Homeಕರೋನಾ ತಲ್ಲಣಇದು ದುಡಿಯುವ ಜನರನ್ನು ಅವಮಾನಿಸುವ ಪ್ಯಾಕೇಜ್: ಜನಾಗ್ರಹ ಆಂದೋಲನ ಖಂಡನೆ

ಇದು ದುಡಿಯುವ ಜನರನ್ನು ಅವಮಾನಿಸುವ ಪ್ಯಾಕೇಜ್: ಜನಾಗ್ರಹ ಆಂದೋಲನ ಖಂಡನೆ

- Advertisement -
- Advertisement -

ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿರುವ ಪ್ಯಾಕೇಜ್ ದುಡಿಯುವ ಜನರನ್ನು
ನಿರಾಶೆಗೊಳಿಸಿರುವುದು ಮಾತ್ರವಲ್ಲ, ಅವಮಾನಿಸುವ ಪ್ಯಾಕೇಜ್ ಆಗಿದೆ ಎಂದು ಜನಾಗ್ರಹ ಆಂದೋಲನ ಆಕ್ರೋಶ ವ್ಯಕ್ತಪಡಿಸಿದೆ.

ಮಾನವ ಬಿಕ್ಕಟ್ಟನಿ ಈ ಸಂದರ್ಭದಲ್ಲಿ ಜನರಿಗೆ ಬದುಕುಳಿಯಲು ಆಸರೆಯಾಗಿರುವ ಪ್ಯಾಕೇಜ್‌ಗಾಗಿ ಜನಾಗ್ರಹವನ್ನೂ ಒಳಗೊಂಡಂತೆ ಬಹುತೇಕ ಜನಪರ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಒತ್ತಾಯಿಸುತ್ತಾ ಬರುತ್ತಿವೆ. ನೆರೆಹೊರೆಯ ರಾಜ್ಯಗಳು ಅನೇಕ ಜನಪರ ಕ್ರಮಗಳನ್ನು ಕಣ್ಣೆದುರಿಗೇ ತೆಗೆದುಕೊಳ್ಳುತ್ತಿದ್ದರೂ ರಾಜ್ಯ ಸರ್ಕಾರ ಕಿಮ್ಮೆನ್ನದೆ ಕೂತಿತ್ತು. ಜನರ ಹಾಗೂ ಜನರ ಸಂಘಟನೆಗಳ ಒತ್ತಡಕ್ಕೆ ಮಣಿದು ಕೊನೆಗೆ ಇಂದು ಮುಖ್ಯಮಂತ್ರಿಯವರು ಪ್ಯಾಕೇಜ್ ಒಂದನ್ನು ಘೋಷಿಸಿದ್ದಾರೆ. ಆದರೆ ಈ ಪ್ಯಾಕೇಜ್ ತೀವ್ರ ನಿರಾಶೆ ಮೂಡಿಸಿರುವುದು ಮಾತ್ರವಲ್ಲ, ದುಡಿಯುವ ಜನರನ್ನು ಅವಮಾನಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಸಂಘಟಿತ, ಸ್ವಯಂ ಉದ್ಯೋಗಿ ಮುಂತಾದ ಶ್ರಮಿಕ ಕುಟುಂಬಗಳಿಗೆ ಕೇವಲ 2,000 ಮತ್ತು 3,000 ರೂಪಾಯಿಗಳ ನೆರವನ್ನು ಮಾತ್ರ ಘೋಷಿಸಿದೆ. ಇಂಥ ದುಷ್ಕಾಲವನ್ನು ಎದುರಿಸಲು 2000 ಏತಕ್ಕೆ ಸಾಲುತ್ತಿದೆ ಎಂಬುದನ್ನು ಸರ್ಕಾರವೇ ಹೇಳಬೇಕಿದೆ. ಅದೂ ಸಹ ನೊಂದಣಿಯಾಗಿರುವ ಶ್ರಮಿಕರಿಗೆ ಎಂದು ಹೇಳಿರುವುದರಿಂದ ಅದು ಎಲ್ಲರಿಗೂ ತಲುಪುವುದು ಸಾಧ್ಯವೇ ಇಲ್ಲ. ಉದಾಹರಣೆಗೆ ನೇಕಾರ ಕಾರ್ಮಿಕರಿಗೆ ಗುರುತಿನ ಚೀಟಿಯನ್ನೂ ಸರ್ಕಾರ ಇದುವರೆಗೆ ನೀಡಿಲ್ಲ. ಮನೆಕೆಲಸದವರಿಗೂ ಯಾವ ನೊಂದಣಿಯೂ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

ಅಪಾರ ನಷ್ಟ ಹೊಂದಿರುವ ಹೂವು ಮತ್ತು ತರಕಾರಿ ಬೆಳೆಯುವ ರೈತರಿಗೆ ಮಾತ್ರ 10,000 ರೂಗಳ ನೆರವನ್ನು ಘೋಷಿಸಿದೆ. ಅವರಿಗಾಗಿರುವ ನಷ್ಟದ ಮುಂದೆ ಈ ಹಣ ಏತಕ್ಕೂ ಸಾಲುವುದಿಲ್ಲ. ಅಲ್ಲದೆ ವಿಶಾಲ ರೈತಾಪಿಗಾಗಲೀ, ಕೃಷಿ ಕೂಲಿಗಳಿಗಾಗಲೀ ಯಾವುದೇ ನೆರವನ್ನು ಸರ್ಕಾರ ಘೋಷಿಸಿಲ್ಲ. ಕೆಲಸ ಕಳೆದುಕೊಂಡಿರುವ ಖಾಸಗೀ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ನೆರವಾಗುವ ಯಾವ ಅಂಶವೂ ಇದರಲ್ಲಿಲ್ಲ. ಇದು ನೆರವಿನ ಪ್ಯಾಕೇಜ್ ಎಂದು ಕರೆಯಲಿಕ್ಕೇ ಅನರ್ಹವಾಗಿದೆ ಎಂದು ಜನಾಗ್ರಹ ಆಂದೋಲನ ಆರೋಪಿಸಿದೆ.

ಸರ್ಕಾರ ನಿಜವಾಗಲೂ ಜನಹಿತವನ್ನು ಬಯಸುತ್ತಿದ್ದಲ್ಲಿ ಕೋವಿಡ್ ರೋಗಕ್ಕೆ ತುತ್ತಾಗಿರುವ ಎಲ್ಲಾ ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಎಲ್ಲಾ ಜನರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಲು ತುರ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ಬಿಪಿಎಲ್ ಜನರಿಗೂ ಸಮಗ್ರ ದಿನಸಿ ಮತ್ತು ಮಾಸಿಕ 5000 ರೂಗಳ ನೆರವು ಧನ ನೀಡಬೇಕು. ಕೋವಿಡ್‌ನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಆಂದೋಲನ ಒತ್ತಾಯಿಸಿದೆ.

ಅಲ್ಲದೆ ಬೆಳೆ ನಷ್ಟ ಅನುಭವಿಸಿರುವ ಹೂವು, ತರಕಾರಿ ರೈತರಿಗೆ ಎಕರೆಗೆ ಕನಿಷ್ಟ 25 ಸಾವಿರ ಪರಿಹಾರ ನೀಡಬೇಕು. ಇತರೆಲ್ಲಾ ಸಣ್ಣ ರೈತರಿಗೆ ಎಕರೆಗೆ 10,000 ನೆರವು ಧನ ನೀಡಬೇಕು. ಮೂರು ತಿಂಗಳ ಸಾಲ ಮರುಪಾವತಿ ಮುಂದೂಡುವುದು ಮಾತ್ರವಲ್ಲ,  ಮೈಕ್ರೋ ಫೈನಾನ್ಸಿನ ಸಾಲವನ್ನೂ ಒಳಗೊಂಡಂತೆ ಎಲ್ಲಾ ಸಾಲದ ಕೋರಾನಾ ಕಾಲಾವಧಿಯ ಕಂತುಗಳನ್ನು ಸರ್ಕರವೇ ಭರಿಸಿ, ಕಂತು ಮನ್ನಾ ಮಾಡಬೇಕಿದೆ. ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಖಾಸಗೀ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಉಪನ್ಯಾಸಕರೂ ಸಂಕಷ್ಟದಲ್ಲಿದ್ದು ಅವರ ನೆರವಿಗೂ ಸರ್ಕಾರ ಧಾವಿಸಬೇಕಿದೆ ಎಂದು ಒತ್ತಾಯಿಸಲಾಗಿದೆ.

ಇದಕ್ಕಾಗಿ ಎಲ್ಲಾ ಕೋಟ್ಯಾಧೀಷ ರಾಜಕಾರಣಿಗಳು ಮತ್ತು ಉದ್ದಿಮೆಪತಿಗಳ ಆದಾಯದ ಮೇಲೆ ಶೇ. 5ರ ಸುಂಕವನ್ನು ವಿಧಿಸಿ ಮತ್ತು ಕಾರ್ಪೊರೇಟ್ ವಹಿವಾಟಿನ ಮೇಲೆ ಶೇ. 2ರ ಕೋರೋನಾ ಸೆಸ್ ವಿಧಿಸಿ ಸಂಪನ್ಮೂಲವನ್ನು ಕ್ರೂಢೀಕರಿಸಿ, ನಿಜವಾದ ಅರ್ಥದ ಪ್ಯಾಕೇಜಿನ ಮೂಲಕ ಜನರ ಕೈಗೆ ತಲುಪುವಂತೆ ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಲಾಗಿದೆ.

ಈ ಕ್ರಮಗಳಿಗೆ ಸರ್ಕಾರ ಮುಂದಾಗದಿದ್ದರೆ ಕೋವಿಡ್ ಇದ್ದರೂ ಜನ ದಿಟ್ಟ ಹೋರಾಟಗಳಿಗಿಳಿಯುವು ಅನಿವಾರ್ಯವಾಗಲಿದೆ. ಜನಾಗ್ರಹ ಆಂದೋಲನ ನಿನ್ನೆ ಕರೆದಿದ್ದ ಸರ್ವ ಪಕ್ಷ ಹಾಗೂ ಸರ್ವ ಸಂಘಟನೆಗಳ ತುರ್ತು ಸಭೆಯಲ್ಲಿ ಸರ್ಕಾರ ಜನಪರ ಕ್ರಮಗಳಿಗೆ ಮುಂದಾಗದಿದ್ದರೆ ಒಗ್ಗೂಡಿ ಪ್ರತಿಭಟಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಶೀಘ್ರವೇ ಸಮಾಲೋಚನಾ ಮಂಡಳಿಯು ಸಭೆ ಸೇರಿ ಹೋರಾಟದ ರೂಪರೇಷೆಯನ್ನು ಅಂತಿಮಗೊಳಿಸಲಿದೆ ಎಂದು ಜನಾಗ್ರಹ ಆಂದೋಲನದ ಪರವಾಗಿ ಮಾವಳ್ಳಿ ಶಂಕರ್, ಕೆ.ಎಲ್. ಅಶೋಕ್, ಸ್ವರ್ಣ ಭಟ್, ಶಸಿಕಾಂತ್ ಸೆಂದಿಲ್, ಚಾಮರಸ ಮಾಲಿ ಮಾಟೀಲ್, ಯೂಸೂಫ್ ಕನ್ನಿ, ಹೆಚ್. ಆರ್. ಬಸವಾರಾಜಪ್ಪ, ಯಾಸೀನ್ ಮಲ್ಪೆ ಮತ್ತು ನೂರ್ ಶ್ರೀಧರ್ ತಿಳಿಸಿದ್ದಾರೆ.


ಇದನ್ನೂ ಓದಿ: ಧರೆಹತ್ತಿ ಉರಿದಿದೆ: ಮಿಷನ್ ಸೇವ್ ಲೈಫ್‌ಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ಚಾಲನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...