ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಪಾಲಿಗೆ ದೇವರಂತೆ ಬಂದು ಸಹಾಯ ಮಾಡಿ ಶ್ಲಾಘನೆಗೊಳಗಾದವರು ಬಾಲಿವುಡ್ ನಟ ಸೋನು ಸೂದ್. ಅವರು ‘ಈಗ ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೋ ಮೂಲಕ ಮನವಿ ಮಾಡಿರುವ ಅವರು, “ಕೋವಿಡ್ ಎರಡನೇ ಅಲೆಯಿಂದಾಗಿ ಬಹುತೇಕ ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಕೆಲವು ಮಕ್ಕಳಂತೂ ತಮ್ಮ ಪೋಷಕರನ್ನು, ತಂದೆ-ತಾಯಿಗಳನ್ನು ಕಳೆದುಕೊಂಡಿದ್ದಾರೆ. ಹಾಗಾದರೆ ಅವರ ಮುಂದಿನ ಶಿಕ್ಷಣದ ಕಥೆ ಏನು? ವಿಶೇಷವಾಗಿ 8-10-12 ವರ್ಷದ ಮಕ್ಕಳ ತಂದೆ ತಾಯಿಗಳು ನಿಧನರಾಗಿದ್ದರೆ ಅವರ ಭವಿಷ್ಯ ಏನಾಗುತ್ತದೆ? ಹಾಗಾಗಿ ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ನಿಯಮ ರೂಪಿಸಬೇಕೆಂದು” ಅವರು ಒತ್ತಾಯಿಸಿದ್ದಾರೆ.
ಆ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರಲಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿರಲಿ. ಅವರು ಎಲ್ಲಿವರೆಗೂ ಓದಲು ಬಯಸುತ್ತಾರೋ (ಪದವಿ, ಇಂಜಿನಿಯರಿಂಗ್, ಮೆಡಿಕಲ್) ಅಲ್ಲಿಯವರೆಗೂ ಅವರಿಗೆ ಉಚಿತ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಅದಕ್ಕಾಗಿ ವಿಶೇಷ ನಿಯಮ ರೂಪಿಸಬೇಕು. ಸಾರ್ವಜನಿಕರು ಇದರಲ್ಲಿ ನೆರವಾಗಬಹುದು ಎಂದು ಅವರು ಸಲಹೆ ನೀಡಿದ್ದು ತಮ್ಮ ವಿಡಿಯೋವನ್ನು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.
पूरे देश को मिल के इस मुहिम में जुड़ना है। @EduMinOfIndia pic.twitter.com/ei9QJYtDcF
— sonu sood (@SonuSood) April 29, 2021
ಅಲ್ಲದೇ ನೂರಾರು ಕುಟುಂಬಗಳಲ್ಲಿ ಮನೆಯ ಆಧಾರಸ್ಥಂಭವಾಗಿದ್ದ ವ್ಯಕ್ತಿಗಳೇ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಮನೆಯ ಏಕೈಕ ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳು ಹೇಗೆ ಬದುಕಬೇಕು? ಹಾಗಾಗಿ ಇಂತಹ ಕುಟುಂಬಗಳಿಗೆ ಸಾಮಾಜಿಕ ಸಂಘಟನೆಗಳು, ವ್ಯಕ್ತಿಗಳು ಸಹಾಯ ಮಾಡಬೇಕು. ಸರ್ಕಾರವು ಇತ್ತ ಗಮನ ಹರಿಸಬೇಕು ಎಂದು ಸೋನು ಸೂದ್ ಮನವಿ ಮಾಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅಕ್ಷರಶಃ ಲಕ್ಷಾಂತರ ಜನರಿಗೆ ಸೋನು ಸೂದ್ ತಮ್ಮ ಫೌಂಡೇಶನ್ ವತಿಯಿಂದ ಸಹಾಯ ಮಾಡಿದ್ದಾರೆ. ಈ ಬಾರಿಯೂ ಆಕ್ಸಿಜನ್, ಔಷಧಿ, ಬೆಡ್‌ಗಾಗಿ ಪ್ರಯತ್ನಿಸಿ ಸಹಾಯ ಮಾಡಿದ್ದಾರೆ. ಅಂತವರು ಸರ್ಕಾರಕ್ಕೆ ಮೊದಲ ಬಾರಿ ಸಾಮಾಜಿಕ ಕಾಳಜಿಯ ಕುರಿತು ಒತ್ತಾಯ ಮಾಡಿದ್ದಾರೆ. ಇದನ್ನು ಸರ್ಕಾರ ನೆರವೇರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ರೈತರು ನಡುಕ ಹುಟ್ಟಿಸುವ ಚಳಿಯಲ್ಲಿ ಕುಳಿತಿದ್ದಾರೆ; ಇನ್ನೆಷ್ಟು ದಿನ ಇದನ್ನು ನೋಡುತ್ತಿರಬೇಕು: ಸೋನು ಸೂದ್


