ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 13 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಿರಾರ್‌ನಲ್ಲಿ ದುರ್ಘಟನೆ ನಡೆದಿದ್ದು, ಇದು ಮುಂಬೈನಿಂದ 50 ಕಿ.ಮೀ ದೂರದಲ್ಲಿದೆ.
ಎರಡು ದಿನಗಳ ಹಿಂದೆಯಷ್ಟೇ ನಾಸಿಕ್‌ನ ಆಸ್ಪತ್ರೆಯೊಂದರಲ್ಲಿ ನಡೆದ ಆಮ್ಲಜನಕ ಸೋರಿಕೆಯಿಂದ, ವೆಂಟಿಲೇಟರ್‌ನಲ್ಲಿದ್ದ 22 ರೋಗಿಗಳು ಮೃತಪಟ್ಟಿದ್ದರು.
ಮುಂಜಾನೆ 3 ಗಂಟೆಯ ಹೊತ್ತಿಗೆ ನಾಲ್ಕು ಅಂತಸ್ತಿನ ವಿಜಯ್ ವಲ್ಲಭ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಆಕ್ಸಿಜನ್‌ಗೆ ಹಾಹಾಕಾರ; ನೇಪಾಳಕ್ಕೆ ವೆಂಟಿಲೇಟರ್ ಹೊಂದಿರುವ 39 ಆಂಬುಲೆನ್ಸ್ ಗಿಫ್ಟ್!
ಈ ಬೆಂಕಿಯನ್ನು ಮುಂಜಾನೆ 5.20 ಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಂಡಾಗ ಐಸಿಯುನಲ್ಲಿ 17 ರೋಗಿಗಳಿದ್ದರು, ನಾಲ್ಕು ರೋಗಿಗಳನ್ನು ರಕ್ಷಿಸಿ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಕಿ ದುರ್ಘಟನೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದ ಎಸಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದೇ ಕಾರಣ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಸೆಲ್‌ನ ಮುಖ್ಯಸ್ಥ ವಿವೇಕಾನಂದ್ ಕದಮ್ ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೆ ಮೃತರ ಸಂಬಂಧಿಕರು ಆಸ್ಪತ್ರೆಯನ್ನು ತಲುಪಿದ್ದು, ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜನವರಿ 9 ರಂದು ಮಹಾರಾಷ್ಟ್ರದ ಭಂಡಾರ ಜಿಲ್ಲಾ ಆಸ್ಪತ್ರೆಯ ವಿಶೇಷ ನವಜಾತ ಆರೈಕೆ ಘಟಕದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹತ್ತು ಶಿಶುಗಳು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಕೊರೊನಾ ನಿರ್ವಹಣೆಯಲ್ಲಿ ’ಸೋಂಕಿತ ಸರ್ಕಾರ’ ಸೋತಿದೆ: ಕಾಂಗ್ರೆಸ್ ಆರೋಪ


