ಪೌರತ್ವ ಕಾಯ್ದೆ-1955 ಮತ್ತು ಪೌರತ್ವ ನಿಯಮಗಳು-2009 ರ ಅಡಿಯಲ್ಲಿ ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮುಂತಾದ ದೇಶಗಳಿಂದ ಬಂದು ಗುಜರಾತ್, ರಾಜಸ್ಥಾನ, ಛತ್ತೀಸಗಡ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಿಂದೂ, ಸಿಖ್, ಜೈನ, ಬೌದ್ಧರು ಸೇರಿದಂತೆ ಮುಸ್ಲಿಮೇತರ ಧರ್ಮೀಯರಿಗೆ ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರವು ಶುಕ್ರವಾರ ಅರ್ಜಿ ಆಹ್ವಾನಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2019 ರ ಅಡಿಯಲ್ಲಿ ಕೇಂದ್ರವು ಇನ್ನೂ ನಿಯಮಗಳನ್ನು ರೂಪಿಸದ ಕಾರಣ, ಪೌರತ್ವದ ಅರ್ಜಿಗಳನ್ನು ಸ್ವೀಕರಿಸಲು, ಪರಿಶೀಲಿಸಲು ಮತ್ತು ಅನುಮೋದಿಸಲು ಗುಜರಾತ್, ಚತ್ತೀಸ್‌ಗಡ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳ ಅಧಿಕಾರಿಗಳಿಗೆ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಅಧಿಕಾರವನ್ನು ನೀಡುವ ಗೆಜೆಟ್ ಅಧಿಸೂಚನೆಯನ್ನು ಕೇಂದ್ರವು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಸಿಎಂ ಮತ್ತು ಅವರ ಪುತ್ರನ ಕಾಲು ಹಿಡಿದು ಸಿ.ಪಿ. ಯೋಗೇಶ್ವರ್ ಸಚಿವರಾಗಿದ್ದು: ರೇಣುಕಾಚಾರ್ಯ
ಅಧಿಸೂಚನೆಯು ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾ ರ್ಸಿಗಳು ಮತ್ತು ಕ್ರಿಶ್ಚಿಯನ್ನರನ್ನು ಈ ಅರ್ಜಿಗೆ ಒಳಗೊಳ್ಳುವ ಸಮುದಾಯಗಳೆಂದು ಪಟ್ಟಿ ಮಾಡುತ್ತದೆ ಮತ್ತು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಹೇಳುತ್ತದೆ.
ಈ ಆದೇಶವನ್ನು ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ ನಿಯಮಗಳು, 2009 ರ ಅಡಿಯಲ್ಲಿ ನೀಡಲಾಗಿದೆಯೆ ಹೊರತು ಪೌರತ್ವದ ಅಡಿಯಲ್ಲಿ ಅಲ್ಲ.
2019 ರ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಹಲವಾರು ರಾಜ್ಯಗಳ ಇತರ ಜಿಲ್ಲೆಗಳಿಗೂ ಇದೇ ರೀತಿಯ ಅಧಿಸೂಚನೆಯನ್ನು 2018 ರಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಕೊರೊನಾ ಇಲ್ಲದಿರುತ್ತಿದ್ದರೆ ಇಷ್ಟೊತ್ತಿಗಾಗಲೇ BJP ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು: ಕಾಂಗ್ರೆಸ್
ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾದ ಜಿಲ್ಲೆಗಳು ಇಂತಿವೆ: ಮೊರ್ಬಿ, ರಾಜ್‌ಕೋಟ್, ಪಠಾನ್ ಮತ್ತು ವಡೋದರಾ (ಗುಜರಾತ್); ದುರ್ಗ್ ಮತ್ತು ಬಲೋದಬಜಾರ್ (ಚತ್ತೀಸ್‌ಗಡ್); ಜಲೋರ್, ಉದಯಪುರ, ಪಾಲಿ, ಬಾರ್ಮರ್ ಮತ್ತು ಸಿರೋಹಿ (ರಾಜಸ್ಥಾನ); ಫರಿದಾಬಾದ್ (ಹರಿಯಾಣ); ಮತ್ತು, ಜಲಂಧರ್ (ಪಂಜಾಬ್).
ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳ ಕೆಲವು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಗೃಹ ಕಾರ್ಯದರ್ಶಿಗಳಿಗೆ 2018 ರಲ್ಲಿ ಸರ್ಕಾರ ಇದೇ ರೀತಿಯ ಅಧಿಕಾರವನ್ನು ನೀಡಿತ್ತು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಜೈನ, ಸಿಖ್, ಪಾರ್ಸಿ, ಕ್ರಿಶ್ಚಿಯನ್ ಮತ್ತು ಬೌದ್ಧ ಸಮುದಾಯಗಳಿಗೆ ಸೇರಿದ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಪೌರತ್ವ ಕಾಯ್ದೆಯನ್ನು 2019 ರ ಡಿಸೆಂಬರ್‌ನಲ್ಲಿ ಸಂಸತ್ತು ತಿದ್ದುಪಡಿ ಮಾಡಿತು. ಆದರೆ ಈ ತಿದ್ದುಪಡಿಯಲ್ಲಿ ಮುಸ್ಲಿಮರಿಗೆ ಪೌರತ್ವ ಪಡೆಯಲು ಅವಕಾಶ ಇರಲಿಲ್ಲ. ಪ್ರತಿಪಕ್ಷಗಳು ಈ ಕಾನೂನು ಸಂವಿಧಾನ ವಿರೋಧಿಯಾಗಿದ್ದು, ಧಾರ್ಮಿಕ ನಂಬಿಕೆಯ ಮೇಲೆ ತಾರತಮ್ಯ ಮಾಡುತ್ತದೆ ಎಂಬ ತೀವ್ರ ಟೀಕೆಗಳ ಮಧ್ಯೆಯು ಅಂಗೀಕರಿಸಲಾಯಿತು. ಈ ಕಾನೂನಿನ ವಿರುದ್ದ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆ ಕೂಡಾ ನಡೆದಿದ್ದು ವಿಶ್ವದ ಗಮನ ಸೆಳೆದಿತ್ತು.
ಇದನ್ನೂ ಓದಿ: ದೆಹಲಿ ವಾಸ್ತು- ಹಿನ್ನೋಟ; ಭವ್ಯ ಕಟ್ಟಡವೊಂದಕ್ಕೆ ಪರಂಪರೆಯ ನೆಲಸಮ?


