2019 ರ ಸಿಎಎ ಹೋರಾಟದ ಸಮಯ ಕರಾಳ ಯುಎಪಿಎ ಅಡಿಯಲ್ಲಿ ಜೈಲು ಸೇರಿದ್ದ ಅಸ್ಸಾಂನ ಹೋರಾಟಗಾರ ಅಖಿಲ್ ಗೊಗೊಯ್ ಶುಕ್ರವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೈಲಿನಿಂದಲೆ ಸ್ಪರ್ಧಿಸಿ ಗೆದ್ದಿದ್ದರು. ಈ ಮೂಲಕ ಅಸ್ಸಾಂನಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಮೊದಲ ಹೋರಾಟಗಾರ ಎಂಬ ಮನ್ನಣೆಗೂ ಪಾತ್ರತಾಗಿದ್ದಾರೆ.
126 ಸದಸ್ಯರಿರುವ ಅಸ್ಸಾಂ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಅಸ್ಸಾಂನಲ್ಲಿ ನಡೆದ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆಯಲ್ಲಿ ಭಾಗಿಯಾದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳವು ದೇಶದ್ರೋಹದ ಆರೋಪದ ಮೇಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಗೊಗೊಯ್ ವಿರುದ್ದ ಪ್ರಕರಣ ದಾಖಲಿಸಿದ್ದು, ಪರಿಣಾಮವಾಗಿ ಅವರು 2019 ರ ಡಿಸೆಂಬರ್‌ನಿಂದಲೆ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ಸುಳ್ಳನ್ನು ಎತ್ತಿ ತೋರಿಸಿದ್ದಕ್ಕೆ ಟ್ವಿಟರ್ ಅನ್ನು ಬೆದರಿಸುತ್ತಿರುವ ಕೇಂದ್ರ ಸರ್ಕಾರ!
ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ‘ರೈಜೋರ್ ದಳ’ವನ್ನು ಮುನ್ನಡೆಸುತ್ತಿರುವ ಗೊಗೊಯ್, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಶಿವಸಾಗರ್ ಅನ್ನು ಪಾರಂಪರಿಕ ನಗರವೆಂದು ಘೋಷಿಸಬೇಕು ಎಂದು ಈ ಸಂದರ್ಭದಲ್ಲಿ ಗೊಗೊಯ್ ಪತ್ರಿಕೆಗಳಿಗೆ ತಿಳಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಧಾನಸಭೆಗೆ ಕರೆತರುವಾಗ ಅವರನ್ನು ಪೊಲೀಸರು ಮತ್ತು ಅಧಿಕಾರಿಗಳು ಕೆಟ್ಟದಾಗಿ ನಡೆಸಿ ಕೊಂಡಿರುವ ವಿಡಿಯೊ ಕೂಡಾ ಇದೀಗ ವೈರಲ್ ಆಗಿದೆ.
ಪಿಪಿಇ ಕಿಟ್ ಧರಿಸಿದ್ದ ಕೆಲವರು ಅವರನ್ನು ತಳ್ಳಾಡಿದ್ದಾರೆ. “ಪ್ರೋಟೋಕಾಲ್‌ನ ಉಲ್ಲಂಘನೆಯಾಗಿದ್ದು, ಇದು ಅಸ್ಸಾಂನ ಜನತೆಗೆ ಮಾಡಿರುವ ಅವಮಾನ. ಒಬ್ಬ ಶಾಸಕನಿಗೆ ಹೀಗೆ ಮಾಡುವಂತಿಲ್ಲ. ಆದರೆ ಒಂದು ವಿಷಯವಂತೂ ಖಚಿತ ಅವರಿಗೆ ಇನ್ನು ಮುಂದೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ” ಎಂದು ಅಖಿಲ್ ಗೊಗೊಯ್ ಹೇಳಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಆಕ್ಷೇಪಣೆಯನ್ನು ಕೂಡಾ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಮಾಣ ವಚನ ಸಮಾರಂಭದ ನಂತರ ಗೊಗೊಯ್ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಗಿದ್ದು, ಅಲ್ಲಿ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ರೈಜೋರ್ ದಳದ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಕೋವಿಡ್ ಸೋಂಕು ನಿವಾರಣೆಗೆ ’ಕೊರೊನಾ ದೇವಿ’ ದೇವಾಲಯ ನಿರ್ಮಾಣ


