ಕೇರಳದ ಕಣ್ಣೂರು ಜಿಲ್ಲೆಯ ಬೀಡಿ ಕೆಲಸಗಾರರೊಬ್ಬರು ತಮ್ಮ ಇಡೀ ಜೀವಮಾನದ ಉಳಿತಾಯವನ್ನು ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ (ಸಿಎಂಡಿಆರ್‌ಎಫ್) ದಾನ ಮಾಡಿ ಅಪರೂಪದ ಮಾನವೀಯತೆ ಮೆರೆದಿದ್ದಾರೆ. ಆ ಹಣವನ್ನು ಕೋವಿಡ್ ರೋಗಿಗಳ ಆರೈಕೆಗೆ ಬಳಸಲು ಅವರು ವಿನಂತಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜೀವನಕ್ಕಾಗಿ ಬೀಡಿ ಕಟ್ಟುವ ಅವರಿಗೆ ಎರಡೂ ಕಿವಿ ಕೇಳಿಸವು. ಇವರು ಕಳೆದ ವಾರ ತನ್ನ ಉಳಿತಾಯ ಖಾತೆಯಿಂದ 2 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವ ಉದ್ದೇಶದಿಂದ ತನ್ನ ಬ್ಯಾಂಕಿನ ಸ್ಥಳೀಯ ಶಾಖೆ ತಲುಪಿದಾಗ, ಬ್ಯಾಂಕ್ ಅಧಿಕಾರಿ, ನಿಮಗೆ ಉಳಿಯುವುದು 850 ರೂ. ಮಾತ್ರ. ಜೀವನಕ್ಕೆ ಕಷ್ಟ ಆಗುವುದಿಲ್ಲವೆ? ಎಂದಿದ್ದಾರೆ.
‘ನನಗೆ ಕೆಲಸವಿದೆ. ರಾಜ್ಯ ಸರ್ಕಾರದಿಂದ ಮಾಸಿಕ ಪಿಂಚಣಿ ಬರುತ್ತದೆ ಅಷ್ಟು ಸಾಕು. ರಾಜ್ಯದ ತನ್ನ ಸಹೋದರ ಸಹೋದರಿಯರ ಪ್ರಾಣ ಉಳಿಸುವುದಕ್ಕಿಂತ ಅವರ ಜೀವನದ ಉಳಿತಾಯ ದೊಡ್ಡದಲ್ಲ ಎಂದು ಅವರು ಹೇಳಿದ್ದಾರೆ. ಆ ಬ್ಯಾಂಕ್ ಅಧಿಕಾರಿ ಈ ಘಟನೆಯನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ದಾನಿಯ ಕೋರಿಕೆಯಂತೆ ಅವರ ವಿವರ ನೀಡಿರಲಿಲ್ಲ. ಇದು ಅನೇಕರು ಆ ಅನಾಮಧೇಯ ದಾನಿಯನ್ನು ಹುಡುಕುವಂತೆ ಮಾಡಿತು.
ಈ ವಾರ ಸ್ಥಳೀಯ ಟೆಲಿವಿಷನ್ ನೆಟ್ವರ್ಕ್ ಮೀಡಿಯಾ ಒನ್ ಈ ವ್ಯಕ್ತಿಯನ್ನು ಕಣ್ಣೂರು ಜಿಲ್ಲೆಯ ಕುರುವಾ ಮೂಲದ ಜನಾರ್ಧನನ್ ಎಂದು ಗುರುತಿಸಿದೆ.
‘ಲಸಿಕೆಯನ್ನು ರಾಜ್ಯಕ್ಕೆ 400 ರೂ.ಗೆ ಮಾರಾಟ ಮಾಡಲಾಗುವುದು ಎಂದು ಗೊತ್ತಾದಾಗ ಅದು ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆಯಾಗಿದೆ ಅನಿಸಿತು. ಆ ರಾತ್ರಿ, ನನಗೆ ನಿದ್ರೆ ಬರಲಿಲ್ಲ. ಮರುದಿನ ನಾನು ಬ್ಯಾಂಕಿಗೆ ಹೋದೆ. ಹಣವನ್ನು ದಾನ ಮಾಡಿದ ನಂತರವೇ ನನಗೆ ನಿರಾಳವಾಯಿತು” ಎಂದು ಜನಾರ್ಧನನ್ ಮೀಡಿಯಾ ಒನ್‌ಗೆ ತಿಳಿಸಿದ್ದಾರೆ.
‘ಇಷ್ಟು ಹಣವನ್ನು ಸಂಗ್ರಹಿಸಿ ಇಡುವುದರಿಂದ ಏನು ಪ್ರಯೋಜನ? ಜನರ ಜೀವನವು ದೊಡ್ಡದಾಗಿದೆ. ಜೀವನವಿದ್ದಾಗ ಮಾತ್ರ ಆಡಳಿತ ಮತ್ತು ವ್ಯವಸ್ಥೆ ಇರಲು ಸಾಧ್ಯ’ ಎಂದೂ ಅವರು ಹೇಳಿದ್ದಾರೆ.
13 ನೇ ವಯಸ್ಸಿನಿಂದ ಬೀಡಿ ಕಟ್ಟುವ ಕೆಲಸ ಮಾಡುವ ಜನಾರ್ಧನನ್ ಅವರಿಗೆ ಇಬ್ಬರು ಮದುವೆಯಾದ ಹೆಣ್ಣುಮಕ್ಕಳು ಇದ್ದಾರೆ, ಅವರ ಪತ್ನಿ ಕಳೆದ ವರ್ಷ ನಿಧನರಾಗಿದ್ದಾರೆ. ಪ್ರಚಾರ ಒಲ್ಲದ ಅವರು ‘ಗೌಪ್ಯತೆಯೊಂದಿಗೆ ಏಕಾಂತ ಜೀವನ’ ನಡೆಸಲು ಇಚ್ಛಿಸಿದ್ದಾರೆ. ಆದ್ದರಿಂದ ಅವರ ದಾನ ಕಾರ್ಯದ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಹೇಳಿದರು.
ಸಿಎಂ ಪಿಣರಾಯಿ ವಿಜಯನ್, ಪತ್ರಿಕಾಗೋಷ್ಠಿಯಲ್ಲಿ, ಜನಾರ್ಥನನ್ ಅವರ ಹೆಸರನ್ನು ಹೇಳದೆ ಅವರ ಕಾರ್ಯವನ್ನು ಶ್ಲಾಘಿಸಿದರು, ಇದು ರಾಜ್ಯದ ಜನರ ಭಾವನೆಗಳನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರು.
ಕಳೆದ ವಾರದಿಂದ ಕೇರಳದಲ್ಲಿ ಬಹಳಷ್ಟು ಜನರು ಕೋವಿಡ್ ಬಿಕ್ಕಟ್ಟು ಶಮನಕ್ಕೆ ಸ್ವ ಇಚ್ಛೆಯಿಂದ ಸಿಎಂ ಫಂಡ್‌ಗೆ ಹಣ ನೀಡುತ್ತಿರುವ ವರದಿಗಳು ಬಂದಿವೆ.
ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್


