Homeಕರೋನಾ ತಲ್ಲಣರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

'ಲಾನ್ಸೆಟ್' ಮ್ಯಾಗಝೀನ್ ಅಂದಾಜಿಸುವಂತೆ ಭಾರತದಲ್ಲಿ ಆಗಸ್ಟ್ 2021ರ ವೇಳೆಗೆ ಸುಮಾರು ಹತ್ತು ಲಕ್ಷ ಜನ ಕೊರೋನಾ ಸೋಂಕಿನಿಂದ ಮೃತಪಡುವ ಸಾಧ್ಯತೆಯಿದೆ.

- Advertisement -
- Advertisement -

ಮೂಲ : ಸಂಜಯ್ ಕಪೂರ್, ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು

ಕನ್ನಡಕ್ಕೆ: ರಾಜೇಶ್ ಹೆಬ್ಬಾರ್

ಗುಜರಾತ್ ಮಾದರಿ ಎಂಬ ಅತಿರಂಜಿತ ಅಲೆಯಲ್ಲಿ 2014 ರ ಸಂಸತ್ ಚುನಾವಣೆಯನ್ನು ಗೆದ್ದು ನರೇಂದ್ರ ಮೋದಿ ಪ್ರಧಾನಿಯಾದಾಗ ಇಡೀ ದೇಶಕ್ಕೆ ಬಹು ನಿರೀಕ್ಷೆಯಿತ್ತು. ಕುತೂಹಲವಿತ್ತು. ಏನಿದು ಗುಜರಾತ್ ಮಾದರಿಯ ಅಭಿವೃದ್ಧಿ ಎಂದು? ವಿಪರ್ಯಾಸವೆಂದರೆ ಅಂದು ಮೋದಿಯವರ ಗೆಲುವಿಗೆ ಕಾರಣವಾದ ಬಹುಚರ್ಚಿತ, ಬಹುನಿರೀಕ್ಷಿತ ಗುಜರಾತ್ ಮಾದರಿಯ ಅಭಿವೃದ್ದಿ ಇಂದಿಗೂ ರಹಸ್ಯವಾಗಿಯೇ ಉಳಿದಿರುವುದು.

ಹಿಂದೆ ಗುಜರಾತಿನಲ್ಲಿ ನರೇಂದ್ರ ಮೋದಿಯವರೊಂದಿಗೆ ಕರ್ತವ್ಯ ನಿರ್ವಹಿಸಿದ ಹಿರಿಯ ಅಧಿಕಾರಿಗಳನ್ನು, ಪ್ರಧಾನಿಯಾಗಿ ನರೇಂದ್ರ ಮೋದಿಯವರಲ್ಲಿ ಏನನ್ನು ನಿರೀಕ್ಷಿಸಬಹುದೆಂದು ಕೇಳಿದರೆ ಅವರ ಉತ್ತರ ಅತ್ಯಂತ ಆಘಾತಕಾರಿಯಾಗಿತ್ತು.

ಅವರು ಹೇಳಿದ್ದೆಂದರೆ “ಅಂಕಿ ಅಂಶಗಳನ್ನು ತಮಗೆ ಅನುಕೂಲವಾಗುವಂತೆ ತಿರುಚುವುದು, ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ಬೆದರಿಸುವುದು, ಗುರಿ ಮುಟ್ಟಲು ಸಾಧ್ಯವಿರದ, ವಾಸ್ತವದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವೇ ಇರದ ಯೋಜನೆಗಳನ್ನು ಘೋಷಿಸುವುದು ಇಷ್ಟರ ಹೊರತಾಗಿ ಇನ್ನೇನನ್ನು ನಿರೀಕ್ಷಿಸುವ ಹಾಗಿಲ್ಲ. ಅವರು ಎಂದೂ ಪತ್ರಕರ್ತರನ್ನು ಭೇಟಿಯಾಗುವುದಿಲ್ಲ. ಬದಲಾಗಿ ಪತ್ರಕರ್ತರನ್ನು ದ್ವೇಷಿಸುತ್ತಾರೆ. ಇದಲ್ಲದೇ ಹೆಚ್ಚಿನ ನಿರೀಕ್ಷೆಗಳೇನು ಇಲ್ಲ” ಎಂದು.

ಅಂದು ಆ ಅಧಿಕಾರಿಗೆ ಮೋದಿಯವರ ಸಾಮರ್ಥ್ಯದ ಕುರಿತು ಯಾವ ಅಭಿಮಾನವೂ ಉಳಿದಿರಲಿಲ್ಲ. ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಸಿದ ಏಳು ವರ್ಷದ ನಂತರ ಅಂದು ಆ ಹಿರಿಯ ಅಧಿಕಾರಿ ಹೇಳಿದ ಮಾತು ಅಕ್ಷರಶಃ ನಿಜವಾಗಿದೆ. ದುರದೃಷ್ಟವಶಾತ್ ಆ ಅಧಿಕಾರಿ ಇಂದು ಕೊರೋನಾ ವೈರಸ್ ಗೆ ಮೃತರಾಗಿದ್ದಾರೆ. ಆದರೆ ಅವರು ಹೇಳಿದ ಸತ್ಯ ನಮ್ಮ ಕಣ್ಣಮುಂದೆ ರಾಚುತ್ತಿದೆ. ಕೊರೋನಾ ನಿರ್ವಹಣೆಯಲ್ಲಿನ ಭಾರತ ಸರ್ಕಾರದ ವೈಫಲ್ಯ ಮತ್ತೊಮ್ಮೆ ಈ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ಅಂಕಿ ಅಂಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವ, ಬೇಕಾದಂತೆ ಪ್ರಸ್ತುತ ಪಡಿಸುವ ಮೋದಿಯವರ ಹಳೆಯ ಕೌಶಲ್ಯದ ಪರಿಣಾಮವಾಗಿ ದೇಶ ಇಂದು ಕೊರೋನಾ ಎರಡನೇ ಅಲೆಯ ಮಹಾಸ್ಪೋಟಕ್ಕೆ ಸಿದ್ಧತೆಯನ್ನೇ ಮಾಡಿಕೊಳ್ಳಲೂ ಸಾಧ್ಯವಾಗದಂತೆ ಮಾಡಿದೆ. ಇವತ್ತು ನಮ್ಮ ಕಣ್ಣ ಮುಂದಿರುವುದು ಕೇವಲ ಅಂಕಿ ಸಂಖ್ಯೆಗಳಲ್ಲ. ನಮ್ಮಂತಹದೇ ಮನುಷ್ಯರ ದೇಹಗಳು. ಕೊನೆಯಿಲ್ಲದ ಸ್ಮಶಾನದ ಮುಂದಿನ ಸರತಿ ಸಾಲುಗಳು. ನೈಜ ಅಂಕಿ ಅಂಶಗಳನ್ನು ಮರೆಮಾಚುವ ಸರ್ಕಾರದ ತಂತ್ರಕ್ಕೆ ಬಲಿಯಾದ ಬಲಿಪಶುಗಳು. ಪ್ರವಾಹ ಬಂದಾಗ ಪ್ರಾಣಿಗಳ ದೇಹ ನದಿಯಲ್ಲಿ ತೇಲುವಂತೆ ಮನುಷ್ಯರ ಮೃತ ದೇಹಗಳಿಂದು ನದಿಯಲ್ಲಿ ಸರಾಗವಾಗಿ ಹರಿದುಬರುತ್ತಿವೆ. ಇದು ಇವರೆಲ್ಲ ಇಂದು ಜನ ಮರಣ ದಾಖಲಾತಿಯಲ್ಲಿ ಅವಿತು ಕುಳಿತು ನಾವು ಬರೀ ದೇಹವಾಗುವಾಗ ನಮ್ಮ ನಾಯಕ ನಿದ್ರೆಯಲ್ಲಿ ಮುಳುಗಿದ್ದ ಎಂದು ಅಣಕಿಸುತ್ತಿರುವಂತಿದೆ. ಈ ಮಹಾ ದುರಂತದಿಂದಾಗಿ ಭಾರತದ ಮೇಲಿನ ಅಂತರಾಷ್ಟ್ರೀಯ ಸಮುದಾಯಗಳ ವಿಶ್ವಾಸಾರ್ಹತೆ ನೆಲ ಕಚ್ಚಿದೆ. ಭಾರತದ ಸರ್ಕಾರದ ಅಂಕಿ ಅಂಶಗಳು ಮತ್ತೊಂದು ಚೀನಾದ ಮ್ಯಾಜಿಕಲ್ ನಂಬರ್‌ಗಳಂತೆ ಜಗತ್ತಿನ ಇತರ ದೇಶಗಳಿಗೆ ಭಾಸವಾಗುತ್ತಿದೆ.

ಅತ್ಯಂತ ದುರದೃಷ್ಟ ಯಾವುದೆಂದರೆ ವಿವರಣೆಯಿಲ್ಲದ ಸಾವಿರಾರು ಸಾವು ನೋವುಗಳ ನಂತರವೂ ಸರ್ಕಾರದ ಕೊರೋನಾ ವಿರುದ್ಧದ ಹೋರಾಟದ ತಂತ್ರದಲ್ಲಿ ಬದಲಾವಣೆಯಿಲ್ಲದಿರುವುದು. ಮತ್ತದೇ ಹಳೆಯ ನಕಲಿ ಅಂಶಗಳ ತಂತ್ರಕ್ಕೆ ಮೊರೆಹೋಗುತ್ತಿರುವುದು.

ಕಳೆದ ಏಳು ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕರೆದಿಲ್ಲ. ಆದರೂ ‘ಡಿಜಿಟಲ್ ಇಂಡಿಯಾ’ ‘ಸ್ಕಿಲ್ ಇಂಡಿಯಾ’ ದಿಂದ ಸ್ವಚ್ಛ ಭಾರತ ಅಭಿಯಾನದವರೆಗೆ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಈ ಯಾವ ಯೋಜನೆಗಳು ಉದ್ಧೇಶಿತ ಗುರಿಯನ್ನು ಇದುವರೆಗೆ ತಲುಪಲು‌ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ಪ್ರಧಾನಿಗಳು ಮಾತ್ರ ಈ ಕುರಿತು ಯಾವ ವಿವರಣೆಯನ್ನು ನೀಡದೆ ಮುಂದಿನ ಯೋಜನೆ ಘೋಷಿಸಲು ಅತಿ ಉತ್ಸಾಹದಿಂದ ಮುನ್ನುಗ್ಗುತ್ತಿದ್ದಾರೆ. ಎಲ್ಲಾ ಯೋಜನೆಗಳ ಅನುಷ್ಠಾನದ ಪರಿಣಾಮವನ್ನು ತೋರಿಸಲು ಸರ್ಕಾರ ಯಾವ ಗಂಭೀರ ಕ್ರಮವನ್ನು ಕೈಗೊಳ್ಳುವುದಿಲ್ಲ. ಬದಲಾಗಿ ನಕಲಿ, ಅಸಮರ್ಪಕ ಅಂಕಿ ಅಂಶಗಳನ್ನು ಜನರ ಮುಂದಿಡುತ್ತದೆ.

ಅಗತ್ಯ ಸೇವಾ ವಲಯ, ಅಭಿವೃದ್ಧಿ ವಲಯದ ಕಾರ್ಯಕ್ಷಮತೆಯನ್ನು ಸರ್ಕಾರ ಇದುವರೆಗೆ ಮರೆ ಮಾಚುತ್ತಲೇ ಬಂದಿದೆ. ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪಾದನೆಯ ಸೂಚ್ಯಂಕವಂತೂ ಹಿಂದಿನ ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಇಂದಿನ ಮೋದಿ ಸರ್ಕಾರದ ಕಾರ್ಯ ಸಾಧನೆ ಎಷ್ಟು ಅತ್ಯುತ್ತಮವಾಗಿದೆ ಎಂದು ತೋರಿಸುವ ನಿಟ್ಟಿನಲ್ಲೇ ಇದುವರೆಗೆ ಕೇಂದ್ರೀಕೃತವಾಗಿದೆ. ಎನ್ ಡಿ ಎ ಸರ್ಕಾರ ಬಂದಾಗಿನಿಂದಲೂ ಸರ್ಕಾರಿ ಪ್ರಾಯೋಜಿತ ಅರ್ಥಶಾಸ್ತ್ರಜ್ಞರ ಅಂಕಿ ಅಂಶಗಳನ್ನು ತಿರುಚುವ ಸತತ ಪ್ರಯತ್ನದ ಫಲಾವಾಗಿ ಇಂದು ಸರ್ಕಾರ ಹಿಂದಿನ ಸರ್ಕಾರದ ಸಾಧನೆಯನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದೆ. ಈಗಿನ ಹಾಗೂ ಹಿಂದಿನ ಸರ್ಕಾರಗಳು ಜಿಡಿಪಿಯನ್ನು ಊಹಾತ್ಮಕವಾಗಿ ಎರಡು ಅಂಶದಷ್ಟು ಹೆಚ್ಚಿಸಿ ಬಿಂಬಿಸಿವೆ. ಹಿಂದಿನ ಸರ್ಕಾರದ ಅಭಿವೃದ್ಧಿ ದರವನ್ನು ಇಳಿಸಿದ್ದುದು ಸರಿ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ ಅರ್ಥ ಶಾಸ್ತ್ರಜ್ಞ ಹಾಗೂ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್. ಸರ್ಕಾರ ಇನ್ನಷ್ಟು ಧೈರ್ಯಮಾಡಿ ತನ್ನ ಅಂಕಿ ಅಂಶಗಳನ್ನು ವಿದೇಶಿ ರೇಟಿಂಗ್ ಏಜೆನ್ಸಿಗಳ ಮೂಲಕ ಪ್ರಮಾಣೀಕರಿಸಿ ಅಂತರಾಷ್ಟ್ರೀಯ ಹಣಕಾಸು ನಿಧಿ (IMF), ವರ್ಡ್ ಬ್ಯಾಂಕ್ ಮುಂತಾದ ಅಂತರಾಷ್ಟ್ರೀಯ ಸಂಘ ಸಂಸ್ಥೆಗಳನ್ನು ಒಂದಷ್ಟು ಕಾಲ ನಂಬಿಸಲು ಯಶಸ್ವಿಯಾಯಿತು.

ಆದರೆ ಸರ್ಕಾರದ ಪ್ರಯತ್ನಗಳು ಅಷ್ಟಕ್ಕೆ ನಿಲ್ಲಲಿಲ್ಲ. ನಕಲಿ ಅಂಕಿ ಅಂಶಗಳನ್ನು ಕೇವಲ ದೇಶದ ಆರ್ಥಿಕ ನೀತಿ ನಿಯಮಗಳನ್ನು ನಿರೂಪಿಸಲು ಮಾತ್ರ ಸರ್ಕಾರ ಬಳಸಿಕೊಳ್ಳಲಿಲ್ಲ. ಇನ್ನೂ ಮುಂದುವರೆದು ತನ್ನ ರಾಜಕೀಯ ಸಾಮಾಜಿಕ ಪೂರ್ವಾಗ್ರಹಗಳು ಸತ್ಯವೆಂದು ತೋರಿಸಲು ಅದಕ್ಕೆ ಅಗತ್ಯ ಜನ ಬೆಂಬಲ ಪಡೆಯಲು ವಿಶ್ವಾಸಾರ್ಹವಲ್ಲದ ಅಂಕಿ ಅಂಶಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಯಿತು. ಅದರ ಭಾಗವಾಗಿ ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆ (NRC) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿತು. ಈ ಆತಂಕಕಾರಿ ಯೋಜನೆಗಳ ಸಮರ್ಥನೆಗೆ ಸರ್ಕಾರ ದೇಶಕ್ಕೆ ವಿದೇಶಗಳಿಂದ ವಲಸೆ ಬಂದಿರಬಹುದಾದ ಮುಸ್ಲಿಂ ಧರ್ಮೀಯರು ಹಾಗೂ ಇತರರ ಸಂಖ್ಯೆ ಈಗ ಲಭ್ಯವಿರುವ ಸಂಖ್ಯೆಗಿಂತಲೂ ಎಷ್ಟೋ ಪಟ್ಟು ಅಧಿಕವಾಗಿದೆ ಎಂಬ ಕಾಲ್ಪನಿಕ ಅಂಕಿ-ಅಂಶಗಳನ್ನು ಜನರ ಮುಂದಿಟ್ಟಿತು. ವಿಪರ್ಯಾಸವೆಂದರೆ ಸರ್ಕಾರದ ಈ ನಕಲಿ ಕಾಲ್ಪನಿಕ ದತ್ತಾಂಶಗಳು ಜನರ ಬದುಕಿಗೆ ನೇರ ಸಂಬಂಧ ಹೊಂದಿದ್ದರೂ ಯಾರೂ ಅದನ್ನು ಪ್ರಶ್ನಿಸಲಿಲ್ಲ.

ದೇಶಕ್ಕೆ ಕೊರೊನಾ ಮೊದಲನೇ ಅಲೆ ದಾಳಿಯಿಟ್ಟಾಗ ಸರ್ಕಾರ ಭಯಾನಕ ಅನಿರ್ದಿಷ್ಟಿತ ಲಾಕ್ ಡೌನ್ ಘೋಷಿಸಿತು. ಆದರೂ ಇಡೀ ದೇಶದಲ್ಲಿ ಆಗ ಇದ್ದ ಸೋಂಕಿತರ ಸಂಖ್ಯೆ ಕೇವಲ 600. ನಂಬಲರ್ಹವಾದ, ಸೂಕ್ತ ಪ್ರಮಾಣೀಕೃತ ದತ್ತಾಂಶಗಳ ಆಧಾರವಿಲ್ಲದೇ ತೆಗೆದುಕೊಂಡ ಲಾಕ್ ಡೌನ್ ನಿರ್ಧಾರ ದೇಶವನ್ನು ಮಹಾನ್ ಆರ್ಥಿಕ ಕುಸಿತಕ್ಕೆ ದೂಡಿತು. ಜಿಡಿಪಿ ಪ್ರಮಾಣದಲ್ಲಿ ಜಗತ್ತಿನಲ್ಲಿಯೆ ಅತ್ಯಂತ ಕನಿಷ್ಠ ಪ್ರಮಾಣ -39ಕ್ಕೆ ಕುಸಿಯಿತು. ಸಾವಿರಾರು ವಲಸೆ ಕಾರ್ಮಿಕರು ನಗರಗಳಿಂದ ಕಾಲ್ನಡಿಗೆಯಲ್ಲಿಯೇ ತಮ್ಮ ಊರುಗಳಿಗೆ ಹೊರಡುವಂತಾಯಿತು. ಆದರೂ ಸರ್ಕಾರ ಆರ್ಥಿಕ ಕುಸಿತದಲ್ಲಿ ತನ್ನ ಪಾತ್ರವನ್ನು ನಿರಾಕರಿಸುತ್ತಲೇ ಮುಂದುವರೆಯಿತು.

2020 ರಲ್ಲಿ ದೇಶ ತನ್ನನ್ನು ಮೊದಲನೇ ಕೊರನೋ ಅಲೆಯ ಹೊಡೆತದ ತೀವ್ರತೆಯಿಂದ ತಪ್ಪಿಸಿಕೊಂಡಿರಬಹುದು. ಪ್ರಧಾನಿ ಮೋದಿಯವರು ತಮ್ಮ ಎದೆಯುಬ್ಬಿಸಿ ನಾವು ಕೊರೋನಾ ಸಾಂಕ್ರಮಿಕವನ್ನು ಗೆದ್ದೆವೆಂದು ಜಗತ್ತಿನ ಮುಂದೆ ಭೀಗಿರಬಹುದು. ಜಗತ್ತಿನ 80 ಬಡ ರಾಷ್ಟ್ರಗಳೂ ಸೇರಿದಂತೆ 150 ರಾಷ್ಟ್ರಗಳಿಗೆ ಲಸಿಕೆಯೆನ್ನು ಭಾರತ ನೀಡುತ್ತಿದೆ ಎಂದು ಸರ್ಕಾರ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಬಹುದು. ಆದರೆ ಕೊರೋನಾ ಎರಡನೆ ಅಲೆಯ ಭೀಕರ ಸುನಾಮಿ ದೇಶದ ಕದ ತಟ್ಟುತ್ತಿದ್ದಾಗ ಅಂದರೆ 2021 ಮಾರ್ಚ್ ವೇಳೆಗೆ ಸರ್ಕಾರ ತನ್ನ ಪ್ರಜೆಗಳನ್ನು ರಕ್ಷಿಸುವ ಬದಲು ವಿದೇಶಕ್ಕೆ ಲಸಿಕೆಗಳನ್ನು ರಫ್ತು ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ದುರಂತವೆಂದರೆ ಪ್ರಧಾನಿ ಮೋದಿಯವರು ತಮ್ಮ ಅಂತರಾಷ್ಟ್ರೀಯ ಘನತೆ, ಗೌರವನ್ನು ಹೆಚ್ಚಿಸಿಕೊಳ್ಳಲು ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಿರುವ ದೇಶಗಳಿಗೂ ಲಸಿಕೆಯನ್ನು ಹಂಚಲು ಮುಂದಾಗಿದ್ದು.

ಇದೇ ಸಂದರ್ಭದಲ್ಲಿ ಸರ್ಕಾರ ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ನಿರ್ಲಕ್ಷಿಸುತ್ತ, ಇತಿಹಾಸವನ್ನು ಮರೆತು ತನ್ನ ಚಟುವಟಿಕೆಯಲ್ಲಿ ಮುಳುಗಿತು. ಯುರೋಪ್, ದಕ್ಷಿಣ ಆಫ್ರಿಕಾ, ಬ್ರೇಜಿಲ್ ಮುಂತಾದ ಕಡೆ ಕೊರೋನಾ ರೂಪಾಂತರ ತಳಿ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಅಂಶವನ್ನು ಕಂಡೂ ಕಾಣದಂತೆ ಕಡೆಗಣಿಸಿ ಚುನಾವಣೆಗಳ ಕಡೆ ಗಮನ ಹರಿಸಿತು. ಬಹುಮುಖ್ಯವಾದ ಕೈ ತೊಳೆಯುವ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಗಾಳಿಗೆ ತೂರಿ ದೊಡ್ಡ ದೊಡ್ಡ ಚುನಾವಣಾ ರ್ಯಾಲಿಗಳನ್ನು ನಡೆಸಲು ಅನುಮತಿ ನೀಡಿತು. ಚುನಾವಣೆಗಳ ನಡುವೆ ಹರಿದ್ವಾರದಲ್ಲಿ ಲಕ್ಷಾಂತರ ಭಕ್ತರು ಸೇರಿ ಮಹಾ ಕುಂಭಮೇಳದ ಸಂಭ್ರಮದಲ್ಲಿ ತೊಡಗಿದರು. 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಂಭಮೇಳವನ್ನು ಸರ್ಕಾರ ಒಂದು ವರ್ಷ ಮೊದಲೇ ಆಯೋಜಿಸುವ ನಿರ್ಧಾರಕ್ಕೆ ಮುಂದಾಯಿತೇ? ಎಂಬ ಅನುಮಾನಗಳಿಗೆ ಏಳದೇ ಇರುವುದಿಲ್ಲ.

ಈಗಲೂ ಸರ್ಕಾರ ಕುಂಭಮೇಳ ಅಥವಾ ಚುನಾವಣೆಗಳು ಕೋವಿಡ್ ಸಾಂಕ್ರಾಮಿಕ ಹರಡಲು ಕಾರಣ ಎಂದು ಒಪ್ಪಲು ಸಿದ್ಧವಿಲ್ಲ. ಹಾಗಾದರೆ ಕೊರೋನಾ ಎರಡನೆ ಅಲೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ ? ರಾಯಿಟರ್ಸ್ ವರದಿಯ ಪ್ರಕಾರ ಅನೇಕ ವಿಜ್ಞಾನಿಗಳು ಎರಡನೇ ಅಲೆಯ ಕುರಿತು ಪ್ರಧಾನಿಯವರ ಕಾರ್ಯಾಲಯಕ್ಕೆ ಈ ಮೊದಲೇ ಮಾಹಿತಿಯನ್ನು ನೀಡಿದ್ದರು. ಸರ್ಕಾರ ಎಂದಿನಂತೆ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುನ್ನಡೆಯಿತು. ನಿರೀಕ್ಷೆಯಂತೆ ಪಂಚ ರಾಜ್ಯ ಚುನಾವಣೆಗಳು ಮತ್ತು ಕುಂಭ ಮೇಳ ಹಿಂದೆಂದೂ ಕಂಡರಿಯದ ಸಾವು ನೋವಿಗೆ ಎಡೆಮಾಡಿಕೊಟ್ಟಿತು. ಈ ಎರಡು ಕಾರ್ಯಕ್ರಮಗಳಿಂದ ಕೊರೋನಾ ವ್ಯಾಪಕವಾಗಿ ಹರಡಲಿದೆ ಎಂದು WHO ಮೇಲಿಂದ ಮೇಲೆ ಎಚ್ಚರಿಕೆಯನ್ನು ನೀಡುತ್ತಲೇ ಬಂತು. ಆದರೆ 2021 ಚುನಾವಣೆ ಕಾರಣದಿಂದ ಪಶ್ಚಿಮ ಬಂಗಾಳದಲ್ಲಿ ಕೊರೋನಾ ಪರೀಕ್ಷೆಯನ್ನೇ ನಿಲ್ಲಿಸಿಬಿಟ್ಟರು. ಪರಿಣಾಮ ಚುನಾವಣೆ ಸಮಯಕ್ಕಿಂತ ಈಗ ಪಶ್ಚಿಮ ಬಂಗಾಳದಲ್ಲಿ ಸೋಂಕು ಹರಡುವ ಪ್ರಮಾಣ 2000 ಪಟ್ಟು ಹೆಚ್ಚಳವಾಗಿದೆ. ಬಿಜೆಪಿ ಎಲೆಕ್ಷನ್ ಕೆಲಸಕ್ಕೆ ಬಿಹಾರ ಉತ್ತರ ಪ್ರದೇಶದಿಂದ ಕರೆತಂದಿದ್ದ ಪಕ್ಷದ ಕಾರ್ಯಕರ್ತರು ಸೋಂಕಿನೊಂದಿಗೆ ಊರಿಗೆ ಮರಳುವಂತಾಗಿದೆ.

ಹಾಗೇ ಕುಂಭಮೇಳದಲ್ಲಿ ಭಾಗವಹಿಸಿದವರು ಕೊರೊನಾ ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸಿ ಆರೋಗ್ಯ ವ್ಯವಸ್ಥೆಗೆ ತಲೆನೋವಾಗಿದ್ದಾರೆ. ಕುಂಭಮೇಳದಲ್ಲಿ ಭಾಗವಹಿಸಿ ಯಾವಾಗ ಇವರು ಊರಿಗೆ ಮರಳಿದರೋ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೊರೋನಾ ಸಮುದಾಯಗಳ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬಿತು. ತಮ್ಮ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮಾಡೆಲ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ಮೊದಲಿನಿಂದಲೂ ಮರೆ ಮಾಚಿಕೊಂಡು ಬರುತ್ತಿರುವ ಗುಜರಾತ್ ನಂತಹ ರಾಜ್ಯಗಳು ಇಂದಿಗೂ ಸರಿಯಾದ ಸಾವಿನ ಸಂಖ್ಯೆಯನ್ನು ಪ್ರಕಟಿಸುತ್ತಿಲ್ಲ. ಆದರೆ ಅಲ್ಲಿ ನೈಜ ಪರಿಸ್ಥಿತಿ ಮಾರಣಾಂತಿಕ ಯುದ್ಧಭೂಮಿಗಿಂತ ಭಿನ್ನವಾಗಿಲ್ಲ. ಗುಜರಾತ್ ರಾಜ್ಯದ ವಸ್ತು ಸ್ಥಿತಿಗಳು ಪತ್ರಿಕೆಗಳ ವರದಿಯಿಂದ ನಿಧಾನಕ್ಕೆ ಹೊರಬೀಳುತ್ತಿವೆ. ಉದಾಹರಣೆಗೆ ಸೌರಾಷ್ಟ್ರ ಸಮಾಚಾರ ಪತ್ರಿಕೆಯು ಮೇ 10, 2021 ರಂದು ಪತ್ರಿಕೆಯ 18 ಪುಟಗಳಲ್ಲಿ(ಒಟ್ಟು 20 ಪುಟಗಳಲ್ಲಿ) 236 ಸಾವಿನ ಸುದ್ಧಿಯನ್ನು ಪ್ರಕಟಿಸಿತು. ಆದರೆ ಇದೇ ಎರಡು ತಿಂಗಳ ಹಿಂದೆ ಇದ್ದ ಸಾವಿನ ಸಂಖ್ಯೆ ಕೇವಲ 26. ಇಷ್ಟಾದರೂ ಎಚ್ಚೆತ್ತುಕೊಳ್ಳದ ಗುಜರಾತ್ ಸರ್ಕಾರ ತನಗೆ ಮುಜುಗರವಾಗುವ ಯಾವ ಅಂಕಿ ಅಂಶಗಳನ್ನು ಹೊರಹಾಕುತ್ತಿಲ್ಲ. ಅವಾಸ್ತವಿಕ ಅಂಕಿ ಸಂಖ್ಯೆಗಳನ್ನು ನೀಡುತ್ತ ಡ್ಯಾಮೇಜ್ ಕಂಟ್ರೋಲ್ ನಲ್ಲಿ ತೊಡಗಿದೆ.

ಉತ್ತರ ಪ್ರದೇಶದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ದುರಂತವೆಂದರೆ ಯೋಗಿ ಮುಖ್ಯಮಂತ್ರಿಯ ಆಡಳಿತದ ರಾಜ್ಯದಲ್ಲಿ ಅಲ್ಲಿನ ಆಡಳಿತ ಸಾವಿನ ಪರಿಣಾಮವನ್ನು ಬಹಿರಂಗ ಗೊಳಿಸದಂತೆ ಆಸ್ಪತ್ರೆಗಳು ಮತ್ತು ಬಡವರ ಮೇಲೆ ಒತ್ತಡ ಹೇರುತ್ತಿದೆ. ಸಾವಿರಾರು ಸೋಂಕಿತರ ಶವಗಳನ್ನು ನದಿ ದಡದಲ್ಲಿ ಹೂಳಲಾಗುತ್ತಿದೆ ಅಥವಾ ನದಿಗೆ ಎಸೆಯಲಾಗುತ್ತಿದೆ. ಈ ಮೂಲಕ ಸಾವಿನ ಸಂಖ್ಯೆಯು ಸರ್ಕಾರದ ಅಂಕಿ ಅಂಶಗಳಿಗೆ ಸೇರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ.

ಉಪಗ್ರಹ ಆಧಾರಿತ ಚಿತ್ರಗಳು ತೋರಿಸುವಂತೆ ಉತ್ತರ ಪ್ರದೇಶದ ಗಂಗಾ ನದಿಯ ದಂಡೆಯಲ್ಲಿ ದೊಡ್ಡ ಪ್ರಮಾಣದ ಬೆಂಕಿ, ಅನಧಿಕೃತ ಸ್ಮಶಾನಗಳು ಕಂಡು ಬರುತ್ತಿವೆ. ಆದರೆ ಎರಡು ತಿಂಗಳ ಹಿಂದಿನ ಅದೇ ಪ್ರದೇಶದ ಉಪಗ್ರಹ ಆಧಾರಿತ ಚಿತ್ರಗಳನ್ನು ಪರಿಶೀಲಿಸಿದರೆ ಬೆಂಕಿ, ಅಂತ್ಯಕ್ರಿಯೆಗಳು ಕಂಡುಬರುವುದಿಲ್ಲ.

ಉತ್ತರ ಪ್ರದೇಶದಲ್ಲಿ ಕೊರೋನಾ ಸಾವಿಗೆ ತುತ್ತಾಗುತ್ತಿರುವವರ ಸಂಖ್ಯೆ ಎಷ್ಟಿದೆಯೆಂದರೇ ಯಾರೂ ಎಣಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿನ ಆಮ್ಲಜನಕದ ಕೊರತೆ, ಅಥವಾ ಸಾವಿನ ಪ್ರಮಾಣದ ಕುರಿತು ವರದಿ ಪ್ರಕಟಿಸುವ ಪತ್ರಿಕೆ, ಪ್ರಶ್ನಿಸುವ ಪತ್ರಕರ್ತರನ್ನು ಯೋಗಿ ಸರ್ಕಾರ ಜೈಲಿಗೆ ಅಟ್ಟುತ್ತದೆ ಅಥವಾ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಭಯದಿಂದ ಮಾಧ್ಯಮಗಳು ಮತ್ತು ಪತ್ರಿಕೆಗಳ ಮೂಲಕ ನೈಜ ಅಂಕಿ ಸಂಖ್ಯೆಗಳು ಮತ್ತು ವಾಸ್ತವದ ವರದಿಗಳು ಬಹಿರಂಗಗೊಳ್ಳುತ್ತಿಲ್ಲ. ವೈರಸ್ ಮತ್ತು ಸರ್ಕಾರದ ಭಯದಿಂದ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಕರ್ತವ್ಯ ನಿಲ್ಲಿಸಿ ಕಣ್ಮರೆಯಾಗುತ್ತಿದ್ದಾರೆ. ಪರಿಸ್ಥಿತಿಯ ಭೀಕರತೆ ಎಷ್ಟಿದೆಯೆಂದರೆ ಸೋಂಕಿಗೆ ತುತ್ತಾಗುವವರ ಮೃತಪಡುವವರ ಪ್ರಮಾಣ ಯಾರಿಗೂ ಅಂದಾಜಿಸಲೂ ಸಾಧ್ಯವಾಗುತ್ತಿಲ್ಲ. ಬಹುಶಃ ಚುನಾವಣಾ ಆಯೋಗ 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊತ್ತಿಗೆ ಪ್ರಕಟಿಸುವ ಮತದಾರರ ಪಟ್ಟಿಯ ಮೂಲಕ ಸೋಂಕಿನಿಂದ ಸತ್ತವರ ಮಾಹಿತಿ ಹೊರಬೀಳಬಹುದು. ಇಷ್ಟಲ್ಲದೇ ಮತ್ತೇನನ್ನೂ ಈಗ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಸಮಾಜವಾದಿ, ಜನಪ್ರಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಪರಿಸ್ಥಿಯೇನು ಬೇರೆಯಾಗಿಲ್ಲ. ನಿತ್ಯ ಅಲ್ಲೂ ಸಾವಿನ ಸುಗ್ಗಿಯೇ!

‘ಲಾನ್ಸೆಟ್’ ಮ್ಯಾಗಝೀನ್ ಅಂದಾಜಿಸುವಂತೆ ಭಾರತದಲ್ಲಿ ಆಗಸ್ಟ್ 2021ರ ವೇಳೆಗೆ ಸುಮಾರು ಹತ್ತು ಲಕ್ಷ ಜನ ಕೊರೋನಾ ಸೋಂಕಿನಿಂದ ಮೃತಪಡುವ ಸಾಧ್ಯತೆಯಿದೆ. ಸದ್ಯದ ಸ್ಥಿತಿಯಲ್ಲಿ ಈ ಅಂದಾಜು ಕಡಿಮೆಯೇ. ಸದ್ಯ ನಮ್ಮ ಮುಂದಿರುವ ಅತಿ ದೊಡ್ಡ ಪ್ರಶ್ನೆಯೆಂದರೆ ಸರ್ಕಾರದ ಅಂಕಿ ಅಂಶಗಳ ತಿರುಚುವಿಕೆಯ ಕ್ರಿಮಿನಲ್ ಚಟುವುಟಿಕೆಯನ್ನು ಬೆಳಕಿಗೆ ತರುವವರು ಯಾರು ಎಂದು? ಆ ಮೂಲಕ ಕೊರೋನಾದಿಂದ ಸತ್ತವರಿಗೆ ನದಿಯಲ್ಲಿ ಅನಾಥ ದೇಹವಾಗುವುದರಿಂದ ತಪ್ಪಿಸಿ ಘನತೆಯ ಸಾವು ಸಿಗಬಹುದೇ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆ.


ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...