ಕೊರೊನಾ ಎರಡನೇ ಅಲೆಗೆ ಇಡೀ ದೇಶವೇ ತತ್ತಿರಿಸಿಹೋಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್, ಔಷಧಗಳಿಗೆ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ಗುಜರಾತ್ನ ಹಳ್ಳಿಯೊಂದರಲ್ಲಿ ಗೋಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಹಾಲು ಗಂಜಲದ ಔಷಧಿ ನೀಡಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಗುಜರಾತ್ನ ಬನಸ್ಕಾಂತ ಜಿಲ್ಲೆಯ ದೀಸಾ ತಾಲೂಕಿನ ತೆಟೋಡಾ ಗ್ರಾಮದ ಗೋಶಾಲೆಯಲ್ಲಿ ‘ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್ ಐಷೋಲೇಶನ್ ಕೇಂದ್ರ’ ತೆರೆಯಲಾಗಿದ್ದು ಇದರಲ್ಲಿ ರೋಗಿಗಳಿಗೆ ಹಸುವಿನ ಶುದ್ಧ ಹಾಲು ಮತ್ತು ಗಂಜಲಗಳಿಂದ ತಯಾರಿಸಲಾದ ಔಷಧಗಳ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
“ರೋಗಲಕ್ಷಣಗಳ ತೀವ್ರತೆ ಕಡಿಮೆ ಇರುವ ಕೋವಿಡ್-19 ರೋಗಿಗಳಿಗೆ ಹಸುವಿನ ಹಾಲು, ತುಪ್ಪ ಮತ್ತು ಗಂಜಲದಿಂದ ತಯಾರಿಸಲಾದ ಎಂಟು ಆಯುರ್ವೇದ ಔಷಧಗಳನ್ನ ಇಲ್ಲಿ ನೀಡುತ್ತಿದ್ದೇವೆ. ದೇಸೀ ತಳಿಯ ಹಸುವಿನ ಗಂಜಲದಿಂದ ಮಾಡಿದ ಗೋ ತೀರ್ಥ ಇತ್ಯಾದಿ ಔಷಧಗಳನ್ನ ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ. ರೋಗ ನಿರೋಧಕ ಶಕ್ತಿಗಾಗಿ ಹಸು ಹಾಲಿನಿಂದ ಮಾಡಿದ ಚ್ಯವನಪ್ರಾಶವನ್ನ ರೋಗಿಗಳಿಗೆ ನೀಡಲಾಗುತ್ತದೆ” ಎಂದು ಗೋಧಾಮ್ ಮಹಾತೀರ್ಥ ಪಾಠಮೇದ ಎಂಬ ಗೋಶಾಲಾ ಘಟಕದ ಮೋಹನ್ ಜಾಧವ್ ಹೇಳಿದ್ದಾರೆ.
ಗುಜರಾತ್ ಸರ್ಕಾರ ಸ್ಥಳೀಯ ಗ್ರಾಮಗಳ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನ ಸ್ಥಾಪಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ತೆಟೋಡಾ ಗ್ರಾಮದಲ್ಲಿ ಈ ಐಸೋಲೇಶನ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಿದ್ದು, ಇಬ್ಬರು ಆಯುರ್ವೇದ ವೈದ್ಯರು ಮತ್ತು ಇಬ್ಬರು ಆಲೋಪಥಿ ವೈದ್ಯರು ಇಲ್ಲಿ ಇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಬನಸ್ಕಂತ ಜಿಲ್ಲಾಧಿಕಾರಿ ಆನಂದ್ ಪಟೇಲ್ ಮಾತನಾಡಿ “ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಯಾವುದೇ ಅನುಮತಿ ಅಗತ್ಯವಿಲ್ಲದಿದ್ದರೂ, ಅವರು ನಮಗೆ ಮಾಹಿತಿ ನೀಡಿದ್ದರು ಮತ್ತು ನಾವು ಅವರಿಗೆ ಅನುಮತಿ ನೀಡಿದ್ದೇವೆ. ತೆಟೋಡಾ ಗ್ರಾಮದಲ್ಲಿರುವ ಈ ಕೇಂದ್ರವು ಗೋಶಾಲೆಯಲ್ಲಿದೆ” ಎಂದಿದ್ದಾರೆ.
ಇದನ್ನೂ ಓದಿ: 10 ಲಕ್ಷ ಭಾರತೀಯರು ಈಗಾಗಲೇ ಕೋವಿಡ್‌ಗೆ ಬಲಿಯಾಗಿದ್ದಾರೆ, ಶೇ. 80ರಷ್ಟು ಸಾವು ದಾಖಲಾಗುತ್ತಿಲ್ಲ: ಗಣಿತ ತಜ್ಞ ಮುರಾದ್ ಬನಾಜಿ



Good job