ಕೋವಿಡ್ ಎರಡನೇ ಅಲೆಯ ತೀವ್ರ ರೀತಿಯಲ್ಲಿ ಅಪ್ಪಳಿಸಿರುವುದರಿಂದ ಕಳೆದ 15 ದಿನಗಳಿಂದ ನಾವೆಲ್ಲರೂ ಹೆಚ್ಚು ಕೇಳಿದ ಮಾತುಗಳೆಂದರೆ ’ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ’ಆಕ್ಸಿಜನ್ ಕೊರತೆ’, ’ಕೋವಿಡ್‌ನಿಂದಾಗಿ ಸಾವು’, ಇವುಗಳೇ. ಈ ದಿನಗಳಲ್ಲಿ ದೇಶದಾದ್ಯಂತ ಸಹಸ್ರಾರು ಕೋವಿಡ್ ಸೋಂಕಿತರು ಸಾವನಪ್ಪಲು ಆಮ್ಲಜನಕದ ಕೊರತೆ, ಬೆಡ್ ಇಲ್ಲದಿರುವುದು ಪ್ರಮುಖ ಕಾರಣವಾಗಿದ್ದು ಇದು ನಮ್ಮ ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಇಂದಿಗೂ ಹಲವು ಆಸ್ಪತ್ರೆಗಳು ಆಮ್ಲಜನಕಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳನ್ನ ನೋಡುತ್ತಿದ್ದೇವೆ. ಇದಕ್ಕೆ ಕಾರಣವೇನು? ನಾವು ಎಡವಿದ್ದಾದರೂ ಎಲ್ಲಿ? ಪರಿಹಾರಗಳೇನು?
2020ರ ಮಾರ್ಚ್ 14ರಂದು ಭಾರತ ಸರ್ಕಾರವು ಕೋವಿಡ್ ಸಾಂಕ್ರಾಮಿಕವನ್ನು “ವಿಪತ್ತು” ಎಂದು ಘೋಷಿಸಿತು. ಅದಾದ ಹತ್ತು ದಿನದ ನಂತರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿತು. ಅದು ಸಮರ್ಪಕವಾಗಿ ಯೋಜಿಸದ, ಪೂರ್ವಸಿದ್ದತೆಯಿಲ್ಲದ ಲಾಕ್‌ಡೌನ್ ಎಂಬ ಟೀಕೆಗೆ ಗುರಿಯಾಯಿತು. ಸರ್ಕಾರ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಲಾಕ್‌ಡೌನ್ ದಿನಗಳು ಅತ್ಯಗತ್ಯ ಎಂದು ವಾದಿಸಿತು. ಸಾಂಕ್ರಾಮಿಕದ ಆರಂಭದ ದಿನಗಳಲ್ಲಿಯೇ ಆಮ್ಲಜನಕವು ಕೋವಿಡ್ ವಿರುದ್ಧದ ಹೋರಾಟದಲ್ಲಿ ಅತಿ ಮುಖ್ಯವಾದದ್ದು ಎಂದು ಸ್ಪಷ್ಟವಾಗಿತ್ತು. ಏಕೆಂದರೆ, ಅಷ್ಟು ಹೊತ್ತಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಇಟಲಿಯಲ್ಲಿ ಆಕ್ಸಿಜನ್ ಬೆಡ್ ಇರದಿದ್ದುದೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿತ್ತು. ಆದರೂ ಆಮ್ಲಜನಕ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಬಿಡ್ ಕರೆಯಲು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬರೋಬ್ಬರಿ ೮ ತಿಂಗಳುಗಳನ್ನು ತೆಗೆದುಕೊಂಡರು ಎಂದರೆ ನೀವು ನಂಬಲೇಬೇಕು.
ಭಾರತದಲ್ಲಿ ಆಮ್ಲಜನಕದ ಸ್ಥಿತಿ-ಗತಿ
ಭಾರತವು ಪ್ರತಿದಿನ 7127ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಶೇ. 54 ರಷ್ಟು ಅಂದರೆ 3842 ಮೆಟ್ರಿಕ್ ಟನ್ ಮಾತ್ರ ವೈದ್ಯಕೀಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು ಉಳಿದದ್ದನ್ನು ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ಅಲ್ಲದೇ 50,000 ಮೆಟ್ರಿಕ್ ಟನ್ ತುರ್ತು ಸ್ಟಾಕ್ ಹೊಂದಿದ್ದೇವೆ ಎಂದು ಆರೋಗ್ಯ ಸಚಿವಾಲಯ ಏಪ್ರಿಲ್ 15 ರಂದು ಹೇಳಿತ್ತು. ಆ ನಂತರದ ವಾರದಲ್ಲಿ ದೆಹಲಿಯ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆಯ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಏಪ್ರಿಲ್ 20ರಂದು ದೆಹಲಿ ಹೈಕೋರ್ಟ್, “ಔಷಧಿ, ಆಕ್ಸಿಜನ್ ನಿಜವಾಗಿಯೂ ಅಗತ್ಯವಿರುವ ಕಡೆಗೆ ನೀಡದಿದ್ದಲ್ಲಿ ಅವರ ಕೈಗೆ ರಕ್ತ ಮೆತ್ತುಕೊಂಡಿದೆ ಎಂದರ್ಥ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಏಪ್ರಿಲ್ 22ರಿಂದ ನೀವು ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಇಲ್ಲಿ ಜನ ಸಾಯುತ್ತಿದ್ದಾರೆ. ಅಲ್ಲಿಯವರೆಗೂ ಜನರು ಕಾಯಬೇಕೆ, ಈಗಲೇ ಸರಬರಾಜು ನಿಲ್ಲಿಸಿ, ಅದನ್ನು ಆಸ್ಪತ್ರೆಗಳಿಗೆ ತಿರುಗಿಸಿ ಎಂದು ಸೂಚಿಸಿತ್ತು.

ಆಗ ಭಾರತಕ್ಕೆ ದಿನವೊಂದಕ್ಕೆ ವೈದ್ಯಕೀಯ ಬಳಕೆಗಾಗಿ 8,000 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ನಂತರದ ವಾರದಲ್ಲಿ ಪ್ರತಿದಿನ 3.5 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿರುವುದರಿಂದ ದಿನಕ್ಕೆ ಕನಿಷ್ಟ10,000 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ದಿನಕ್ಕೆ 7127 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿರುವುದರಿಂದ ಬೇಡಿಕೆ ಮಾತ್ರ ಅದಕ್ಕಿಂತಲೂ ಹೆಚ್ಚಿದೆ. ಮೋದಿ ಸರ್ಕಾರ 50,000 ಟನ್ ಆಕ್ಸಿಜನ್ ಆಮದಿಗೆ ಮುಂದಾಗಿದೆ. ಆದರೆ ಅದು ಯಾವಾಗ ಬಂದು ತಲುಪಲಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ನಡುವೆ ಕೆಲ ಕಂಪನಿಗಳು ಆಕ್ಸಿಜನ್ ದಾನ ಮಾಡಲು ಮುಂದಾಗಿವೆ. ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಆಕ್ಸಿಜನ್‌ಗಾಗಿ ಪರದಾಟ ಉಂಟಾಗಲು ಕಾರಣವೇನು?
ಭಾರತದ ಆಕ್ಸಿಜನ್ ಸಮಸ್ಯೆಯಿರುವುದು ಬೇಡಿಕೆ-ಪೂರೈಕೆ ನಡುವಿನ ವ್ಯತ್ಯಾಸದಲ್ಲಿ ಮಾತ್ರವಲ್ಲ ಬದಲಿಗೆ ಅದನ್ನು ದೇಶದ ಎಲ್ಲಾ ಆಸ್ಪತ್ರೆಗಳಿಗೂ ಸರಾಗವಾಗಿ ಸಾಗಿಸಲಾಗುತ್ತಿಲ್ಲ. ಏಕೆಂದರೆ ಆಮ್ಲಜನಕದ ಉತ್ಪಾದನೆಯು ದೇಶಾದ್ಯಂತ ಅಸಮಾನವಾಗಿ ಹಂಚಿಕೆಯಾಗಿದೆ. 2020ರ ಏಪ್ರಿಲ್ ತಿಂಗಳ ಡೇಟಾದಂತೆ ಭಾರತದ ಒಟ್ಟು ಶೇ.80ರಷ್ಟು ಆಮ್ಲಜನಕವನ್ನು ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಒರಿಸ್ಸಾ, ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಈ ಎಂಟು ರಾಜ್ಯಗಳೇ ಉತ್ಪಾದಿಸುತ್ತವೆ. ಇಂದು ದೆಹಲಿ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಕೋವಿಡ್ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ದೊಡ್ಡ ಪ್ರಮಾಣದಲ್ಲಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ.
ದ್ರವರೂಪದ ಆಕ್ಸಿಜನ್‌ಅನ್ನು ಬೃಹತ್ ಕ್ರಯೊಜೆನಿಕ್ ಟ್ಯಾಂಕರ್‌ಗಳು, ಕಂಟೇನರ್‌ಗಳ ಮೂಲಕ ಮತ್ತು ಅನಿಲವನ್ನು ಕಂಪ್ರೆಸ್ಡ್ ಸಿಲಿಂಡರ್‌ಗಳ ಮೂಲಕ ಸಾಗಿಸಬೇಕಾಗಿದೆ. ಆದರೆ ನಮ್ಮ ದೇಶದಲ್ಲಿ ಸದ್ಯಕ್ಕೆ ಎಲ್ಲಾ ಆಸ್ಪತ್ರೆಗಳಿಗೂ ಆಮ್ಲಜನಕ ಸಾಗಿಸುವಷ್ಟು ಕಂಟೇನರ್‌ಗಳಾಗಲಿ, ಸಿಲಿಂಡರ್‌ಗಳಾಗಲಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ರಾತ್ರೋರಾತ್ರಿ ಟ್ಯಾಂಕರ್‌ಗಳನ್ನು, ಕಂಟೇನರ್‌ಗಳನ್ನು ತಯಾರಿಸಲು ಸಾಧ್ಯವಿಲ್ಲ, ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ಸಿದ್ಧಮಾಡಿಕೊಳ್ಳಬೇಕಿತ್ತು.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಂಟೇನರ್‌ಗಳಲ್ಲಿ ಆಕ್ಸಿಜನ್ ಸಾಗಿಸಿದರೂ ಕೂಡ ಆ ಆಸ್ಪತ್ರೆಗಳಲ್ಲಿ ಕ್ರಯೊಜೆನಿಕ್ ವೆಸೆಲ್‌ಗಳು ಅಥವಾ ಸಾಕಷ್ಟು ಸಂಖ್ಯೆಯ ಸಿಲಿಂಡರ್‌ಗಳು ಬೇಕಾಗುತ್ತವೆ. ನಮ್ಮ ದೇಶದ ಬಹುತೇಕ ಸಣ್ಣ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ಪ್ರತಿದಿನ 10,000 ಸಿಲಿಂಡರ್‌ಗಳನ್ನು ತಯಾರಿಸಿಕೊಡಿ ಎಂದು ಸರ್ಕಾರ ಕೇಳುತ್ತಿದೆ. ಆದರೆ ನಮಗೆ ದಿನಕ್ಕೆ 2,000 ಸಿಲಿಂಡರ್‌ಗಳನ್ನು ಮಾತ್ರ ತಯಾರಿಸಲು ಸಾಧ್ಯ ಎಂದು ದೇಶದ ಅತಿದೊಡ್ಡ ತಯಾರಕರಾದ ಎವರೆಸ್ಟ್ ಕ್ಯಾಂಟೋ ಸಿಲಿಂಡರ್‌ನ ವ್ಯವಸ್ಥಾಪಕ ಪುನೀತ್ ಖುರಾನ ಹೇಳಿರುವುದು ವರದಿಯಾಗಿದೆ. “ಸಿಲಿಂಡರ್‌ಗಳನ್ನು ಬೇಡಿಕೆಯ ಮುನ್ಸೂಚನೆ ಪ್ರಕಾರ ತಯಾರಿಸಲಾಗುತ್ತದೆ, ಆದರೆ ಫೆಬ್ರವರಿ-ಮಾರ್ಚ್‌ನಲ್ಲಿ ನಾವು ಉತ್ಪಾದನೆಯನ್ನು ನಿಧಾನಗೊಳಿಸಿದ್ದೇವೆ ಏಕೆಂದರೆ ಅಂದು ಕೋವಿಡ್ ಮುಗಿದಿದೆ ಮತ್ತು ಯಾವುದೇ ಅಗತ್ಯವಿಲ್ಲ ಎನಿಸಿತ್ತು. ಈಗ ಏಕಾಏಕಿ ತಯಾರಿಸಲು ಕಚ್ಛಾ ಸಾಮಗ್ರಿಗಳ ಅವಶ್ಯಕತೆಯಿದೆ” ಎಂದು ಯುರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರವೀಣ್ ನಂದು ಹೇಳಿದ್ದಾರೆ.
ದ್ರವರೂಪದ ಆಮ್ಲಜನಕವನ್ನು ಸಂಗ್ರಹಿಸಲು ಆಸ್ಪತ್ರೆಗಳು ಬಳಸುವ ಕ್ರಯೋಜೆನಿಕ್ ಟ್ಯಾಂಕ್ ಸಾಮರ್ಥ್ಯವು ಮತ್ತೊಂದು ಸಮಸ್ಯೆಯಾಗಿದೆ. ಕೊರೊನಾ ಬಂದು ವರ್ಷದ ಮೇಲಾದರೂ ದೇಶದ ಬಹಳಷ್ಟು ಆಸ್ಪತ್ರೆಗಳ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುದ ಕಾರಣದಿಂದಲೂ ಪರಿಸ್ಥಿತಿ ಬಿಗಡಾಯಿಸಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕರಿಸಿ ಮುಂದಾಲೋಚನೆಯಿಂದ ಈ ಆಸ್ಪತ್ರೆಗಳ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿಕೊಂಡಿದ್ದರೆ ಇಂದು ಹಲವಾರು ಸಾವುಗಳನ್ನು ತಪ್ಪಿಸಬಹುದಿತ್ತು ಎಂಬುದು ಸತ್ಯ. ಏಕೆಂದರೆ ಇತರ ದೇಶಗಳು ತಮ್ಮ ಅನುಭವದ ಆಧಾರದಲ್ಲಿ ಕೋವಿಡ್ ಎರಡನೇ ಅಲೆಯನ್ನು ಹೆಚ್ಚಿನ ಸಾವು ನೋವುಗಳಿಲ್ಲದೆ ಎದುರಿಸಿವೆ. ಆದರೆ ಮಾರ್ಚ್-ಏಪ್ರಿಲ್‌ನಲ್ಲಿ ಎರಡನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದರೂ ನಮ್ಮ ಸರ್ಕಾರಗಳು ಮಾತ್ರ ನಿದ್ರೆಯಿಂದ ಏಳದೇ ಇದ್ದುದ್ದಕ್ಕೆ ಈ ಕಷ್ಟ ಬಂದೊದಗಿದೆ.
ಆಕ್ಸಿಜನ್ ವಿಷಯದಲ್ಲಿ ನಮ್ಮ ಸರ್ಕಾರವೇನು ಮಾಡಿತು?
ಕೊರೊನಾ ಮೊದಲ ಅಲೆಯಿಂದ ಆಕ್ಸಿಜನ್ ಕೊರತೆಯುಂಟಾದಾಗ ದೇಶಾದ್ಯಂತ 162 ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಆಕ್ಸಿಜನ್ ಪ್ಲಾಂಟ್‌ಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ತೆರೆಯುವುದಾಗಿ ಮೋದಿ ಸರ್ಕಾರ ಘೋಷಿಸಿತು. ಅದಕ್ಕಾಗಿ ಪಿಎಂ ಕೇರ್ಸ್ ಹಣದಲ್ಲಿ 201.58 ಕೋಟಿ ರೂಗಳನ್ನು ನೀಡಿತು. ಆದರೆ ಅದರ ಟೆಂಡರ್ ಕರೆಯಲು ಮೋದಿ ಸರ್ಕಾರ 8 ತಿಂಗಳು ತಡ ಮಾಡಿತು. ಅದಾಗಿ ಆರು ತಿಂಗಳ ನಂತರ ದಿ ಸ್ಕ್ರೋಲ್ ವರದಿಗಾರರು ಈ ಬಗ್ಗೆ ಅಧ್ಯಯನ ನಡೆಸಿ ಕೇವಲ 13 ಆಕ್ಸಿಜನ್ ಪ್ಲಾಂಟ್‌ಗಳನ್ನು ಹಾಕಲಾಗಿದೆ, ಅದರಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಪ್ರಕಟಿಸಿತು. ಆಗ ಎಚ್ಚೆತ್ತುಕೊಂಡ ಆರೋಗ್ಯ ಸಚಿವಾಲಯ ಸರಣಿ ಟ್ವೀಟ್‌ಗಳನ್ನು ಮಾಡಿ “162 ಪಿಎಸ್‌ಎ ಆಕ್ಸಿಜನ್ ಸ್ಥಾವರಗಳಲ್ಲಿ 33 ಅನ್ನು ಸ್ಥಾಪಿಸಲಾಗಿದೆ. 2021ರ ಏಪ್ರಿಲ್ ಅಂತ್ಯದ ವೇಳೆಗೆ ಇನ್ನೂ 59 ಸ್ಥಾವರಗಳನ್ನು ಸ್ಥಾಪಿಸಲಾಗುವುದು ಮತ್ತು 2021ರ ಮೇ ಅಂತ್ಯದ ವೇಳೆಗೆ ೮೦ ಸ್ಥಾವರಗಳನ್ನು ಸ್ಥಾಪಿಸಲಾಗುವುದು” ಎಂದು ತಿಳಿಸಿದೆ. ಅಂದರೆ ವರ್ಷವಾದರೂ ಘೋಷಿಸಿರುವುದರಲ್ಲಿ ಅರ್ಧದಷ್ಟನ್ನು ಸ್ಥಾಪಿಸಿಲ್ಲ ಎಂದು ಅದು ಒಪ್ಪಿಕೊಂಡಿದೆ. ಇನ್ನು ಈಗ ಸ್ಥಾಪಿಸಿರುವ ಸ್ಥಾವರಗಳಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಅದು ಖಚಿತಪಡಿಸಿಲ್ಲ.
ಕೇವಲ 45 ದಿನಗಳಲ್ಲಿ ಸ್ಥಾಪಿಸಬಹುದಾದ ಈ ಆಕ್ಸಿಜನ್ ಪ್ಲಾಂಟ್‌ಗಳನ್ನು ವರ್ಷ ಕಳೆದರೂ ಏಕೆ ಸ್ಥಾಪಿಸಿಲ್ಲ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಿಲ್ಲ. ಬದಲಿಗೆ ದೇಶದಾದ್ಯಂತ 551 ಹೊಸ ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಆಕ್ಸಿಜನ್ ಪ್ಲಾಂಟ್‌ಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ತೆರೆಯುವುದಾಗಿ ಘೋಷಿಸಿದೆ. ಇದಕ್ಕೂ ಪಿಎಂ ಕೇರ್ಸ್‌ನಿಂದ ಹಣ ನೀಡಲಾಗುವುದು ಎಂದಿದೆ. ಇದೊಂಥರ ಮನೆ ಹೊತ್ತಿ ಉರಿಯುವಾಗ ಬಾವಿ ತೋಡಿದಂತೆ ಅನ್ನಬಹುದು. ಏಕೆಂದರೆ ಈ ಪ್ಲಾಂಟ್‌ಗಳು ಕಾರ್ಯಾಚರಿಸಲು ೪೫ ದಿನಗಳು ಬೇಕಿವೆ.
ದೆಹಲಿ ಸರ್ಕಾರ ವರ್ಸಸ್ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಹಣ ನೀಡಿದರೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ 8 ಆಕ್ಸಿಜನ್ ಪ್ಲಾಂಟ್‌ಗಳನ್ನು ನಿರ್ಮಿಸಿಲ್ಲ. ಹಣವನ್ನೆಲ್ಲಾ ನುಂಗಿ ನೀರು ಕುಡಿದಿದ್ದಾರೆ ಎಂದು ನಟಿ ಕಂಗನಾ ರಣಾವತ್, ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮಾ ಸೇರಿದಂತೆ ಹಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇವೆಲ್ಲಾ ಆರೋಪಗಳು ಸುಳ್ಳಾಗಿವೆ. ಏಕೆಂದರೆ ಕಳೆದ ವರ್ಷ ಮೋದಿ ಸರ್ಕಾರ ಉದ್ದೇಶಿಸಿದ್ದ 162 ಪಿಎಸ್‌ಎ ಆಕ್ಸಿಜನ್ ಸ್ಥಾವರಗಳಲ್ಲಿ 8 ಅನ್ನು ದೆಹಲಿಯಲ್ಲಿ ಸ್ಥಾಪಿಸಬೇಕಿತ್ತು. ಅದರ ಪೂರ್ಣ ಜವಾಬ್ದಾರಿ ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಆರೋಗ್ಯ ಸೇವೆಗಳ ಸೊಸೈಟಿಯದ್ದಾಗಿದೆ. ಬಿಡ್ ಕರೆದು ಕಂಪನಿಗಳನ್ನು ಗುರುತಿಸಿ ಹಣ ಪೂರೈಕೆ ಮಾಡುವುದು ಅದರ ಜವಾಬ್ದಾರಿ. ದೆಹಲಿ ಸೇರಿದಂತೆ ರಾಜ್ಯಗಳು ಕೇವಲ ಆಸ್ಪತ್ರೆಗಳಲ್ಲಿ ವಿದ್ಯುತ್ ಮತ್ತು ಸಿವಿಲ್ ಸೌಲಭ್ಯಗಳನ್ನು ಒದಗಿಸುವುದಾಗಿದೆ. ಹಾಗಾಗಿ ದೆಹಲಿ ಸರ್ಕಾರಕ್ಕೆ ಪಿಎಂ ಕೇರ್ಸ್ ಹಣ ಹೋಗುವ ಸಾಧ್ಯತೆಯೇ ಇಲ್ಲ. ಇನ್ನು ಉತ್ತರ ಪ್ರದೇಶ ರಾಜ್ಯಕ್ಕೂ ೧೪ ಪ್ಲಾಂಟ್‌ಗಳನ್ನು ನೀಡಲಾಗಿದ್ದು ಅದರಲ್ಲಿ ಕೇವಲ 1 ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಕ್ರೋಲ್ ವರದಿಮಾಡಿದೆ.
ಹಾಗಾದರೆ ಆಕ್ಸಿಜನ್ ಸಮಸ್ಯೆಯಲ್ಲಿ ರಾಜ್ಯಗಳ ಪಾತ್ರವಿಲ್ಲವೇ ಎಂದರೆ ಖಂಡಿತ ಇದೆ. ಕೇಂದ್ರ ಸರ್ಕಾರ ಆಕ್ಸಿಜನ್ ಪ್ಲಾಂಟ್ ನಿರ್ಮಿಸುವಲ್ಲಿ ನಿರ್ಲಕ್ಷ್ಯ ತೋರಿದಾಗ ರಾಜ್ಯಗಳೇ ಮುಂದಾಗಿ ನೂರಾರು ಆಸ್ಪತ್ರೆಗಳಲ್ಲಿ ಪ್ಲಾಂಟ್‌ಗಳನ್ನು ನಿರ್ಮಿಸಬೇಕು. ಒಂದು ಪ್ಲಾಂಟ್‌ಗೆ ಸುಮಾರು 1.25ಕೋಟಿ ಖರ್ಚಾಗಲಿದ್ದು ಜನರ ಆರೋಗ್ಯದ ದೃಷ್ಟಿಯಿಂದ ಅದು ದೊಡ್ಡ ಮೊತ್ತವೇನಲ್ಲ. ಆದರೆ ಕೆಲ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ರಾಜ್ಯಗಳು ಈ ಪ್ಲಾಂಟ್‌ಗಳನ್ನು ನಿರ್ಮಿಸಿಲ್ಲ. ಆದರೆ ಕೇಂದ್ರ ಸರ್ಕಾರವು ಮಾಡಿದೆಯೆಂದು ಬಿಜೆಪಿ ಐಟಿ ಸೆಲ್‌ಗಳು ಹಂಚುತ್ತಿರುವ ಪೋಸ್ಟರ್‌ಗಳು ವಾಸ್ತವವನ್ನು ಹೇಳುತ್ತಿಲ್ಲ.
ಕರ್ನಾಟಕದ ಪರಿಸ್ಥಿತಿ
ಕರ್ನಾಟಕದ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ದೊಡ್ಡ ಮಟ್ಟದ ಆಕ್ಸಿಜನ್ ಉತ್ಪಾದನಾ ಘಟಕಗಳಿದ್ದು ಅಲ್ಲಿಂದ ಎಲ್ಲಾ ಜಿಲ್ಲೆಗಳಿಗೂ ವಿತರಣೆ ಆಗಬೇಕಿದೆ. ಇಲ್ಲಿಯೂ ಆಸ್ಪತ್ರೆಗಳಲ್ಲಿನ ಕಂಟೈನರ್ ಸಾಮರ್ಥ್ಯ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿವೆ.
ಕರ್ನಾಟಕವು ಪ್ರತಿ ದಿನ 800 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಮಾಡುತ್ತದೆ ಮತ್ತು ದಿನಕ್ಕೆ ಸುಮಾರು 300 ಮೆಟ್ರಿಕ್ ಟನ್ ಬಳಸುತ್ತಿದೆ ಎಂದು ಏಪ್ರಿಲ್ 20ರ ಸಮಯದಲ್ಲಿ ಹೇಳಲಾಗುತ್ತಿತ್ತು. ಯಾವಾಗ ಆಮ್ಲಜನಕದ ತುರ್ತು ಉಂಟಾಯಿತೋ ಆಗ ಕೇಂದ್ರ ಸರ್ಕಾರ ಆಮ್ಲಜನಕ ಉತ್ಪಾದನೆ ಮತ್ತು ವಿತರಣೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಅಂದಿನಿಂದ ಕರ್ನಾಟಕವು ತನ್ನ ಹೆಚ್ಚುವರಿ ಉತ್ಪಾದನೆಯನ್ನು ಕೇಂದ್ರ ಸರ್ಕಾರದ ಮೂಲಕ ಇತರ ರಾಜ್ಯಗಳಿಗೆ ನೀಡುತ್ತಿದೆ. ಆದರೆ ರಾಜ್ಯದಲ್ಲಿಯೂ ಈ ವಾರದಲ್ಲಿ ಕೋವಿಡ್ ಪ್ರಕರಣಗಲ್ಲಿ ಭಾರಿ ಏರಿಕೆಯಾಗಿದ್ದು ಬೇಡಿಕೆಯೂ ತೀವ್ರ ಹೆಚ್ಚಳಗೊಂಡಿದೆ. ಈಗ ಕರ್ನಾಟಕ ಕೇಂದ್ರ ಸರ್ಕಾರದ ಬಳಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ.
ಏಕೆಂದರ್ ಆಕ್ಸಿಜನ್ ಹಂಚಿಕೆಯಲ್ಲಿಯೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳು ಆರೋಪಿಸಿವೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸಾಪೇಕ್ಷವಾಗಿ ಪ್ರಕರಣಗಳು ಕಡಿಮೆಯಿದ್ದರೂ ಅಲ್ಲಿಗೆ ಹೆಚ್ಚು ಆಕ್ಸಿಜನ್ ಪೂರೈಕೆ ಮಾಡಿದ್ದು, ನಮಗೆ ಕಡಿಮೆ ನೀಡಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಆರೋಪಿಸಿದ್ದರು.
ಇನ್ನಾದರು ಸರ್ಕಾರಗಳು ಎಚ್ಚೆತ್ತುಕೊಂಡು ಪಾರದರ್ಶಕತೆಯಿಂದ ಕೆಲಸ ಮಾಡಿ ಆಕ್ಸಿಜನ್ ಕೊರತೆಯನ್ನು ನೀಗಿಸಿ ಜೀವಗಳನ್ನು ಉಳಿಸಬೇಕಾಗಿರುವ ತುರ್ತು ಈಗಿದೆ.


