Homeಕರ್ನಾಟಕ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ

‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ

ಜನ ಕ್ಯೂನಲ್ಲಿ ನಿಂತಿದ್ದು ಅವರಿಗೆ ಮೊದಲು ಲಸಿಕೆ ಕೊಡಿ, ನಂತರ ನಮ್ಮ ಕಡೆ ಬೊಟ್ಟು ಮಾಡಿ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ

- Advertisement -
- Advertisement -

ಜನರು ಕೊರೊನಾ ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎನ್ನುವ ಬಿಜೆಪಿ ಆರೋಪ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ನಡೆಸುತ್ತಿರುವ ಹತಾಶ ಪ್ರಯತ್ನ ಅಷ್ಟೆ. ವ್ಯಾಕ್ಸಿನ್ ಪಡೆಯಲು ಜನ ಕ್ಯೂನಲ್ಲಿದ್ದಾರೆ, ಮೊದಲು ಅವರಿಗೆ ಕೊಡಿ, ಆ ಮೇಲೆ ನಮ್ಮ ಕಡೆ ಬೊಟ್ಟು ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.

‘ INC4Vaccine’ ಎಂಬ ಹ್ಯಾಶ್‌ಟ್ಯಾಗ್‌‌ ಬಳಸಿ ಸರಣಿ ಟ್ವೀಟ್‌ ಮಾಡಿರುವ ಅವರು, “ಕೊರೊನಾ ವ್ಯಾಕ್ಸಿನನ್ನು ಎಲ್ಲರಿಗೂ ಉಚಿತವಾಗಿ ಹಂಚಿ ಎನ್ನುವುದೇ ನಮ್ಮ ಮೂಲ ಬೇಡಿಕೆ. ನಾವು ವ್ಯಾಕ್ಸಿನನ್ನು ಎಂದೂ ವಿರೋಧಿಸಿಲ್ಲ. ಅದರ ಸತ್ವಪರೀಕ್ಷೆಯ ಫಲಿತಾಂಶಕ್ಕಿಂತ ಮೊದಲು ಕೇವಲ ಪ್ರಚಾರಕ್ಕಾಗಿ ಬಳಕೆಗೆ ಬಿಡುಗಡೆ ಮಾಡಬಾರದೆಂಬ ತಜ್ಞರ ಅಭಿಪ್ರಾಯಕ್ಕೆ ನಮ್ಮ ಪಕ್ಷ ಸಹಮತ ವ್ಯಕ್ತಪಡಿಸಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಗಮಗಳಿಗೆ ನೂರಾರು ಕೋಟಿಯಿದೆ; ಕೊರೊನಾ ಪರಿಹಾರಕ್ಕೆ ಹಣವಿಲ್ಲವೆ: ಕುಮಾರಸ್ವಾಮಿ ಪ್ರಶ್ನೆ

“ಕೊರೊನಾ ವ್ಯಾಕ್ಸಿನನ್ನು ಕೊರೊನಾ ವಾರಿಯರ್ಸ್ ಗಾಗಿ ಬಿಡುಗಡೆಗೊಳಿಸಿದ್ದು ಜನವರಿ 18 ರಂದು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವರು ವ್ಯಾಕ್ಸಿನ್ ಪಡೆಯುವ ಧೈರ್ಯ ತೋರಿಸಿದ್ದು ಮಾರ್ಚ್ ಒಂದರಂದು. ಎಲ್ಲದರಲ್ಲಿಯೂ ನಾವೇ ಮೊದಲು ಎಂದು ಎದೆ ತಟ್ಟಿಕೊಳ್ಳುವ ಪ್ರಧಾನಿ ಮೋದಿ ಅವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿದದ್ದು ಯಾಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಬೇರೆಲ್ಲ ದೇಶಗಳ ಪ್ರಧಾನಿ/ಅಧ್ಯಕ್ಷರು ಕೊರೊನಾ ವಾರಿಯರ್ಸ್‌ರಂತೆ ಮೊದಲು ವ್ಯಾಕ್ಸಿನ್ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬಿದ್ದರೆ ನಮ್ಮ ಪ್ರಧಾನಿ ಮೋದಿ ಅವರು ಮಾತ್ರ ಫಲಿತಾಂಶ ಕಾದು ನೋಡಿ ವ್ಯಾಕ್ಸಿನ್ ಹಾಕಿಸಿಕೊಂಡರು. 56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?” ಎಂದು ಅವರು ಕೇಳಿದ್ದಾರೆ.

“ಭಾರತದಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರು ನಾಲ್ಕುಕೋಟಿ ಜನಮಾತ್ರ (3%). ಕರ್ನಾಟಕದಲ್ಲಿ ಕೇವಲ 25 ಲಕ್ಷ ಜನ. ಇದಕ್ಕೆ ವ್ಯಾಕ್ಸಿನ್ ಕೊರತೆಯೇ ಕಾರಣ ಹೊರತು ಜನರ ಹಿಂಜರಿಕೆ ಅಲ್ಲ. ಜನರ ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್ ಪೂರೈಸಲಾಗದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗ ವಿರೋಧ ಪಕ್ಷಗಳನ್ನು ಹಳಿಯುವುದು ತಮಾಷೆಯಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೇರಳ ಐತಿಹಾಸಿಕ ನಿರ್ಧಾರ: ದೇವಸ್ವಂ( ಮುಜರಾಯಿ ಇಲಾಖೆ) ಸಚಿವರಾಗಿ ದಲಿತ ಸಮುದಾಯದ ಶಾಸಕ ಆಯ್ಕೆ

“ಮೊದಲು ಕೊರೊನಾ ಕಾಣಿಸಿಕೊಂಡಾಗ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎಂದು ಪ್ರಧಾನಿಯವರು ಕರೆ ನೀಡಿದಾಗ ಇಡೀ ದೇಶ ಕುಣಿದಾಡಿತ್ತು. ಆದರೆ ವ್ಯಾಕ್ಸಿನ್ ವಿಷಯದಲ್ಲಿ ಮಾತ್ರ ಜನ ಕಾಂಗ್ರೆಸ್ ಮಾತಿಗೆ ತಲೆದೂಗಿದ್ದಾರೆ ಎಂದರೆ ದೇಶದ ಜನ ಈಗ ನರೇಂದ್ರ ಮೋದಿ ಅವರ ಮಾತಿಗೆ ಕಿವಿಗೊಡೊಲ್ಲ, ಕಾಂಗ್ರೆಸ್ ಮಾತಿಗೆ ಬೆಲೆಕೊಡುತ್ತಾರೆ ಎಂದರ್ಥವೇ?” ಎಂದು ಅವರು ಪ್ರಶ್ನಿಸಿದ್ದಾರೆ.

‘ಕುಮಾರಸ್ವಾಮಿಯದ್ದು ಬಾಲಿಷ ಹೇಳಿಕೆ’

ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎಂದು ಆರೋಪಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ತಮಗೆ ತಾವೇ ಗೋಲು ಹೊಡೆದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಚಾರ ನಂಬಿ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮಾರ್ಚ್ 23ರ ವರೆಗೆ ಕಾದು ಕೂತಿದ್ದೇ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸರ್ವರಿಗೂ ಉಚಿತ ವ್ಯಾಕ್ಸಿನ್ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆಗೂಡಿ ದೇವೇಗೌಡ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಕುಮಾರಸ್ವಾಮಿಯವರು ಇಂತಹ ಬಾಲಿಷ ಹೇಳಿಕೆ ನೀಡುವ ಮೊದಲು ತಂದೆಯ ಸಲಹೆ‌ ಪಡೆಯುವುದು ಒಳ್ಳೆಯದು” ಎಂದು ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪಿಎಂ ಕೇರ್ಸ್ ನಿಧಿ ಮಾಹಿತಿ ಬಹಿರಂಗ ಪಡಿಸಿ ಎಂದು ಸುಪ್ರೀಂಗೆ ಪಿಐಎಲ್ ಸಲ್ಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...