ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಿಗಳ ಅಕ್ರಮ ವಿತರಣೆಯಲ್ಲಿ ವಿವಿಧ ಪಕ್ಷಗಳ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆಗೆ ಒಳಗಾಗಿದ್ದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸೇರಿ ಇತರರಿಗೆ ದೆಹಲಿ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.
ದೆಹಲಿ ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದ ಸ್ಟೇಟಸ್ ವರದಿಯಲ್ಲಿ “ಅವರು ಯಾರಿಂದಲೂ ಹಣ ಪಡೆಯದೆ ಔಷಧಿ, ಆಕ್ಸಿಜನ್ ಒದಗಿಸುತ್ತಿದ್ದಾರೆ. ಅವರಿಂದ ಯಾರೂ ಮೋಸ ಹೋದ ಘಟನೆಗಳು ವರದಿಯಾಗಿಲ್ಲ, ಹಾಗೆ ನೋಡಿದರೆ ನಿ ಜವಾಗಿಯೂ ಒಳ್ಳೆಯ ಸಹಾಯ ಕೆಲಸ ಮಾಡುತ್ತಿದ್ದಾರೆ..” ಎಂದು ತಿಳಿಸಿದ್ದಾರೆ.
ಶ್ರೀನಿವಾಸ್‌ರವರೊಂದಿಗೆ ಆಪ್ ಪಕ್ಷದ ಎಎಪಿ ಶಾಸಕ ದಿಲೀಪ್ ಪಾಂಡೆ, ಬಿಜೆಪಿ ಸಂಸದ ಗೌತಮ್ ಗಂಬೀರ್‌ರವರನ್ನು ದೀಪಕ್ ಸಿಂಗ್ ಎಂಬುವವರು ಸಲ್ಲಿಸಲಾಗಿರುವ ಅರ್ಜಿಯ ಮೇರೆಗೆ ದೆಹಲಿ ಕ್ರೈಮ್ ಬ್ರಾಂಚ್ ವಿಚಾರಣೆ ನಡೆಸಿತ್ತು. ಎಲ್ಲರಿಗೂ ದೆಹಲಿ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.
ಯಾವುದೇ ತಾರತಮ್ಯವಿಲ್ಲದೆ ಔಷಧಿ, ಆಕ್ಸಿಜನ್, ರೇಷನ್ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ಸ್ವಯಂಸೇವಕರು ವಾಲಂಟರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ಹೇಳಲಾಗಿದೆ.
“ನಾವು ಕಾನೂನುಬಾಹಿರವಾಗಿ ಯಾವುದನ್ನೂ ಮಾಡುತ್ತಿಲ್ಲ, ಹಾಗಾಗಿ ಚಿಂತಿಸಬೇಕಾದ ಅಗತ್ಯವಿಲ್ಲ. ಪೊಲೀಸ್ ತನಿಖೆಯಿಂದ ನಮಗೆ ಭಯವಿಲ್ಲ, ನಾವು ನಮ್ಮ ಕೆಲಸವನ್ನು ನಿಲ್ಲಿಸದೇ ಮುಂದುವರೆಸುತ್ತೇವೆ. ನಮ್ಮ ಸಣ್ಣ ಪ್ರಯತ್ನಗಳು ಜೀವ ಉಳಿಸಲು ಸಹಾಯ ಮಾಡಿದರೆ, ನಾವು ನಮ್ಮ ಕೆಲಸ ನಿಲ್ಲಿಸುವುದಿಲ್ಲ” ಎಂದು ಬಿ.ವಿ ಶ್ರೀನಿವಾಸ್ ಹೇಳಿದ್ದರು.
ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರುವುದಿಲ್ಲ, ಸಹಾಯ ಕೆಲಸ ಮುಂದುವರೆಸುತ್ತೇವೆ: IYC ಅಧ್ಯಕ್ಷ ಬಿ.ವಿ ಶ್ರೀನಿವಾಸ್


