ಸ್ವಾತಂತ್ರ್ಯ ಸೇನಾನಿ, ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿಯವರು 104ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಧೀಮಂತ ಜನಪರ ನಾಯಕನಿಗೆ ಸಕಲ ಸರ್ಕಾರಿ ಗೌರವಳೊಂದಿಗೆ ಬೀಳ್ಕೊಡಲು ಸರ್ಕಾರ ಆದೇಶಿಸಿದೆ.
ಆದರೆ ಎಚ್.ಎಸ್ ದೊರೆಸ್ವಾಮಿಯವರು ಈ ಮೊದಲೇ ತಾವು ನಿಧನರಾದ ನಂತರ ತಮ್ಮ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಬೇಕೆಂದು ಬಯಸಿ ಒಪ್ಪಿಗೆ ಪತ್ರವನ್ನು ಸಹ ನೀಡಿದ್ದಾರೆ. ಆದರೆ ಅವರಿಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅಂತ್ಯಕ್ರಿಯೆಯ ಬಗ್ಗೆ ಸ್ವಲ್ಪ ಗೊಂದಲಗಳಿದ್ದವು. ಇದೀಗ ಗೊಂದಲಗಳು ಬಗೆಹರಿದಿದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
“ದೊರೆಸ್ವಾಮಿಯವರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕನಿಷ್ಠ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಕೋವಿಡ್ -19ರ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಿ ನೆರವೇರಿಸಲು ಆದೇಶಿಸಿದೆ” ಎಂದು ಸರ್ಕಾರದ ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳರವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ; ಗೌರವ ನಮನ | ದೊರೆಸ್ವಾಮಿ ಅವರ ಸಾರ್ಥಕ ಬದುಕಿನ ಮೈಲಿಗಲ್ಲುಗಳು


