ಈ ಮೂರು ದಿನದಲ್ಲಿ ಏಷ್ಯಾ ಕುರಿತಂತೆ ಬಂದ ಈ ಎರಡು ಆರ್ಥಿಕ ವಿಷಯಗಳ ಬಗ್ಗೆ ನಮ್ಮ ಮಾಧ್ಯಮಗಳು ಹೆಚ್ಚಿನ ಗಮನವನ್ನು ಹರಿಸಲೇ ಇಲ್ಲ. ತಲಾವಾರು ಆದಾಯದಲ್ಲಿ ಪಕ್ಕದ ಬಾಂಗ್ಲಾದೇಶ ಭಾರತಕ್ಕಿಂತ ಮುಂದಿದೆ. ಇದೇ ಸಂದರ್ಭದಲ್ಲಿ ಗುಜರಾತಿನ ಉದ್ಯಮಿ, ಮೋದಿ ಮಿತ್ರ ಎಂದೇ ಗುರುತಿಸಲ್ಪಟ್ಟ ಗೌತಮ್ ಅದಾನಿ ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತರಾಗಿದ್ದಾರೆ. ಅಂದಂತೆ ಮುಖೇಶ್ ಅಂಬಾನಿ ಟಾಪ್‌ನಲ್ಲೇ ಇದ್ದಾರೆ!
ಒಬ್ಬ ವೈದ್ಯರು ಮಾಸ್ಕ್ ಹಾಕಿರಲಿಲ್ಲ ಎಂಬುದನ್ನು ದೊಡ್ಡ ಇಶ್ಯೂ ಮಾಡುವ ಮಾಧ್ಯಮಗಳಿಗೆ ಈ ಸುದ್ದಿಗಳು ಮುಖ್ಯವೇ ಅಲ್ಲ!
ನೆರೆಯ ಬಾಂಗ್ಲಾ ದೇಶದ ಸರಾಸರಿ ತಲಾ ಆದಾಯ 2,227 ಡಾಲರ್ ಆಗಿದ್ದರೆ, ಭಾರತದ ತಲಾ ಆದಾಯ 1,947 ಡಾಲರ್ ಇದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತಲಾ ಆದಾಯದ ದೃಷ್ಟಿಯಿಂದ ಭಾರತ ತಾಂತ್ರಿಕವಾಗಿ ಬಾಂಗ್ಲಾದೇಶಕ್ಕಿಂತ ಕೆಳಕ್ಕೆ ಇಳಿದಿದೆ, ಏಕೆಂದರೆ ನೆರೆಯ ದೇಶವು 2020-21ರ ಆರ್ಥಿಕ ವರ್ಷದಲ್ಲಿ ತನ್ನ ತಲಾ ಆದಾಯವನ್ನು 2,227 ಡಾಲರ್ ಎಂದು ವರದಿ ಮಾಡಿದೆ. ಇತ್ತೀಚಿನ ಅಧಿಕೃತ ದತ್ತಾಂಶವು ಭಾರತದ ತಲಾ ಆದಾಯವು 1,947.41 ಡಾಲರ್‌ಗೆ ತಲುಪಿದೆ ಎಂದು ತೋರಿಸುತ್ತದೆ. ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯ ವಿಫಲತೆ ಮತ್ತು ದೇಶವ್ಯಾಪಿ ಹೇರಿದ ಅಸಂಬದ್ಧ, ಅವೈಜ್ಞಾನಿಕ ಕ್ರಮಗಳೇ ಇದಕ್ಕೆ ಕಾರಣ ಅಲ್ಲವೇ?
ಇದನ್ನೂ ಓದಿ: ಅತಿ ಕೆಟ್ಟ ಕೋವಿಡ್ ನಿರ್ವಹಣೆ: ಐದು ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿಗೆ ಮೊದಲ ಸ್ಥಾನ
ಈ ಹೊತ್ತಿನಲ್ಲಿ ಬಂದ ಇನ್ನೊಂದು ಸುದ್ದಿ ಗಮನಿಸಿ, ದೇಶದ 2ನೆ ದೊಡ್ಡ ಶ್ರೀಮಂತನಾಗಿದ್ದ ಅದಾನಿ ಈಗ ಏಷ್ಯಾ ಖಂಡದ 2ನೆ ದೊಡ್ಡ ಶ್ರೀಮಂತ!
ಇದು ಮೋದಿಯ ಅಥವಾ ಈ ದೇಶದ ಅಭಿವೃದ್ಧಿ ಮಾಡೆಲ್‌ಗೆ ಸಾಕ್ಷಿಯಂತಿದೆ.
ಬ್ಲೂಮ್‌ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ, ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಚೀನಾದ ಬಾಟಲ್ ವಾಟರ್ ಬಿಲಿಯನೇರ್ ಝೋಂಗ್ ಶನ್ಶಾನ್ ಅವರನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಸೂಚ್ಯಂಕದಲ್ಲಿ ಲಭ್ಯವಿರುವ ಇತ್ತೀಚಿನ ವಿವರಗಳ ಪ್ರಕಾರ, ಅದಾನಿಯ ನಿವ್ವಳ ಮೌಲ್ಯವು 66.5 ಬಿಲಿಯನ್ ಡಾಲರ್ ಆಗಿದ್ದರೆ, ಶನ್ಶಾನ್ ಅವರ ಒಟ್ಟು ಮೌಲ್ಯವು. 63.6 ಬಿಲಿಯನ್ ಡಾಲರ್ ಆಗಿದೆ. ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಾತ್ರ ಈಗ ಭಾರತದಲ್ಲಿ ಅದಾನಿಗಿಂತ ಶ್ರೀಮಂತರಾಗಿದ್ದಾರೆ. ಇದರರ್ಥ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳು ಭಾರತೀಯರಿಂದ (ಇಬ್ಬರೂ ಗುಜರಾತಿಗಳು!) ‘ಆಕ್ರಮಿಸಲ್ಪಟ್ಟಿವೆ.’
ಒಟ್ಟಾರೆಯಾಗಿ, ಜಾಗತಿಕ ಬಿಲಿಯನೇರ್‌ಗಳ ಬ್ಲೂಮ್‌ಬರ್ಗ್‌ನ ಪಟ್ಟಿಯಲ್ಲಿ ಅಂಬಾನಿ ಮತ್ತು ಅದಾನಿ ಕ್ರಮವಾಗಿ 13 ಮತ್ತು 14 ನೇ ಸ್ಥಾನದಲ್ಲಿದ್ದಾರೆ. ಏಷ್ಯಾದಲ್ಲಿ ಇವರಿಬ್ಬರೂ 1 ಮತ್ತು 2ನೆ ಸ್ಥಾನದಲ್ಲಿ ಇದ್ದಾರೆ.
ಇವರಿಬ್ಬರೂ ಮೋದಿಗೆ ಆಪ್ತರು ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಇಂತಹ ಉದ್ಯಮಿಗಳ ಆದಾಯ ಕೋವಿಡ್ ಮೊದಲ ಅಲೆಯಲ್ಲೂ ಸಿಕ್ಕಾಪಟ್ಟೆ ಹೆಚ್ಚಿತ್ತು, ಈಗಲೂ ಹೆಚ್ಚುತ್ತಿದೆ. ಆದರೆ ದೇಶದ ತಲಾ ಆದಾಯ ಮಾತ್ರ ಪಕ್ಕದ ಬಾಂಗ್ಲಾಕ್ಕಿಂತ ಕಡಿಮೆಯಾಗಿದೆ.
ಹೇಗಿದೆ ಈ ದೇಶದ ಅಭಿವೃದ್ಧಿ ಮಾಡೆಲ್? ವಾವ್ ಮೋದಿ ವಾವ್!
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ



Article without basic common sense. Are you a journalist?