ತಮಿಳುನಾಡಿನ ಚೆಂಗಲ್‌ಪಟ್ಟುವಿನಲ್ಲಿರುವ ಕೇಂದ್ರ ಸರ್ಕಾರದ ಅತ್ಯಾಧುನಿಕ ಇಂಟಿಗ್ರೇಟೆಡ್ ವ್ಯಾಕ್ಸಿನ್ ಕಾಂಪ್ಲೆಕ್ಸ್ (ಐವಿಸಿ) ನಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಒಂದೇ ಒಂದು ಲಸಿಕೆ ತಯಾರಾಗಿಲ್ಲ ಎಂದು ಕಳೆದ ವರ್ಷ ಏಪ್ರಿಲ್‌ನಲ್ಲಿ ಪಡೆದ ಆರ್‌ಟಿಐ ಉತ್ತರದ ಮೂಲಕ ತಿಳಿದು ಬಂದಿದೆ.
2020 ರ ಮಾರ್ಚ್ 28 ರಂದು ಮಧುರೈನ ಆನಂದ್ ರಾಜ್ ಅವರು ಆರ್‌ಟಿಐ ಮೂಲಕ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಎಚ್‌ಎಲ್‌ಎಲ್ ಬಯೋಟೆಕ್ ಲಿಮಿಟೆಡ್ (ಎಚ್‌ಬಿಎಲ್), ಕಾಂಪ್ಲೆಕ್ಸ್‌ನಲ್ಲಿ ಇಲ್ಲಿಯವರೆಗೆ ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಿಲ್ಲ ಎಂದು ಒಪ್ಪಿಕೊಂಡಿದೆ.
ಇದನ್ನೂ ಓದಿ: ’ಕೊರೊನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು’- ಕಾಂಗ್ರೆಸ್
ಆರ್‌ಟಿಐಗೆ ನೀಡಿರುವ ಉತ್ತರದಲ್ಲಿ, “ವ್ಯಾಕ್ಸಿನ್ ಕಾಂಪ್ಲೆಕ್ಸ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಭಾರತ ಸರ್ಕಾರದ ಉದ್ಯಮವಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಇದನ್ನು 2012 ರಲ್ಲಿ ಮಂಜೂರಾಗಿದ್ದ 594 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಯಿತು. ಇದರ ಸಿಬ್ಬಂದಿ ಸಾಮರ್ಥ್ಯ 408 ಆಗಿದ್ದು, ಆದರೆ ಇನ್ನೂ ಸುಮಾರು 251 ಹುದ್ದೆಗಳು ಖಾಲಿ ಇವೆ. ಸ್ಥಾಪನೆಯಾದಾಗಿನಿಂದ ಇದುವರೆಗೂ ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಿಲ್ಲ” ಎಂದು ಉತ್ತರಿಸಿದೆ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲು ಮಾಹಿತಿ ಸಂಗ್ರಹಿಸುವಾಗ ಕಳೆದ ಏಪ್ರಿಲ್‌ನಲ್ಲಿ ವರದಿಯನ್ನು ಪಡೆದುಕೊಂಡಿದ್ದೇನೆ. ಆದರೆ ಲಾಕ್‌ಡೌನ್ ಕಾರಣ ಅದನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಆರ್‌ಟಿಐ ಸಲ್ಲಿಸಿದ್ದ ಆನಂದ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಸಂಪಾದಕರ ವಿರುದ್ಧ ಪತ್ರ: ಟೈಮ್ಸ್ ನೌ ಚಾನೆಲ್‌ನ ಹಾಲಿ, ಮಾಜಿ ಪತ್ರಕರ್ತರ ಜೊತೆ ನಿಲ್ಲೋಣ
ಲಸಿಕೆಗಳನ್ನು ತಯಾರಿಸಲು ವ್ಯಾಕ್ಸಿನ್ ಕಾಂಪ್ಲೆಕ್ಸ್ ಅನ್ನು ಬಳಸಿಕೊಳ್ಳಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಖಾಸಗಿ ಕಂಪೆನಿಗಳ ಹಿತಕ್ಕಾಗಿ ಈ ವ್ಯಾಕ್ಸಿನ್ ಕಾಂಪ್ಲೆಕ್ಸ್ ಅನ್ನು ನಿಷ್ಕ್ರಿಯವಾಗಿ ಇರಿಸಲಾಗಿದೆ ಎಂದು ಆರೋಪಿಸಿರುವ ಆನಂದ್ ರಾಜ್, “ರಾಜ್ಯ ಮಾನವ ಹಕ್ಕುಗಳ ಆಯೋಗ ತಮಿಳುನಾಡು ಮತ್ತು ಮದ್ರಾಸ್ ಹೈಕೋರ್ಟ್‌ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಬೇಕು” ಎಂದು ಮನವಿ ಮಾಡಿದ್ದಾರೆ.
ತಿರುಪ್ಪೂರು ಸಿಪಿಐ ಸಂಸದ ಕೆ. ಸುಬ್ಬರಾಯಣ್ ಸೇರಿದಂತೆ ಹಲವಾರು ರಾಜಕೀಯ ಪಕ್ಷದ ನಾಯಕರು ಕೂಡ ಇತ್ತೀಚೆಗೆ ಇದೇ ರೀತಿಯ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
ಎಚ್‌ಬಿಎಲ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಇಂಟಿಗ್ರೇಟೆಡ್ ವ್ಯಾಕ್ಸಿನ್ ಕಾಂಪ್ಲೆಕ್ಸ್ ‘ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಯಾಗಿದೆ’. ಇದು ದೇಶಕ್ಕೆ ಪರಿಣಾಮಕಾರಿ ವೆಚ್ಚದಲ್ಲಿ ಯುಐಪಿ (ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ) ಲಸಿಕೆಗಳನ್ನು ತಯಾರಿಸಲು ಮತ್ತು ಪೂರೈಸಲು ಹಾಗೂ ಯುನಿಸೆಫ್ ಸೇರಿದಂತೆ ಏಜೆನ್ಸಿಗಳಿಗೆ ರಫ್ತು ಮಾಡುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ: ದೆಹಲಿ: ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಲಂಗರ್ ಆರಂಭಿಸಿದ ಗುರುದ್ವಾರ


