ಆಮ್ಲಜನಕ ಕೊರತೆಯಿಂದ ಚಾಮರಾಜನಗರದಲ್ಲಿ 24 ಜನರು ಮೃತಪಟ್ಟಿದ್ದ ಸುದ್ದಿಗೆ ಸೋಮವಾರ ರಾಜ್ಯವೆ ಬೆಚ್ಚಿ ಬಿದ್ದಿತ್ತು. ಇದೀಗ ಮತ್ತೆ ಆಮ್ಲಜನಕ ಕೊರತೆಯಿಂದ 4 ಕೊರೊನಾ ಸೋಂಕಿತರು ತಡರಾತ್ರಿ ಮೃತಪಟ್ಟಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಸಂಭವಿಸಿದೆ.
ಚಾಮರಾಜ ನಗರದಲ್ಲಿ ನಿನ್ನೆಯಷ್ಟೇ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಕೂಡಾ ನಿನ್ನೆ ಐದು ಜನರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶನಿವಾರದಂದು ಕೂಡಾ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದೀಗ ಜಿಲ್ಲೆಯಲ್ಲಿ ಮತ್ತೆ ಪ್ರಾಣವಾಯು ಕೊರತೆಯಿಂದ ನಾಲ್ವರು ಅಸುನೀಗಿದ್ದಾರೆ.
ಕಳೆದ ಮೂರು ದಿನದಿಂದ ಒಟ್ಟು 12 ರೋಗಿಗಳು ಕಲಬುರ್ಗಿ ಜಿಲ್ಲೆಯೊಂದರಲ್ಲೇ ಆಮ್ಲಜನಕ ಕೊರತೆಯಿಂದಾಗಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್; ಕನಿಷ್ಠ ಸಂವೇದನೆ ಮರೆತ BJP
ಜಿಲ್ಲೆಯ ತಾಲೂಕು ಆಸ್ಪತ್ರೆಯಲ್ಲಿ ಒಟ್ಟು 30 ರೋಗಿಗಳು ದಾಖಲಾಗಿದ್ದು, ಸೋಮವಾರದಂದು ಆರು ಸಿಲಿಂಡರ್ ಮಾತ್ರ ಇದ್ದವು ಎನ್ನಲಾಗಿದೆ. ಅವುಗಳನ್ನು ಆರು ಮಂದಿಗೆ ನೀಡಲಾಗಿತ್ತಾದರೂ, ಸೋಮವಾರ ತಡರಾತ್ರಿ ಆರೂ ಸಿಲಿಂಡರ್‌ಗಳು ಖಾಲಿ ಆಗಿದ್ದು ನಾಲ್ವರು ಪ್ರಾಣ ಬಿಟ್ಟಿದ್ದಾರೆ.
“ಸಾಕಷ್ಟು ಆಮ್ಲಜನಕದ ಸಿಲಿಂಡರ್‌ಗಳು ಕೂಡಾ ಇಲ್ಲ. ಅಲ್ಲಿರುವ ಸಿಲಿಂಡರ್ ಖಾಲಿಯಾಗುತ್ತಿದ್ದಂತೆ ಕಲಬುರ್ಗಿಗೆ ಹೋಗಿ ತುಂಬಿಸಿಕೊಂಡು ಬರುತ್ತಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಗಂಭೀರತೆ ಇಲ್ಲ. ತಾಲೂಕು ಆಸ್ಪತ್ರೆಯಲ್ಲಿ ಫಿಜಿಷಿಯನ್‌ನ್ನೆ ಇಲ್ಲ. ಅಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವವರು ಯಾರು” ಎಂದು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ ದೂರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಆಮ್ಲಜನಕದ ಕೊರತೆಯಿಂದ ಈ ಸಾವು ಸಂಭವಿಸಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಆಸ್ಪತ್ರೆಯಲ್ಲಿ ನಾಲ್ಕು ಆಮ್ಲಜನಕ ಸಿಲಿಂಡರ್ ಇವೆ. ಸೋಂಕು ವಿಷಮಗೊಂಡಿದ್ದರಿಂದ ಸೋಮವಾರ ಮೂವರು ಮತ್ತು ಮಂಗಳವಾರ ಒಬ್ಬರು ಮೃತಪಟ್ಟಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಆಗಿದ್ದರೆ ಸರ್ಕಾರವೆ ಹೊಣೆ – ಸಿಟಿ ರವಿ


