಮಾಂಡ್ ಮಾತ್ರ ಎಲ್ಲ ಧರ್ಮಗಳಿಗೆ ಗೌರವ ಕೊಡುತ್ತ ಬಂದಿದೆ. ಆದರೆ ’ಸಾಬರು ನಿಂತ್ರ ಗೆಲ್ಲಂಗಿಲ್ಲ’ ಎಂಬ ಅಭಿಪ್ರಾಯವನ್ನು ಬಿಂಬಿಸಲಾಗಿದೆ” ಎಂದರು.

“ಧಾರವಾಡ ದಕ್ಷಿಣ ಎಂಪಿ ಕ್ಷೇತ್ರದಿಂದ ನಾನೇ ಎರಡು ಸಲ ಗೆದ್ದೀನಿ. ಹುಬ್ಬಳ್ಳಿ ಸಿಟಿಯಿಂದ ಎಂಎಲ್‌ಎ ಆಗೈನಿ. ಆಗೆಲ್ಲ ಯಾರೂ ನನ್ನ ಸಾಬರವ ಅಂತಾ ನೋಡಲಿಲ್ಲ. ನಿಜ ಅಲ್ಲಿ ಮುಸ್ಲಿಮರ ಓಟ್ ಜಾಸ್ತಿ ಇದ್ದವು, ಹಂಗಂತ ಅಷ್ಟರ ಮ್ಯಾಲ ನಾವು ಗೆಲ್ಲಾಕ್ ಆಗಲ್ಲ. ಅಲ್ಲಿ ಎಲ್ಲ ಧರ್ಮ ಮತ್ತು ಜಾತಿಯ ಜನರ ಮತ ನಮ್ಮನ್ನು ಗೆಲ್ಲಿಸಿದವು” ಎನ್ನುತ್ತಾರೆ ಬುದ್ಧಿಜೀವಿಯೂ ಆದ ಸನದಿಯವರು.

ಡಿ-ಲಿವಿಟೇಷನ್ ಎಂಬ ಅಸ್ತ್ರ?

ಡಿ-ಲಿಮಿಟೇಷನ್ ಅಂದರೆ ಕ್ಷೇತ್ರ ಮರು ವಿಂಗಡಣೆ, ಇದು ಪ್ರಜಾಪ್ರಭುತ್ವದಲ್ಲಿ ನಡೆಯುವ ಆಗಾಗಿನ ಸಾಮಾನ್ಯ ಪ್ರಕ್ರಿಯೆ. ಆದರೆ, ಇತ್ತೀಚಿನ ದಶಕಗಳಲ್ಲಿ ಈ ಪ್ರಕ್ರಿಯೆ ಹಿಂದುತ್ವ ದೇಶದ ಭಾಗವಾಗಿಯೇ ರೂಪುಗೊಂಡಿತೆ? ಆರ್‌ಎಸ್‌ಎಸ್ ಇದರ ಹಿಂದೆ ಇದೆಯೇ? ಯುಪಿಎ ಸರ್ಕಾರವೋ, ಇಲ್ಲಾ ಎನ್‌ಡಿಎ ಸರ್ಕಾರವೊ, ಒಟ್ಟಿನಲ್ಲಿ ಆಡಳಿತಾತ್ಮಕ ನೆಪ ಒಡ್ಡಿ ಡಿ-ಲಿಮಿಟೇಷನ್ ಎಂಬ ಒಂದು (ಅಕ್ರಮ?) ಪ್ರಕ್ರಿಯೆ ನಡೆಯುತ್ತಲೇ ಇದೆ. ಅಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಒಡೆದು ಪಕ್ಕದ ಕ್ಷೇತ್ರಗಳಿಗೆ ಹಂಚುವ ಮೂಲಕ, ಅಲ್ಲಿ ಸಹಜವಾಗಿ ಗೆಲ್ಲುತ್ತಿದ್ದ ಮುಸ್ಲಿಂ ಅಭ್ಯರ್ಥಿಗಳನ್ನು ತುಳಿಯುವ ಹುನ್ನಾರ ನಡೆದಿದೆ ಎಂದು ಬರೀ ಮುಸ್ಲಿಂ ಯುವಕರಷ್ಟೇ ಅಲ್ಲ, ಕಾಂಗ್ರೆಸ್ ಸದಸ್ಯ ಸನದಿ ಮತ್ತು ಚಿಂತಕ ಮುಜಾಫರ್ ಅಸ್ಸಾದಿ ಕೂಡ ಕಳವಳ ವ್ಯಕ್ತಪಡಿಸುತ್ತಾರೆ.

ಇದು ಕೇವಲ ಒಂದು ಪಕ್ಷದ ಉನ್ನತಿಯ ಸಮಸ್ಯೆಯಲ್ಲ, ಅದರ ಸಾಂಸ್ಕೃತಿಕ ರಾಷ್ಟ್ರೀಯತೆ ಎಂದು ಹೆಸರಿಸಲಾದ ಹಿಂದುತ್ವವು ಇಡೀ ಸಮಾಜವನ್ನೇ ಒಡೆದು ಹಾಕುತ್ತಿದೆ. ಅದಕ್ಕೆ ಪ್ರತಿರೋಧ ತೋರಬೇಕಿದ್ದ ವಿರೋಧ ಪಕ್ಷಗಳು ಮಾತ್ರ ಸುಮ್ಮನಿವೆ.

1980 ಮತ್ತು 2014ರ ನಡುವೆ, ಭಾರತೀಯ ಸಂಸತ್ತಿನ ಕೆಳಮನೆಯಲ್ಲಿ ಮುಸ್ಲಿಂ ಸಂಸದರ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಭಾರತೀಯ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಏರಿದ ಕಾರಣ ಈ ಬೆಳವಣಿಗೆಯು ಹೆಚ್ಚು ಮಹತ್ವದ್ದಾಗಿದೆ ಮತ್ತು ಅಪಾಯಕಾರಿ ಆಗಿದೆ ಕೂಡ. ಈ ಅವಧಿಯಲ್ಲಿ ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯ 11.1 ರಿಂದ 14.2% ಕ್ಕೆ ಏರಿತು, ಆದರೆ ಲೋಕಸಭೆಯಲ್ಲಿ ಒಟ್ಟು ಸಂಸದರಿಗೆ ಹೋಲಿಸಿದರೆ ಮುಸ್ಲಿಂ ಚುನಾಯಿತ ಪ್ರತಿನಿಧಿಗಳ ಅನುಪಾತ ಶೇ. 9 ರಿಂದ ಶೆ. 3.7ಗೆ ಇಳಿದಿದೆ. ಇದು ಸಾಮಾಜಿಕ ಅಸಮಾನತೆಗೆ ಸ್ಪಷ್ಟ ನಿದರ್ಶನವಾಗಿದೆ.

2009ರಲ್ಲಿ, ಬಿಜೆಪಿ 4 ಮುಸ್ಲಿಂ ಅಭ್ಯರ್ಥಿಗಳನ್ನು (ಅಥವಾ ಒಟ್ಟು 0.48%) ಕಣಕ್ಕಿಳಿಸಿತು. ಅದರಲ್ಲಿ ಒಬ್ಬರು ಮಾತ್ರ ಗೆದ್ದರು. 2014ರಲ್ಲಿ, ಈ ಪಕ್ಷ ಸ್ಪರ್ಧಿಸಿದ 428 ಸೀಟುಗಳಲ್ಲಿ 7 ಮುಸ್ಲಿಂ ಅಭ್ಯರ್ಥಿಗಳನ್ನು (ಅಥವಾ 2% ಕ್ಕಿಂತ ಕಡಿಮೆ) ಕಣಕ್ಕಿಳಿಸಿತು. ಆಗ ಯಾರೂ ಆಯ್ಕೆ ಆಗಲಿಲ್ಲ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪಕ್ಷವು ಲೋಕಸಭೆಯಲ್ಲಿ ತನ್ನ ಸಂಸದೀಯ ಸದಸ್ಯರಲ್ಲಿ ಒಬ್ಬ ಮುಸ್ಲಿಮರನ್ನು ಹೊಂದಿರಲಿಲ್ಲ!

ಅದರ ಪ್ರತಿಫಲವನ್ನು ಅಥವಾ ಅದರ ಪ್ರಭಾವವನ್ನು ನಾವು ಉತ್ತರಪ್ರದೇಶದ ರಾಜಕೀಯದಲ್ಲಿ ಆಗಲೇ ಕಾಣಬಹುದು. ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಸ್ಲಿಮರು 18% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ 80 ಸ್ಥಾನಗಳಲ್ಲಿ 71ನ್ನು ಬಿಜೆಪಿ ಗೆದ್ದಿತ್ತು, ಆದರೆ ಅದರಲ್ಲಿ ಒಬ್ಬನೂ ಮುಸ್ಲಿಂ ಇಲ್ಲ! 2009ರಲ್ಲಿ 6 ಮತ್ತು 2004ರಲ್ಲಿ 10 ಸ್ಥಾನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದರು ಎಂಬುದನ್ನು ಗಮನಿಸಿ. ಇದರಿಂದ ಉತ್ತೇಜನಗೊಂಡ ಬಿಜೆಪಿ 2017ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಒಬ್ಬ ಮುಸ್ಲಿಮರಿಗೂ ಟಿಕೆಟ್ ನೀಡಲಿಲ್ಲ ಮತ್ತು ಅದನ್ನು ಜೋರಾಗಿ ಹೇಳಿಕೊಂಡು ಧ್ರುವೀಕರಣ ಮಾಡಲು ಯತ್ನಿಸಿತು. ಅದರಲ್ಲಿ ಯಶಸ್ವಿಯೂ ಆಯಿತು.

ಈ ಎಲ್ಲದರ ಪರಿಣಾಮ ಈಗ ಇತರ ಪಾರ್ಟಿಗಳೂ ಕೂಡ ಮುಸ್ಲಿಮರಿಗೆ ಕೊಡುವ ಟಿಕೆಟ್‌ಗಳಲ್ಲಿ ಕಡಿತ ಮಾಡುತ್ತ ತಾವು ’ಮುಸ್ಲಿಮರ ಓಲೈಕೆ’ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಲು ಹೊರಟಿವೆ.

ಆದರೆ ಅದರ ಸಾಮಾಜಿಕ ಪರಿಣಾಮ ಭಿಕರವಾಗಲಿದೆ. ಶೇ. 14 ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯವೊಂದು ಸೂಕ್ತ ಪ್ರಾತಿನಿಧ್ಯ ಪಡೆಯದೇ ಹೋದರೆ ಅದು ಒಟ್ಟೂ ಸಮಾಜದ ಮೇಲೆ ನೆಗೆಟಿವ್ ಪರಿಣಾಮ ಉಂಟು ಮಾಡಲಿದೆ. 2009ರಲ್ಲಿ, ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಜಾತ್ಯತೀತತೆಯನ್ನು ಸ್ವೀಕರಿಸಲು ಇಷ್ಟಪಡಲಿಲ್ಲ. ಕೇವಲ 31 ಮುಸ್ಲಿಂ ಅಭ್ಯರ್ಥಿಗಳನ್ನು (ಅಥವಾ ಒಟ್ಟು 3.7%) ಕಣಕ್ಕೆ ಇಳಿಸಿತು, ಅದರಲ್ಲಿ ಕೇವಲ 11 ಸ್ಥಾನಗಳನ್ನು ಗೆದ್ದಿತು. ಆ ವರ್ಷ, ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಚುನಾಯಿಸಿದ ಪಕ್ಷಗಳು ಪ್ರಾದೇಶಿಕ ಪಕ್ಷಗಳೇ ಆಗಿದ್ದವು.

ಐದು ವರ್ಷಗಳ ನಂತರ 2014ರ ಚುನಾವಣೆಯಲ್ಲಿ ಪರಿಸ್ಥಿತಿ ಹೆಚ್ಚೇನು ಬದಲಾಗಲಿಲ್ಲ. ಕಾಂಗ್ರೆಸ್ 462 ರಲ್ಲಿ 27 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು (ಒಟ್ಟು 6% ಕ್ಕಿಂತ ಕಡಿಮೆ). 2019ರ ಚುನಾವಣೆಯೂ ಇದಕ್ಕೆ ವ್ಯತಿರಿಕ್ತವಾಗಿರಲಿಲ್ಲ. ರಾಷ್ಟ್ರೀಯ ಜನತಾದಳ-ಆರ್‌ಜೆಡಿ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಮಾತ್ರ ಮುಸ್ಲಿಮರ ಜನಸಂಖ್ಯೆಯ ಅನುಪಾತಕ್ಕಿಂತಲೂ ಹೆಚ್ಚಿನ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು.

ಕರ್ನಾಟಕದ ಕಥೆ ಏನು?

ಕರ್ನಾಟಕದಲ್ಲಿ ಒಂದು ಹಂತದಲ್ಲಿ 24 ಮುಸ್ಲಿಂ ಶಾಸಕರು ಇರುತ್ತಿದ್ದರು. ನಂತರ ಕನಿಷ್ಠ 18 ಮುಸ್ಲಿಂ ಶಾಸಕರು ಇರುತ್ತಿದ್ದರು. ಈಗ ಚುನಾವಣೆಯ ಮೂಲಕ ವಿಧಾನಸಭೆ ಪ್ರವೇಶ ಮಾಡಿರುವುದು ಕೇವಲ 7 ಶಾಸಕರಷ್ಟೇ. ಬೀದರ್ ಉತ್ತರದಿಂದ ರಹೀಂ ಖಾನ್, ಕಲಬುರ್ಗಿ ಉತ್ತರದಿಂದ ಖನೀಜ್ ಫಾತಿಮಾ, ಬೆಂಗಳೂರಿನ ಶಾಂತಿನಗರದಿಂದ ಹ್ಯಾರಿಸ್, ಶಿವಾಜಿ ನಗರದಿಂದ ರಿಜ್ವಾನ್ ಅರ್ಷದ್, ಚಾಮರಾಜಪೇಟೆಯಿಂದ ಜಮೀರ್ ಅಹ್ಮದ್, ಮೈಸೂರಿನ ನರಸಿಂಹರಾಜ ನಗರದಿಂದ ತನ್ವೀರ್ ಸೇಠ್ ಮತ್ತು ಮಂಗಳೂರಿನ ಉಳ್ಳಾಲದಿಂದ ಯು.ಟಿ. ಖಾದರ್. ಇವರೆಲ್ಲರೂ ಕಾಂಗ್ರೆಸ್‌ನಿಂದ ಗೆದ್ದವರು.

ಶೇ. 14ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯದಿಂದ 7 ಶಾಸಕರು ಮಾತ್ರ. ಒಬ್ಬರೇ ಒಬ್ಬ ಎಂಪಿ ಕೂಡ ಇಲ್ಲ. ಆದರೆ ಶೇ.3 ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯದಿಂದ ಮೂವರು ಎಂಪಿಗಳಿದ್ದಾರೆ. ಕಳೆದ 30 ವರ್ಷಗಳಿಂದ ಕನಿಷ್ಠ ಮೂವರು ಬ್ರಾಹ್ಮಣ ಎಂಪಿಗಳು ಗೆಲ್ಲುತ್ತಲೇ ಇದ್ದಾರೆ.

ಹಿಂದುತ್ವದ ಉತ್ಕರ್ಷದ ಲಾಭ ಯಾರಿಗೆ ದಕ್ಕುತ್ತದೆ ಮತ್ತು ಯಾರನ್ನು ನಾಶ ಮಾಡಿ ಮೇಲೇರುತ್ತದೆ ಎಂಬುದಕ್ಕೆ ಕರ್ನಾಟಕದ ಈ ಅಂಕಿಅಂಶಗಳೇ ಸಾಕ್ಷಿ..

ಹಿರಿಯ ಚಿಂತಕರು ಹೇಳುವುದೇನು?

’ಡೀ-ಲಿಮಿಟೇಷನ್ ದೊಡ್ಡ ಅನ್ಯಾಯ ಮಾಡಿದೆ’

PC : University of Mysore

ಡೀ-ಲಿಮಿಟೇಷನ್ ಅಥವಾ ಕ್ಷೇತ್ರ ಪುನರ್ವಿಂಗಡಣೆ ಮುಸ್ಲಿಮರಿಗೆ ದೊಡ್ಡ ಅನ್ಯಾಯ ಮಾಡಿದೆ. ನಂತರದಲ್ಲಿ ಸಂಘ ಪರಿವಾರ ಹುಟ್ಟಿಸಿದ ಕೋಮುಭಾವನೆಯ ಕಾರಣಕ್ಕೆ ಉಳಿದ ಪಕ್ಷಗಳು ಕೂಡ ಮುಸ್ಲಿಮರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿವೆ. ಎಲ್ಲಿ ಗೆಲುವು ಪಕ್ಕಾ ಇದೆಯೋ-ಉದಾಹರಣೆಗೆ ಶಿವಾಜಿನಗರ, ಬೀದರ್ ಉತ್ತರ, ಕಲಬುರ್ಗಿ ಉತ್ತರ, ಉಳ್ಳಾಲ-ಇಂತಹ ಕಡೆ ಟಿಕೆಟ್ ಕೊಡುತ್ತಾರೆ. ಉಳಿದ ಕಡೆ ಸಾಂಕೇತಿಕವಾಗಿ ಇಷ್ಟು ಟಿಕೆಟ್ ಕೊಟ್ಟಿದ್ದೇವೆ ಎಂದು ತೋರಿಸಲು ಒಂದಿಷ್ಟು ಟಿಕೆಟ್ ಕೊಡುತ್ತಾರೆ. ಅಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸೋಲುತ್ತಾರೆ ಎಂಬುದು ಗೊತ್ತಿದ್ದೂ ಇದನ್ನು ರಾಜಕೀಯ ಕಾರಣಕ್ಕೆ ಮಾಡುತ್ತಾರೆ.
ಆಕಸ್ಮಾತ್ ಮೊದಲಿನಂತೆ ಈಗ ಕಾಂಗ್ರೆಸ್‌ನಿಂದ ಹದಿನಾಲ್ಕೋ ಹದಿನೈದೋ ಜನ ಮುಸ್ಲಿಂ ಶಾಸಕರು ಗೆದ್ದು ಬಂದರೆ ಅದು ಬಿಜೆಪಿಗೆ ಮತ ಧ್ರುವೀಕರಣಕ್ಕೆ ಅವಕಾಶ ಕೊಡುತ್ತದೆ ಎಂಬ ಭಯ ಎಲ್ಲ ವಿಪಕ್ಷಗಳಲ್ಲಿದೆ. ಆದರೆ ಅವು ಜಾತ್ಯಾತೀತವಾಗಿದ್ದರೆ ಹೀಗೆ ಭಯ ಬೀಳುವ ಅಗತ್ಯ ಇರಲಿಲ್ಲ.

ಡಾ. ಮುಜಾಫರ್ ಅಸ್ಸಾದಿ, ರಾಜಕೀಯ ಚಿಂತಕರು

’ಕಾಂಗ್ರೆಸ್‌ನ ಹಲವು ಮುಸ್ಲಿಂ ನಾಯಕರ ತಪ್ಪಿದೆ’

PC : Twitter

’ನೀವ್ ಎತ್ತಿದ ಪ್ರಶ್ನೆ ಸರಿಯಾಗೇ ಇದೆ. ಈ ವಿಷಯದಾಗ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಐತಿ, ನಡುಕಿನವ್ರು ಅಂದ್ರ ನಮ್ಮ ಸಮುದಾಯದ ಸ್ಟೇಟ್ ಲೀಡರ್‍ಸ್ ಅಡ್ಡ ಆಗ್ಯಾರ. ಯಾರಿವರು ಸಿಎಂ ಇಬ್ರಾಹಿಂ ಅಂತೆ, ಜಮೀರ್ ಅಹ್ಮದ್ ಅಂತೆ, ಕನ್ನಡನಾಡಿನ ಸೌಹಾರ್ದತೆಯ ಇತಿಹಾಸವೇ ಗೊತ್ತಿಲ್ಲದ ಈ ಸ್ವಾರ್ಥಿ ನಾಯಕರು, ಮುಸ್ಲಿಮರಿಗೆ ನ್ಯಾಯಯುತವಾಗಿ ಸಿಗುವ ಟಿಕೆಟ್‌ಗಳನ್ನು ಕಟ್ ಮಾಡುತ್ತಿದ್ದಾರೆ. ಪಕ್ಷದಲ್ಲಿ ಆಂತರಿಕವಾಗಿ ಈ ಅನ್ಯಾಯ ನಿವಾರಣೆಗೆ ನಾನು ಹೋರಾಡುತ್ತಿದ್ದೇನೆ.

ರಾಜಸ್ತಾನ್ ಅಸೆಂಬ್ಲಿ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಸ್ಕ್ರೀನಿಂಗ್ ಕಮಿಟಿಯಲ್ಲಿ ನಾನೂ ಇದ್ದೆ. ಮೊದಲೆಲ್ಲ ಅಲ್ಲಿ 16 ಮುಸ್ಲಿಂ ಅಭ್ಯರ್ಥಿಗಳನ್ನು ಹಾಕುತ್ತ ಬಂದಿದ್ದರು. ಕಳೆದ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಸಾಕು ಎಂದರು. ಇದನ್ನು ವಿರೋಧಿಸಿದ ನಾನು ವಿಷಯವನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತಂದೆ. ಅವರು 16 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಿದರು. ಅಂದರೆ ನಮ್ಮ ಹೈಕಮಾಂಡ್ ಸ್ಪಷ್ಟವಾಗಿದೆ. ಆದರೆ ಕೆಲವು ಪ್ರಾದೇಶಿಕ ನಾಯಕರೇ ಇದಕ್ಕೆ ಅಡ್ಡಿಯಾಗಿದ್ದಾರೆ.

ಶಕೀರ್ ಸನದಿ, ಕಾಂಗ್ರೆಸ್ ಯುವ ಮುಖಂಡ ಧಾರವಾಡ

’ಪ್ರಮುಖ ಪಕ್ಷಗಳ ನಿರಾಸಕ್ತಿ’

ಈ ಮುಖ್ಯವಾಹಿನಿ ಪಕ್ಷಗಳಿಗೆ ಮುಸ್ಲಿಮರಿಗೆ ಪ್ರಾತಿನಿಧ್ಯ ಕೊಡುವುದೇ ಇಷ್ಟವಿಲ್ಲ. ಹೇಗಿದ್ದರೂ ಮುಸ್ಲಿಂ ಮತಗಳು ತನ್ನವೇ ಎಂದು ಕಾಂಗ್ರೆಸ್ ನಂಬಿದೆ. ಬೇರೆ ಬೇರೆ ಪಕ್ಷಗಳಲ್ಲಿ ಇರುವ ಮುಸ್ಲಿಂ ನಾಯಕರಿಗೆ ಪ್ರಮುಖ ಹುದ್ದೆ ಕೊಡುವುದಿಲ್ಲ. ಬಿಜೆಪಿ ಹುಟ್ಟು ಹಾಕಿದ ’ಮುಸ್ಲಿಂ ತುಷ್ಟೀಕರಣದ ಗುಮ್ಮ ಇದೆಲ್ಲದಕ್ಕೆ ಕಾರಣ ಎಂಬುದು ಸತ್ಯವಾದರೂ, ಮುಖ್ಯವಾಹಿನಿ ಪಕ್ಷಗಳ ಯೋಚನಾ ಲಹರಿಯಲ್ಲೇ ದೋಷವಿದೆ.

ಇಲ್ಯಾಸ್ ತುಂಬೆ, ಎಸ್‌ಡಿಪಿಐ, ರಾಜ್ಯ ಮುಖ್ಯಸ್ಥ

’ಸೋಷಿಯಲ್ ಮೀಡಿಯಾ ಮೂಲಕ ಅಪಪ್ರಚಾರ’

PC : Wikipedia

ಹಿಂದೆ ಆರೆಸ್ಸೆಸ್ ಸಮಾಜದಲ್ಲಿ ಸುಳ್ಳುಗಳನ್ನು ಹರಡುವ ಮೂಲಕ ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ದೂರ ಇಡಲು ಯತ್ನ ಮಾಡುತ್ತಿತ್ತು. ಈಗ ಸೋಷಿಯಲ್ ಮೀಡಿಯಾದಲ್ಲಿ ದಿನವೂ ಫೇಕ್‌ನ್ಯೂಸ್‌ಗಳ ಮೂಲಕ ಮುಸ್ಲಿಮರು ಅನ್ಯರು ಎಂಬಂತೆ ಭಾವನೆ ಬಿತ್ತುತ್ತ ಬರಲಾಗುತ್ತಿದೆ. ಇದರ ಪರಿಣಾಮವನ್ನು ಬಿಜೆಪಿಯೇತರ ಪಾರ್ಟಿಗಳಲ್ಲೂ ಕಾಣಬಹುದು. ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಬಹುಸಂಖ್ಯಾತರ ವೋಟ್ ಸಿಗಲ್ಲ ಎಂಬ ನಂಬಿಕೆ ಅವುಗಳಲ್ಲಿ ಬಂದುಬಿಟ್ಟಿದೆ. ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಇರದೇ ಹೋದರೆ ಅದು ಅಪಾಯಕಾರಿ.

ರಿಜ್ವಾನ್ ಅರ್ಷಾದ್, ಶಾಸಕ, ಶಿವಾಜಿನಗರ

’ಟಿಕೆಟ್ ಕೊಟ್ಟರೆ ತಾನೆ ಪ್ರಾತಿನಿಧ್ಯ ಸಿಗೋದು?’

ಮೊದಲಿಗೆ, ರಾಜಕೀಯ ಪಕ್ಷಗಳು ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಕೊಡ್ತಾ ಇಲ್ಲ. ಕಾಂಗ್ರೆಸ್, ಜೆಡಿಎಸ್‌ನವರು ಸೆಕ್ಯುಲರ್ ಎಂದು ತೋರಿಸಲು ಮುಸ್ಲಿಮರಿಗೆ ಟಿಕೆಟ್ ಕೋಡುವುದನ್ನು ಕಡಿತ ಮಾಡಿವೆ. ಅದನ್ನು ಮುಸ್ಲಿಮರ ಓಲೈಕೆ ಎಂದು ಅವು ತಪ್ಪಾಗಿ ಭಾವಿಸಿವೆ. ನ್ಯಾಯಬದ್ಧ ಹಕ್ಕನ್ನು ಕೊಡಲೂ ಅವು ಹಿಂದೇಟು ಹಾಕುವಂತಹ ಪರಿಸ್ಥಿತಿಯನ್ನು ಸಂಘ ಪರಿವಾರ ನಿರ್ಮಿಸಿದೆ.

ಉಮರ್ ಯು ಎಚ್, ಮುಸ್ಲಿಂ ಬರಹಗಾರರ ಒಕ್ಕೂಟದ ಅಧ್ಯಕ್ಷರು, ಮಂಗಳೂರು

’ಶೇ.45ಕ್ಕಿಂತ ಹೆಚ್ಚಿರುವ ಕ್ಷೇತ್ರಗಳಲ್ಲಷ್ಟೇ ಗೆಲುವು’

ಒಬ್ಬ ಎಡಪಂಥೀಯ ಚಳುವಳಿಯ ಹಿನ್ನೆಲೆಯಲ್ಲಿ ನಾನು ಗಮನಿಸಿದ್ದು ಏನೆಂದರೆ, ಯಾವ ಕ್ಷೇತ್ರದಲ್ಲಿ ಮುಸ್ಲಿಮರು ಶೇ. 45ಕ್ಕೂ ಜಾಸ್ತಿ ಇದ್ದಾರೋ ಅಂಥಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆ. ಶೇ.45ಕ್ಕೂ ಕಡಿಮೆ ಮುಸ್ಲಿಂ ಜನಸಂಖ್ಯೆ ಇರುವ ಕಡೆ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದರೆ ಅಂಥಲ್ಲೆಲ್ಲ ಬಿಜೆಪಿ ಕೋಮು ಧ್ರುವೀಕರಣ ಮಾಡಿ ಗೆಲ್ಲುತ್ತಿದೆ. ಶೇ. 14ರಷ್ಟಿರುವ ಮುಸ್ಲಿಮರಿಗೆ ಅವರ ಪಾಲಿನ ರಾಜಕೀಯ ಪ್ರಾತಿನಿಧ್ಯ ಸಿಗದೇ ಹೋಗುತ್ತದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ…

ಭೀಮನಗೌಡ ಕಾಶಿರೆಡ್ಡಿ, ಕಂಪ್ಲಿ


ಇದನ್ನೂ ಓದಿ: ಬಿಜೆಪಿ ನಾಯಕರು ಚುನಾವಣೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ, ಆಡಳಿತದ ಬಗ್ಗೆ ಅಲ್ಲ: ಸಿದ್ದರಾಮಯ್ಯ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಪ್ರಾತಿನಿಧ್ಯಕ್ಕೆ ಬಿದ್ದಿರುವ ಹೊಡೆತದ ಬಗ್ಗೆ ಏನಾದರೂ ಬರೆಯಲಿಕ್ಕೆ ನಿಮಗೆ ಆಗುತ್ತಾ? ಹಿಂಗೆ ಕೂತ್ಕೊಂಡು ಬಾಯ್ಬಡಿದುಕೊಳ್ಳುತ್ತಿರಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...