ಕೊರೊನಾದ ಎರಡನೆ ಅಲೆ ಎದುರಿಸುತ್ತಿರುವ ಭಾರತಕ್ಕೆ ತಮ್ಮ ರಾಷ್ಟ್ರದ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಸೋಂಕಿನಿಂದ ಬಳಲುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶನಿವಾರ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, “ಕೊರೊನಾದ ಅಪಾಯಕಾರಿ ಅಲೆಯೊಂದಿಗೆ ಹೋರಾಡುತ್ತಿರುವ ಭಾರತದ ಜನರೊಂದಿಗೆ ನಾವಿದ್ದೇವೆ ಎಂದು ಹೇಳಲು ನಾನು ಬಯಸುತ್ತೇನೆ. ನೆರೆಹೊರೆಯ ಹಾಗೂ ವಿಶ್ವದಾದ್ಯಂತ ಸೋಂಕಿನಿಂದ ಬಳಲುತ್ತಿರುವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಮ್ಮ ಪ್ರಾರ್ಥನೆ. ನಾವು ಈ ಜಾಗತಿಕ ಸವಾಲನ್ನು ಒಗ್ಗಟ್ಟಾಗಿ ಮಾನವೀಯತೆಯಿಂದ ಎದುರಿಸಬೇಕಾಗಿದೆ” ಎಂದು ಹೇಳಿದ್ದಾರೆ.
I want to express our solidarity with the people of India as they battle a dangerous wave of COVID-19. Our prayers for a speedy recovery go to all those suffering from the pandemic in our neighbourhood & the world. We must fight this global challenge confronting humanity together
— Imran Khan (@ImranKhanPTI) April 24, 2021
ಇದನ್ನೂ ಓದಿ: ಕೊರೊನಾ ತಲ್ಲಣ: #ModiOxygenDo, भाषणबाज_मोदी, #oxygenbedslekkakodi ಟ್ವಿಟರ್ ಟ್ರೆಂಡ್
ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಭಾರತಕ್ಕೆ ತನ್ನ ಸಹಾಯವನ್ನು ನೀಡುವುದಾಗಿ ಪಾಕಿಸ್ತಾನದ ‘ಈದಿ ವೆಲ್ಫೇರ್ ಟ್ರಸ್ಟ್’ ಎಂಬ ಲೋಕೋಪಕಾರಿ ಸಂಸ್ಥೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ರಾಷ್ಟ್ರಕ್ಕೆ ಸಹಾಯ ಮಾಡಲು 50 ಆಂಬುಲೆನ್ಸ್‌ಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ಕಳುಹಿಸುವುದಾಗಿ ಸಂಸ್ಥೆ ತಿಳಿಸಿದೆ.
Pakistan's #EdhiFoundation – built by the great Abdul Sattar Edhi – writes to Indian PM with offer to send fleet of 50 ambulances to help fight #COVID19India pic.twitter.com/bj5xfeK0l0
— Rezaul Hasan Laskar (@Rezhasan) April 23, 2021
ಪಾಕಿಸ್ತಾನ ಕೂಡಾ ಕೊರೊನಾ ಪ್ರಕರಣಗಳ ಉಲ್ಬಣವನ್ನು ಎದುರಿಸುತ್ತಿದೆ, ಹಲವಾರು ನಗರಗಳಲ್ಲಿ ಕೊರೊನಾ ಹೆಚ್ಚುತ್ತಿರುವುದು ವರದಿಯಾಗಿದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ರಚಿಸಲಾದ ಪಾಕಿಸ್ತಾನದ ಅತ್ಯುನ್ನತ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಪ್ರಧಾನಿ ಇಮ್ರಾನ್ ಖಾನ್, ದೇಶದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪೊಲೀಸರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ದೈನಂದಿನ ಸಾವು ಶನಿವಾರ ವರದಿಯಾಗಿದೆ. ಒಂದೇ ದಿನದಲ್ಲಿ 157 ಸಾವುಗಳಾಗಿದ್ದು, ಸಾವಿನ ಸಂಖ್ಯೆ 16,999 ಕ್ಕೆ ತಲುಪಿದೆ. ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯು 790,016 ಕ್ಕೆ ತಲುಪಿದೆ.
ಇದನ್ನೂ ಓದಿ: ತಿಂಗಳಾಂತ್ಯದಲ್ಲಿ ಉತ್ತರಪ್ರದೇಶ ಹೆಚ್ಚು ಕೋವಿಡ್ ಪೀಡಿತ ರಾಜ್ಯ ಆಗಬಹುದು: ನೀತಿ ಆಯೋಗ ಎಚ್ಚರಿಕೆ


