ಒಡಿಶಾದ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಿದ ಸೋಂಕು: ಕೊರೊನಾ ಕೇಂದ್ರಗಳನ್ನು ಆರಂಭಿಸಿಲು ಒತ್ತಾಯ
PC: Hindu

ಒಡಿಶಾದ 13 ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಲ್ಲಿ(PVTG) ಡೊಂಗೇರಿಯಾ ಕೊಂಡಾ ಮತ್ತು ಬೋಂಡಾ ಬುಡಕಟ್ಟು ಸಮುದಾಯಗಳಲ್ಲಿ ಕೊರೊನಾ ಪ್ರಕರಣಗಳು ಸ್ಫೋಟಗೊಳ್ಳುತ್ತಿವೆ. ಈ ಹಿನ್ನೆಲೆ ತಕ್ಷಣವೇ ಕೊರೊನಾ ಕೇಂದ್ರಗಳನ್ನು ಆರಂಭಿಸಲು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಕವಿಗಳು ಒತ್ತಾಯಿಸಿದ್ದಾರೆ.

ರಾಯಗಡಾದ ನಿಯಾಮಗಿರಿ ಬೆಟ್ಟಗಳಲ್ಲಿ ವಾಸಿಸುತ್ತಿರುವ ಡೊಂಗ್ರಿಯಾ ಕೊಂಡಾ ಸಮುದಾಯದ 85ಕ್ಕೂ ಹೆಚ್ಚು ಸದಸ್ಯರಲ್ಲಿ ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವಾರ 23 ಮಂದಿಯಲ್ಲಿ ಕಾಣಿಸಿಕೊಂಡಿದ್ದರೇ, ಕಳೆದ 3 ದಿನಗಳಲ್ಲಿ ಇನ್ನೂ 62 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ರಾಯಗಡ ಜಿಲ್ಲೆಯ ಕಲ್ಯಾಣ್ಸಿಂಗ್‌ಪುರ ಮತ್ತು ಬಿಸ್ಸಂಕಟಕ್ ಬ್ಲಾಕ್‌ನಲ್ಲಿ ರ್‍ಯಾಪಿಡ್ ಆಂಟಿಜನ್ ಟೆಸ್ಟ್‌ ನಡೆಸಲಾಗುತ್ತಿದೆ. ಅದೇ ರೀತಿ, ಮಲ್ಕಂಗಿರಿ ಜಿಲ್ಲೆಯಲ್ಲಿ ವಾಸಿಸುವ 12 ಬೋಂಡಾ ಬುಡಕಟ್ಟು ಜನಾಂಗದವರಲ್ಲಿ ಕೊರೊನಾ ಸೋಂಕು ದೃಢವಾಗಿದೆ.

ಇದನ್ನೂ ಓದಿ: ‘ಇಷ್ಟು ನಿಧಾನಕ್ಕೆ ಪ್ರಕ್ರಿಯೆ ನಡೆದರೆ ದೆಹಲಿಯ ವಯಸ್ಕರಿಗೆ ಲಸಿಕೆ ನೀಡಲು 30 ತಿಂಗಳು ಬೇಕು: ಕೇಜ್ರಿವಾಲ್

ಬೋಂಡಾಗಳು ಮತ್ತು ಡೊಂಗ್ರಿಯಾ ಕೊಂಡಾಗಳು ಕೋವಿಡ್‌ಗೆ ಹೆಚ್ಚು ಗುರಿಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ನಿಯಾಮ್‌ಗಿರಿ ಸುರಕ್ಷಾ ಸಮಿತಿಯ ಲಿಂಗರಾಜ್ ಆಜಾದ್ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಫುಲ್ಲಾ ಸಮಂತರಾ ನೇತೃತ್ವದ ಕಾರ್ಯಕರ್ತರು, ಮುಖ್ಯಮಂತ್ರಿ ಪಟ್ನಾಯಕ್ ಅವರಿಗೆ ಬಹಿರಂಗ ಪತ್ರ ಬರೆದು ಎರಡು ಸಮುದಾಯಗಳ ಜೀವವನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

“ಆದಿವಾಸಿ ಸಂಸ್ಕೃತಿಗಳಲ್ಲಿ ಗೌಪ್ಯತೆ ಮತ್ತು ಪ್ರತ್ಯೇಕತೆಯ ಬಗ್ಗೆ ವಿಭಿನ್ನ ಆಲೋಚನೆಗಳಿರುವುದರಿಂದ ಹೋಂ ಕ್ಯಾರೆಂಟೈನ್‌ನ ಪ್ರಸ್ತುತ ಮಾರ್ಗಸೂಚಿಗಳನ್ನು ಆದಿವಾಸಿ ಸಮುದಾಯಗಳಲ್ಲಿ ಅಳವಡಿಸಲು ಸಾಧ್ಯವಾಗುವುದಿಲ್ಲ. ಆದಿವಾಸಿ ಪ್ರದೇಶಗಳಲ್ಲಿನ ಹೋಂ ಕ್ಯಾರೆಂಟೈನ್‌ ಕ್ರಮಗಳು ಕೊರೊನಾ ಹರಡುವಿಕೆಯನ್ನು ಅಥವಾ ಸಾಂಕ್ರಾಮಿಕದ ಸರಪಳಿಯನ್ನು ಮುರಿಯಲು ಸರಿಯಾದ ಮಾರ್ಗವಲ್ಲ” ಎಂದು ಕಾರ್ಯಕರ್ತರು ಪತ್ರದಲ್ಲಿ ಹೇಳಿದ್ದಾರೆ.

“ರೋಗಲಕ್ಷಣಗಳನ್ನು ನಿಯಮಿತವಾಗಿ ಮೇಲ್ವಿಚಾರಣೆಯಿಂದ ನೋಡಿಕೊಳ್ಳಲು ಮತ್ತು ಕೊರೊನಾ ಸೋಂಕಿತರನ್ನು ಆರೈಕೆ ಕೇಂದ್ರಗಳಿಗೆ ವರದಿ ಮಾಡಲು, ತರಬೇತಿ ಪಡೆದ ಸ್ಥಳೀಯ ಸ್ವಯಂಸೇವಕರ ತಂಡವು ಮನೆ ಮನೆ ಸಮೀಕ್ಷೆಯನ್ನು ಮಾಡಬೇಕು” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರದೇಶದ ಎಲ್ಲಾ ಬುಡಕಟ್ಟು ಜನಾಂಗದವರಿಗೆ ಸುರಕ್ಷತಾ ಮುನ್ನೆಚ್ಚರಿಕೆಗಳಾಗಿ ಸಾಕಷ್ಟು ಸಂಖ್ಯೆಯ ಟ್ರಿಪಲ್ ಲೇಯರ್ಡ್ ಮಾಸ್ಕ್‌ಗಳು, ಪಿಪಿಇ ಕಿಟ್‌ಗಳು, ಔಷಧಿಗಳು ಮತ್ತು ಸೋಂಕಿನ ವಿರುದ್ಧ ಹೋರಾಡಲು ವಿಟಮಿನ್‌ಗಳನ್ನು ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಮೇ 24 ರೊಳಗೆ ಭಾರತಕ್ಕೆ ಅಪ್ಪಳಿಸಲಿದೆ ‘ಯಾಸ್‌ ಚಂಡಮಾರುತ’ – ಹವಾಮಾನ ಇಲಾಖೆ ಎಚ್ಚರಿಕೆ

LEAVE A REPLY

Please enter your comment!
Please enter your name here