ಇಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಯುತ್ತದೆ. ಕರ್ನಾಟಕಕ್ಕೆ ರಾಜ್ಯಪಾಲರಾದ ನಂತರ ಎಂದೂ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಸಭೆ ಕರೆಯದ ರಾಜ್ಯಪಾಲ ವಜುಭಾಯಿ ವಾಲಾರವರು ಬುಧವಾರ ಅಂತಹ ಸಭೆಯೊಂದನ್ನು ನಡೆಸಿದರು. ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಜವಾಬ್ದಾರಿಯನ್ನು ವಿ.ಸಿ.ಗಳಿಗೆ ವಹಿಸುವ ವಿಷಯಕ್ಕೆ ಈ ಸಭೆ. ಉನ್ನತ ಶಿಕ್ಷಣ ಸಚಿವ ಮತ್ತು ಡಿಸಿಎಂ ಅಶ್ವತ್ ನಾರಾಯಣ್ ಈ ಸಭೆಯನ್ನು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸಂಘಟಿಸಿದ್ದರು.
ಇವೆರಡೂ ಘಟನೆಗಳನ್ನು ನೋಡಿದರೆ ಮುಖ್ಯಮಂತ್ರಿ ಬಿಟ್ಟರೆ ರಾಜ್ಯದ ಸಚಿವ ಸಂಪುಟದ ಯಾರಿಗೂ ಅಧಿಕಾರವೇ ಇಲ್ಲವೇ? ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವೇ ಇಲ್ಲಿ ಆಡಳಿತ ನಡೆಸುತ್ತಿದೆಯೇ? ಇದೇನು ಲೆಫ್ಟಿನೆಂಟ್ ಗವರ್ನರ್‌ಗಳನ್ನು ಹೊಂದಿರುವ ದೆಹಲಿ ಅಥವಾ ಪುದುಚೇರಿಯೇ ಎಂಬ ಪ್ರಶ್ನೆಗಳು ಎದ್ದಿದ್ದು ನಿಜ.
ಈಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದಾಗ ಇಲ್ಲಿ ಸಾಂವಿಧಾನಿಕ ಉಲ್ಲಂಘನೆಯಂತೂ ಆಗಿದೆ.
ರಾಜ್ಯದ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯಪಾಲರು ಮಂಗಳವಾರ ಸರ್ವ ಪಕ್ಷ ಸಭೆ ಕರೆದಿದ್ದರು. ಇದು ಅಸಂವಿಧಾನಿಕ ಮಾರ್ಗವೇ ಆಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ ಇದನ್ನು ಪ್ರಶ್ನಿಸಿಯೂ ರಾಜ್ಯಪಾಲ ಹುದ್ದೆಗೆ ಗೌರವ ಕೊಟ್ಟು ತಮ್ಮ ಅಭಿಪ್ರಾಯ ದಾಖಲಿಸಿದರು. ಈ ಸಭೆ ಕುರಿತಂತೆ ಹಲವಾರು ಸಂವಿಧಾನ ತಜ್ಞರು, ವಕೀಲರು ಮತ್ತು ರಾಜಕಾರಣಿಗಳು ಆಕ್ಷೇಪ ಎತ್ತಿದ್ದರು.
ಕೇಂದ್ರ ಸರ್ಕಾರದ ಧೋರಣೆಯೇ ಹಾಗಿದೆಯಲ್ಲವೇ? ಅದು ಮುಖ್ಯಮಂತ್ರಿಗಳಿಗಿಂತ ಅಥವಾ ರಾಜ್ಯದ ಇತರ ಚುನಾಯಿತ ಪ್ರತಿನಿಧಿಗಳಿಗಿಂತ ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರುಗಳಿಗೆ ಆದ್ಯತೆ ನೀಡುತ್ತ ಬಂದಿದೆ. ಕೊರೋನಾ ನಿಯಂತ್ರಣ ಕುರಿತಂತೆ ಈ ಹಿಂದೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಪಾಲರೊಂದಿಗೆ ವಿಡಿಯೋ ಸಂವಾದ ನಡೆಸಿದ್ದನ್ನು ಇಲ್ಲಿ ಗಮನಿಸಬಹುದು.
ಇದೇ ಪರಂಪರೆಯಲ್ಲಿ ರಾಜ್ಯ ಸರ್ಕಾರ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್ ಪೀಡಿತರಾಗಿ ಆಸ್ಪತ್ರೆಯಲ್ಲಿ ಇದ್ದ ಸಂದರ್ಭ ಬಳಸಿಕೊಂಡು ಮಂಗಳವಾರ ಕೋವಿಡ್ ಪರಿಸ್ಥಿತಿ ಚರ್ಚಿಸಲು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಜರುಗಿ, ವಿವಾದಕ್ಕೆ ಕಾರಣವಾಗಿದೆ.
ಆಸ್ಪತ್ರೆಯಲ್ಲಿದ್ದಾಗ ಯಡಿಯೂರಪ್ಪರ ಆರೋಗ್ಯ ಸ್ಥಿರವಾಗಿತ್ತು ಮತ್ತು ಅವರು ಸಂಪುಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದರು. ಆದರೆ ಸರ್ವಪಕ್ಷ ಸಭೆಯಲ್ಲೆಕೆ ವಿಡಿಯೋ ಸಂವಾದದ ನೆರವು ಪಡೆಯಲಿಲ್ಲ?
ರಾಜ್ಯಪಾಲರು ಚುನಾಯಿತ ಪ್ರತಿನಿಧಿಯಲ್ಲ. ಅವರು ಕೇಂದ್ರಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರಪತಿಗಳಿಂದ ನೇಮಕಗೊಂಡವರು. ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಭಾಪತಿ ಅಥವಾ ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಸಬಹುದಿತ್ತು ಅಲ್ಲವೇ? ಮೂವರು ಡಿಸಿಎಂಗಳ ಪೈಕಿ ಹಿರಿಯರಾದ ಗೋವಿಂದ ಕಾರಜೋಳರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬಹುದಿತ್ತಲ್ಲ? ಅಥವಾ ನಮ್ಮ ಸಚಿವರೆಲ್ಲರೂ ಜನರಿಗೆ ಉತ್ತರಿಸುವ ನೈತಿಕತೆಯನ್ನೇ ಕಳೆದುಕೊಂಡು ತಮ್ಮ ಜವಾಬ್ದಾರಿಯನ್ನು ರಾಜ್ಯಪಾಲರಿಗೆ ವರ್ಗಾಯಿಸಿದರೆ?
ಕೇಂದ್ರ ಸರ್ಕಾರ ಹಾಕಿಕೊಟ್ಟ ಅಪ್ರಜಾತಾಂತ್ರಿಕ ಮಾದರಿ ಈಗ ರಾಜ್ಯಕ್ಕೂ ಕಾಲಿಟ್ಟಿದೆ. ಮಂಗಳವಾರದ ಸಭೆ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್, ಇದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಮುಖ್ಯಮಂತ್ರಿ ಇಲ್ಲವೆಂದರೆ ಒಬ್ಬ ಡಿಸಿಎಂ ಅವರಿಗೆ ಈ ಜವಾಬ್ದಾರಿ ನೀಡಬೇಕಿತ್ತು. ಡಿಸಿಎಂಗಳು ಇರುವುದಾದರೂ ಏತಕ್ಕೆ? ಸರ್ವಪಕ್ಷ ಸಭೆ ಎಂದರೆ ಅದು ರಾಜಕೀಯ ಪ್ರತಿನಿಧಿಗಳ ಸಭೆ. ಅಲ್ಲಿ ರಾಜ್ಯಪಾಲರಿಗೇನು ಕೆಲಸ? ರಾಜ್ಯಪಾಲರ ಮೂಲಕ ಹೇಳಿಸುವಂತಹ ದಿವಾಳಿತನಕ್ಕೆ ಈ ಸರ್ಕಾರ ತಲುಪಿದೆ. ಇದೊಂದು ಕೆಟ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು’ ಹೇಳಿದರು.
ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ‘ಅತ್ಯಂತ ಬೇಜವಾಬ್ದಾರಿ ಮತ್ತು ಹೊಣೆಗೇಡಿ ಸರ್ಕಾರವಿದು. ತಮ್ಮ ಜವಾಬ್ದಾರಿಯನ್ನು ಚುನಾಯಿತರಲ್ಲದ ರಾಜ್ಯಪಾಲರಿಗೆ ವರ್ಗಾಯಿಸುವ ಮೂಲಕ ಕೈ ತೊಳೆದುಕೊಂಡು, ಮತದಾರರಿಗೆ ಅವಮಾನ ಮಾಡಿದೆ ಈ ಸರ್ಕಾರ. ಶುದ್ಧ ಶತಮೂರ್ಖ ಜನಪ್ರತಿನಿಧಿಗಳ ಸರ್ಕಾರವಿದು’ ಎಂದು ಕಿಡಿಕಾರಿದ್ದಾರೆ.
ಸಿಎಂ ಬಂದಾಯ್ತು, ಮುಂದೆ?
ಈಗ ಸಿಎಂ ಯಡಿಯೂರಪ್ಪ ಆಸ್ಪತ್ರೆಯಿಂದ ಬಂದಿದ್ದಾರೆ. ಈಗಲೂ ರಾಜ್ಯಪಾಲರ ಮೂಲಕವೇ ಆಡಳಿತ ನಡೆಯಲಿದೆಯೇ? ಅಥವಾ ಈ ಹಿಂದೆಯೂ ಯಡಿಯೂರಪ್ಪ ರಾಜ್ಯಪಾಲರು, ಆ ಮೂಲಕ ಪರೋಕ್ಷವಾಗಿ ಕೇಂದ್ರ ಬಿಜೆಪಿ ಹೇಳಿದಂತೆಯೇ ದಿನನಿತ್ಯದ ತೀರ್ಮಾನ ತೆಗೆದುಕೊಳ್ಳುತ್ತಿದ್ದರೇ?
ಒಟ್ಟಿನಲ್ಲಿ ಕೇಂದ್ರ ಸರ್ಕಾರ ಅಥವಾ ರಾಷ್ಟ್ರೀಯ ಬಿಜೆಪಿ ಕರ್ನಾಟಕವನ್ನು ಆಳುತ್ತಿದೆಯಾ ಎಂಬ ಸಂಶಯ ಕಾಡುತ್ತಿದೆಯಲ್ಲವೆ?
- ಪಿ.ಕೆ.ಮಲ್ಲನಗೌಡರ್
ಇದನ್ನು ಓದಿ: ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ: ಬಿಎಸ್‌ವೈ ವಿರುದ್ಧ ಬಿಜೆಪಿ ಹೈಕಮಾಂಡ್ ತಂತ್ರವೇ?


