ಕೋವಿಡ್ ಎರಡನೇ ಅಲೆಯ ತೀವ್ರತೆಯಿಂದಾಗಿ ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಆಕ್ಸಿಜನ್‌ಗಾಗಿ ರೋಗಿಗಳು ಕಾಯಬೇಕೆಂದು ನೀವು ಹೇಳುತ್ತೀರಾ? ಕೈಗಾರಿಕೆಗಳು ಕಾಯಬಹುದೇ ಹೊರತು ರೋಗಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ನಿನ್ನೆ ಒಂದೇ ದಿನ 30 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಆಕ್ಸಿಜನ್ ಕೊರತೆಯುಂಟಾಗಿದ್ದು, ದೆಹಲಿಗೆ ಮೀಸಲಾಗಿದ್ದ 140 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಇತರ ರಾಜ್ಯಗಳಿಗೆ ತಿರುಗಿಸಲಾಗಿದೆ. ಹಾಗಾಗಿ ರಾಜ್ಯದಲ್ಲಿ ಆಕ್ಸಿಜನ್ “ತುರ್ತುಸ್ಥಿತಿ”ಯಾಗಿ ಮಾರ್ಪಟ್ಟಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು.
ಔಷಧಿ, ಆಕ್ಸಿಜನ್ ನಿಜವಾಗಿಯೂ ಅಗತ್ಯವಿರುವ ಕಡೆಗೆ ನೀಡದಿದ್ದಲ್ಲಿ ಅವರ ಕೈಗೆ ರಕ್ತ ಮೆತ್ತುಕೊಂಡಿದೆ ಎಂದರ್ಥ ಎಂದು ಕಟುವಾಗಿ ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ಕುಟುಕಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?
ಕೇಂದ್ರ ಸರ್ಕಾರವು ಕಬ್ಬಿಣ ಮತ್ತು ಪೆಟ್ರೋಲಿಯಂ ಕಂಪನಿಗಳಿಗೆ ಒದಗಿಸುವ ಆಕ್ಸಿಜನ್ ಅನ್ನು ಮೊಟಕುಗೊಳಿಸಬೇಕು. ಅದನ್ನು ಕೂಡಲೇ ಅಗತ್ಯವಿರುವ ಆಸ್ಪತ್ರೆಗಳಿಗೆ ತಿರುಗಿಸಬೇಕು. ನಾವು ಸರ್ವನಾಶದ ಸಂದರ್ಭದಲ್ಲಿದ್ದೀವಿ. ಈ ಸಮಯದಲ್ಲಿ ಆರ್ಥಿಕ ಲಾಭಕ್ಕಿಂತ ಮಾನವ ಜೀವಗಳಿಗೆ ಬೆಲೆ ಕೊಡಬೇಕು. ಕಾರ್ಖಾನೆಗಳು ಬೇಕಾದರೆ ಕಾಯುತ್ತವೆ ಆದರೆ ರೋಗಗಳು ಕಾಯಲಾಗುವುದಿಲ್ಲ ಎಂದು ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿಅವರಿದ್ದ ಪೀಠ ಹೇಳಿದೆ.
ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಆಕ್ಸಿಜನ್ ಕೊರತೆಯಿಂದಾಗಿ ಕೋವಿಡ್ -19 ರೋಗಿಗಳಿಗೆ ಆಕ್ಸಿಜನ್ ಬಳಕೆಯನ್ನು ಕಡಿಮೆ ಮಾಡಲು ಒತ್ತಾಯಿಸಲಾಗುತ್ತಿದೆ ಎಂಬ ವರದಿಗಳನ್ನು ಗಮನಿಸಿದ ನ್ಯಾಯಾಲಯ “ಏಪ್ರಿಲ್ 22 ರಿಂದ ಕಾರ್ಖಾನೆಗಳಿಗೆ ಆಕ್ಸಿಜನ್ ಸರಬರಾಜು ನಿಲ್ಲಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈಗಲೇ ಏಕೆ ನಿಲ್ಲಿಸಲು ಆಗುವುದಿಲ್ಲ? ಅಲ್ಲಿಯವರೆಗೂ ಏಕೆ ಕಾಯಬೇಕು? ಜೀವಗಳು ಅಪಾಯದಲ್ಲಿವೆ. ಆಮ್ಲಜನಕಕ್ಕಾಗಿ ಏಪ್ರಿಲ್ 22 ರವರೆಗೆ ಕಾಯುವಂತೆ ನೀವು ರೋಗಿಗಳಿಗೆ ಹೇಳುತ್ತೀರಾ?” ಎಂದು ಕಿಡಿಕಾರಿದೆ.
ಇದನ್ನೂ ಓದಿ: ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೇ ಕೇಂದ್ರ ವಂಚಿಸುತ್ತಿದೆ: ಕೇಜ್ರಿವಾಲ್ ಹೇಳಿಕೆ


