ಲಾಕ್‌ಡೌನ್ ಕಾರಣಕ್ಕೆ ರಾಜ್ಯ ಸರ್ಕಾರ ಘೋಷಿಸಿಲಾದ 1250 ಕೋಟಿ ಆರ್ಥಿಕ ಪ್ಯಾಕೇಜ್‌ನಲ್ಲಿ ಸ್ಲಂ ನಿವಾಸಿಗಳನ್ನು ಕಡೆಗಣಿಸಿರುವುದನ್ನು ಖಂಡಿಸಿ ಇಂದು ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಮನೆ ಮನೆಯಿಂದಲೇ ಪ್ರತಿಭಟನೆ ನಡೆಯಿತು.
ನಗರದ ಜನಸಂಖ್ಯೆ ಶೇ 45% ಜನರು ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ನಗರ ವಂಚಿತ ಸಮುದಾಯಗಳಿಗೆ ಅಂದರೆ ಬಡತನ ರೇಖೆಯಿಂದ ಕೆಳಗಿರುವ ಬಿಪಿಎಲ್ ಕುಟುಂಬಗಳಿಗೆ ಪ್ರಾಧನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಮೇ ಹಾಗೂ ಜೂನ್ ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 5 ಕೆಜಿ ಅಕ್ಕಿ ಉಚಿತ ವಿಸ್ತರಣೆಯನ್ನು ಈಗಾಗಲೇ ಪ್ರಧಾನ ಮಂತ್ರಿಗಳ ಘೋಷಿಸಿರುವುದನ್ನೇ ಪುನರ್ ವ್ಯಾಖ್ಯಾನಿಸುವುದನ್ನು ಬಿಟ್ಟರೇ ಬೇರಾವುದೇ ವಿಶೇಷತೆಯನ್ನು ನೀಡಿಲ್ಲ ಎಂದು ಸ್ಲಂ ನಿವಾಸಿಗಳು ಕಿಡಿಕಾರಿದ್ದಾರೆ.

ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿಯವರು ಮಾತನಾಡಿ “ಕೋವಿಡನ್ನು ರಾಷ್ಟ್ರೀಯಾ ವಿಪತ್ತು ಎಂದು ಘೋಷಿಸಿರುವ ಸರ್ಕಾರ ರಾಷ್ಟ್ರೀಯ ವಿಪತ್ತಿನ ಮಾನದಂಡಗಳ ಅನ್ವಯ ಪರಿಹಾರವನ್ನು ಘೋಷಿಸಬೇಕು. ಈ ಪ್ಯಾಕೇಜ್ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಘೋಷಣೆಯಾಗಿದೆ. ಇದರಿಂದ ನಗರ ವಂಚಿತ ಸಮುದಾಯಗಳಿಗೆ ಯಾವುದೇ ರೀತಿಯ ಪ್ರಯೋಜನ ದೊರಕುವುದಿಲ್ಲ” ಎಂದಿದ್ದಾರೆ.
1. ರಾಜ್ಯದ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಮತ್ತು ಸ್ಲಂ ನಿವಾಸಿಗಳಿಗೆ ಲಾಕ್‌ಡೌನ್ ಆರ್ಥಿಕ ಪರಿಹಾರವಾಗಿ ಮೂರು ತಿಂಗಳು ತಲಾ 10 ಸಾವಿರ ಭತ್ಯೆ ಘೋಷಿಸಬೇಕು.
2. ಸ್ಲಂ ನಿವಾಸಿಗಳಿಗೆ ರಾಷ್ಟ್ರೀಯಾ ವಿಪತ್ತು ಪರಿಹಾರದ ಮಾನದಂಡದಂತೆ ಮೂರು ತಿಂಗಳು (ಪಡಿತರ ವಿತರಣೆ ಹೊರತುಪಡಿಸಿ) ತಲಾ 10 ಕೆಜಿಯಂತೆ ಅಗತ್ಯ ವಸ್ತುಗಳನ್ನು ನೀಡಬೇಕು.
3. ರಾಜ್ಯ ಎಲ್ಲಾ ನಾಗರೀಕರಿಗೂ ಉಚಿತ ಲಸಿಕೆ ನೀಡಬೇಕು ಮತ್ತು ಮನೆ ಮನೆಗೆ ಲಸಿಕೆ ಅಭಿಯಾನ ಪ್ರಾರಂಭಿಸಬೇಕು.
4. ಕೋವಿಡ್ ಚಿಕಿತ್ಸೆ ಉಚಿತಗೊಳಿಸಿ ಮತ್ತು ಅದರ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು.
5. ಕೋವಿಡ್‌ನಿಂದ ಸಾವಿಗೀಡಾದ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು ಎಂಬುದನ್ನು ಸೇರಿ ಹಲವು ಹಕ್ಕೊತ್ತಾಯಗಳನ್ನು ಸ್ಲಂ ಜನಾಂದೋಲನ ಸರ್ಕಾರ ಮುಂದಿಟ್ಟಿದೆ.
ಇದನ್ನೂ ಓದಿ: ಇದು ದುಡಿಯುವ ಜನರನ್ನು ಅವಮಾನಿಸುವ ಪ್ಯಾಕೇಜ್: ಜನಾಗ್ರಹ ಆಂದೋಲನ ಖಂಡನೆ


