ಕೊರೊನಾ ಎರಡನೇ ಅಲೆಯಿಂದಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅತಿ ದೊಡ್ಡ ಮಾನವೀಯ ಬಿಕ್ಕಟ್ಟು ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಸರ್ಕಾರಗಳು ಕೈಚೆಲ್ಲಿ ಕುಳಿತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದಿಕ್ಕುಕಾಣದವರಿಗೆ ಆಸರೆಯಾಗಿದ್ದು ಸಾಮಾಜಿಕ ಸಂಘಟನೆಗಳು ಮತ್ತು ಸ್ವತಂತ್ರ ವ್ಯಕ್ತಿಗಳು. ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸುವುದು, ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನ್ ವ್ಯವಸ್ಥೆ, ಕೋವಿಡ್ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಗತ್ಯವಿರುವ ಮೆಡಿಸಿನ್ ಸರಬರಾಜು, ಮೃತಪಟ್ಟವರ ಶವಸಂಸ್ಕಾರ, ವಲಸೆ ಕಾರ್ಮಿಕರು, ನಿರ್ಗತಿಕರು ಹಾಗೂ ಬಡವರಿಗೆ ಆಹಾರ ಒದಗಿಸುವುದು. ಹೀಗೆ ಕೋವಿಡ್‌ನಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ’ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಧೈರ್ಯತುಂಬಿ ನೆರವಿನಹಸ್ತ ನೀಡುತ್ತಿವೆ ಸಾಮಾಜಿಕ ಸಂಘಟನೆಗಳು.
ಘಟನೆ-1: ಏಪ್ರಿಲ್ 29, ರಾತ್ರಿ ಸುಮಾರು 7 ಗಂಟೆ. ಬೆಂಗಳೂರಿನ ರೈಲ್ವೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯ ಸಮಸ್ಯೆ ಉಂಟಾಗಿತ್ತು. ಆ ಆಸ್ಪತ್ರೆಯಲ್ಲಿ 15 ಮಂದಿ ತೀವ್ರ ನಿಗಾ ಘಟಕದಲ್ಲಿದ್ದವರು ಸೇರಿದಂತೆ ಒಟ್ಟು 50 ಮಂದಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಬಳಸುತ್ತಿದ್ದ ಆಕ್ಸಿಜನ್ ಸಿಲೆಂಡರ್‌ಗಳು ಇನ್ನು ಮೂರು ಗಂಟೆಯಲ್ಲಿ ಖಾಲಿಯಾಗುತ್ತಿದ್ದವು. ಬೇರೆ ಕಡೆಯಿಂದ ಬರಬೇಕಿದ್ದ 80 ಆಕ್ಸಿಜನ್ ಸಿಲಿಂಡರ್‌ಗಳು ಕಾರಣಾಂತರಗಳಿಂದ ತಲುಪಿರಲಿಲ್ಲ. ಇಡೀ ಆಸ್ಪತ್ರೆಯ ಜನ ಕಂಗಾಲಾಗಿದ್ದರು. ಇದೇ ಸಮಯದಲ್ಲಿ ಆ ಆಸ್ಪತ್ರೆಯಿಂದ ಸುಮಾರು 9 ಕಿ.ಮೀ ದೂರದಲ್ಲಿದ್ದ ಮೆಡಿಸ್ಕೋಪ್ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡುತ್ತಿದ್ದ ಮರ್ಸಿ ಮಿಷನ್‌ನ ಸ್ವಯಂಸೇವಕರಾದ ತನ್ವೀರ್ ಅಹ್ಮದ್ ಅವರು ರೈಲ್ವೆ ಆಸ್ಪತ್ರೆಯ ವಿಷಯ ತಿಳಿದು ಆ ಆಸ್ಪತ್ರೆಗೂ ಆಕ್ಸಿಜನ್ ಸರಬರಾಜು ಮಾಡಲು ಸಿದ್ಧರಾದರು. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗ್ಯಾಸ್ ಸಪ್ಲೇಯರ್ಸ್ ಜೊತೆಗೆ ಮಾತನಾಡಿ ಬೇರೆ ಬೇರೆ ಸ್ಥಳಗಳಿಂದ ಆಸ್ಪತ್ರೆಗೆ ಅಗತ್ಯವಿದ್ದ 80 ಸಿಲೆಂಡರ್ ಆಕ್ಸಿಜೆನ್ ಅನ್ನು ಅದೇ ದಿನ ರಾತ್ರಿ 8.30ರೊಳಗೆ ತಲುಪಿಸಿದರು.
ಘಟನೆ-2: ರೈಲ್ವೆ ಆಸ್ಪತ್ರೆ ಘಟನೆ ನಡೆದ ಒಂದು ವಾರದಲ್ಲಿ ಎಚ್‌ಬಿಎಸ್ ಆಸ್ಪತ್ರೆಯಲ್ಲಿಯೂ ಇಂತಹದ್ದೇ ಸಮಸ್ಯೆ ತಲೆದೋರಿತ್ತು. 25 ಜನ ತೀವ್ರ ನಿಗಾ ಘಟಕದಲ್ಲಿದ್ದವರೂ ಸೇರಿದಂತೆ ಒಟ್ಟು 55 ಮಂದಿ ಕೋವಿಡ್ ಸೋಂಕಿತರು ಆ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಈ ವಿಷಯ ತಿಳಿದ ಮರ್ಸಿ ಮಿಷನ್‌ನ ಸಯ್ಯದ್ ತೌಸಿಫ್ ಮಸೂದ್ ಅವರು ಆಕ್ಸಿಜನ್ ವಿತರಕರಿಗಾಗಿ ಹುಡುಕಾಟ ಆರಂಭಿಸಿ ಕೊನೆಗೆ ಹೊಸೂರಿನಲ್ಲಿರುವ ಘಟಕದಿಂದ ಆಕ್ಸಿಜನ್ ತರಿಸಿಕೊಳ್ಳಲು ಮುಂದಾದರು. ಶಿವಾಜಿನಗರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಹೊಸೂರಿನಿಂದ ಆಕ್ಸಿಜನ್ ತರಿಸಿಕೊಳ್ಳುವುದು ತಲೆನೋವಿನ ವಿಷಯವಾಯಿತು. ಕೊನೆಗೆ ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ‘ಗ್ರೀನ್ ಕಾರಿಡಾರ್’ (ಟ್ರಾಫಿಕ್ ಸಿಗ್ನಲ್‌ಗಳನ್ನು ಹಸಿರು ಬಣ್ಣದಲ್ಲಿಯೇ ಉಳಿಸುವ ಮೂಲಕ ಆಂಬ್ಯುಲೆನ್ಸ್ ಬೇಗ ತಲುಪಲು ಸಹಕಾರಿಯಾದಂತಹ ತಂತ್ರ) ಮೂಲಕ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡಿದರು.
ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ಮೂಡಿಸಿರುವ ಸಂಸ್ಥೆ ‘ಮರ್ಸಿ ಮಿಷನ್’
ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಜನರಿಗೆ ಸಹಾಯ ಮಾಡಲೆಂದು ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚು ಎನ್‌ಜಿಒಗಳು ಒಟ್ಟಾಗಿ ಸೇರಿ ರಚಿಸಿಕೊಂಡಂತಹ ವಿಶೇಷ ಸಂಸ್ಥೆಯೇ ‘ಮರ್ಸಿ ಮಿಷನ್’. ಕೋವಿಡ್ ಮೊದಲ ಅಲೆ ಇಷ್ಟೊಂದು ಭೀಕರತೆ ಸೃಷ್ಟಿಸಿರಲಿಲ್ಲವಾದರೂ ವಲಸೆ ಕಾರ್ಮಿಕರ ಬದುಕನ್ನು ಬೀದಿಗೆ ತಂದಿತ್ತು. ಬೇರೆ ಬೇರೆ ಕಡೆಗಳಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಜನರು ಕೆಲಸವಿಲ್ಲದೇ, ತಿನ್ನಲು ಆಹಾರವಿಲ್ಲದೇ ಹಳ್ಳಿಗಳಿಗೆ ವಾಪಸ್ ಹೊರಟು ನಿಂತವರಿಗೆ ಆಸರೆಯಾಗಿದ್ದು ಮರ್ಸಿ ಮಿಷನ್. ಈ ಸಂಸ್ಥೆ ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಸುಮಾರು 35 ಅಡುಗೆ ಮನೆಗಳನ್ನು ಸ್ಥಾಪಿಸಿ ವೈದ್ಯರು, ವಲಸೆ ಕಾರ್ಮಿಕರು, ಕೊಳಗೇರಿಗಳು ಹಾಗೂ ನಿರ್ಗತಿಕರಿಗೆ 12.3 ಲಕ್ಷದಷ್ಟು ಆಹಾರದ ಪೊಟ್ಟಣಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಈಗ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಮರ್ಸಿ ಮಿಷನ್ ಹಲವು ತಂಡಗಳನ್ನು ರಚಿಸಿದ್ದು ‘ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್’, ‘ಮರ್ಸಿ ಪ್ಲಾಸ್ಮಾ’, ‘ಮರ್ಸಿ ಟೆಲಿಮೆಡಿಸಿನ್’, ‘ಮರ್ಸಿ ಆಕ್ಸಿಜನ್’ ಹಾಗೂ ‘ಮರ್ಸಿ ಏಂಜಲ್’ ತಂಡಗಳು ವಿವಿಧ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿ ಮಾದರಿಯಾಗಿವೆ.
ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್
ಕೋವಿಡ್ ಎರಡನೇ ಅಲೆ ಆರಂಭವಾದ ನಂತರ ರಾಜ್ಯದಲ್ಲಿ ಆಸ್ಪತ್ರೆ ಬೆಡ್‌ಗಳು, ಆಮ್ಲಜನಕ ಹಾಗೂ ರೆಮಿಡಿಸಿವಿರ್ ಇಂಜಕ್ಷನ್ ಕೊರತೆಯ ಸಮಸ್ಯೆ ತಲೆದೋರಿದೆ. ಈ ಸಮಯದಲ್ಲಿ ‘ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್’ ಹೆಲ್ಪ್‌ಲೈನ್ ಮೂಲಕ ಅಗತ್ಯವಿರುವವರಿಗೆ ಬೆಡ್, ಆಮ್ಲಜನಕ ಹಾಗೂ ಮೆಡಿಸಿನ್ ಒದಗಿಸುವ ಕೆಲಸ ಮಾಡುತ್ತಿದೆ. ಈ ಕಾಲ್‌ಸೆಂಟರ್ ಬೆಂಗಳೂರಿನ ಬಸವನಗುಡಿಯಲ್ಲಿದ್ದು ಸುಮಾರು 16 ಜನ ಸ್ವಯಂಸೇವಕರು ಪ್ರತಿದಿನ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ಇದು ಕೋವಿಡ್ ಕಾಲ್ ಸೆಂಟರ್ ಕೂಡ ಆಗಿರುವ ಕಾರಣದಿಂದ ಯಾವ ಸಮಯದಲ್ಲಾದರೂ ಕರೆ ಬರಬಹುದು. ಹೀಗೆ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಕರೆಯೊಂದು ಬಂದಿತ್ತು ಎಂದ ಹೆಸರು ಹೇಳಲಿಚ್ಛಿಸದ ಸ್ವಯಂಸೇವಕರೊಬ್ಬರು ‘ಕರೆ ಮಾಡಿದ್ದ ಅಂದಾಜು 21 ವರ್ಷ ವಯಸ್ಸಿನ ವ್ಯಕ್ತಿ ಭಯದಿಂದ, ಒತ್ತಡಕ್ಕೊಳಗಾಗಿದ್ದರು. ತನ್ನ ತಾಯಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು. ಕರೆ ಸ್ವೀಕರಿಸಿದ್ದವರು, ಅವರನ್ನು ಸಮಾಧಾನಪಡಿಸಿ ಭಾವಾವೇಶಕ್ಕೆ ಒಳಗಾಗದೇ ಪ್ರಾಥಮಿಕವಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಲಾಯಿತು’ ಎಂಬುದನ್ನು ನೆನಪಿಸಿಕೊಂಡರು. ಇಂತಹ ಸಾವಿರಾರು ಕರೆಗಳನ್ನು ಪ್ರತಿದಿನ ಈ ತಂಡದವರು ಸ್ವೀಕರಿಸುತ್ತಿದ್ದಾರೆ.
ಉಚಿತ ಆರೋಗ್ಯ ಸಲಹೆ ನೀಡುವ ‘ಮರ್ಸಿ ಟೆಲಿಮೆಡಿಸಿನ್’
ಕೋವಿಡ್ ಗುಣಲಕ್ಷಣಗಳು ಕಂಡುಬಂದ ಕೂಡಲೇ ಏನು ಮಾಡಬೇಕು? ಆರೋಗ್ಯದ ರಕ್ಷಣೆ ಹೇಗಿರಬೇಕು ಎಂಬುದರ ಬಗ್ಗೆ ‘ಮರ್ಸಿ ಟೆಲಿಮೆಡಿಸಿನ್’ ತಂಡವು ಉಚಿತವಾಗಿ ಸಲಹೆ ನೀಡುತ್ತದೆ. ಕೋವಿಡ್ ಸೋಂಕಿತರಿಗೆ ಯಾವೆಲ್ಲಾ ಮಾತ್ರೆ ತೆಗೆದುಕೊಳ್ಳಬೇಕು, ಏನೆಲ್ಲಾ ಸೂಚನೆಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಹಾಗೆಯೇ ಬಡವರು ಮತ್ತು ಕಷ್ಟದಲ್ಲಿರುವವರಿಗೆ ಅಗತ್ಯವಿರುವ ಮೆಡಿಸಿನ್‌ಗಳನ್ನು ಉಚಿತವಾಗಿ ತಲುಪಿಸುತ್ತದೆ.
ಮರ್ಸಿ ಪ್ಲಾಸ್ಮಾ ಮತ್ತು ಮರ್ಸಿ ಆಕ್ಸಿಜನ್
ಕೋವಿಡ್‌ನಿಂದ ಗುಣಮುಖರಾದವರ ಪ್ಲಾಸ್ಮಾವನ್ನು ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವರಿಗೆ ಕೊನೆಯ ಹಂತದ ಚಿಕಿತ್ಸೆಯಾಗಿ ನೀಡಲಾಗುತ್ತಿದೆ. ಮರ್ಸಿ ಪ್ಲಾಸ್ಮಾ ತಂಡವು ಪ್ಲಾಸ್ಮಾವನ್ನು ಅಗತ್ಯವಿರುವವರಿಗೆ ತಲುಪಿಸುವುದರಲ್ಲಿ ತೊಡಗಿಸಿಕೊಂಡಿದೆ. ಮರ್ಸಿ ಮಿಷನ್ ಸಂಸ್ಥೆಯು ಸುಮಾರು 600 ಆಕ್ಸಿಜನ್ ಸಿಲಿಂಡರ್‌ಗಳನ್ನು ಹೊಂದಿದ್ದು, ‘ಮರ್ಸಿ ಆಕ್ಸಿಜನ್’ ತಂಡವು ಅಗತ್ಯವಿರುವವರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಬೆಂಗಳೂರಿನಲ್ಲಿ ಜಯನಗರ, ಭೂಪಸಂದ್ರ, ಚಂದ್ರ ಲೇಔಟ್, ಫ್ರೇಜರ್‌ಟೌನ್, ಎಂಜಿ ಪಾಳ್ಯ, ಮೈಸೂರು ರಸ್ತೆ ಮತ್ತು ಕೋರಮಂಗಲ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ ಆಕ್ಸಿಜನ್ ಸಿಲೆಂಡರ್‌ಗಳ ಸಂಗ್ರಹಗಾರಗಳಿವೆ.
ಜನರ ದುಃಖದಲ್ಲಿ ಭಾಗಿಯಾಗುತ್ತಿರುವ ‘ಮರ್ಸಿ ಏಂಜಲ್’
ಭಾರತದಲ್ಲಿ ಸತ್ತವರನ್ನು ಗೌರವಾದಾರಗಳ ಜೊತೆಗೆ ಮಣ್ಣುಮಾಡುವ ಸಂಪ್ರದಾಯವಿದೆ. ಆದರೆ ಕೋವಿಡ್‌ನಿಂದಾಗಿ ಸತ್ತವರನ್ನು ಜನರು ಮುಟ್ಟಲು ಹೆದರುವುದರಿಂದ ಎಷ್ಟೊ ಬಾರಿ ಶವವನ್ನು ಬಿಟ್ಟು ಹೋಗಿರುವ ಪ್ರಕರಣಗಳು ಕಂಡುಬಂದಿವೆ. ಇಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿರುವ ಮರ್ಸಿ ಮಿಷನ್‌ನ ‘ಮರ್ಸಿ ಏಂಜಲ್’ ಸ್ವಯಂ ಸೇವಕರ ತಂಡ ಕೋವಿಡ್ ಆರಂಭವಾದಂದಿನಿಂದ ಈವರೆಗೂ ಸುಮಾರು 1000ಕ್ಕೂ ಹೆಚ್ಚು ಮೃತರ ಶವಸಂಸ್ಕಾರ ಮಾಡಿದ್ದಾರೆ.
ಕೋವಿಡ್ ಎರಡನೇ ಅಲೆ ನಂತರದಲ್ಲಿ ಕೆಲವು ಆಂಬ್ಯುಲೆನ್ಸ್‌ಗಳು ಜನರಿಂದ ಹೆಚ್ಚೆಚ್ಚು ಹಣ ಕೀಳುತ್ತಿದ್ದು, ಮರ್ಸಿ ಮಿಷನ್ ತಮ್ಮ ಹತ್ತಿರವಿರುವ 9 ಆಂಬ್ಯುಲೆನ್ಸ್‌ಗಳಲ್ಲಿ ಉಚಿತ ಸೇವೆ ನೀಡುತ್ತಿದೆ. ಇದರಲ್ಲಿ ಎರಡು ಆಂಬ್ಯುಲೆನ್ಸ್‌ಗಳನ್ನು ಶವಸಂಸ್ಕಾರಕ್ಕೆ ಬಳಸುತ್ತಿದ್ದಾರೆ. ಜನರು ಬಯಸುವ ಸಂಪ್ರದಾಯದಂತೆ ಶವಸಂಸ್ಕಾರ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದೆ.
ಮರ್ಸಿ ಮಿಷನ್‌ನ ಎಲ್ಲಾ ತಂಡಗಳು ಕೋವಿಡ್ ಕೆಲಸಗಳಲ್ಲಿ ಮಗ್ನರಾಗಿದ್ದು, ಹಗಲುರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ. ಅವರ ಕೆಲಸಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಕರೆ ಮಾಡಿದಾಗ “ದಯವಿಟ್ಟು ಕ್ಷಮಿಸಿ ಪ್ರತಿಕ್ರಿಯೆ ನೀಡುವುದಕ್ಕೂ ಸಮಯ ಸಾಲುತ್ತಿಲ್ಲ, ಕೆಲಸಗಳ ಪಟ್ಟಿ ಕಾಯುತ್ತಿದೆ” ಎನ್ನುತ್ತಾರೆ.. ಅವರ ಸಮಾಜಮುಖಿ ಕೆಲಸಗಳಿಗೆ ಮತ್ತಷ್ಟು ಶಕ್ತಿ ಬರಲಿ ಎಂಬುದು ನಮ್ಮ ಆಶಯ.
ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್ ತಂಡ
ಕೋವಿಡ್ ಸೋಂಕಿತರ ರಕ್ಷಣೆಗೆ ಮಿಡಿಯುತ್ತಿರುವ ಮನಸ್ಸುಗಳು
ಇದೇ ರೀತಿಯಲ್ಲಿ ಬೇರೆ ಬೇರೆ ಸಂಘಟನೆಗಳು, ಎನ್‌ಜಿಒಗಳು, ಕೆಲವು ಕಡೆ ಹೋಟೆಲ್, ರೆಸ್ಟೋರೆಂಟ್‌ನ ಮಾಲೀಕರು ಇಂತಹ ಸಾಮಾಜಿಕ ಹಾಗೂ ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯೂ ತನ್ನ ಕಾರ್ಯಕರ್ತರಿರುವ ಎಲ್ಲಾ ಕಡೆಗಳಲ್ಲಿ ಕೋವಿಡ್ ಸೋಂಕಿತರ ಶವಸಂಸ್ಕಾರ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಉಡುಪಿ, ಮಂಗಳೂರು, ಚಾಮರಾಜನಗರ, ಕೊಪ್ಪಳ, ಮಧುಗಿರಿ ಸೇರಿದಂತೆ ವಿವಿಧೆಡೆ ಯುವಕ, ಯುವತಿಯರ ತಂಡಗಳು ಮುಂದೆ ಬಂದು ಸಾವಿರಾರು ಕೋವಿಡ್ ಮೃತರ ಅಂತ್ಯಕ್ರಿಯೆ ಮಾಡುತ್ತಿದ್ದಾರೆ.
ಕರ್ನಾಟಕ ಕೋವಿಡ್ ವಾಲೆಂಟಿಯರ್ಸ್ ಟೀಮ್ (KCVT) ಕೋವಿಡ್ ಸೋಂಕಿತರಿಗೆ, ವಲಸೆ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತಿದೆ. ಜನಸಹಾಯ ಹೆಲ್ಪ್‌ಲೈನ್ ಮೂಲಕ ಸೋಂಕಿತರಿಗೆ ಆಸ್ಪತ್ರೆ ಬೆಡ್, ಆಕ್ಸಿಜನ್ ಒದಗಿಸುತ್ತಿದೆ. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಏನು ಮಾಡಬೇಕು ಎಂಬುದರ ಕುರಿತು ಕೆಸಿವಿಟಿ ತಂಡದ ವೈದ್ಯರಿಂದ ಉಚಿತ ಕನ್ಸಲ್ಟೆಂಟ್ ವ್ಯವಸ್ಥೆಯನ್ನು ಮಾಡಿದ್ದಾರೆ. ವಲಸೆ ಕಾರ್ಮಿಕರು ಹಾಗೂ ಬಡವರ ನೋವಿಗೆ ಸ್ಪಂದಿಸುತ್ತಿರುವ ಈ ತಂಡವು ಅಂತಹವರಿಗೆ ರೇಷನ್ ಕಿಟ್ ಹಾಗೂ ಆಹಾರವನ್ನು ಕೂಡ ಒದಗಿಸಲು ಮುಂದಾಗಿದೆ.
ಕೋವಿಡ್ ಎರಡನೇ ಅಲೆ ಉಂಟುಮಾಡುವ ಭೀಕರತೆ ಬಗ್ಗೆ ವಿಜ್ಞಾನಿಗಳು, ತಜ್ಞರು ಮೊದಲೇ ತಿಳಿಸಿದ್ದರು. ಕೋವಿಡ್ ಅನ್ನು ಎದುರಿಸಲು ಅಗತ್ಯವಿದ್ದ ಸಿದ್ಧತೆಯನ್ನು ಮಾಡಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕೋವಿಡ್ ಸೋಂಕಿತರ ಸಾವುಗಳಿಗೆ ನೇರ ಕಾರಣವಾಗಿವೆ. ಸರ್ಕಾರಗಳು ಮಾಡಬೇಕಿದ್ದ ಕೆಲಸವನ್ನು ವಿವಿಧ ಸಂಘಟನೆ, ಸಂಘಸಂಸ್ಥೆಗಳು ಮಾಡಿ ತೋರಿಸುತ್ತಿವೆ.
ಜಾತಿ, ಧರ್ಮ ಮೀರಿ ಜನರ ಕಷ್ಟಗಳಿಗೆ ಸ್ವಯಂಸೇವಕರು ಮಿಡಿಯುತ್ತಿದ್ದಾರೆ. ನಾವು ಇದೇ ಸಮಾಜದಲ್ಲಿ ಬದುಕುತ್ತಿದ್ದೇವೆ. ಎಲ್ಲರೂ ನಮ್ಮವರು. ಕಷ್ಟಗಳಿಗೆ ಜೊತೆಯಾಗಬೇಕು. ಈ ಸಂಕಷ್ಟದ ಸಮಯದಿಂದ ಬೇಗ ಪಾರಾಗಬೇಕು ಎಂದು ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ಈ ರೀತಿ ಮಾನವೀಯ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಮುಸ್ಲಿಂ ಸಮುದಾಯದವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇಂತಹ ಮಾನವೀಯ ಕೆಲಸ ಮಾಡುತ್ತಿರುವವರನ್ನು ಧರ್ಮದ ಹೆಸರಿನಲ್ಲಿ ಅವಮಾನ ಮಾಡಲಾಗುತ್ತಿದೆ. ಸಮಸ್ಯೆಗಳಿಗೆ ಅವರೇ ಕಾರಣ ಎಂದು ಸುಳ್ಳು ಸುಳ್ಳೇ ಬಿಂಬಿಸುತ್ತಿದ್ದಾರೆ. ತೇಜಸ್ವಿ ಸೂರ್ಯನಂತಹ ಬಿಜೆಪಿ ಸಂಸದರು, ಮತೀಯ ದ್ವೇಷ ತುಂಬುವಂತಹ ಪೋಸ್ಟ್ ಕಾರ್ಡ್‌ನಂತಹ ಸಾಮಾಜಿಕ ಜಾಲತಾಣಗಳು ಜನರಿಗಾಗಿ ಕೆಲಸ ಮಾಡುತ್ತಿರುವವರ ಬಗ್ಗೆ ದ್ವೇಷ ಹುಟ್ಟಿಸುವಂತಹ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹವರ ಮೇಲೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಸರ್ಕಾರಗಳು ಕೂಡ ಅಹಂಕಾರಗಳನ್ನು ತೊರೆದು ತನ್ನ ಪ್ರಜೆಗಳ ಜೀವ ಉಳಿಸಲು ತನ್ನ ಶಕ್ತಿಮೀರಿ ಕೆಲಸ ಮಾಡಬೇಕು.
ಜನರ ಕಷ್ಟಕ್ಕೆ ಸ್ಪಂದಿಸುತ್ತಾ, ಜನರ ನೋವಿಗೆ ಜೊತೆಯಾಗಿ ಜೀವ ಉಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೆ ಪ್ರೀತಿಯ ಸಲಾಂ! ಇಂತಹ ಸಂಕಷ್ಟ ಸಮಯದಲ್ಲಿ ನಾವು ಕೂಡ ಹತ್ತಿರ ಬಂಧುಗಳು ಮಾತ್ರವಲ್ಲದೆ ಕಷ್ಟದಲ್ಲಿರುವ ಎಲ್ಲರ ಅಗತ್ಯಗಳಿಗೆ, ನೋವುಗಳಿಗೆ ಸ್ಪಂದಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸೋಣ!


