Homeಮುಖಪುಟವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

ವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

- Advertisement -
- Advertisement -

ಇತಿಹಾಸದ ಅಧ್ಯಯನ ಅಂದರೆ ಹಳೆ ಪುಸ್ತಕ ಮತ್ತು ದಾಖಲೆಗಳ ನಡುವೆ ಸಹಜೀವನ. ಮನುಷ್ಯ ಬರೆದ ಕೃತಿ ಅಥವಾ ಬಿಡಿಸಿದ ಚಿತ್ರ ಆ ಸಮಯದ, ಇತಿಹಾಸದ ಪ್ರಮುಖ ಮೂಲ. ಇಂತಹ ಮೂಲ ಕೃತಿಗಳನ್ನು, ದಾಖಲೆಗಳನ್ನು ಹುಡುಕಿ, ಅವುಗಳನ್ನು ಅಭ್ಯಾಸ ಮಾಡಿ, ಅವುಗಳಲ್ಲಿ ಇರುವ ಪ್ರಮುಖ ಮಾಹಿತಿಗಳನ್ನು ಒರೆಗೆ ಹಚ್ಚಿ ಹೊರತರುವುದು ಇತಿಹಾಸಕಾರರ ಕೆಲಸ. ನಾನು ಇತಿಹಾಸ ಕಲಿಯಲು ಕಾಲೇಜಿಗೆ ಹೋದವನಲ್ಲ. ಆದರೆ ನನಗೆ ನಾನಾ ತರಹದ ಇತಿಹಾಸಗಳಲ್ಲಿ ಆಸಕ್ತಿ.

ಸುಮಾರು ವರ್ಷಗಳ ಹಿಂದೆ, ನನಗೆ ಇತಿಹಾಸದ ಹುಚ್ಚು ಹಿಡಿದ ಹರೆಯದಲ್ಲಿ, ನಾನು ಬೆಂಗಳೂರಿನ ಬ್ರಿಗೇಡ್ ರೋಡಿನ ಸಂದಿಯಲ್ಲಿ ಇರುವ ’ಸೆಲೆಕ್ಟ್’ ಬುಕ್ ಅಂಗಡಿಗೆ ಹೋಗುತ್ತಿದ್ದೆ. ಎರಡೇ ಕೋಣೆ ಇರುವ ಈ ಚಿಕ್ಕ ಅಂಗಡಿಯಲ್ಲಿ ನಾನಾ ತರಹದ-ನಮೂನೆಯ ಪುಸ್ತಕಗಳು. ನನಗೆ ಫಜ್ಲುಲ್ ಹಸನ್ ಅವರ “Bangalore through Centuries” ಪುಸ್ತಕ ಬೇಕಾಗಿತ್ತು. ಆದರೆ ಅಲ್ಲಿಯ ಸಂಗ್ರಹ ನೋಡಿ ಯಾವುದ್ಯಾವದೋ ಪುಸ್ತಕಗಳಲ್ಲಿ ಮೈಮರೆತುಬಿಟ್ಟೆ. ನನ್ನ ವಿಚಿತ್ರ ನಡವಳಿಕೆ ಗಮನಿಸಿದ ಸೆಲೆಕ್ಟ್ ಮಾಲೀಕರಾದ ಮೂರ್ತಿ ಅವರು “ನೀವು ಇಲ್ಲಿಗೆ ಮೊದಲು ಸರ್ತಿ ಬಂದಿದ್ದು, ಅಲ್ವ, ಏನು ಹುಡುಕ್ತಾ ಇದ್ದೀರಾ” ಅಂತ ಕೇಳಿದರು. ನಾನು ಹಸನ್ ಅವರ ಪುಸ್ತಕದ ಹೆಸರು ಹೇಳಿದ ತಕ್ಷಣ ಅವರು “ಅಯ್ಯೋ, ನಿಮಗೆ ಬೆಂಗಳೂರು ಇತಿಹಾಸದಲ್ಲಿ ಆಸಕ್ತಿನಾ? ಬನ್ನಿ ಇಲ್ಲಿ” ಅಂದು, ಹಸನ್ ಅವರ ಪುಸ್ತಕದ ಜೆರಾಕ್ಸ್ ಜೊತೆಗೆ ಇನ್ನು ಎರಡು ಮೂರು ಬೆಂಗಳೂರಿನ ಬಗೆಗಿನ ಪುಸ್ತಕಗಳನ್ನು ಕೊಟ್ಟರು. ಆ ದಿನದ ನಂತರ, ಸೆಲೆಕ್ಟ್ ಅಂಗಡಿ ಹೋಗೋದು ಒಂದು ರೂಢಿಯಾಯಿತು. ಒಂದ ಸರ್ತಿ ಅಂತೂ, ಮೂರ್ತಿ ಅವರು ಮಹಡಿಯ ಕೋಣೆಗೆ ಕರೆದೊಯ್ದರು; ಅಲ್ಲಿ ಸಿಕ್ಕಾಪಟ್ಟೆ ನಕ್ಷೆಗಳು ಇದ್ದವು. ಅವತ್ತು, ನಾನು, ಏನಿಲ್ಲ ಅಂದರು ಮೂರು ಗಂಟೆಗಳ ಕಾಲ ಆ ಹಳೆ ನಕ್ಷೆಗಳನ್ನು ನೋಡುತ್ತಾ ಕೂತಿರಬೇಕು. ನನ್ನನ್ನು ಆ ಕೋಣೆಯಲ್ಲಿ ಬಿಟ್ಟು ಮೂರ್ತಿಯವರು ಅಂಗಡಿಯಲ್ಲಿ ಕುಳಿತಿದ್ದರು. ಹೀಗೆ ಅವರ ಜೊತೆ ಒಂದು ಸಂಬಂಧ ಬೆಳೆಯಿತು. ಅಗಾಗ, ಹೊಸ ಯಾವುದಾದರೂ ಹೊಸ ಪುಸ್ತಕ ಬಂದರೆ ಮೂರ್ತಿ ಅವರು ಫೋನ್ ಮಾಡಿ ತಿಳಿಸುವರು. ಒಂದೊಂದು ಸಾರಿ ಬರಿ ಕಷ್ಟ ಸುಖ ಹಂಚಿಕೊಳ್ಳಕ್ಕೆ ಮಾತ್ರ ಅಲ್ಲಿ ಹೋಗ್ತಾ ಇದ್ದೆ.

ಇತಿಹಾಸದ ಅಧ್ಯಯನ ಮುಂದುವರಿದಂತೆ ಹೊಸ ಹೊಸ ಜಾಗಗಳು ಪರಿಚಯವಾದವು. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಮಿಥಿಕ್ ಸೊಸೈಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಮತ್ತೆ ನಗರದ ಕೇಂದ್ರ ಗ್ರಂಥಾಲಯಗಳು ನನ್ನ ಮನೆಯಷ್ಟೇ ಪ್ರಿಯವಾದವು. ಇಲ್ಲಿಯ ಸಿಬ್ಬಂದಿ ಕೂಡ ತುಂಬಾ ಸಹಾಯಕಾರಿ. ಅವರಿಗೆ ಪುಸ್ತಕಪ್ರಿಯರನ್ನು ಕಂಡರೆ ಅದೇನೋ ಪ್ರೀತಿ. ಖುಷಿಖುಶಿಯಾಗಿ ಬೇಕಾದ್ದನ್ನು ಹುಡುಕಿ, ಸ್ವಚ್ಛ ಮಾಡಿಕೊಡ್ತಾರೆ. ಕೆಲವರಂತೂ ಟೀ, ಕಾಫಿ ಮತ್ತೆ ತಿಂಡಿಯನ್ನೂ ಕೇಳಿ ಕೊಟ್ಟಿದ್ದುಂಟು.

PC : Edex live

ಈ ಗ್ರಂಥಾಲಯ ಜಗತ್ತು ಮತ್ತೊಂದು ಬೇರೆಯದೇ ಲೋಕ. ಇಲ್ಲಿ ರೀಡಿಂಗ್ ಕೋಣೆಗಳಲ್ಲಿ ಸಾಮೂಹಿಕವಾಗಿ ಓದುತ್ತಿರುವ ಜನರನ್ನು ನೋಡಿದರೆ ನನ್ನ ಮನಸ್ಸಿಗೆ ಏನೋ ಒಂದು ಹಿಗ್ಗು. ಕಬ್ಬನ್‌ಪಾರ್ಕಿನ ಸೆಂಟ್ರಲ್ ಲೈಬ್ರರಿ ಅಂತೂ ಯಾವಾಗಲೂ ಜನರಿಂದ ಕಿಕ್ಕಿರುತ್ತದೆ. ಬಹಳ ವರ್ಷಗಳ ಹಿಂದೆ ಈ ಜನ ಸಮುದ್ರದ ನಡುವೆ ಕುಳಿತು ನಾನು ರಾಮಚಂದ್ರ ಗುಹಾ ಅವರ “A Corner Field” ಓದಿದ್ದೆ. ಇನ್ನೊಂದು ಸಾರಿ ಬೆಂಗಳೂರಿನ ಹಳೆ ನಕ್ಷೆಗಳನ್ನು ಹುಡುಕುತ್ತ ಇದ್ದಾಗ, ಒಬ್ಬ ಗೆಳೆಯ ನೃಪತಂಗ ರೋಡ್‌ನಲ್ಲಿ ಇರುವ ಮಿಥಿಕ್ ಸೊಸೈಟಿಗೆ ಕರೆದೊಯ್ದ. ಅಲ್ಲಿನ ಗ್ರಂಥಾಲಯದಲ್ಲಿ ಬೆಂಗಳೂರು ನಗರದ 1880ರ ಭೂಗೋಳ ನಕ್ಷೆ ಸಿಕ್ಕಿತು. ಆ ದೊಡ್ಡ ನಕ್ಷೆಯನ್ನು ಸಿಬ್ಬಂದಿಯೊಬ್ಬರು ಸೂಕ್ಷ್ಮದಿಂದ ಟೇಬಲ್ ಮೇಲೆ ಹರಡಿ ತೋರಿಸಿದರು. ನಾನು ಬೀದರ್ ಮತ್ತು ಬಿಜಾಪುರ್ ಸುಲ್ತಾನೇಟ್ ಕಲೆ ಇತಿಹಾಸ ಸಂಶೋಧಿಸುವಾಗ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಿಬ್ಬಂದಿಯೊಬ್ಬರು ನನಗೆ ಮಾರ್ಗ್ ಸಾಂಸ್ಕೃತಿಕ ಪತ್ರಿಕೆಯ ನೂರಾರು ಸಂಚಿಕೆಗಳನ್ನು ಕೊಟ್ಟರು. ಅದೇ ದಿನ ಬೀದರ್ ಮೇಲೆ ಒಬ್ಬ ಬ್ರಿಟಿಷ್ ಆಫೀಸರ್ ಬರೆದ ಪ್ರವಾಸಕಥನವನ್ನು ಹುಡುಕಿ ಕೊಟ್ಟರು. ಈ ತರಹದ ಆಕಸ್ಮಿಕ ಕಥನಗಳು ಗ್ರಂಥಾಲಯಗಳಲ್ಲಿ ಸಹಜ. ಯಾವಾಗಾದರೂ ಜೆರಾಕ್ಸ್ ಬೇಕಾದರೆ ಇಂಡಿಯನ್ ಕೌನ್ಸಿಲ್ ಆ ಹಿಸ್ಟಾರಿಕಲ್ ರಿಸರ್ಚ್‌ನ ಸಿಬ್ಬಂದಿ ಅವೆನ್ಯೂ ರೋಡಿನ ಅಂಗಡಿಯಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಡುತ್ತಾರೆ. ಕನ್ನಡ ರಂಗಭೂಮಿಯ ಬಗ್ಗೆ ಸಂಶೋಧಿಸುತ್ತಿರುವಾಗ ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಕ್ಕ ಹಳೆ ರಂಗಭೂಮಿ ಎಂಬ ಪತ್ರಿಕೆಯ ಸಂಚಿಕೆಗಳು ಹಾಗು ಬೇರೆ ಪತ್ರಿಕೆಗಳಲ್ಲಿ ಮೂಡಿಬಂದ ವಿಮರ್ಶೆಗಳು ತುಂಬಾ ಸಹಾಯವಾದವು. ಇದೇ ಗ್ರಂಥಾಲಯದಲ್ಲಿ ಪ್ರಜಾವಾಣಿ ಹಾಗು ಹಲವಾರು ಪತ್ರಿಕೆಗಳ 30 ವರ್ಷಕ್ಕಿಂತ ಹಿಂದಿನ ಸಂಚಿಕೆಗಳು ಲಭ್ಯವಿವೆ.

ಬಹಳಷ್ಟು ಬೆಂಗಳೂರಿನ ಸುಂದರ ದಿನಗಳನ್ನು ನಾನು ಈ ನಗರದ ಗ್ರಂಥಾಲಯಗಳಲ್ಲಿ ಕಳೆದಿದ್ದೀನಿ. ಅವರ ಸಿಬ್ಬಂದಿಗಳ ಜೊತೆ ಟೀ, ಕಾಫಿ, ಊಟ ಸವಿದಿದ್ದೀನಿ. ಪುಸ್ತಕಗಳ ವಿಶಾಲ ಜಗತ್ತಿನಲ್ಲಿ ವಿದ್ಯೆಯಷ್ಟೇ ಅಲ್ಲ, ಸರಳ ಮನಸ್ಸಿನ ಒಳ್ಳೆ ಜನ ಕೂಡ ಇದ್ದಾರೆ ಅಂತ ನನ್ನ ಅನುಭವಗಳು ನನಗೆ ಕಲಿಸಿವೆ.

ಹಳೆ ಪುಸ್ತಕ ಅಂಗಡಿಗಳ ಅನುಭವ ಕೂಡ ಬೇರೆಯಲ್ಲ. ’ಸೆಲೆಕ್ಟ್’ನಲ್ಲಿ ಮೂರ್ತಿ, ’ನಾಗಶ್ರೀ’ಯಲ್ಲಿ ಪ್ರಸಾದ್, ’ಬುಕ್‌ವರ್ಮ್’ನಲ್ಲಿ ಕೃಷ್ಣರವರ ಜೊತೆಗೆ ಇಂಥವೇ ಸಿಹಿ ಕ್ಷಣಗಳನ್ನು ಕಳೆದಿದ್ದೇನೆ. ನಾನು ಕೆ.ಜಿ.ಎಫ್ ಮೇಲೆ ಒಂದು ಸಾಕ್ಷ್ಯಚಿತ್ರ ಮಾಡುವಾಗ ಪ್ರಸಾದ್‌ರವರನ್ನು ಭೇಟಿ ಆಗಿದ್ದೆ. ಅವರಿಗೆ ಈ ತರಹ ಒಂದು ಚಿತ್ರ ಮಾಡ್ತಿದ್ದೇನೆ ಅಂತ ಹೇಳಿದಾಗ, ಅವರು ದಿಢೀರನೆ ತಾವು ಕುಡಿಯುತ್ತಿದ್ದ ಕಾಫಿ ಬಿಟ್ಟು ಅಂಗಡಿಯೊಳಗೆ ಹೋಗಿ ಗಾಯತ್ರಿ ಚಂದ್ರಶೇಖರ್ ಅವರ “Grit and gold” ಪುಸ್ತಕವನ್ನ ತಂದುಕೊಟ್ಟರು. ಅದರ ಬಗ್ಗೆ ನಾನು ಅಲ್ಲೇ ಮೊದಲು ತಿಳಿದಿದ್ದು. ಅದಷ್ಟೇ ಅಲ್ಲ, ಗಾಯತ್ರಿಯವರ ಮನೆ ಅಡ್ರೆಸ್ ಕೂಡ ಪ್ರಸಾದ್‌ರವರು ಕೊಟ್ಟು ಅವರನ್ನ ಭೇಟಿಯಾಗಲು ಪ್ರೋತ್ಸಾಹಿಸಿದರು. ಕಡೆಗೆ ಗಾಯತ್ರಿ ಅವರು ನನ್ನ ಸಾಕ್ಷ್ಯಚಿತ್ರಕ್ಕೆ ಬಹಳ ಸಹಾಯ ಮಾಡಿದರು ಹಾಗು ಚಿತ್ರದಲ್ಲಿ ಅವರ ಸಂದರ್ಶನ ಕೂಡ ಮೂಡಿಬಂತು.

ಬೆಂಗಳೂರಿನಲ್ಲಿ ಅತಿ ಮುಖ್ಯವಾದ ದಾಖಲೆಗಳಿರುವ ಜಾಗವೆಂದರೆ ವಿಧಾನಸೌಧ. ಇಲ್ಲಿಯ ಸಂಗ್ರಹದಲ್ಲಿ 19ನೆ ಶತಮಾನದಿಂದ ಹಿಡಿದು ಈವರೆಗಿನ ರಾಜ್ಯದ ಅಫಿಷಿಯಲ್ ದಾಖಲೆಗಳು ಇವೆ. ಆದರೆ ಇಲ್ಲಿ ಸಂಶೋಧಕರಿಗೆ ಮಾತ್ರ ಪ್ರವೇಶ. ಮೈಸೂರು ರಾಜ್ಯದ ಆಧುನಿಕ ಇತಿಹಾಸ ಓದುವವರಿಗೆ ಇದು ಪ್ರಮುಖ ಸಂಗ್ರಹ. ನಾನು ಇಲ್ಲಿ ಒಂದೇ ಸಲ ಹೋಗಿದ್ದು. ಇಲ್ಲಿ ಮೂರ್ತಿ, ಪ್ರಸಾದ್ ಅಂಥವರು ಇಲ್ಲ. ಆದರೆ ಪದೇಪದೇ ಹೋದರೆ ಅವರೂ ಸ್ನೇಹಿತರಾಗ್ತಾರೆ ಅನ್ನೋದರಲ್ಲಿ ಸಂದೇಹವೇ ಇಲ್ಲ.

ಅಂತರ್ಜಾಲದ ಸಂಶೋಧನೆಯಲ್ಲಿ ಈ ತರಹ ಮರೆಯಲಾಗದಂತಹ ಅನುಭವಗಳು ಕಮ್ಮಿ. ಆಮೇಲೆ ಆಕಸ್ಮಿಕ ಅನುಭವಗಳೂ ಸಿಗುವುದು ಕಷ್ಟ. ಹಳೆ ಗೆಜೆಟಿಯರ್‌ಗಳು ಮತ್ತೆ “Indian Antiquary” ಮತ್ತೆ “Indian Archaeology Review” ಪತ್ರಿಕೆಗಳು ಆನ್‌ಲೈನ್‌ನಲ್ಲಿ ಸಿಕ್ಕರೂ, ಅವುಗಳನ್ನು ಶೆಲ್ಫ್‌ಗಳಲ್ಲಿ ಹುಡುಕಿ, ಕೈಯಲ್ಲಿ ಹಿಡಿದು, ನೋಟ್ಸ್ ಮಾಡಿಕೊಂಡು, ಗ್ರಂಥಪಾಲಕರ ಅಭಿಪ್ರಾಯ ಕೇಳಿ ಅಭ್ಯಾಸ ಮಾಡೋದು ನನಗೆ ತುಂಬಾ ಅನನ್ಯವಾದ ಅನುಭವವಾಗಿದೆ.

ಕೋವಿಡ್ ರೋಗ ಈ ಗ್ರಂಥಾಲಯಗಳು ಮತ್ತು ಪುಸ್ತಕದ ಅಂಗಡಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗ ಓದುವ ಕೋಣೆಗಳು ಮುಚ್ಚಿವೆ. ಮತ್ತೆ ಯಾವಾಗ ಸಾಮೂಹಿಕವಾಗಿ ನಾವು ಓದನ್ನು ಸವಿಯುತ್ತೇವೋ ಹೇಳೋದು ಕಷ್ಟ. ಈ ಕಷ್ಟದ ಕಾಲದಲ್ಲಿ ಈ ವಿದ್ಯೆಯ ದೇಗುಲಗಳನ್ನು ನಮ್ಮ ಪ್ರಾರ್ಥನೆಗಳಲ್ಲಿ ಇಟ್ಟುಕೊಳ್ಳೋಣ ಬನ್ನಿ.

ಬಸವ ಬಿರಾದರ್

ಬಸವ ಬಿರಾದರ್
ಬಸವ ಸ್ವತಂತ್ರ ಸಂಶೋಧಕ ಮತ್ತು ಚಿತ್ರನಿರ್ದೇಶಕ. ಇತಿಹಾಸ, ಸಂಶೋಧನೆ ಮತ್ತು ಚಲನಚಿತ್ರಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಇವರು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಿಯತವಾಗಿ ಪತ್ರಿಕೆಗಳಿಗೆ ಬರೆಯುತ್ತಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ವಿಶ್ವ ಪುಸ್ತಕ ದಿನ ವಿಶೇಷ; ಪುಸ್ತಕಗಳು ಅಳಿವಿನಂಚಿನಲ್ಲಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...