ಕೇರಳದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸತತ ಎರಡನೆ ಬಾರಿ ಆಯ್ಕೆಯಾಗಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ, ತನ್ನ ಹೊಸ ಸಚಿವ ಸಂಪುಟದ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೇರಳದ ಮಾಜಿ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಅವರ ಹೆಸರು ಕಾಣಿಸಿಕೊಂಡಿಲ್ಲ.
ಕೆ.ಕೆ. ಶೈಲಜಾ ಅವರು ಕೇರಳದ ಹೊಸ ಸಚಿವ ಸಂಪುಟದ ಭಾಗವಾಗುವುದಿಲ್ಲ ಎಂದು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಒಕ್ಕೂಟ ಘೋಷಿಸಿದೆ. ವಾಸ್ತವವಾಗಿ, ಎಲ್‌ಡಿಎಫ್ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಸಿಪಿಐ(ಎಂ) ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಹೊರತುಪಡಿಸಿ ಹಿಂದಿನ ಸರ್ಕಾರದಿಂದ ಎಲ್ಲ ಮಂತ್ರಿಗಳನ್ನು ಕೈಬಿಟ್ಟು ಹೊಸ ಮುಖಗಳನ್ನು ತರಲು ನಿರ್ಧರಿಸಿದೆ. ಕೆ.ಕೆ. ಶೈಲಜಾ ಅವರು ಪಕ್ಷದ ವಿಪ್ ಆಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? – ಕಾಂಗ್ರೆಸ್ ಅಭಿಯಾನ
ಆರೋಗ್ಯ ಮಂತ್ರಿಯಾಗಿದ್ದ ಕೆ.ಕೆ. ಶೈಲಾಜಾ ಟೀಚರ್ ಅವರು ನಿಫಾ ಮತ್ತು ಕೊರೊನಾ ಸಾಂಕ್ರಮಿಕವನ್ನು ನಿಭಾಯಿಸಿರುವ ಮಾದರಿಗೆ ವಿಶ್ವದ ಗಮನ ಸೆಳೆದಿದ್ದರು. ಇತ್ತೀಚಿನ ಚುನಾವಣೆಯಲ್ಲಿ ಅವರು ಕಣ್ಣೂರಿನ ಮಟ್ಟನ್ನೂರಿನಿಂದ ವಿಧಾನಸಭೆಗೆ 60,000 ಮತಗಳ ಅಂತರದಲ್ಲಿ ಜಯಗಳಿಸಿದ್ದರು.
ಪಕ್ಷದ ಹೇಳಿಕೆಯ ಪ್ರಕಾರ, ಪಿಣರಾಯಿ ವಿಜಯನ್ ಸರ್ಕಾರದ ಎರಡನೆ ಅವಧಿಯ ಆಡಳಿತದ ಸಂಪುಟದಲ್ಲಿ ಎಂ.ವಿ.ಗೋವಿಂದನ್, ಕೆ. ರಾಧಾಕೃಷ್ಣನ್, ಸಾಜಿ ಚೆರಿಯನ್, ಕೆ.ಎನ್.ಬಾಲಗೋಪಾಲ್, ಪಿ ರಾಜೀವ್, ವಿ.ಎನ್. ವಾಸವನ್, ವಿ. ಶಿವನ್‌ಕುಟ್ಟಿ, ಮುಹಮ್ಮದ್ ರಿಯಾಸ್, ಡಾ.ಆರ್. ಬಿಂಧು, ವೀನಾ ಜಾರ್ಜ್ ಮತ್ತು ಅಬ್ದುಲ್ ರಹ್ಮಾನ್ ಅವರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ‘ಹೊಸ ಶಿಕ್ಷಣ ನೀತಿ’ಯ ಅನುಷ್ಠಾನ ಕುರಿತ ಕೇಂದ್ರದ ಸಭೆಯನ್ನು ಬಹಿಷ್ಕರಿಸಿದ ‘ಸ್ಟಾಲಿನ್’ ಸರ್ಕಾರ
ಎಂ.ಬಿ. ರಾಜೀಶ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದ್ದು, ಮಾಜಿ ಸಚಿವ ಟಿ.ಪಿ.ರಾಮಕೃಷ್ಣನ್ ಅವರು ಪಕ್ಷದ ಸಂಸದೀಯ ಕಾರ್ಯದರ್ಶಿಯಾಗಲಿದ್ದಾರೆ.
ರಾಜ್ಯ ಸಮಿತಿ ಸಭೆಯ ಅಧ್ಯಕ್ಷತೆ ಎಲಮರಂ ಕರೀಮ್ ವಹಿಸಿದ್ದರು. ಎಸ್.ರಾಮಚಂದ್ರನ್ ಪಿಳ್ಳೈ, ಪಿಣರಾಯಿ ವಿಜಯನ್, ಕೊಡಿಯೇರಿ ಬಾಲಕೃಷ್ಣನ್ ಮತ್ತು ಎಂ.ಎ. ಬೇಬಿ ಸೇರಿದಂತೆ ಪಾಲಿಟ್‌ಬ್ಯುರೊ ಸದಸ್ಯರು ಉಪಸ್ಥಿತರಿದ್ದರು.
ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮೇ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಇದನ್ನೂ ಓದಿ: ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತ್ತಿತ್ತು- ನಳೀನ್ ಕುಮಾರ್ ಕಟೀಲ್


