ಕೊರೊನಾ ಸಮಯದಲ್ಲಿ ರಾಜಕೀಯ ರ್‍ಯಾಲಿಗಳನ್ನು ನಿಲ್ಲಿಸದ ಕಾರಣ ಚುನಾವಣಾ ಆಯೋಗದ ಮೇಲೆ “ಕೊಲೆ ಆರೋಪದ ಪ್ರಕರಣದ ದಾಖಲಿಸಬೇಕು” ಎಂದು ನ್ಯಾಯಾಲಯವು ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿತ್ತು. ನ್ಯಾಯಾಲಯವು ನೀಡಿದ್ದ ಈ ಮೌಖಿಕ ಹೇಳಿಕಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುವುದನ್ನು ತಡೆಯುವಂತೆ ಚುನಾವಣಾ ಆಯೋಗವು ಮದ್ರಾಸ್ ಹೈಕೋರ್ಟ್‌ಗೆ ವಿನಂತಿಸಿದೆ.
ಮದ್ರಾಸ್ ಹೈಕೋರ್ಟ್‌ನ ನೀಡಿದ್ದ ಮೌಖಿಕ ಹೇಳಿಕೆಗಳನ್ನು, ಮಾಧ್ಯಮಗಳು “ಪ್ರಸ್ತುತ ದೇಶದಲ್ಲಿರುವ ಪರಿಸ್ಥಿತಿಗೆ ಚುನಾವಣ ಆಯೋಗವೆ ಏಕೈಕ ಕಾರಣ. ಚುನಾವಣಾ ಆಯೋಗವು ಕೊಲೆ ಆರೋಪಗಳನ್ನು ಎದುರಿಸಬೇಕಾಗುತ್ತದೆ” ಎಂದು ವರದಿ ಮಾಡುತ್ತಿದೆ ಎಂದು ಚುನಾವಣಾ ಆಯೋಗ ತನ್ನ ಅರ್ಜಿಯಲ್ಲಿ ಹೇಳಿದೆ.
ಇದನ್ನೂ ಓದಿ: ದೆಹಲಿಯಾದ್ಯಂತ ಬೆಂಕಿಯೇ ಕಾಣುವಾಗ ಇಲ್ಲಿನ ಬಿಜೆಪಿ ಎಲ್ಲಿ?: ಆರ್‌ಎಸ್‌ಎಸ್ ಮುಖಂಡರೊಬ್ಬರ ಆಕ್ರೋಶ
“ಈ ವರದಿಗಳು ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಭಾರತದ ಚುನಾವಣಾ ಆಯೋಗದ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಚಿತ್ರಣವನ್ನು ಕಳಂಕಿತಗೊಳಿಸಿವೆ” ಎಂದು ಆಯೋಗವು ತಿಳಿಸಿದೆ.
ಮೌಖಿಕ ಹೇಳಿಕೆಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಕೊಲೆ ಆರೋಪ ಹೊರಿಸಿ ಉಪ ಚುನಾವಣಾ ಆಯುಕ್ತರ ವಿರುದ್ಧ ಪೊಲೀಸ್ ದೂರು ಕೂಡಾ ದಾಖಲಿಸಲಾಗಿದೆ ಎಂದು ಆಯೋಗವು ಅರ್ಜಿಯಲ್ಲಿ ಹೇಳಿದೆ.
ಸೋಮವಾರದಂದು, ವಿಚಾರಣೆಯ ಸಮಯದಲ್ಲಿ, ಮದ್ರಾಸ್ ಹೈಕೋರ್ಟ್, “ಚುನಾವಣಾ ಆಯೋಗವೆ ಕೊರೊನಾ ಎರಡನೇ ಅಲೆಗೆ ಏಕೈಕ ಕಾರಣ. ನಿಮ್ಮ ಅಧಿಕಾರಿಗಳ ಮೇಲೆ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕು… ಚುನಾವಣಾ ರ್‍ಯಾಲಿಗಳು ನಡೆಯುತ್ತಿದ್ದಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ?” ಎಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ: ಇತಿಹಾಸ: 60 ಲಕ್ಷ ಜನರ ಹತ್ಯಾಕಾಂಡದ ರೂವಾರಿ ‘ಅಡಾಲ್ಫ್ ಹಿಟ್ಲರ್’ ಆತ್ಮಹತ್ಯೆ ಮಾಡಿಕೊಂಡ ದಿನ!


