ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಲು ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಲಾಗಿದೆ, ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾದರೆ ಆಗಸ್ಟ್‌ನಲ್ಲಿ ಪರೀಕ್ಷಾ ಫಲಿತಾಂಶ ಘೋಷಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರ ಪ್ರತಿಪಾದಿಸಿದ್ದಾರೆ.
ಅವರು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸರ್ವ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಒಡಿಶಾದ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಿದ ಸೋಂಕು: ಕೊರೊನಾ ಕೇಂದ್ರಗಳನ್ನು ಆರಂಭಿಸಲು ಒತ್ತಾಯ
ಈ ಸಭೆಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯು ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಜುಲೈಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್‌ನಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ಎರಡನೆ ಅಲೆ ಎಲ್ಲೆಡೆ ತೀವ್ರವಾಗಿದ್ದು, ಇದು ತಹಬಂದಿಗೆ ಬಂದ ಕೂಡಲೇ 15-20 ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಕೊರೊನಾ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ರಾಜ್ಯ ಸರ್ಕಾರ ಯೋಜಿಸಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್‌ನಲ್ಲಿ ಬಂದರೆ, ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್‌ನಲ್ಲಿ ಆಯೋಜಿಸಬಹುದು ಎಂದು ಸಚಿವ ಸುರೇಶ್ ಕುಮಾರ್ ಸಭೆಯಲ್ಲಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!


