Homeಬಹುಜನ ಭಾರತಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ

ಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ

- Advertisement -
- Advertisement -

ಎರಡು ತಿಂಗಳ ಹಿಂದೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರು ಪ್ರಕಟವಾಗುವ ತನಕ ಮನೋರಂಜನ್ ಬ್ಯಾಪಾರಿ ಯಾರೆಂದು ಬಾಲಾಗಢದ ಮತದಾರರಿಗೆ ತಿಳಿದಿರಲಿಲ್ಲ. ಸಾಮಾನ್ಯ ಮತದಾರರಿರಲಿ, ಪಕ್ಷದ ಕಾರ್ಯಕರ್ತರಿಗೂ ಗೊತ್ತಿರಲಿಲ್ಲ. ಅವರ ಬದುಕು-ಸಂಘರ್ಷ-ಸಾಧನೆಗಳ ಕುರಿತು ಕರಪತ್ರಗಳನ್ನು ಅಚ್ಚು ಮಾಡಿ ಹಂಚಲಾಯಿತು.

ರಿಕ್ಷಾ ತುಳಿಯುತ್ತಿದ್ದ, ಸ್ಮಶಾನ ಕಾಯುತ್ತಿದ್ದ, ಅಡುಗೆ ಮಾಡುತ್ತಿದ್ದ, ರೇಲ್ವೆ ವ್ಯಾಗನ್‌ಗಳಿಂದ ಕಲ್ಲಿದ್ದಲು ಕದಿಯುತ್ತಿದ್ದ ಆತನ ಹೆಸರು ಮನೋರಂಜನ್ ಬ್ಯಾಪಾರಿ. ಪಶ್ಚಿಮ ಬಂಗಾಳದ ಮೊದಲ ದಲಿತ ಲೇಖಕ. ಜೈಲಿನಲ್ಲಿ ಅಕ್ಷರ ಕಲಿತು ಹತ್ತಕ್ಕೂ ಹೆಚ್ಚು ಕಾದಂಬರಿಗಳು ಮತ್ತು ನೂರಾರು ಸಣ್ಣ ಕತೆಗಳು ಹಾಗೂ ಅಧೋಲೋಕದ ಯಾತನೆ ಕುರಿತ ಆತ್ಮಕತೆ ಬರೆದ ಜಗತ್ತಿನ ಮೊದಲ ಬರಹಗಾರ.

ಆದರೆ ಬದುಕು ಅವರನ್ನು ಇದೀಗ ಬಂಗಾಳದ ವಿಧಾನಸಭೆಯನ್ನು ತಲುಪಿಸಿದೆ. ಹೂಗ್ಲಿ ಜಿಲ್ಲೆಯ ಬಾಲಾಗಢ ಮೀಸಲು ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.

ಇಂದು ಬಾಂಗ್ಲಾ ದೇಶವೆಂದು ಕರೆಯಲಾಗುವ ಅಂದಿನ ಪೂರ್ವ ಬಂಗಾಳದಿಂದ ಓಡಿಬಂದ ನಿರಾಶ್ರಿತ ನಾಮಶೂದ್ರ ಕುಟುಂಬ ಅವರದು. ದಶಕಗಳ ಅಲೆದಾಟದ ನಂತರ ಕೊಲ್ಕತ್ತಾದ ಹೊರವಲಯದ ಖುದಿರಾಬಾದ್ ಎಂಬಲ್ಲಿ ಕಲ್ನಾರಿನ ಛಾವಣಿಯ ಪುಟ್ಟ ಇಟ್ಟಿಗೆ ಮನೆಯನ್ನು ಕಟ್ಟಿಕೊಂಡರು.

ಈವರೆಗೆ 23 ಪುಸ್ತಕಗಳನ್ನು (ಹದಿಮೂರು ಕಾದಂಬರಿಗಳು ನೂರೈವತ್ತಕ್ಕೂ ಹೆಚ್ಚು ಸಣ್ಣ ಕತೆಗಳು) ರಚಿಸಿರುವ ಬ್ಯಾಪಾರಿ ಪಶ್ಚಿಮ ಬಂಗಾಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ರಾಜ್ಯ ಸರ್ಕಾರ ರಚಿಸಿರುವ ದಲಿತ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಇಲ್ಲಿಯವರೆಗೂ ಅವರದು ಸರಳ ಬದುಕು ಮತ್ತು ಶ್ರಮಜೀವಿಗಳ ಅತಿ ಸಾಧಾರಣ ದಿರಿಸು.

ನೊಂದವರು ಅವಮಾನಿತರ ಅಮ್ಮನಾಗಿ ಅವರ ಬೆವರು ಕಣ್ಣೀರು ಅಪಮಾನಗಳು ಪ್ರತಿಭಟನೆಗಳಿಗೆ ಸಿಡಿಮದ್ದಿನಂತಹ ಅಕ್ಷರಗಳನ್ನು ತೊಡಿಸಿದವರು ಮಹಾಶ್ವೇತಾದೇವಿ. ವಿಶೇಷವಾಗಿ ಆದಿವಾಸಿಗಳು ದಲಿತರ ಕಣ್ಣೀರು ಒರೆಸಿದ ದೀದಿ. ಈಕೆ ‘ಸ್ಪರ್ಶಿಸಿದ’ ಸೈಕಲ್ ರಿಕ್ಷಾ ತುಳಿವ ಪಾತಕಲೋಕದ ಹಿನ್ನೆಲೆಯ ದಲಿತನೊಬ್ಬ ಬಂಗಾಳಿ ಸಾಹಿತ್ಯ ಲೋಕ ಎದ್ದು ಕುಳಿತು ಗಮನಿಸುವ ಲೇಖಕನಾದ ವಿದ್ಯಮಾನ ಬೆರಗು ಬಡಿಸುವಂತಹುದು.

ಇವರು 2012ರಲ್ಲಿ ಬಂಗಾಳಿಯಲ್ಲಿ ಬರೆದ ಆತ್ಮಕತೆ ‘ಇತಿಬ್ರಿತ್ತೆ ಚಾಂಡಾಲ ಜಿಬಾನ್’ (‘ನನ್ನ ಚಾಂಡಾಲ ಬದುಕು- ದಲಿತನೊಬ್ಬನ ಆತ್ಮಚರಿತ್ರೆ’) ಎಂಬ ಕೃತಿ 2018ರಲ್ಲಿ `Interrogating My Chandal Life’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡು ಪ್ರಕಟವಾಗುತ್ತದೆ. 2018ರ ಸಾಲಿನ ದಿ ಹಿಂದೂ ಪ್ರಶಸ್ತಿಯನ್ನು ಪಡೆಯುತ್ತದೆ

ಕಿವುಡ-ಮೂಗ ಮಕ್ಕಳ ಸರ್ಕಾರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಬಾಣಸಿಗನಾಗಿ 23 ವರ್ಷಗಳ ಕಾಲ ದುಡಿದರು. ಮೊಣಕಾಲ ಶಸ್ತ್ರಚಿಕಿತ್ಸೆಯ ನಂತರ ಭಾರೀ ದೊಡ್ಡ ಭಾಂಡೆಗಳನ್ನು ಎತ್ತಿ ಇಳಿಸುವುದು ಕಷ್ಟಕರವೆನಿಸಿತು. ಗ್ರಂಥಾಲಯಕ್ಕೆ ವರ್ಗ ಮಾಡಿ ಹಗುರ ಕೆಲಸ ನೀಡುವಂತೆ ಕೋರಿ ನಾಲ್ಕು ವರ್ಷಗಳ ಕಾಲ ಸರ್ಕಾರಿ ಕಚೇರಿಗಳಿಗೆ ಅಲೆದರು. ಕಡೆಗೆ ಖುದ್ದು ಮಮತಾ ಬ್ಯಾನರ್ಜಿಯವರೇ ಈ ವಿನಂತಿಯನ್ನು ಈಡೇರಿಸಿದರು. 2020ರ ಆಗಸ್ಟ್ ತಿಂಗಳಲ್ಲಿ ದಕ್ಷಿಣ 24 ಪರಗಣದ ಅಮಟಾಲದ ಗ್ರಂಥಾಲಯದಲ್ಲಿ ಪುಸ್ತಕಗಳ ಧೂಳು ಝಾಡಿಸಿ ಒರೆಸಿ ಇಡುವ ಕೆಲಸಕ್ಕೆ ವರ್ಗಾವಣೆ ಆಯಿತು. ಆದರೆ ಕೋವಿಡ್ ಕಾರಣ ಗ್ರಂಥಾಲಯ ಬಹುಪಾಲು ಮುಚ್ಚಿಯೇ ಇತ್ತು.

“ತಮ್ಮ ಬರೆಹಗಳಲ್ಲಿ ರೂಪು ತಳೆಯವ ಪಾತ್ರಗಳಿಗೆ ಪ್ರೇರಣೆಯಾಗುವ ಜನರಿಗಾಗಿ ಏನಾದರೂ ಮಾಡಲು ಸಾಧ್ಯವಿರುವ ವೇದಿಕೆ ರಾಜಕಾರಣ. ಜನರ ತಬ್ಬಲಿ ಬದುಕುಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ಸಂಕಟ ವ್ಯಥೆ ವಿಷಾದಗಳ ಕುರಿತು ಬರೆದಿದ್ದೇನೆ. ನನ್ನದೇ ಬದುಕಿನ ಅನುಭವಗಳು ಮತ್ತು ಇತರರ ಬವಣೆಗಳನ್ನು ಬೆರೆಸಿ ಪುಸ್ತಕಗಳ ಬರೆದು ಪ್ರಕಟಿಸಿದೆ. ರಾಯಲ್ಟಿ ಸಂಪಾದಿಸಿದೆ. ಆದರೆ ಅವರಿಗಾಗಿ ಏನನ್ನೂ ಮಾಡಲಾರದಾಗಿದ್ದೆ. ನನ್ನ ಬದುಕೇ ಹಾಗಿತ್ತು” ಎನ್ನುತ್ತಾರೆ ಮನೋರಂಜನ್ ಬ್ಯಾಪಾರಿ.

“ಪಶ್ಚಿಮ ಬಂಗಾಳದ ಸಂಸ್ಕೃತಿ, ಭಾಷೆ, ಜನಸಮುದಾಯಗಳನ್ನು ಧ್ವಸ್ತಗೊಳಿಸಲು ದಂಡೆತ್ತಿ ಬಂದಿದ್ದಾರೆ ಶತ್ರುಗಳು. ಬ್ರಿಟಿಷ್ ವರ್ತಕರು ಭಾರತಕ್ಕೆ ಬಂದು 200 ವರ್ಷ ಕಾಲ ನಮ್ಮನ್ನು ಗುಲಾಮಗಿರಿಗೆ ತಳ್ಳಿದರು. ಇದೀಗ ಗುಜರಾತಿ ವರ್ತಕರು ಅದೇ ಇರಾದೆಯೊಂದಿಗೆ ನುಗ್ಗಿದ್ದಾರೆ. ವ್ಯಾಪಾರೋದ್ಯಮದ ಹಿತಾಸಕ್ತಿಗಳೇ ಅವರಿಗೆ ಪರಮ. ಇಂತಹ ಹೊತ್ತಿನಲ್ಲಿ ‘ನೀನು ತೆಪ್ಪಗೆ ಕತೆ ಬರೆಯಪ್ಪಾ’ ಎಂದು ನನ್ನ ಲೇಖನಿಗೆ ಹೇಳಲಾರೆ. ಬಂಗಾಳದ ಆತ್ಮಕ್ಕಾಗಿ ನಡೆದಿರುವ ಹೋರಾಟವಿದು.

“ಸಾಧಾರಣ ಸಂದರ್ಭಗಳೇ ಆಗಿದ್ದಲ್ಲಿ ತಾವು ರಾಜಕಾರಣಕ್ಕೆ ಎಂದೆಂದಿಗೂ ಕಾಲಿಡುತ್ತಿರಲಿಲ್ಲ. ವ್ಯವಸ್ಥೆ ಅಷ್ಟೊಂದು ಕೊಳೆತು ಹೋಗಿದೆ. ಆದರೆ ಈಗ ಹೊರಗಿನ ಶಕ್ತಿಗಳು ಬಂಗಾಳದ ಭಾಷೆ, ಸಂಸ್ಕೃತಿ, ಪರಂಪರೆಗೆ ಗಂಡಾಂತರ ಒಡ್ಡಿವೆ. ಬಂಗಾಳವನ್ನು ತಮ್ಮ ನಿಯಂತ್ರಣದ ಕಪಿಮುಷ್ಠಿಗೆ ಸಿಕ್ಕಿಸಿಕೊಳ್ಳಲು ಮುಂದಾಗಿವೆ.. ಹೀಗಾಗಿ ಪ್ರತಿರೋಧ ಒಡ್ಡದೆ ಬೇರೆ ದಾರಿಯೇ ಇಲ್ಲ” ಎಂದು ತಮ್ಮ ರಾಜಕಾರಣ ಪ್ರವೇಶವನ್ನು ಸಮರ್ಥಿಸಿಕೊಳ್ಳುತ್ತಾರೆ ಅವರು.

ಚುನಾವಣೆಯ ಪ್ರಚಾರದ ದಿನಗಳಲ್ಲಿ ಅವರಿಗೆ ದೊರೆತ ಜನಪ್ರೀತಿ ‘ಊಹಾತೀತ’. ಸಿಪಿಐ(ಎಂ) ಮತ್ತು ಬಿಜೆಪಿಯ ಜನರೂ ತಮ್ಮನ್ನು ಭೇಟಿಯಾಗಿ ಬೆಂಬಲ ಪ್ರಕಟಿಸಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಆರಂಭದಲ್ಲಿ ಬಾಲಾಗಢಕ್ಕೆ ಹೊರಗಿನವರೆಂದು ಅವರ ಉಮೇದುವಾರಿಕೆಗೆ ವಿರೋಧ ಎದುರಾಗಿತ್ತು. ನಾನೊಬ್ಬ ನಿರಾಶ್ರಿತ. ಹೀಗಾಗಿ ದೇಶದ ಯಾವ ಭಾಗಕ್ಕೆ ಹೋದರೂ ನಾನು ಹೊರಗಿನವನೇ. ಆದರೆ ನಿಜವಾಗಿಯೂ ನಾನು ನಿಮ್ಮೊಳಗೊಬ್ಬನು. ಚಿಂದಿ ಆಯುವ, ರಿಕ್ಷಾ ತುಳಿಯುವ, ಚಹಾ ಮಾರುವ, ರಸ್ತೆ ಬದಿ ಮಲಗುವ ಜನರ ನೋವನ್ನು ಅರ್ಥ ಮಾಡಿಕೊಂಡವನು. ಯಾಕೆಂದರೆ ವರ್ಷಗಳ ಕಾಲ ನಾನು ಇವೇ ಬದುಕುಗಳನ್ನು ಬದುಕಿದ್ದವನು ಎಂದು ವಿರೋಧಿಗಳನ್ನು ಒಲಿಸಿಕೊಳ್ಳುತ್ತಾರೆ.

ಕ್ಷೇತ್ರಕ್ಕೆ ಹೊರಗಿನಿಂದ ಬಂದು ಸ್ಪರ್ಧಿಸುವ ಬಹುತೇಕ ಹುರಿಯಾಳುಗಳು ಗೆದ್ದರೆ ಅಲ್ಲಿಯೇ ಮನೆ ಮಾಡುವುದಾಗಿ ಸಾರುವುದುಂಟು. ಆದರೆ ಗೆದ್ದರೂ ಸೋತರೂ ತಾವು ಇಲ್ಲಿಯೇ ನೆಲೆಸುವುದಾಗಿ ಹೇಳಿದ್ದಾರೆ ಬ್ಯಾಪಾರಿ. ನಿವೇಶನ ನೀಡಲು ಬಂದವರನ್ನು ನಯವಾಗಿಯೇ ದೂರವಿರಿಸಿದ್ದಾರೆ. ಬದಲಿಗೆ ಈ ಕ್ಷೇತ್ರದ ಮನೆ ಮನೆಯಿಂದ ಅರ್ಧ ಇಟ್ಟಿಗೆ ದಾನ ಪಡೆದು ಮನೆ ಕಟ್ಟಿಕೊಳ್ಳುತ್ತೇನೆ ಎಂದಿದ್ದರು.

“ಭಾರತದ ಸಂವಿಧಾನವನ್ನು ಮೂಲೆಗೆ ತಳ್ಳಿ ಮನುಸ್ಮೃತಿಯನ್ನು ಜಾರಿಗೊಳಿಸುವ ಪಕ್ಷವಿದು. ದಲಿತರು ಮತ್ತು ಮುಸಲ್ಮಾನರನ್ನು ಗುಲಾಮರಂತೆ ಕಾಣಲಿದೆ. ಬ್ರಾಹ್ಮಣವಾದದ ತಳಹದಿಯ ಸಮಾಜವನ್ನು ಕಟ್ಟುವುದು ಅವರ ಹುನ್ನಾರ. ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ನಮ್ಮ ಸಮಾಜವನ್ನು ಹರಿದು ಸೀಳುವ ವಿಭಜಕ ಶಕ್ತಿಯಿದು” ಎಂಬುದು ಬಿಜೆಪಿಯ ಬಗ್ಗೆ ಅವರ ನಿಚ್ಚಳ ನಿಲುವು.

ಎಪ್ಪತ್ತರ ದಶಕದ ಆರಂಭದಲ್ಲಿ ನಕ್ಸಲೀಯ ಆಂದೋಲನ ಉತ್ತುಂಗದಲ್ಲಿತ್ತು. ಅದರೊಂದಿಗೆ ಗುರುತಿಸಿಕೊಂಡಿದ್ದ ಬ್ಯಾಪಾರಿ 26 ತಿಂಗಳು ಜೈಲಿನಲ್ಲಿದ್ದರು. ವರ್ಷಗಟ್ಟಲೆ ಜಾಧವಪುರದ ರೇಲ್ವೆ ಪ್ಲಾಟ್‌ಫಾರ್ಮ್‌ಗಳ ಮೇಲೆ ಇರುಳು ಕಳೆದರು. ಕೊಲ್ಕತ್ತ ಇವರನ್ನು ತೆರೆದ ಬಾಹುಗಳಿಂದೇನೂ ಕರೆದುಕೊಳ್ಳಲಿಲ್ಲ.

ಜೈಲಿನಿಂದ ಬಿಡುಗಡೆಯಾಗಿ ಹೊಟ್ಟೆಪಾಡಿಗಾಗಿ ಜಾಧವಪುರದಲ್ಲಿ ಸೈಕಲ್ ರಿಕ್ಷಾ ತುಳಿಯಲಾರಂಭಿಸಿದರು. ಬಿಸಿಲು ಧಗೆಯ ಒಂದು ಮಧ್ಯಾಹ್ನ ಜ್ಯೋತಿಷ್ ರಾಯ್ ಕಾಲೇಜಿನ ಹೊರಗೆ ಸವಾರಿಗಾಗಿ ಕಾಯುತ್ತಿದ್ದರು. ಹಿರಿಯ ಮಹಿಳಾ ಪ್ರೊಫೆಸರೊಬ್ಬರು ರಿಕ್ಷಾ ಹತ್ತಿದರು.

ರಿಕ್ಷಾವಾಲನ ಹೆಸರು ಮನೋರಂಜನ್ ಬ್ಯಾಪಾರಿ. ರಿಕ್ಷಾ ಏರಿ ಕುಳಿತು ಆತನನ್ನು ಮನೆಗೆ ಊಟಕ್ಕೆ ಕರೆದು ಅಕ್ಕರೆ ತೋರಿದ ಆ ಅಮ್ಮ ಮಹಾಶ್ವೇತಾದೇವಿ. ಆದಿವಾಸಿಗಳು-ದಲಿತರ ಪಾಲಿನ ದೀದಿ ಎಂದು ಕರೆಯಿಸಿಕೊಂಡ ಜೀವ ಕಾರುಣ್ಯದ ತಾಯಿ.

“ಮಹಾಶ್ವೇತಾ ತಾಯಿ ಬದುಕಿದ್ದರೆ ನನ್ನ ಚುನಾವಣೆ-ಗೆಲುವು ಕುರಿತು ಸಂತಸಪಡುತ್ತಿದ್ದರು. ಜೈಲಿನಲ್ಲಿ ತಮಗೆ ಓದು ಬರೆಹ ಕಲಿಸಿದ ಸಹಖೈದಿ ಮತ್ತು ಮಹಾಶ್ವೇತಾ ಅವರಂತಹ ಉತ್ತಮಾತ್ಮರು ನನಗೆ ಸಿಕ್ಕಿದ್ದು ತಮ್ಮ ಸುಕೃತ” ಎನ್ನುತ್ತಾರೆ.

1974ರಲ್ಲಿ ನಕ್ಸಲ್ಬರಿಯ ಸಿಲಿಗುಡಿಯ ಬಳಿಯಿದ್ದಾಗ ಜರುಗಿದ ರೈತ ಬಂಡಾಯದಲ್ಲಿ ಭಾಗಿಯಾಗುತ್ತಾರೆ. ಬಿಡುಗಡೆಯಾಗಿ ರಿಕ್ಷಾ ತುಳಿದು ಅನ್ನ ಸಂಪಾದಿಸುತ್ತಾರೆ. 1989ರಲ್ಲಿ ಸಿ.ಐ.ಟಿ.ಯು. ಜೊತೆಗೆ ಘರ್ಷಣೆ ಜರುಗಿ ಬಸ್ತರ್‌ಗೆ ತೆರಳುತ್ತಾರೆ. ದಂತಕತೆಯೇ ಆಗಿ ಹೋಗಿರುವ ಕಾರ್ಮಿಕ ನಾಯಕ ಶಂಕರಗುಹಾ ನಿಯೋಗಿಯ ಸಂಪರ್ಕಕ್ಕೆ ಬರುತ್ತಾರೆ. ಛತ್ತೀಸಗಢ ಮುಕ್ತಿ ಮೋರ್ಚಾ ಟ್ರೇಡ್ ಯೂನಿಯನ್ ಕಟ್ಟಲು ಕೈ ಜೋಡಿಸುತ್ತಾರೆ. ವರ್ಷಗಳ ನಂತರ ಮತ್ತೆ ಜಾಧವಪುರಕ್ಕೆ ಮರಳುತ್ತಾರೆ. ಅವರ ಬದುಕಿಗೆ ಹೊಸ ತಿರುವ ನೀಡಿದ ಮಹಾಶ್ವೇತ ತಾಯಿಯ ಭೇಟಿ ಜರುಗಿದ ಹಂತವಿದು.

ಅವರು 2010ರಲ್ಲಿ ‘ನಿಶ್ಯಬ್ದ ಬಾಣ’ ಎಂಬ ಸಣ್ಣಕತೆಯ ರಿಕ್ಷಾ ಚಾಲಕ ನಾಯಕ ಸಿಪಿಐ(ಎಂ) ಮತ್ತು ತೃಣಮೂಲ ಎರಡರಿಂದಲೂ ಮತ ನೀಡಲು ಹಣ ಪಡೆಯುತ್ತಾನೆ. ಮೀನು ಕೊಳಗಳಿದ್ದ ಜೌಗು ಪ್ರದೇಶವನ್ನು ಮಣ್ಣು ತುಂಬಿ ಮುಚ್ಚಿ ಬಡಜನರ ವಸತಿಗೆ ನಿವೇಶನಗಳನ್ನು ಮಾಡಿ ಮಾರಾಟ ಮಾಡಲಾದ ಕೊಲ್ಕತ್ತಾದ ಹೊರವಲಯದ ಪ್ರದೇಶ ಖುದಿರಾಬಾದ್. ಅಲ್ಲಿನ ನೀರು ತುಂಬಿದ ಜೌಗು-ಕೆಸರು ರೊಜ್ಜೆಯ ರಸ್ತೆಗಳಲ್ಲಿ ರಿಕ್ಷಾ ತುಳಿದು ರೋಸಿರುತ್ತಾನೆ. ಮತಗಟ್ಟೆಗೆ ತೆರಳಿ ಮತಪತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಹೆಸರಿನ ಮುಂದೆ ಮುದ್ರೆಯೊತ್ತಿ ಮತವನ್ನು ವ್ಯರ್ಥಗೊಳಿಸಿ ಪ್ರತಿಭಟಿಸುತ್ತಾನೆ. ಯಾವ ಪಕ್ಷದ ಸರ್ಕಾರ ಬಂದರೇನು, ಬಡವರು ದೀನ ದಲಿತರ ಬದುಕುಗಳು ಬದಲಾಗುವುದಿಲ್ಲ ಎನ್ನುತ್ತದೆ ಅವರ ‘ಪೊರಿಬೊರ್ತನ್ ಚಾಯ್’ ಎಂಬ ಮತ್ತೊಂದು ಸಣ್ಣ ಕತೆ. ಚಿಂದಿ ಆಯುವವನು ಆ ಕತೆಯ ನಾಯಕ. ರಾಜಕೀಯ ಗೂಂಡಾಗಳು ಮತ್ತು ಪೊಲೀಸರು ಜನಸಾಮಾನ್ಯರನ್ನು ಸುಲಿದು ತಿನ್ನುವುದು ಅವರ ‘ಟೋಲಾಬಾಜ್’ ಕತೆಯ ವಸ್ತು.

“ಬದುಕೆಲ್ಲ ಅಲೆಮಾರಿಯಾಗಿ ಕಳೆದವರು ತಾವು. ಬಾಳ ಸಂಗಾತಿಯ ವಿನಾ ತಮ್ಮದೆಂಬುದು ಇನ್ನೇನೂ ಇಲ್ಲ” ಎಂದು ಪತ್ನಿಯ ಕುರಿತು ಮೈಯೆಲ್ಲ ಕೃತಜ್ಞತೆಯಾಗುತ್ತಾರೆ. ಪತ್ನಿಯ ಆಸರೆ ಇಲ್ಲದೆ ಹೋಗಿದ್ದರೆ ಬದುಕಿನ ಈ ಯಾನ ಸಾಧ್ಯವಿರಲಿಲ್ಲ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ನಿತ್ಯ 20 ಕಿ.ಮೀ. ಸೈಕಲ್ ತುಳಿಯಬೇಕಿತ್ತು. ಆಕೆ ತರುತ್ತಿದ್ದ 225 ರುಪಾಯಿಗಳ ಮಾಸಿಕ ಸಂಬಳವೇ ಜೀವನಾಧಾರ. ನನಗೆ ಸಂಪಾದನೆ ಇರದಿದ್ದಾಗಲೂ ಆಕೆ ದೂರಲಿಲ್ಲ. ಈಗಲೂ ಮನೆ ವ್ಯವಹಾರವೆಲ್ಲ ಆಕೆಯದೇ. ನಾನು ಆಕೆಗೆ ಎಣೆಯಿಲ್ಲದಷ್ಟು ಋಣಿಯಾಗಿದ್ದೇನೆ. ಮನೆಯ ಒಳಗಣ ಈ ನೆಮ್ಮದಿ ನೆರವು ಹೊರಗೆ ಸಿಗಲಿಲ್ಲ. ವಾತಾವರಣ ಸಹಕಾರಿಯಾಗಿರಲಿಲ್ಲ. ಬಹಿಷ್ಕೃತರು ಮತ್ತು ದಿಕ್ಕಿಲ್ಲದ ಪರದೇಸಿಗಳ ಛೋಟಾಲೋಕ ಮತ್ತು ಸಜ್ಜನರ ಭದ್ರಲೋಕವಾಗಿ ನಮ್ಮ ಸಮಾಜ ಇಬ್ಭಾಗವಾಗಿ ಹೋಗಿದೆ. ನನ್ನಂತಹವನು ಮನ್ನಣೆ ಗಳಿಸುವುದನ್ನು ಭದ್ರಲೋಕ ಇಷ್ಟಪಡುವುದಿಲ್ಲ” ಎನ್ನುತ್ತಾರೆ.

ಮನೋರಂಜನ್ ಅವರ ಬದುಕಿನ ಭಾಗವಾಗಿ ಪರಿಣಮಿಸಿದೆ ಸೈಕಲ್ ರಿಕ್ಷಾ. ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರಕ್ಕೆ ಅವರು ತೆರಳಿದ್ದು ರಿಕ್ಷಾ ತುಳಿದುಕೊಂಡೇ.

ಇವರ ‘ಜಿಜೀವಿಷ’ ಈಗಲೂ ಕುಂದಿಲ್ಲ. ಬೆರಳಲ್ಲಿ ಅವರು ಸದಾ ಧರಿಸುವ ಉಂಗುರದಲ್ಲಿ ಬರೆದಿರುವ ಪದ ‘ಜಿಜೀವಿಷ’. ಮಹಾಶ್ವೇತಾ ತಾಯಿಯ ಭೇಟಿಯ ನಂತರ ಲೇಖಕನಾಗಿ ತಾವು ‘ಮರುಹುಟ್ಟು’ ಪಡೆದೆನೆಂಬುದು ಅವರ ನಂಬಿಕೆ.


ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...