Homeಅಂಕಣಗಳುಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?

ಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?

- Advertisement -
- Advertisement -

ರಾತ್ರಿ ಸಮಯದ ಆಕಾಶದಲ್ಲಿ ಗ್ರಹಗಳು, ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದಕ್ಕೆ ನ್ಯಾಯಪಥದಲ್ಲಿ ಮೂಡುತ್ತಿರುವ ’ಬೆಳ್ಳಿಚುಕ್ಕಿ’ ಆಕಾಶ ವೀಕ್ಷಣೆಯ ಮಾರ್ಗದರ್ಶನ ನಿಮಗೆ ಸಹಾಯ ಮಾಡಿದೆ ಎಂದು ಭಾವಿಸುತ್ತೇನೆ. ನಾವು ಆಕಾಶ ವೀಕ್ಷಣೆಯನ್ನು ಬರಿಗಣ್ಣಿನಿಂದ ವೀಕ್ಷಿಸಿದ ನಂತರ, ದೂರದರ್ಶಕದಲ್ಲಿ ಆಕಾಶಕಾಯಗಳನ್ನು ನೋಡಿದರೆ ಹೇಗೆ ಕಾಣಬಹುದು ಎಂಬ ಕುತೂಹಲ ಹುಟ್ಟುವುದು ಸಹಜ. ಇದಕ್ಕೆ ಅನುಕೂಲವಾಗುವಂತೆ, ಮಾರುಕಟ್ಟೆಯಲ್ಲಿ ಎಲ್ಲರ ಬಜೆಟ್‌ಗೆ ಸಿಗುವ ತರಹೇವಾರಿ ದೂರದರ್ಶಕಗಳೂ ಲಭ್ಯವಿದೆ. ಅಂತಹ ದೂರದರ್ಶಕಗಳ ಬಾಕ್ಸ್‌ಗಳ ಮೇಲೆ ಗ್ರಹಗಳ ದೊಡ್ಡ ದೊಡ್ಡ ಚಿತ್ರಗಳನ್ನು ಪ್ರಿಂಟ್ ಮಾಡಿ, ಈ ದೂರದರ್ಶಕದಿಂದ ಗ್ರಹ, ನಕ್ಷತ್ರ ಮತ್ತು ಗ್ಯಾಲಾಕ್ಸಿಗಳನ್ನೂ ನೋಡಬಹುದು ಎಂದು ಚಿತ್ರಿಸಿರುತ್ತಾರೆ. ಸಾಮಾನ್ಯವಾಗಿ ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿ ಪ್ರಾರಂಭಿಸಿದಾಗ ಇಂತಹ ದೂರದರ್ಶಕಗಳನ್ನು ಕಂಡೊಡನೆ ಕೇಳುವ ಪ್ರಶ್ನೆಗಳು ಹೀಗಿವೆ: ಈ ದೂರದರ್ಶಕದಿಂದ ಎಷ್ಟು ದೂರ ನೋಡಬಹುದು? ಬಾಕ್ಸ್ ಮೇಲಿರುವ ಫೋಟೋದಲ್ಲಿ ತೋರಿಸಿರುವಂತೆ ಈ ದೂರದರ್ಶಕದಿಂದ ನಕ್ಷತ್ರ, ಗ್ರಹಗಳನ್ನು ಅಷ್ಟು ದೊಡ್ಡ ಗಾತ್ರದಲ್ಲಿ ನೋಡಬಹುದಾ? ಈ ದೂರದರ್ಶಕದಿಂದ ಬಣ್ಣದ ನೆಬುಲ್ಲಾಗಳು ಕಾಣುತ್ತವೆಯೇ (ಪೋಟೋದಲ್ಲಿ ಕಾಣುವಂತೆ)?

ದೂರದರ್ಶಕದಿಂದ ಆಕಾಶ ವೀಕ್ಷಣೆ ಮಾಡುವುದು ಹವ್ಯಾಸಿ ಖಗೋಳ ವಿಜ್ಞಾನಿಗಳ ಎರಡನೇ ಹಂತ. ಆದರೆ ಮೊದಲು ದೂರದರ್ಶಕದ ಬಗ್ಗೆ ಮೇಲೆ ನೀಡಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯ.

ದೂರದರ್ಶಕವನ್ನು ನಮ್ಮ ಕಣ್ಣಿಗೆ ಹೋಲಿಸಿ ನೋಡೋಣ: ಕಣ್ಣಿಗೆ ಬೆಳಕು 7 ಮಿಲಿಮೀಟರ್ ವ್ಯಾಸವಿರುವ ಮಸೂರ (ಲೆನ್ಸ್) (2ಎಂಎಂ ನಿಂದ 7ಎಂಎಂ ವರೆಗೆ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತದೆ) ಮೂಲಕ ಹಾದು, ರೆಟಿನಾ ಮೇಲೆ ಬೀಳುತ್ತದೆ. ಹೀಗಾಗಿ ನಾವು ನೋಡುವ ವಸ್ತುವಿನ ದೃಶ್ಯವು 7ಎಂಎಂ ಮಸೂರದ ಮೂಲಕ ಹಾದು ಬಂದ ಬೆಳಕಿನಿಂದ ಮೂಡಿರುತ್ತದೆ. ವಸ್ತುವು ಬಹಳ ವಿವರವಾಗಿ ಕಾಣಬೇಕೆಂದರೆ, ಸಾಕಷ್ಟು ಬೆಳಕು ಕಣ್ಣಿಗೆ ಬೇಕಾಗುತ್ತದೆ. ಆದುದರಿಂದಲೇ ಕೊಠಡಿಯಲ್ಲಿ ಬೆಳಕಿದ್ದರೂ, ಲೈಟ್ ಹಾಕಿದಾಗ, ಅಲ್ಲಿರುವ ವಸ್ತುಗಳು ಇನ್ನಷ್ಟು ವಿವರವಾಗಿ ಕಾಣುತ್ತವೆ. ಇದನ್ನು ಮಸೂರದ ಬೆಳಕಿನ ಸಂಗ್ರಹ ಸಾಮರ್ಥ್ಯ ಎನ್ನುತ್ತೇವೆ.

ನಮ್ಮ ಕಣ್ಣಿನ ಮಸೂರ ಹೆಚ್ಚು ಹೆಚ್ಚು ಬೆಳಕು ಸಂಗ್ರಹಿಸುತ್ತಿದ್ದಂತೆ (ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿದರೆ), ನಾವು ನೋಡುವ ವಸ್ತುಗಳು ವಿವರವಾಗಿ ಕಾಣುತ್ತಾ ಹೋಗುತ್ತದೆ. ಕಣ್ಣಿನ ಹಾಗೆ, ದೂರದರ್ಶಕದಲ್ಲಿ ಬೆಳಕನ್ನು ಸಂಗ್ರಹಿಸಲು ಮಸೂರವನ್ನು (ಕೆಲವು ದೂರದರ್ಶಕದಲ್ಲಿ ದರ್ಪಣವನ್ನೂ ಬಳಸುತ್ತಾರೆ) ಬಳಸುತ್ತಾರೆ. ಈ ಮಸೂರವು ಕಡಿಮೆ ಅಂದರೂ 2 ಇಂಚಿನ ವ್ಯಾಸಕ್ಕಿಂತಲೂ ಹೆಚ್ಚು ಅಗಲವಾಗಿರುತ್ತದೆ. ಹಾಗಾಗಿ, ದೂರದರ್ಶಕದ ಹೆಸರನ್ನು ನಾವು ಅದರಲ್ಲಿ ಉಪಯೋಗಿಸಿರುವ ಮಸೂರ ಅಥವಾ ದರ್ಪಣದ ವ್ಯಾಸದ ಮೂಲಕವೇ ಕರೆಯುತ್ತೇವೆ. ಉದಾಹರಣೆಗೆ, 5 ಇಂಚ್ ದೂರದರ್ಶಕ, 10 ಇಂಚ್ ದೂರದರ್ಶಕ ಇತ್ಯಾದಿಯಾಗಿ.

ನಮ್ಮ ಕಣ್ಣಿನ 7ಎಂಎಂ ಮಸೂರ ಸಂಗ್ರಹಿಸುವ ಬೆಳಕಿನ ಸಾಮರ್ಥ್ಯ ಮತ್ತು ದೂರದರ್ಶಕಗಳು (ಕಡಿಮೆ ಅಂದರೂ 2 ಇಂಚು) ಸಂಗ್ರಹಿಸುವ ಬೆಳಕಿನ ಸಾಮರ್ಥ್ಯದ ನಡುವೆ ಸಾಕಷ್ಟು ಪಟ್ಟು ವ್ಯತ್ಯಾಸವಿದೆ. ಇಂತಹ ದೂರದರ್ಶಕವನ್ನು ಬಳಸಿ, ವಸ್ತುಗಳನ್ನು ವೀಕ್ಷಿಸಿದರೆ, ವಸ್ತುವಿನ ವಿವರಗಳನ್ನು ಸ್ಪಷ್ಟವಾಗಿ ನೋಡಬಹುದು. ಆದರೂ, ದೂರದರ್ಶಕಗಳು ವಸ್ತುವನ್ನು ದೊಡ್ಡದಾಗಿ ನೋಡಲು ಸಹಾಯ ಮಾಡುವುದಿಲ್ಲ! ಈ ಕೆಲಸ ಮಾಡುವುದು, ದೂರದರ್ಶಕಗಳಿಗೆ ಜೋಡಿಸಿರುವ Eye-Piece. ಈ Eye-pieceಗಳು 2X, 4X, 10X ವಿಧಗಳಲ್ಲಿ ಇರುತ್ತವೆ. ಇಲ್ಲಿ ’X’ ಅಂದರೆ, ಸಾಮನ್ಯವಾಗಿ ಕಣ್ಣಿಗೆ ಕಾಣುವ ವಸ್ತುವಿನ ಗಾತ್ರವು 2 ಪಟ್ಟು, ನಾಲ್ಕು ಪಟ್ಟು, ಹತ್ತು ಪಟ್ಟು ದೊಡ್ಡದಾಗಿ ಕಾಣುವುದು ಎನ್ನುವುದನ್ನು ತಿಳಿಸಲು ಬಳಸುವ ಸೂಚಕ. (2X: 2ಪಟ್ಟು ದೊಡ್ಡದಾಗಿ, 3X: ಮೂರು ಪಟ್ಟು ದೊಡ್ಡದಾಗಿ ನೊಡಬಹುದು ಎಂದರ್ಥ).

ದೂರದರ್ಶಕಕ್ಕೆ ನಾವು eye piece ಜೋಡಿಸಿದಾಗ, ಸಾಮಾನ್ಯವಾಗಿ ವಸ್ತುವು ಬರಿಗಣ್ಣಿನಿಂದ ನೋಡಿದಾಗ ಎಷ್ಟು ದೊಡ್ಡದಾಗಿ ಕಾಣುತ್ತದೋ, ಅದಕ್ಕಿಂತಲೂ eye pieceನ ಸಾಮರ್ಥ್ಯಕ್ಕನುಸಾರವಾಗಿ ಅಷ್ಟು ದೊಡ್ಡದಾಗಿ ವಸ್ತುವನ್ನು ನೋಡಬಹುದಾಗಿರುತ್ತದೆ. ಹಾಗಂತ, ಕಡಿಮೆ ಬೆಳಕಿನ ಸಾಮರ್ಥ್ಯದ ದೂರದರ್ಶಕಕ್ಕೆ ಹೆಚ್ಚು ಸಾಮರ್ಥ್ಯದ eye piece ಜೋಡಿಸಿದರೆ (ಉದಾಹರಣೆಗೆ: 2 ಇಂಚಿನ ದೂರದರ್ಶಕಕ್ಕೆ, 40X Eye Piece ಜೋಡಿಸಿದರೆ), ವಸ್ತುವು ದೊಡ್ಡದಾಗಿ ಕಂಡರೂ, ಹೆಚ್ಚು ಬೆಳಕಿನ ಸಂಗ್ರಹ ಇಲ್ಲದಿರುವುದರಿಂದ ಬಹಳ ಮಸುಕಾಗಿ ಕಾಣುತ್ತದೆ ಅಥವಾ ಕಾಣುವುದೇ ಇಲ್ಲ ಹಾಗಾಗಿ ದೂರದರ್ಶಕದಲ್ಲಿ ವಸ್ತುವನ್ನು ದೊಡ್ಡದಾಗಿ ನೋಡಬೇಕಾದರೆ, ಬರಿ eye piece ಅಷ್ಟೇ ಅಲ್ಲ ದೊಡ್ಡದಾದ ದೂರದರ್ಶಕವು ಬೇಕಾಗುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.

ಈಗ ನಮ್ಮ ಮೊದಲ ಪ್ರಶ್ನೆಗೆ ಬರೋಣ. ದೂರದರ್ಶಕದಿಂದ ನೋಡಿದಾಗ, ಆಕಾಶ ಕಾಯಗಳು ದೊಡ್ಡದಾಗಿ ಕಾಣುತ್ತವೆಯೇ? ಮೊದಲಿಗೆ ನಕ್ಷತ್ರಗಳು ಹೇಗೆ ಕಾಣುತ್ತವೆ ನೋಡೋಣ. ಯಾವುದೇ ಗಾತ್ರದ ದೂರದರ್ಶಕದಲ್ಲಾದರೂ ನಕ್ಷತ್ರಗಳನ್ನು ನೋಡಿದಾಗ, ಅದು ಬರಿಗಣ್ಣಿಗೆ ಹೇಗೆ ಒಂದು ಸೂಜಿಮೊನೆಯಂತೆ ಕಾಣುತ್ತದೋ, ಅದೇ ಆಕಾರದಲ್ಲಿ ಕಾಣುತ್ತದೆ! ಏಕೆಂದರೆ, ನಮ್ಮ ಭೂಮಿಯಿಂದ ನಕ್ಷತ್ರಗಳು ಸಾವಿರ, ಲಕ್ಷ ಬೆಳಕಿನ ವರ್ಷದ ದೂರದಲ್ಲಿವೆ (ಒಂದು ಬೆಳಕಿನ ವರ್ಷ ಎಂದರೆ, ಬೆಳಕು ಒಂದು ವರ್ಷದಲ್ಲಿ ಚಲಿಸುವ ದೂರ- ಬೆಳಕು ಒಂದು ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ಚಲಿಸುತ್ತದೆ). ಹಾಗಾಗಿ, ಭೂಮಿ ಅಥವಾ ಆಕಾಶದಲ್ಲಿರುವ ದೂರದರ್ಶಕದಿಂದ (ಹಬಲ್ ದೂರದರ್ಶಕ) ನಕ್ಷತ್ರವನ್ನು ನೋಡಿದರೂ, ಅದು magnify ಆಗುವುದಿಲ್ಲ.

ನಕ್ಷತ್ರ ಸೂಜಿಮೊನೆಯಂತೆಯೇ ಕಾಣುತ್ತದೆ. ಇದರ ಜೊತೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಬಣ್ಣ ಬಣ್ಣದ ಎಷ್ಟೋ ನೆಬುಲ್ಲಾಗಳನ್ನು ನಾವು ನೋಡಿರಬಹುದು. ಈ ನೆಬುಲ್ಲಾಗಳು ನಕ್ಷತ್ರ ಮತ್ತು ಹೈಡ್ರೋಜನ್ ಮೋಡಗಳಿಂದ ಸೃಷ್ಟಿಯಾಗಿದ್ದು, ಇದರಿಂದ ಮಸುಕಾದ ಬೆಳಕು ಭೂಮಿಯ ಕಡೆಗೆ ಬರುತ್ತಿರುತ್ತದೆ. ಇವುಗಳು ದೂರದರ್ಶಕದಲ್ಲಿ ಮಸುಕುಮಸುಕಾದ ಹಾಲಿನ ಬಣ್ಣದಲ್ಲಿ ಕಾಣುತ್ತವೆ. ದೊಡ್ಡ ದೂರದರ್ಶಕದಲ್ಲಿ (40 ಇಂಚಿಗೂ ಹೆಚ್ಚು ದೊಡ್ಡದು) ನೆಬುಲ್ಲಾದ ಮಸುಕಾದ ಆಕಾರ ಸ್ವಲ್ಪ ಪ್ರಕಾಶಮಾನವಾಗಿ ಕಾಣಬಹುದು. ಹೆಚ್ಚು Exposure ಇರುವ ಕಲರ್ ಕ್ಯಾಮರಾಗಳು ಮಾತ್ರ ಈ ನೆಬುಲ್ಲಾಗಳಿಂದ ಬರುವ ಮಸುಕು ಬೆಳಕಿನಿಂದ ಬಣ್ಣಗಳನ್ನು ಕಾಣಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ನಮ್ಮ ಕಣ್ಣಿಗೆ ಈ ಸಾಮರ್ಥ್ಯವಿಲ್ಲ. ಬಣ್ಣದ ನೆಬುಲ್ಲಾಗಳನ್ನು ಚಿತ್ರದಲ್ಲಿ ಮಾತ್ರ ನೋಡಲು ಸಾಧ್ಯ. ಬರಿಗಣ್ಣಿನಲ್ಲಿ ಅಥವಾ ದೂರದರ್ಶಕದಿಂದ ನೋಡುವುದು ಅಸಾಧ್ಯ.

ಉಳಿದಂತೆ, 2 ಇಂಚಿನಿಂದ 8 ಇಂಚಿನ ದೂರದರ್ಶಕಗಳಲ್ಲಿ ಸೌರ ಮಂಡಲದ ಗ್ರಹಗಳನ್ನು ಅವುಗಳ ಬಣ್ಣಗಳಿಗನುಸಾರವಾಗಿ ದೊಡ್ಡದಾಗಿ magnify ಮಾಡಿ ದೂರದರ್ಶಕದಿಂದ ನೋಡಬಹುದಾಗಿದೆ. ದೂರದರ್ಶಕದ ಬಾಕ್ಸ್ ಮೇಲೆ ಚಿತ್ರಿಸಿರುವ ಗ್ರಹಗಳ ದೊಡ್ಡದಾದ ಚಿತ್ರಗಳಂತೆ ಕಾಣದಿದ್ದರೂ, ಕೆಲವು ಗ್ರಹಗಳ ವೈಶಿಷ್ಟ್ಯತೆಗಳಾದ: ಶನಿ ಗ್ರಹದ ಉಂಗುರ, ಗುರು ಗ್ರಹದ ದೊಡ್ಡ ಸುಂಟರ ಗಾಳಿಯ ಮೋಡ ಮತ್ತು ಅದರ ಚಂದ್ರಗಳು, ಮಂಗಳ ಗ್ರಹದ ಮಂಜಿನ ಬೆಟ್ಟ, ಚಂದ್ರನ ಕುಳಿಗಳು, ಶುಕ್ರ ಗ್ರಹದ ಬಿಂಬಾವಸ್ಥೆಗಳನ್ನು ನೋಡಬಹುದು.


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕೇರಳ ಸರ್ಕಾರ ಕೈಗೊಂಡ ನಿರ್ಧಾರದಿಂದ ಅಲ್ಲಿನ ಜನತೆ ದುಗುಡದಿಂದ ಹೊರಬಂದಿದ್ದಾರೆ,ನಮ್ಮ ರಾಜ್ಯಕ್ಕೆ ಆ ದಿನ ಬರುವಂತಾಗಲಿ. ಅಂದೇ ದುಡಿದು ಅಂದೇ ಅಕ್ಕಿ ಬೇಳೆ ತರುತ್ತಿದ್ದವರ ಪಾಡು ನೋಡಲಾಗದು.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...