ರೈತ ಹೋರಾಟಕ್ಕೆ 150 ದಿನ: ಬಿರು ಬೇಸಿಗೆಯಲ್ಲೂ ಬತ್ತದ ಉತ್ಸಾಹ, ಮೇ 10 ರಿಂದ ಮತ್ತಷ್ಟು ಬಿರುಸು!

ಜಗತ್ತಿಗೆ ಮಾದರಿಯಾದ ಐತಿಹಾಸಿಕ ರೈತ ಹೋರಾಟ ಸೋಮವಾರ (ಏಪ್ರಿಲ್ 26) 150 ದಿನಗಳನ್ನು ಪೂರೈಸುತ್ತಿದೆ. ದೆಹಲಿಯ ನಾಲ್ಕು ಗಡಿಗಳಲ್ಲಿ ಕುಳಿತಿರುವ ಪ್ರತಿಭಟನಾ ನಿರತ ರೈತರು ಇನ್ನು ಮೊದಲ ದಿನದ ಉತ್ಸಾಹವನ್ನೇ ಹೊಂದಿದ್ದು, ಭವಿಷ್ಯದ ಹೋರಾಟಗಳಿಗೆ ಮಾದರಿಯಾಗಿದ್ದಾರೆ.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಈ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ 150 ದಿನಗಳು ಸಂದಿವೆ. 2020ರ ನವೆಂಬರ್‌ 26 ರಂದು ದೆಹಲಿಯ ಗಡಿಗಳಿಗೆ ಬಂದಿಳಿದ ದೇಶದ ಅನ್ನದಾತರ ಹೋರಾಟ ಈಗ ದೇಶಾದ್ಯಂತ ಪಸರಿಸಿದೆ. ಎಲ್ಲಾ ರಾಜ್ಯಗಳಲ್ಲೂ ರೈತ ಹೋರಾಟದ ಕಾವಿದೆ. ಇದರ ನಡುವೆಯೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಹೋರಾಟಗಾರರರಲ್ಲಿ ಯಾವುದೇ ಆತಂಕ ಕಾಣಿಸುತ್ತಿಲ್ಲ. ಕೊರೊನಾ ಬಗ್ಗೆ ಜಾಗೃತಿ ವಹಿಸುತ್ತ ಮತ್ತಷ್ಟು ತೀವ್ರವಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ್‌ ಮತ್ತು ರಾಜಸ್ಥಾನದ ಶಹಜಾನ್‌ಪುರ್‌ ಗಡಿಗಳಲ್ಲಿ ಕಳೆದ ಐದು ತಿಂಗಳಿನಿಂದ ಕುಳಿತಿದ್ದಾರೆ. ಪಂಜಾಬಿನಲ್ಲಿ 8 ತಿಂಗಳುಗಳೇ ಕಳೆದಿವೆ. ಆದರೆ ಈ ಹೋರಾಟಗಾರರಲ್ಲಿ ಪ್ರತಿಭಟನಾ ಉತ್ಸಾಹ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬುದನ್ನು ಅವರ ಮಾತುಗಳೇ ಹೇಳುತ್ತವೆ. ವಾತಾವರಣಕ್ಕೆ, ಹವಾಮಾನಕ್ಕೆ ತಕ್ಕಂತೆ ತಾವು ಬದಲಾಗುತ್ತಿದ್ದಾರೆಯೇ ಹೊರತು ತಮ್ಮ ಬೇಡಿಕೆಯಿಂದ ಹಿಂದೆ ಸರಿದಿಲ್ಲ ಎಂಬುದು ಈ ಐತಿಹಾಸಿಕ ಹೋರಾಟದ ಮತ್ತೊಂದು ವಿಶೇಷ.

ಇದನ್ನೂ ಓದಿ: ಸಿಂಘು ಬಾರ್ಡರ್‌ನಲ್ಲಿ ಒಂದು ಬದಿಯ ಬ್ಯಾರಿಕೇಡ್ ತೆಗೆಯಲು ರೈತರ ನಿರ್ಧಾರ

150 ದಿನಗಳ ರೈತ ಹೋರಾಟ ದೇಶದ ಜನರಿಗೆ ಹಲವು ಹುರುಪುಗಳನ್ನು ನೀಡಿದೆ. ಇದರಿಂದಾಗಿ ಹಲವು ಧ್ವನಿಗಳು ಒಗ್ಗೂಡಿವೆ. ಕಾರ್ಮಿಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ವಕೀಲರು, ವೈದ್ಯರು, ನಾಗರಿಕರು ತಮ್ಮ ಹಕ್ಕುಗಳನ್ನು ಕೇಳಲು ಶುರು ಮಾಡಿದ್ದಾರೆ.

ಕೇವಲ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರ ಹೋರಾಟ ಎಂದು ಒಕ್ಕೂಟ ಸರ್ಕಾರ ನೀಡಿದ್ದ ಹಣೆಪಟ್ಟಿಯನ್ನು ದೇಶದ ಹಲವು ರಾಜ್ಯಗಳು ಅಳಿಸಿಹಾಕಿವೆ. ಮಹಾ ಪಂಚಾಯತ್ ಎಂಬ ಹೊಸ ಕಿಸಾನ್ ಪಂಚಾಯತ್‌ಗಳ ಮೂಲಕ ದಕ್ಷಿಣ ಭಾರತತದ ರಾಜ್ಯಗಳಿಗೆ ರೈತ ಹೋರಾಟ ಪಸರಿಸಿದ ಪರಿ ನಿಜಕ್ಕೂ ಗಮನಾರ್ಹವಾದದ್ದು.

ಕಳೆದ ಐದು ತಿಂಗಳಿನಿಂದ ದೆಹಲಿಯ ಸಿಂಘು ಬಾರ್ಡರ್‌ನಲ್ಲಿ ರೈತರ ಜೊತೆಗೆ ತಾವು ಒಂದು ಟೆಂಟ್ ಹಾಕಿಕೊಂಡು ಪ್ರತಿಭಟನೆಯಲ್ಲಿರುವ, ಪ್ರತಿಭಟನೆಯನ್ನು ಗಮನಿಸುತ್ತಿರುವ ವರ್ಕಿಂಗ್‌ ಪೀಪಲ್ ಚಾಟರ್‌ನ ನಿರ್ಮಲ್ ತಾವು ಕಂಡ ರೈತ ಹೋರಾಟವನ್ನು ನಾನುಗೌರಿ.ಕಾಂ ಜೊತೆ ಹಂಚಿಕೊಂಡಿದ್ದು ಹೀಗೆ.

PC: newsbust

” ರೈತರಲ್ಲಿ ನಾನು ಮೊದಲು ಬಂದಾಗ ನೋಡಿದ ಉತ್ಸಾಹವೇ ಈಗಲೂ ಕಾಣುತ್ತಿದ್ದೇನೆ. ಪಂಜಾಬ್, ಹಿಯಾಣದಲ್ಲಿ ಈಗ ಗೋದಿ ಕೊಯ್ಲು ನಡೆಯುತ್ತಿರುವ ಕಾರಣ ಕೊಂಚ ಮಟ್ಟಿಗೆ ಜನಸಂಖ್ಯೆ ಕಡಿಮೆಯಾಗಿದೆ. ಆದರೆ ಗುಡಿಸಲುಗಳ ಸಂಖ್ಯೆ ಹಾಗೆಯೇ ಇದೆ. ಇನ್ನೋಂದು ವಾರದಲ್ಲಿ ಜನ ಮತ್ತೆ ವಾಪಸ್ ಬರುತ್ತಾರೆ. ಅಷ್ಟರಲ್ಲಿ ಕೊಯ್ಲು ಮುಗಿಯುತ್ತದೆ. ಈಗ ಸಿಂಘು ಬಾರ್ಡರ್‌ನಲ್ಲಿ ಎಷ್ಟೋಂದು ಚಂದ ಚಂದದ ಗುಡಿಸಲು, ಮನೆಗಳು ನಿರ್ಮಾಣವಾಗಿವೆ. ಇವುಗಳನ್ನು ನಾನು ಬರಿ ಪುಸ್ತಕದಲ್ಲಿ ಮಾತ್ರ ನೋಡಿದ್ದೆ. ಈಗ ಕಣ್ಣಾರೆ ನೋಡುತ್ತಿದ್ದೇನೆ. ಈಗ ಸುಂದರವಾದ ಬಿದಿರಿನ ಗುಡಿಸಲುಗಳು ಹೆಚ್ಚಾಗಿದ್ದು, ’ಬಾಂಬೂ ಹಟ್ ನಗರ್” ಎಂಬ ಹೊಸ ಹೆಸರು ಇಡಬೇಕಾಗಬಹುದು. ಅಷ್ಟು ಚಂದದ ಮನೆಗಳನ್ನು ಇವರು ನಿರ್ಮಿಸಿದ್ದಾರೆ. ಇವರು ಇಲ್ಲಿಂದ ಕೃಷಿ ಕಾನೂನುಗಳು ವಾಪಸ್ ಆದ ಮೇಲೆಯೇ ಹೊರಡುವುದು” ಎನ್ನುತ್ತಾರೆ ನಿರ್ಮಲ್.

ಈ ಐತಿಹಾಸಿಕ ಹೋರಾಟದಲ್ಲಿ 405 ರೈತರು ಹುತಾತ್ಮರಾಗಿದ್ದಾರೆ. ಅವರ ನೆನಪಿನಲ್ಲಿ ಎಲ್ಲಾ ಗಡಿಗಳಲ್ಲಿಯೂ ಹುತಾತ್ಮ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಈ ಸ್ಮಾರಕಗಳಿಗೆ ಮಿಟ್ಟಿ ಸತ್ಯಾಗ್ರಹ ಯಾತ್ರೆಯಲ್ಲಿ 23 ರಾಜ್ಯಗಳ 1500 ಹಳ್ಳಿಗಳಿಂದ ಮಣ್ಣು ಸಂಗ್ರಹಿಸಲಾಗಿತ್ತು.

PC: PARI

ಪಂಜಾಬ್‌ನಲ್ಲಿ ಕಳೆದ ಸೆಪ್ಟಂಬರ್‌ನಲ್ಲಿಯೇ ಈ ಆಂದೋಲನ ಆರಂಭವಾಗಿತ್ತು. ದೆಹಲಿಯ ರೈತ ಹೋರಾಟಕ್ಕೆ 5 ತಿಂಗಳಾದರೇ, ಪಂಜಾಬಿನ ಹೋರಾಟಕ್ಕೆ ಸರಿ ಸುಮಾರು 8 ತಿಂಗಳುಗಳು ಕಳೆಯುತ್ತಿವೆ. ಇವರ ಹುರುಪು ಮಾತ್ರ ಇನ್ನು ಹೆಚ್ಚಾಗಿದೆ. ದೆಹಲಿಗೆ ಹೋಗಿರುವ ರೈತರ ಮನೆ, ಹೊಲದ ಕೆಲಸಗಳನ್ನೂ ನೋಡಿಕೊಂಡು, ಪಂಜಾಬಿನ ಪ್ರತಿ ಜಿಲ್ಲೆಯ ಮುಖ್ಯ ಘಟಕಗಳಲ್ಲಿ ಪ್ರತಿಭಟನೆ ನಡಸುತ್ತಿರುವ ಈ ರೈತರ ಆತ್ಮಸ್ಥೈರ್ಯ ನಿಜಕ್ಕೂ ಮಾದರಿ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ, ಪಂಜಾಬಿನ ಬರ್ನಾಲಾ ಜಿಲ್ಲೆಯ ರಾಮ್‌ಪುರ್‌ ಪುಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹರ್ಮೇಶ್ ಕುಮಾರ್‌, ಇದು ನಮ್ಮ ಬದುಕಿನ ಪ್ರಶ್ನೆ. ಎಷ್ಟು ವರ್ಷಗಳಾದರೂ ಸರಿ ನಾವು ಪ್ರತಿಭಟನೆ ನಡೆಸುತ್ತೇವೆ ಎನ್ನುತ್ತಾರೆ.

“ಇಷ್ಟು ದಿನಗಳಾದರೂ ರಾಮ್‌ಪುರ್‌ ಪುಲ್‌ನ ರೈಲು ನಿಲ್ದಾಣ, ಮೆಹಲ್ಕಲಾ ಟೋಲ್, ಬರ್ನಾಲಾ ರೈಲು ನಿಲ್ದಾಣ, ರಿಲಯನ್ಸ್ ಮಾಲ್, ಪೆಟ್ರೋಲ್‌ ಬಂಕ್‌ಗಳ ಬಳಿ ಪ್ರತಿಭಟನೆ ನಿಂತಿಲ್ಲ. ದೆಹಲಿಯ ಹೋರಾಟದಂತೆಯೇ ಇಲ್ಲಿನ ಹೋರಾಟದಲ್ಲೂ ಯಾವುದೇ ಉತ್ಸಾಹ ಕಡಿಮೆಯಾಗಿಲ್ಲ” ಎನ್ನುತ್ತಾರೆ ಹರ್ಮೇಶ್ ಕುಮಾರ್‌.

The protesters had been building shelters using bamboo, tin, plywood and even bricks at the Tikri and Singhu borders over the last two weeks to beat the summer heat and rain.
PC: Hindustantimes

ತೀವ್ರ ಚಳಿ ಎದುರಿಸಿ, ಈಗ ತೀವ್ರ ಬಿಸಿಲಿನ ತಾಪಕ್ಕೆ ಇಲ್ಲಿನ ರೈತರು ಒಳಗಾಗಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಇಲ್ಲಿ ಯಾವುದೇ ಆತಂಕಕಾರಿ ಅಂಶಗಳು ವರದಿಯಾಗದಿರುವುದು ಸಮಾಧಾನದ ಸಂಗತಿಯಾಗಿದೆ.

ಕೊರೊನಾ ಮಾರ್ಗಸೂಚಿಯನ್ನು ಅನುಸರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಈಗಾಗಲೇ ಹೇಳಿದ್ದಾರೆ. ಕೊರೊನಾಕ್ಕಿಂತ ದೊಡ್ಡ ರೋಗ ಬಂದರೂ ನಾವು ಇಲ್ಲಿಂದ ಕದಲುವುದಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಮಾತುಗಳನ್ನು ಆಡಿದ್ದಾರೆ.

Image
ಗಾಜಿಪುರ್‌ ಗಡಿಯಲ್ಲಿ ಸ್ಯಾನಿಟೈಝರ್‌ ಸಿಂಪಡಿಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್

150 ದಿನಗಳಾಯಿತು ಪ್ರತಿಭಟನೆಗೆ ಹೇಗನ್ನಿಸುತ್ತಿದೆ ಎಂದು ಶಹಜಾನ್‌ಪುರ್‌ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರಾಜಸ್ಥಾನದ ರೈತ ರೇಖಾರಾಮ್‌ಗೆ ಪ್ರಶ್ನೆ ಮಾಡಿದ ನಾನುಗೌರಿ.ಕಾಂಗೆ ಅವರು ಕೊಟ್ಟ ಉತ್ತರ ಇದು.

“ನಾವು 150 ದಿನ ಅಲ್ಲ ಎಷ್ಟು ದಿನಗಳಾದರೂ ಇಲ್ಲಿಯೇ ಇರುತ್ತೇವೆ. ಜೀವನವೇ ನಾಶವಾಗುವಾಗ ಊರಿಗೆ ವಾಪಸ್ ಹೋಗಿ ಮಾಡುವುದಾದರೂ ಏನು…? ಗೋಧಿ ಕೊಯ್ಲಿಗಾಗಿ ಕೆಲವು ಮಂದಿ ಊರುಗಳಿಗೆ ಹೋಗಿದ್ದಾರೆ. ಪಾಳಿಯ ಮಾದರಿಯಲ್ಲಿ ಹೋರಾಟ ನಡೆಯುತ್ತಿದೆ. ಎಷ್ಟು ದಿನಗಳಾದರೂ ಇದು ಹೀಗೆಯೇ ಮುಂದುವರೆಯುತ್ತದೆ. ಈ ರಸ್ತೆಗಳೇ ನಮಗೆ ಮನೆಗಳಾಗಿವೆ. ಒಗ್ಗಟ್ಟಾಗಿ ನಿಂತಿದ್ದೇವೆ. ಗೆಲುವು ಪಡೆದೆ ಪಡೆಯುತ್ತೇವೆ” ಎನ್ನುತ್ತಾರೆ ರೈತ ರೇಖಾರಾಮ್.

ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾದ ಡಾ. ದರ್ಶನ್ ಪಾಲ್, ‘ಐದು ತಿಂಗಳ ಕಾಲ ಶಾಂತಿಯುತವಾಗಿ ಪ್ರತಿಭಟಿಸುವ ಮೂಲಕ ರೈತರು ನೈತಿಕವಾಗಿ ಯುದ್ಧವನ್ನು ಗೆದ್ದಿದ್ದಾರೆ. ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಕನಿಷ್ಠ ಬೆಂಬಲ ಬೆಲೆಯನ್ನು ಕಾಯ್ದೆ ಮಾಡಿದ ಮಾಡಿದ ನಂತರ ನಮ್ಮ ಗೆಲುವು ಪೂರ್ಣಗೊಳ್ಳುತ್ತದೆ’ ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟು ದೀರ್ಘಕಾಲದವರೆಗೆ ಇಷ್ಟು ಒಗ್ಗಟ್ಟಿನಿಂದ ನಡೆಯುತ್ತಿರುವುದು ಇದೇ ಮೊದಲು. ಚಳಿಗಾಲದಲ್ಲಿ ಟ್ಯ್ರಾಲಿಗಳನ್ನು ಆಶ್ರಯಿಸಿದ್ದ ರೈತರು, ಈಗ ಬಿದಿರಿನ, ಹುಲ್ಲಿನ ಗುಡಿಸಲುಗಳನ್ನು ಆಶ್ರಯಿಸಿದ್ದಾರೆ. ಮೇ  10 ರ ಒಳಗೆ ಎಲ್ಲಾ ಗೋಧಿ ಕೊಯ್ಲಿನ ಕೆಲಸ ಮುಗಿಯುತ್ತದೆ. ಪ್ರತಿಭಟನೆಗೆ ಮತ್ತಷ್ಟು ಬಿರುಸು ಬರುತ್ತದೆ ಎನ್ನುತ್ತಾರೆ ಪ್ರತಿಭಟನಾ ನಿರತ ರೈತರು.


ಇದನ್ನೂ ಓದಿ: ಆಮ್ಲಜನಕದ ವಾಹನಗಳ ಸಂಚಾರಕ್ಕೆ ಬ್ಯಾರಿಕೇಡ್ ಹಾಕಿ ಅಡ್ಡಿ ಪಡಿಸಿರುವುದು ಸರ್ಕಾರ, ರೈತರಲ್ಲ- ರೈತ ಸಂಘಟನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here