ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ 58 ವರ್ಷದ ಕೋವಿಡ್ -19 ರೋಗಿ ಮೃತರಾಗಿದ್ದಾರೆ ಎಂದು ತಪ್ಪಾಗಿ ಘೋಷಿಸಿದ್ದಾರೆ. ಒಂದು ಸಲ ಅಲ್ಲ ಎರಡು ಸಲ ಈ ಪ್ರಮಾದ ನಡೆದಿದೆ. ಎರಡನೇ ಬಾರಿಗೆ ರೋಗಿಯ ಕುಟುಂಬವು ಅಂತ್ಯಕ್ರಿಯೆಯ ವಿಧಿಗಳಿಗೆ ಸಿದ್ಧವಾಯಿತು. ಆಗ ಇಲ್ಲ ಇಲ್ಲ ಅವರು ವೆಂಟಿಲೇಟರ್ ಮೇಲೆ ಜೀವಂತವಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿತು. ಇದು ಗೊಂದಲದಿಂದ ಸಂಭವಿಸಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಕೋವಿಡ್ ಅನುಮಾನದ ಕಾರಣ ಗೋರೆಲಾಲ್ ಕೋರಿಯವರನ್ನು ಗಂಭೀರ ಸ್ಥಿತಿಯಲ್ಲಿ ವಿದಿಶಾ ಅಟಲ್ ಬಿಹಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿದೆ. ಅವರನ್ನು ಬುಧವಾರ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.
“ಮರುದಿನ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ನನ್ನನ್ನು ಆಸ್ಪತ್ರೆಗೆ ಕರೆದರು. ನಾನು ತಲುಪಿದ ನಂತರ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ನಂತರ ಅವರು ಮತ್ತೆ ಉಸಿರಾಡುತ್ತಿದ್ದಾರೆ ಎಂದು ನರ್ಸ್ ಹೇಳಿದರು” ಎಂದು ರೋಗಿಯ ಮಗ ಕೈಲಾಶ್ ಕೋರಿ ಹೇಳಿದ್ದಾರೆ.
ಆಗ ಆಸ್ಪತ್ರೆಯ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದರು. ಕುಟುಂಬವು ಅದೇ ದಿನ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿತು.
ಎರಡನೇ ‘ಸಾವು’!
“ಅವರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಅವರು ನಮಗೆ ಮಾಹಿತಿ ನೀಡಿದರು. ರಾತ್ರಿ 8.30 ರ ಸುಮಾರಿಗೆ ಅವರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೊರೋನಾ ದೃಢಪಟ್ಟ ಕಾರಣ ಈಗಲೇ ನೀವು ಅವರ ಮೃತ ದೇಹವನ್ನು ಪಡೆಯಲಾಗುವುದಿಲ್ಲ ಎಂದು ಅವರು ಹೇಳಿದರು” ಎಂದು ಕೋರಿಯ ಮಗ ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ, ಅವರ ಕುಟುಂಬವು ಶವಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಆಸ್ಪತ್ರೆಯ ಸಿಬ್ಬಂದಿ ಗೋರೆಲಾಲ್ ಕೋರಿ ಇನ್ನೂ ಜೀವಂತವಾಗಿದ್ದಾರೆ ಎಂದು ತಿಳಿಸಿದರು. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಇನ್ನೂ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದರು’ ಎಂದು ಪುತ್ರ ತಿಳಿಸಿದರು.
“ಅವರು ಎರಡು ಬಾರಿ ಸತ್ತರು ಎಂದು ಘೋಷಿಸಿದರು. ಇದು ಬೇಜವಾಬ್ದಾರಿತನ” ಎಂದು ಕೈಲಾಶ್ ಕೋರಿ ಹೇಳಿದರು. ಆಸ್ಪತ್ರೆಯ ಅಧಿಕಾರಿಗಳು ಇಡೀ ಪ್ರಸಂಗವನ್ನು “ಗೊಂದಲ” ಎಂದು ಹೇಳಿದ್ದಾರೆ.
“ಗೋರೆಲಾಲ್ ಕೋರಿ ವೆಂಟಿಲೇಟರ್‌ನಲ್ಲಿದ್ದರು. ಇದ್ದಕ್ಕಿದ್ದಂತೆ ಅವರ ಹೃದಯ ನಿಂತುಹೋಯಿತು. ಒಬ್ಬ ನರ್ಸ್ ಮೃತರಾಗಿದ್ದಾರೆ ಎಂದು ಘೋಷಿಸಿದರು. ಸಾಮಾನ್ಯವಾಗಿ, ವೈದ್ಯರು ಅಂತಹ ಪ್ರಕರಣಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇದು 1-2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ವೈದ್ಯರು ಅವರನ್ನು ಪುನಶ್ಚೇತನಗೊಳಿಸಿದರು… ಇದೆಲ್ಲವೂ ಗೊಂದಲಕ್ಕೆ ಕಾರಣವಾಯಿತು” ಎಂದು ಆಸ್ಪತ್ರೆಯ ಡೀನ್ ಡಾ.ಸುನೀಲ್ ನಂದೇಶ್ವರ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಟೆಸ್ಟ್ ತಪ್ಪಿಸಿಕೊಳ್ಳಲು ರೈಲು ನಿಲ್ದಾಣಗಳಿಂದ ಎದ್ದು ಬಿದ್ದು ಓಡಿದ ಪ್ರಯಾಣಿಕರು


