ಇಂದು ಭಾರತದಲ್ಲಿ ಸೂರ್ಯ ಗ್ರಹಣ ಗೋಚರವಾಗಲಿದೆ. ಈ ಗ್ರಹಣದ ಸಮಯದಲ್ಲಿ ಗ್ರಹಣ ಎಂದರೇನು? ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆ ಸ್ವಲ್ಪ ಮೆಲುಕು ಹಾಕೋಣ.
ಭೂಮಿ ಸೂರ್ಯನ ನಡುವೆ ಚಂದ್ರ ಬಂದಾಗ?
ಸೌರ ಮಂಡಲದಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುವುದರಲ್ಲಿ ಭೂಮಿ ಮೂರನೇ ಗ್ರಹ. ಒಂದು ಸುತ್ತು ಸುತ್ತಲು, ಒಂದು ವರ್ಷ ಅಂದರೆ ಅಂದಾಜು 365 ದಿನಗಳನ್ನು ತೆಗೆದುಕೊಳ್ಳುತ್ತದೆ. ಭೂಮಿಯ ಉಪಗ್ರಹವಾದ ಚಂದ್ರ ಭೂಮಿಯ ಸುತ್ತ ಸುತ್ತುತ್ತಿದ್ದು, ಈ ಸುತ್ತುವಿಕೆಗೆ ಸುಮಾರು 27 ದಿನಗಳನ್ನು ತೆಗೆದುಕೊಳ್ಳುತ್ತದೆ.
ಹೀಗೆ ಭೂಮಿ ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿರಬೇಕಾದರೆ, ಭೂಮಿ ಮತ್ತು ಸೂರ್ಯನ ಮಧ್ಯ ಚಂದ್ರ ಹಾದುಹೋದಾಗ, ಸ್ವಲ್ಪ ಕಾಲದವರೆಗೆ ಈ ಮೂರೂ ಆಕಾಶ ಕಾಯಗಳು ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಆಗ ಏನಾಗುತ್ತದೆ? ಇದನ್ನು ಸೂರ್ಯ ಗ್ರಹಣ ಎಂದು ಕರೆಯುತ್ತೇವೆ.
ಸೂರ್ಯಗ್ರಹಣದಲ್ಲಿ, ಚಂದ್ರ ಸೂರ್ಯನನ್ನು ಮರೆ ಮಾಡುತ್ತಾನೆ. ಆಗ ಅದರ ನೆರಳು ಭೂಮಿಯ ಕೆಲವು ಪ್ರದೇಶಗಳಲ್ಲಿ ಬೀಳುತ್ತದೆ. ಈ ನೆರಳಿನ ಪ್ರದೇಶದಲ್ಲಿರುವ ಜನರಿಗೆಲ್ಲಾ ಸೂರ್ಯ ಸ್ವಲ್ಪ ಸಮಯದವರೆಗೆ ಕಾಣುವುದಿಲ್ಲ. ಚಂದ್ರ ಹಾದುಹೋದ ನಂತರ ಮತ್ತೆ ಸೂರ್ಯ ಕಾಣುತ್ತಾನೆ. ಚಂದ್ರ ಸೂರ್ಯನನ್ನು ಮರೆ ಮಾಡುವ ರೀತಿಯ ಮೇಲೆ, ಅಂದರೆ, ಪೂರ್ಣವಾಗಿ ಮರೆ ಮಾಡುವುದು, ಪಾರ್ಶ್ವವಾಗಿ ಮರೆ ಮಾಡುವುದರ ಮೇಲೆ ಸೂರ್ಯ ಗ್ರಹಣಗಳನ್ನು ಹೆಸರಿಸಲಾಗಿದೆ. ಪೂರ್ಣ ಸೂರ್ಯಗ್ರಹಣ, ಪಾರ್ಶ್ವ ಸೂರ್ಯಗ್ರಹಣ ಎಂದು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಯಾವುದೇ ವಿಧವಾದ ಸೂರ್ಯಗ್ರಹಣ ಸಂಭವಿಸುವುದು ಅಮವಾಸ್ಯೆ ದಿನದಂದೆ.
ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ?
ಹುಣ್ಣಿಮೆ ದಿನದಂದು ಹಾಲಿನಂತೆ ಬೆಳ್ಳಗೆ ಹೊಳೆಯುವ ಚಂದ್ರನನ್ನು ನೀವು ಸಾಮಾನ್ಯವಾಗಿ ನೋಡಿರಬಹುದು. ಆದರೆ, ಅದೇ ಹುಣ್ಣಿಮೆಯಂದು ತಾಮ್ರದ ಬಣ್ಣಕ್ಕೆ ತಿರುಗಿರುವ ಚಂದ್ರನನ್ನು ನೀವೇನಾದರೂ ನೋಡಿದ್ದೀರಾ? ಇದು ಕೂಡ ಆಗಸದಲ್ಲಿ ಭೂಮಿ, ಚಂದ್ರ ಮತ್ತು ಸೂರ್ಯನ ಮಧ್ಯೆ ನಡೆಯುವ ಬೆಳಕು ನೆರಳಿನಾಟವೇ. ಇದನ್ನು ಚಂದ್ರ ಗ್ರಹಣ ಎನ್ನುತ್ತೇವೆ. ಸೂರ್ಯ ಗ್ರಹಣದ ಮಾದರಿಯಲ್ಲಿಯೇ, ವಿವಿಧ ರೀತಿಯ ಚಂದ್ರಗ್ರಹಣಗಳನ್ನು ನಾವು ಗುರುತಿಸುತ್ತೇವೆ. ಆದರೆ, ತಾಮ್ರ ಬಣ್ಣದಲ್ಲಿ ಹೊಳೆಯುವ ಪೂರ್ಣ ಚಂದ್ರಗ್ರಹಣದಂದು ಮಾತ್ರ ಚಂದ್ರಗ್ರಹಣವನ್ನು ನಾವು ನೋಡಲು ಸಾಧ್ಯ.
ಚಂದ್ರ ಭೂಮಿಯ ಸುತ್ತ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ 27 ದಿನಗಳಷ್ಟೇ, ತನ್ನ ಅಕ್ಷದ ಸುತ್ತ ತಿರುಗುವುದಕ್ಕೂ ಅಂದಾಜು ಅಷ್ಟೆ ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಕಾರಣದಿಂದ, ಯಾವುದೇ ಸಮಯದಲ್ಲಿ ಚಂದ್ರನ ಒಂದು ಭಾಗ ಮಾತ್ರ ಭೂಮಿಯ ದಿಕ್ಕಿಗೆ ಇರುವುದರಿಂದ, ಆ ಭಾಗ ಮಾತ್ರ ನಾವು ಭೂಮಿಯಿಂದ ನೋಡಬಹುದು. ಚಂದ್ರನ ಮತ್ತೊಂದು ಅರ್ಧ ಭಾಗವನ್ನು ಭೂಮಿಯಿಂದ ನೋಡಲು ಸಾಧ್ಯವೇ ಇಲ್ಲ.
ಭೂಮಿಯ ಅಕಾಶದಲ್ಲಿ, ಸೂರ್ಯನು ಒಂದು ದಿಕ್ಕಿನಲ್ಲಿದ್ದರೆ, ಚಂದ್ರ ಅದರ ವಿರುದ್ಧ ದಿಕ್ಕಿನಲ್ಲಿದ್ದರೆ ಏನಾಗುತ್ತದೆ? ಇಂತಹಾ ಸಂದಂರ್ಭದಲ್ಲಿ ಚಂದ್ರನು ಹಾಲಿನ ಬಣ್ಣದಂತೆ ಹುಣ್ಣಿಮೆ ಚಂದ್ರನಾಗಿ ಆಗಸದಲ್ಲಿ ಹೊಳೆಯುತ್ತಾನೆ. ಈ ಮೂರು ಆಕಾಶಕಾಯಗಳು ಒಂದೇ ರೇಖೆಯಲ್ಲಿ ಬಂದರೆ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದು ಸಹಜ. ಆಗ ಭೂಮಿಯ ಕತ್ತಲ ಭಾಗದಲ್ಲಿರುವ ಜನರು ಆ ಸಮಯದಲ್ಲಿ ಚಂದ್ರನನ್ನು ನೋಡಿದರೆ, ಭೂಮಿಯ ನೆರಳು ಚಂದ್ರನನ್ನು ಮರೆ ಮಾಚುತ್ತಾ ಹೊಗುವುದನ್ನು ಕಾಣುತ್ತಾರೆ. ಭೂಮಿಯ ಪೂರ್ತಿ ನೆರಳು ಚಂದ್ರನ ಮೇಲೆ ಬಿದ್ದಾಗ, ಚಂದ್ರ ನಮಗೆ ಕಾಣಲೇಬಾರದು. ಆದರೆ, ಪೂರ್ಣ ಚಂದ್ರಗ್ರಹಣವನ್ನು ನೀವೇನಾದರೂ ನೋಡಿದ್ದರೆ, ಆ ಸಮಯದಲ್ಲಿ ಚಂದ್ರ ತಾಮ್ರ ಬಣ್ಣದಲ್ಲಿ ಹೊಳೆಯುತ್ತಾನೆ. ಅದಕ್ಕಾಗಿಯೇ ಅಂದಿನ ಆ ಗ್ರಹಣದ ಚಂದ್ರನನ್ನು ತಾಮ್ರ ಚಂದಿರ ಎಂದೂ ಕರೆಯುತ್ತಾರೆ. ಪೂರ್ಣ ಚಂದ್ರಗ್ರಹಣದಲ್ಲಿ ಚಂದ್ರನೇಕೆ ತಾಮ್ರ ಬಣ್ಣಕ್ಕೆ ತಿರುಗುತ್ತಾನೆ?
ಪೂರ್ಣ ಚಂದ್ರಗ್ರಹಣದ ಸಮಯದಲ್ಲಿ, ಭೂಮಿ ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಮರೆಮಾಚುತ್ತದೆ ಮತ್ತು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಿರುತ್ತದೆ. ಆದರೆ, ಭೂಮಿಗೆ ವಾತಾವರಣ ಇರುವುದರಿಂದ, ಸೂರ್ಯನ ಬೆಳಕು ಭೂಮಿಯ ವಾತಾವರಣದಿಂದ ಹಾದುಹೋಗಿ ಚಂದ್ರನ ಮೇಲೆ ಬೀಳುತ್ತಿರುತ್ತದೆ. ಹೀಗೆ ವಾತಾವರಣದಿಂದ ಹಾದುಹೋದ ಸೂರ್ಯನ ಬೆಳಕು ಚದುರುವಿಕೆಯಾಗಿ ಅಂದರೆ Scatter ಆಗಿ, ಚಂದ್ರನಿಗೆ ತಲುಪುವಷ್ಟರಲ್ಲಿ, ಕೆಂಪು ಬಣ್ಣದ ಕಿರಣಗಳು ಮಾತ್ರ ತಲುಪಿ ಪ್ರತಿಫಲನಗೊಳ್ಳುತ್ತವೆ. ಈ ಕಾರಣದಿಂದಲೇ ಪೂರ್ಣ ಚಂದ್ರಗ್ರಹಣದಂದು ಚಂದ್ರ ತಾಮ್ರ ಬಣ್ಣಕ್ಕೆ ತಿರುಗಿ ಹೊಳೆಯುವುದು. ಅಂದಹಾಗೆ, ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆ ದಿನದಂದೆ ನಡೆಯುತ್ತದೆ. ಏಕೆಂದರೆ, ಹುಣ್ಣಿಮೆಯಂದು ಮಾತ್ರ ಭೂಮಿ, ಚಂದ್ರ ಮತ್ತು ಸೂರ್ಯನ ಮಧ್ಯೆ ಬರಲು ಸಾಧ್ಯ.
ಪ್ರತಿ ತಿಂಗಳ ಹುಣ್ಣಿಮೆ ಮತ್ತು ಅಮವಾಸ್ಯೆಯಂದು ಗ್ರಹಣಗಳು ಏಕೆ ಸಂಭವಿಸುವುದಿಲ್ಲ?
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ (ಸರಳ ರೇಖೆಯಲ್ಲಿ): ಸೂರ್ಯಗ್ರಹಣ ಮತ್ತು ಅಮಾವಾಸ್ಯೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ (ಸರಳ ರೇಖೆಯಲ್ಲಿ): ಚಂದ್ರಗ್ರಹಣ ಮತ್ತು ಹುಣ್ಣಿಮೆ. ಹಾಗಾದರೆ, ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ಸಂಭವಿಸುವುದಿಲ್ಲವೇಕೆ? ಇದಕ್ಕೆ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುತ್ತಿರುವ ಕಕ್ಷೆ (Moon’s orbit around Earth)!
ಸೂರ್ಯನ ಸುತ್ತು ಭೂಮಿ ನಿರ್ದಿಷ್ಟ ಕಕ್ಷೆಯಲ್ಲಿಯೇ ಸುತ್ತುತ್ತದೆ. ಚಂದ್ರ ಭೂಮಿಯ ಸುತ್ತ ಸುತ್ತಿತ್ತಿದ್ದಾನೆ. ಈ ಎರಡು ಕಕ್ಷೆಯು ಒಂದೇ ಸಮತಲದಲ್ಲಿ (Plane Surface) ಇದ್ದಿದ್ದರೆ, ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣ ಮತ್ತು ಪ್ರತಿ ಅಮವಾಸ್ಯೆಯಂದು ಸೂರ್ಯಗ್ರಹಣವಾಗುತ್ತಿತ್ತು!
ಆದರೆ, ಈ ಎರಡು ಕಕ್ಷೆಗಳು ಒಂದೇ ಸಮತಲದಲ್ಲಿ ಇಲ್ಲ. ಚಂದ್ರನ ಕಕ್ಷೆಯು ಭೂಮಿಯ ಕಕ್ಷೆಗೆ ಸುಮಾರು 5 ಡಿಗ್ರಿಯಷ್ಟು ಓರೆಯಾಗಿದ್ದು, ಕೇವಲ ಎರಡು ಬಿಂದುವಿನಲ್ಲಿ ಮಾತ್ರ ಭೂಮಿಯ ಕಕ್ಷೆಯನ್ನು ಹಾದುಹೋಗುತ್ತದೆ. ಆದುದರಿಂದ, ಯಾವುದೇ ಗ್ರಹಣಗಳು ಸಂಭವಿಸುವುದಾದರೆ, ಚಂದ್ರ ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನದಂದು ಆ ಬಿಂದುವಿನಲ್ಲಿ ಇರಲೇಬೇಕು. ಚಂದ್ರ ಆ ಬಿಂದುವಿನಲ್ಲಿದ್ದರೆ ಮಾತ್ರ ಸೂರ್ಯ, ಭೂಮಿ ಮತ್ತು ಚಂದ್ರ ಸರಳ ರೇಖೆಯಲ್ಲಿ ಬರಲು ಸಾಧ್ಯ ಮತ್ತು ಆಗ ಮಾತ್ರ ಗ್ರಹಣಗಳು ಉಂಟಾಗಲು ಸಾಧ್ಯ. ಹಾಗಾಗಿ, ಸೂರ್ಯ ಮತ್ತು ಚಂದ್ರಗ್ರಹಣಗಳು ವಿರಳವಾದ ಆಗಸದ ವಿಸ್ಮಯಗಳು.
ಗ್ರಹಣಗಳನ್ನು ಬರಿಗಣ್ಣಿನಿಂದ ನೋಡಬಹುದೇ?
ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲೇಬಾರದು. ಯಾವುದೋ ಹಾನಿಕಾರಕ ಕಿರಣಗಳು (Harmful Radiation) ಗ್ರಹಣದ ಸಮಯದಲ್ಲಿ ಬರುತ್ತವೆಂದಲ್ಲ. ಅಂತಹ ಯಾವ ಕಿರಣಗಳೂ ಗ್ರಹಣದ ಸಮಯದಲ್ಲಿ ಬರಲಾರವು. ನಮ್ಮ ದೇಹದಲ್ಲಿನ ಅತಿ ಸೂಕ್ಮ ಅಂಗ ಕಣ್ಣು. ತೀಕ್ಷ್ಣ ಬೆಳಕು ಕಣ್ಣಿನ ರೆಟಿನಾವನ್ನು ಹಾಳು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಹಾಗಾಗಿ, ಸಾಮಾನ್ಯ ದಿನದಂದೂ ಕೂಡ ಸೂರ್ಯನನ್ನು ಬರಿಗಣ್ಣಿನಲ್ಲಿ ಯಾರು ನೋಡಬಾರದು. ಇದು ಸೂರ್ಯಗ್ರಹಣಕ್ಕೂ ಅನ್ವಯಿಸುತ್ತದೆ.
ಎಲ್ಲ ಸಮಯದಲ್ಲೂ ಸೂರ್ಯನನ್ನು ನೋಡಲು, ಪ್ರಮಾಣೀಕರಿಸಲಾದ ಸೌರ ಕನ್ನಡಕವನ್ನು (Solar Filter/Glass) ಬಳಸಿ ನೋಡಬೇಕು. ಈ ಸೌರ ಕನ್ನಡಕದ ಸಹಾಯದಿಂದ ಸೂರ್ಯಗ್ರಹಣವನ್ನೂ ಕೂಡ ವೀಕ್ಷಿಸಬಹುದು. ದೂರದರ್ಶಕ ಅಥವಾ ಬೈನಾಕ್ಯುಲರ್ ಬಳಸಿದರೂ, ಅದಕ್ಕೂ ಸೂಕ್ತವಾದ, ಪ್ರಮಾಣೀಕರಿಸಲಾದ ಸೌರ ಕನ್ನಡಕವನ್ನು ಅಳವಡಿಸಿ ಅತಿ ಹೆಚ್ಚು ಜಾಗರೂಕತೆವಹಿಸಿ ನೋಡಬೇಕು.
ಸೂರ್ಯಗ್ರಹಣವು, ಹಗಲಿನಲ್ಲಿ ನಡೆಯುವುದರಿಂದ ಗ್ರಹಣದ ನರೆಳು ಯಾವ ಪ್ರದೇಶದಲ್ಲಿ ಬೀಳುತ್ತದೋ, ಆ ಪ್ರದೇಶದ ಜನರು ಮಾತ್ರ ನೋಡಬಹುದು. ಇತರೆ ಹಗಲಿನ ಪ್ರದೇಶದ ಜನರಿಗೆ ಗ್ರಹಣ ಕಾಣುವುದಿಲ್ಲ.
ಇನ್ನು ಚಂದ್ರಗ್ರಹಣ. ಈ ಗ್ರಹಣವನ್ನು ಬರಿಗಣ್ಣಿನಲ್ಲಿಯೇ ನೋಡಬಹುದು. ಯಾವ ಕನ್ನಡಕಗಳೂ ಅಗತ್ಯವಿಲ್ಲ. ತಾಮ್ರ ಚಂದ್ರನನ್ನು ಕೂಡ ಬರಿಗಣ್ಣಿನಲ್ಲಿಯೇ ನೋಡಬಹುದು. ಅಲ್ಲದೆ, ಚಂದ್ರಗ್ರಹಣವನ್ನು, ಆ ಸಮಯದಲ್ಲಿ ಕತ್ತಲಲ್ಲಿರುವ ಎಲ್ಲಾ ಪ್ರದೇಶಗಳಿಂದಲೂ ನೋಡಬಹುದಾಗಿದೆ. ಈ ತಿಂಗಳ 26ರಂದು ನಡೆಯುವ ಪೂರ್ಣ ಚಂದ್ರಗ್ರಹಣ ಭಾರತಕ್ಕೆ ಕಾಣುವುದಿಲ್ಲ. ಏಕೆಂದರೆ ಗ್ರಹಣದ ಸಮಯದಲ್ಲಿ ಭಾರತವು ಇನ್ನೂ ಕತ್ತಲಿನ ಪ್ರದೇಶಕ್ಕೆ ಬಂದಿರುವುದಿಲ್ಲ. ಅಂದರೆ ಭಾರತದಲ್ಲಿ ಚಂದ್ರ ಉದಯಿಸುವುದಕ್ಕೆ ಮುನ್ನವೇ ಚಂದ್ರಗ್ರಹಣವಾಗಿರುತ್ತದೆ.
ಗ್ರಹಣಗಳೂ ಅಪಶಕುನವೇ?
ಗ್ರಹಣಗಳು ಮನುಷ್ಯ ಅಥವಾ ಇತರ ಯಾವ ಜೀವರಾಶಿಗೂ ಯಾವುದೇ ಹಾನಿ ಮಾಡುವ ಯಾವ ನಿದರ್ಶನಗಳು ಕಂಡುಬಂದಿಲ್ಲ. ಗ್ರಹಣದ ಸಮಯವು ಒಳ್ಳೆಯ ಕಾಲವೂ ಅಲ್ಲ ಅಥವಾ ಕೆಟ್ಟ ಕಾಲವೂ ಅಲ್ಲ. ಗ್ರಹಣಗಳು ಯಾವ ಸಮಸ್ಯೆಯನ್ನೂ ತರುವುದಿಲ್ಲ ಅಥವಾ ಯಾವ ಸಮಸ್ಯೆಯನ್ನು ಹೋಗಲಾಡಿಸುವುದಿಲ್ಲ. ಇದು ನಿಸರ್ಗದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಪ್ರಪಂಚದ ಅನೇಕ ನಾಗರಿಕತೆಗಳಲ್ಲಿ ಗ್ರಹಣದ ಬಗ್ಗೆ ಸಾಕಷ್ಟು ಅರಿವಿದ್ದರೂ, ಕಲ್ಪಾನಾತೀತವಾದ ಕತೆಗಳ ಸಹಾಯದಿಂದ ಗ್ರಹಣಗಳು ಯಾವುದೋ ಕೆಟ್ಟದನ್ನು ಮಾಡುತ್ತವೆ ಎಂಬ ನಂಬಿಕೆಗಳೂ ಇದ್ದವೂ. ಕಾಲ ಉರುಳಿದಂತೆ, ಪ್ರಶ್ನಿಸುವ ಮನೋಭಾವ ಬೆಳಸಿಕೊಂಡ ಮನುಷ್ಯ ಇಂತಹ ನಂಬಿಕೆಗಳ ಬಗ್ಗೆ ‘ಏಕೆ, ಏನು, ಹೇಗೆ’ ಎಂಬ ಕಾರಣಗಳ ಬೆನ್ನು ಬಿದ್ದು, ಹುಡುಕಿ, ಸಂಶೋಧಿಸಿ ತಿಳಿವನ್ನು ಬೆಳಸಿಕೊಂಡು ಮೂಢ ನಂಬಿಕೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಆದರೂ, ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ ಇಂದಿಗೂ ಮೂಢನಂಬಿಕೆಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ.
ಜನರಿಗೆ ಗ್ರಹಣಗಳ ಬಗ್ಗೆ ತಿಳಿವು ಮೂಡಿಸುವ ಬದಲು, ಅರ್ಥವಿಲ್ಲದ ಮೂಢನಂಬಿಕೆಗಳ ಜೋಳಿಗೆಯನ್ನು ಹೊತ್ತ ಎಷ್ಟೋ ಸಂಸ್ಥೆಗಳು, ಸ್ವಘೋಷಿತ ದೇವಮಾನವರು ಗ್ರಹಣಗಳನ್ನು ಬಂಡವಾಳ ಮಾಡಿಕೊಂಡು ಜನರಿಗೆ ಮೋಸ ಮಾಡುವುದು ನಿಜವಾಗಲೂ ಖಂಡನೀಯ.
ವೈಜ್ಞಾನಿಕವಾಗಿ ಗ್ರಹಣದ ಸಮಯದಲ್ಲಿ ಸೂರ್ಯನ ಮತ್ತು ಚಂದ್ರನ ಬಗ್ಗೆ ಹೆಚ್ಚು ಅಧ್ಯಯನಗಳನ್ನು ನಡೆಸಲಾಗಿದೆ, ಇಂದಿಗೂ ನಡೆಯುತ್ತಲೇ ಇವೆ. ಇದರಿಂದ ಮಾನವನ ಜನಾಂಗಕ್ಕೆ ಹೆಚ್ಚು ಅನುಕೂಲಗಳೇ ಆಗಿದೆ. 21ನೇ ಶತಮಾನದ ಆಧುನಿಕ ತಂತ್ರಜ್ಞಾನದ ಸಮಯದಲ್ಲಿ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್‌ನಿಂದಲೇ ಜಗತ್ತಿನ ಮಾಹಿತಿಯನ್ನು ನಾವು ತಿಳಿಯುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ ಊಟ ಮತ್ತು ವಸ್ತುಗಳನ್ನು ಮನೆಯ ಬಾಗಿಲಿಗೇ ತರಿಸಿಕೊಳ್ಳುತ್ತಿದ್ದೇವೆ. ಇಂತಹ ಹಲವು ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಾಯವಾದದ್ದು ಗ್ರಹಣಗಳ ಅಧ್ಯಯನವೇ! 1919ರಲ್ಲಿ ಆಫ್ರಿಕಾದಲ್ಲಿ ಕಂಡ ಸಂಪೂರ್ಣ ಸೂರ್ಯಗ್ರಹಣದ ಅಧ್ಯಯನದ ಕಾರಣದಿಂದ, ಐನ್‌ಸ್ಟೈನ್‌ಗೆ ಸಾಪೇಕ್ಷ ಸಿದ್ಧಾಂತವನ್ನು ಸಾಬೀತುಪಡಿಸಲು ಸಾಧ್ಯವಾಯಿತು. ಇದು ನಂತರ ವಿಜ್ಞಾನ ಪ್ರಪಂಚವನ್ನೇ ಬದಲಾಯಿಸಿತು. ಈ ಅಧ್ಯಯನಗಳು, ಈಗಿನ ಜಿಪಿಎಸ್ ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣವಾಗಿ, ನಿಖರವಾದ ಮಾಹಿತಿಗಳನ್ನು ಪಡೆಯಲು ಅನುಕೂಲವಾಯಿತು. ಇಂತಹ ಹಲವು ನಿದರ್ಶನಗಳನ್ನು ಪಟ್ಟಿ ಮಾಡಬಹುದು.
ಗ್ರಹಣ
ಇಗೋ ನಡೆಯುತಿಹುದು
ನಿಸರ್ಗದ ವಿಸ್ಮಯ
ಆಗಸದ ಅಲೆಮಾರಿಗಳಾದ
ಸೂರ್ಯ, ಭೂಮಿ, ಚಂದ್ರರಿಂದ.
ಬರುವರು ಈ ಮೂವರೂ
ಸರಳ ರೇಖೆಯಲಿ,ಬೀಳುವುದು ಭೂಮಿಯ (ಚಂದ್ರನ)
ನೆರಳು ಚಂದ್ರನ (ಭೂಮಿಯ) ನೆಲದಲಿ.
ನೋಡಲು ಬಲು ಅಂದ
ಉಣ್ಣಲು ಬಲು ಚೆಂದ
ಹಾಡಲು ಬಲು ಇಷ್ಟ.
ಈ ಅಲೆಮಾರಿಗಳ ಬೆಳಕು ನೆರಳಿನಾಟವ
ಅಗೋ ಸಟೆಯುತಿಹರು..
ನೋಡಬಾರದೆಂಬ ಮೋಸದ ಜಾಲವ.
ಉಣ್ಣಬಾರದೆಂಬ ಅಪ ನಂಬಿಕೆಯ ಕೂಪವ.
ಬದುಕಬಾರದೆಂಬ ಭಯದ ಸೂತಕವ.
ಹೊಡೆಯಬೇಕಿದೆ ಹುಸಿ ನಂಬಿಕೆಗಳನ್ನು.
ಮುಗಿಸಬೇಕಿದೆ ವಿಷವುಣಿಸುವ ಸಂಸ್ಥೆಗಳನ್ನು.
ಇಲ್ಲವಾಗಿಸಬೇಕಿದೆ ಮಡುಗಟ್ಟಿದ ಚಿತ್ತಗಳನ್ನು.
ತಿಳಿಸಬೇಕಿದೆ ಇವಕ್ಕೆ ಬಲಿಯಾದ ಜೀವಗಳಿಗೆ,
ಬದುಕಬೇಕೆಂದು ಅರಿವಿನ ದಾರಿಯಲಿ.
ಹಂಚಬೇಕೆಂದು ಪ್ರೀತಿಯ ‘ನೆರಳ’ನ್ನು.
ಇದಕ್ಕೆಲ್ಲಾ ಸಾಕ್ಷಿಯಾಗಬೇಕಿದೆ
ಈ ನಮ್ಮ ಗ್ರಹಣಗಳು.


