Homeನ್ಯಾಯ ಪಥದೆಹಲಿ ವಾಸ್ತು- ಹಿನ್ನೋಟ; ಭವ್ಯ ಕಟ್ಟಡವೊಂದಕ್ಕೆ ಪರಂಪರೆಯ ನೆಲಸಮ?

ದೆಹಲಿ ವಾಸ್ತು- ಹಿನ್ನೋಟ; ಭವ್ಯ ಕಟ್ಟಡವೊಂದಕ್ಕೆ ಪರಂಪರೆಯ ನೆಲಸಮ?

- Advertisement -
- Advertisement -

ಜಗತ್ತಿನ ಪ್ರಖ್ಯಾತ ನಗರಗಳಲ್ಲೊಂದಾದ ದೆಹಲಿಯು ಭಾರತ ದೇಶದ ರಾಜಧಾನಿಯಾಗಿ ಘೋಷಣೆಗೊಂಡು ಒಂದು ನೂರಾ ಹತ್ತು ವರುಷಗಳಾಯಿತು. ಈ ಸಂದರ್ಭದಲ್ಲಿ ದೆಹಲಿಯ ಸಂಕೇತದಂತಿರುವ
ಅದರ ವಾಸ್ತುವನ್ನು ಅನೇಕರ ವಿರೋಧಗಳ ನಡುವೆಯೂ ಆಮೂಲಾಗ್ರವಾಗಿ ಬದಲಾಯಿಸಲಾಗುತ್ತಿದೆ. ಗಂಗೆಯಲ್ಲಿ ಹೆಣಗಳು ತೇಲುತ್ತಿರುವಾಗ ರಾಜಧಾನಿಯಲ್ಲೊಂದು ಭವ್ಯ ಕಟ್ಟಡ ಬರುತ್ತಿರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅಸಮಾಧಾನ ಪ್ರಕಟವಾಗಿದೆ. ಆದರೆ ನರೇಂದ್ರ ಮೋದಿಯವರ ಬಗ್ಗೆ ಗೊತ್ತಿರುವವರಿಗೆ ಅಂಥ ಅಚ್ಚರಿಯೇನೂ ಆಗಿಲ್ಲ. ಹೀಗೆ ದೆಹಲಿ ಬದಲಾಗುತ್ತಿರುವ ಹೊತ್ತು ಅದನ್ನು ಹಿಂದಿನವರು ಕಟ್ಟಿದ ಬಗೆ ಮತ್ತು ಅದರ ಸುದೀರ್ಘ ಇತಿಹಾಸದತ್ತ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ದೆಹಲಿಯು ವಿಶ್ವದ ಅತ್ಯಂತ ಪುರಾತನ ಜನವಸತಿಯ ಸ್ಥಳಗಳಲ್ಲಿ ಒಂದು. ಯಮುನಾ ನದಿಯ ದಂಡೆಗೆ ನೀಳವಾಗಿ ಉದ್ದಕ್ಕೆ ಚಾಚಿಕೊಂಡಿರುವ ಅರಾವಳಿ ಪರ್ವತ ಪ್ರದೇಶಗಳಲ್ಲಿ ಪ್ರಾಚೀನ ಜನವಸತಿಯ ನೆಲೆಗಳಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಕಡಿಮೆ ಮಳೆಬೀಳುವ ಈ ಪ್ರದೇಶದಲ್ಲಿ ಬೆಳೆಯುವ ಕುರುಚಲು ಪೊದರುಗಳು ವಲಸೆಗಾರ ಕುರುಬರಿಗೋ, ದನಗಾಹಿಗಳಿಗೋ ಅತ್ಯಂತ ಪ್ರಶಸ್ತವಾಗಿದ್ದು, ಶ್ರೀಕೃಷ್ಣನ ಓಡಾಟದ ಜಾಗವಾಗಿದ್ದುದು ಸಹಜವೇ ಸರಿ. ದೆಹಲಿಯ ಉತ್ತರ ದಿಕ್ಕಿನಲ್ಲಿ ಒಂದು ಕಾಲಕ್ಕೆ ಹರಿಯುತ್ತಿದ್ದ ಸರಸ್ವತಿ ನದಿದಂಡೆಯಲ್ಲಿ ವೇದಕಾಲೀನ ಸಮಾಜ ಕ್ರಿಯಾಶೀಲವಾಗಿತ್ತೆಂದೂ ಹೇಳಲಾಗುತ್ತಿದೆ. ಋಗ್ವೇದವು ಸರಸ್ವತಿ ನದಿಯನ್ನು ’ಅತ್ಯುತ್ತಮ ತಾಯಿ, ಅತ್ಯುತ್ತಮ ದೈವ ಮತ್ತು ಅತ್ಯುತ್ತಮ ನದಿ’ ಎಂದು ಕೊಂಡಾಡುತ್ತದಲ್ಲದೆ, ಅದು ಹಾಲು ತುಪ್ಪ ಕೊಡುವ ನದಿ ಎಂದೂ ವರ್ಣಿಸುತ್ತದೆ. ವಿದ್ವಾಂಸರು ಸರಸ್ವತಿ ನದಿಯು ಕ್ರಿಪೂ 6000 ವರ್ಷಗಳಿಂದ ಕ್ರಿಪೂ 3000 ವರ್ಷಗಳವರೆಗೆ ತುಂಬಿ ಹರಿಯುತ್ತಿತ್ತೆಂದು ಹೇಳಿದ್ದಾರೆ. ಹಿಮಾಲಯದ ಗಡವಾಲ ಪ್ರದೇಶದಲ್ಲಿ ಹುಟ್ಟಿ ದಕ್ಷಿಣಕ್ಕೆ ಅದು ಹರಿಯುತ್ತಿದ್ದಾಗ ಅಲ್ಲಿ ಆ ಕಾಲಕ್ಕೆ ಥಾರ್ ಮರುಭೂಮಿಯೇ ಇರಲಿಲ್ಲ, ಬದಲು ಸರಸ್ವತಿಯ ಕೃಪೆಯಿಂದ ಹಸಿರು ಕಾಡಿತ್ತು. ಜೊತೆಗೆ ಯಮುನಾ ಮತ್ತು ಶುತಾದ್ರಿ (ಈಗಣ ಸಟ್ಲೆಜ್) ನದಿಗಳು ಸರಸ್ವತಿಯ ಎಡ-ಬಲಗಳಲ್ಲಿ ಉಪನದಿಗಳಾಗಿ ಹರಿಯುತ್ತಾ ಕೊನೆಗೆ ಸರಸ್ವತಿಯನ್ನೇ ಸೇರುತ್ತಿದ್ದುವು. ಕಾಲಾಂತರದಲ್ಲಿ ಅರಾವಳಿ ಪರ್ವತ ಶ್ರೇಣಿಗಳು ತಲೆ ಎತ್ತಿದಾಗ ಶುತಾದ್ರಿಯು ಸಿಂಧು ನದಿಯನ್ನೂ, ಯಮುನೆಯು ಗಂಗಾ ನದಿಯನ್ನೂ ಕೂಡಿಕೊಂಡವು. ಹೀಗೆ ಮುಖ್ಯವಾದ ಎರಡು ಉಪನದಿಗಳನ್ನು ಕಳಕೊಂಡು ಕೃಶಳಾದ ಸರಸ್ವತಿಯು ಕೊನೆಗೆ ಬತ್ತಿಹೋಗುವುದು ಅನಿವಾರ್ಯವಾಯಿತು. ಹಾಗೆ ಕಳೆದುಹೋದ ಸರಸ್ವತಿಯನ್ನು ’ಗುಪ್ತ ಗಾಮಿನಿ’ಎಂದು ಕರೆದು, ಅದು ತ್ರಿವೇಣಿ ಸಂಗಮದಲ್ಲಿ ಯಮುನೆ ಮತ್ತು ಗಂಗೆಯನ್ನು ಕೂಡಿಕೊಳ್ಳುತ್ತದೆ ಎಂದು ಹೇಳಲಾಯಿತು.

ಚಾರಿತ್ರಿಕವಾಗಿ, ಸಿಂಧೂ ಸಂಸ್ಕೃತಿ ಪತನಗೊಂಡ ಆನಂತರ ಜನರು ಪೂರ್ವದ ಕಡೆಗೆ ವಲಸೆ ಬಂದು ಸರಸ್ವತಿ ನದಿತೀರದ ಫಲವತ್ತಾದ ಜಾಗದಲ್ಲಿ ನೆಲೆನಿಂತರು. ಆ ಕಾಲದಲ್ಲಿ ಅಲ್ಲಿ ಅನೇಕ ನದಿಗಳು ಹರಿಯುತ್ತಿದ್ದು ಅವುಗಳನ್ನು ಆಪಗಾ, ಮಂದಾಕಿನಿ, ವಾಸು, ಕೌಶಿಕಿ, ಓಘಾವತಿ, ಮಧುಸ್ರವಾ, ವೈತರಣಿ, ದೃಶದ್ವತಿ, ರಾಕ್ಷಿ, ರತ್ನಾವಳಿ, ಅಂಶುಮತಿ, ಹಿರಣ್ವತಿ ಎಂದೆಲ್ಲಾ ಗುರುತಿಸಲಾಗಿದೆ. ವೇದಗಳು ಕಾಣಿಸಿಕೊಂಡ, ದಕ್ಷನು ಯಜ್ಞಮಾಡಿದ, ವಶಿಷ್ಟ ಜ್ಞಾನ ಸಂಪಾದನೆ ಮಾಡಿದ, ವಿಶ್ವಾಮಿತ್ರ ತಪಸ್ಸು ಮಾಡಿದ, ತ್ರಿಮೂರ್ತಿಗಳು ಮನೋಪಟಲದಲ್ಲಿ ಮೂಡಿಕೊಂಡ, ಇಂದ್ರನು ಸೋಮರಸ ಕುಡಿದ, ವೈದಿಕ ಸಂಸ್ಕೃತಿಯು ಆಕಾರ ಪಡೆದ, ಅತ್ಯಂತ ಮಹತ್ವದ ಭೂಭಾಗವು ದೆಹಲಿಗೆ ಅಂಟಿಕೊಂಡಿದೆ. ವಿವಿಧ ಬಗೆಯ ಆರ್ಥಿಕ ಚಟುವಟಿಕೆಗಳಿಗೆ ಹೆಸರಾಗಿದ್ದ ಈ ಪ್ರದೇಶವನ್ನು ಕುರು ವಂಶದವರು ಬಹಳ ಕಾಲ ಆಳಿದ್ದರು. ಕುರುಗಳಿಂದಲೇ ಹೆಸರಾದ ಕುರುಕ್ಷೇತ್ರವೂ ದೆಹಲಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದೆ. ಕುರುಕ್ಷೇತ್ರದಲ್ಲಿ ೧೮ ದಿನಗಳ ಕಾಲ ನಡೆದ ಮಹಾಯುದ್ಧದಲ್ಲಿ ಕೌರವರನ್ನು ಸೋಲಿಸಿದ ಪಾಂಡವರು ಬದುಕಿದ ಊರು ಇಂದ್ರಪ್ರಸ್ಥ, ಅದುವೇ ಇಂದಿನ ದೆಹಲಿ. ಮಹಾಭಾರತ ಯುದ್ಧವೇ ಕುರುಕ್ಷೇತ್ರದಲ್ಲಿ ನಡೆದ ಕೊನೆಯ ಯುದ್ಧವೇನಲ್ಲ. ಪಶ್ಚಿಮದ ಕಡೆಯಿಂದ ಭಾರತದ ಕಡೆ ಆಗಮಿಸಿದ ಎಲ್ಲರೂ ಅವರಿಗಿಂತ ಮೊದಲೇ ಇಲ್ಲಿಗೆ ಬಂದು ನೆಲೆಸಿದವರ ಪ್ರತಿಭಟನೆಯನ್ನು ಎದುರಿಸಲು ಕುರುಕ್ಷೇತ್ರವೇ ಪ್ರಶಸ್ತ ಸ್ಥಳ. ಬಹುಶಃ ಮೂರನೇ ಪಾನಿಪತ್ ಯುದ್ಧವು ಕುರುಕ್ಷೇತ್ರದಲ್ಲಿ ನಡೆದ ಕೊನೆಯ ಮಹಾಯುದ್ಧವೆಂದು ತೋರುತ್ತದೆ.

ಪಾಂಡವರು ಖಾಂಡವವನ ದಹನ ಮಾಡಿ ಕಟ್ಟಿದ ಇಂದ್ರಪ್ರಸ್ಥವೇ ದೆಹಲಿಯೆಂದೂ ಹೇಳಲಾಗುತ್ತಿದೆ. ಈಗಿನ ಪುರಾನಾ ಕಿಲ್ಲಾ ಜಾಗದಲ್ಲಿ ಧರ್ಮರಾಯನ ಅರಮನೆ ಇತ್ತೆಂಬ ನಂಬಿಕೆ ಅಲ್ಲಿ ಓಡಾಡುವ ನಮ್ಮಲ್ಲಿ ಸಂಭ್ರಮ ಮೂಡಿಸುತ್ತದೆ. ಆದರೆ ಚಾರಿತ್ರಿಕವಾಗಿ ದೆಹಲಿಯ ಅಸ್ತಿತ್ವದ ಮೊದಲ ಉಲ್ಲೇಖ ಮಾಡಿದವನು ಟಾಲೆಮಿ. ಅಲೆಕ್ಸಾಂಡ್ರಿಯಾದಿಂದ ಆಗಮಿಸಿದ ಆತ ಹೇಳಿದ ’ದೈದಲಾ’ ಎಂಬ ಪದವು ದೆಹಲಿಯೇ ಆಗಿರಬೇಕೆಂದು ಸಾಧಾರಣವಾಗಿ ತರ್ಕಿಸಲಾಗಿದೆ. ಕ್ರಿ.ಶ.೭೩೬ರಲ್ಲಿದ್ದ ರಾಜಾ ತೋಮರನ ರಾಜಧಾನಿ ’ದಿಲ್ಲಿಕೆ’ ಆಗಿತ್ತಂತೆ! ಪ್ರವಾಸಿಗ ಫರಿಸ್ತಾ ’ರಾಜಾದಿಲು’ ಎಂಬ ಹೆಸರಿನ ಅರಸನಿದ್ದುದನ್ನು ವಿವರಿಸುತ್ತಾನೆ. ರಜಪೂತ ಅರಸ ಪೃಥ್ವಿರಾಜನು (11ನೇ ಶತಮಾನ) ದೆಹಲಿಯನ್ನು ಆಳಿದ ಕೊನೆಯ ಹಿಂದೂ ಅರಸ. ಇಷ್ಟಿದ್ದರೂ ದೆಹಲಿ ಎಂಬ ಪದದ ನಿಜವಾದ ಅರ್ಥ ಏನೆಂದು
ಯಾರಿಗೂ ತಿಳಿಯದು.

ಕ್ರಿ.ಶ.1192ರಲ್ಲಿ ಭಾರತಕ್ಕೆ ಬಂದ ಘೋರಿ ಮಹಮ್ಮದನ ಜೊತೆಗಿದ್ದ ಗುಲಾಮೀ ವಂಶದ ಕುತುಬುದ್ದೀನನು ದೆಹಲಿಗೆ ಹೊಸ ಆಯಾಮ ನೀಡಿದ ಸ್ವತಂತ್ರ ಬುದ್ಧಿಯ ಅರಸ. ಆತ ದೇಶವನ್ನು ದೋಚಿಕೊಂಡು ಎಲ್ಲಿಗೂ ಹೋಗಲಿಲ್ಲ. ಬದಲು ದೆಹಲಿಯಲ್ಲಿಯೇ ನೆಲೆನಿಂತು ಅದನ್ನು ಬೆಳೆಸಿದ. ಆತನ ಕಾಲದಲ್ಲಿ ತಲೆಎತ್ತಿ ನಿಂತ ಕುತುಬ್‌ಮಿನಾರ್ ಇಂದು ದೆಹಲಿಯ ಪ್ರತಿಷ್ಠೆಯ ಸಂಕೇತಗಳಲ್ಲಿ ಒಂದು. ಕುತುಬುದ್ದೀನ್‌ನ ತರುವಾಯ ದೆಹಲಿಯನ್ನಾಳಿದ ಇಲ್ತ್‌ಮುಷ್‌ನ ಸೌಂದರ್ಯಪ್ರಜ್ಞೆಯನ್ನು ದೆಹಲಿ ಇಂದಿನವರೆಗೆ ಬೇರೆಬೇರೆ ರೂಪಗಳಲ್ಲಿ ಉಳಿಸಿಕೊಂಡು ಬಂದಿದೆ. ದೆಹಲಿಯ ಆಳ್ವಿಕೆಗೆ ಮಾತೃತ್ವದ ಸ್ಪರ್ಶ ನೀಡಿದ ರಜಿಯಾ ಸುಲ್ತಾನಳ ಪರಂಪರೆ
ಬೆಲೆಬಾಳುವಂಥದ್ದು. ಗುಲಾಮಿ ವಂಶಾಡಳಿತವನ್ನು ಕೊನೆಗೊಳಿಸಿ ಅಧಿಕಾರ ಹಿಡಿದ ಖಿಲ್ಜಿ ವಂಶದ ಅಲ್ಲಾವುದ್ದೀನನು ದೆಹಲಿಗೆ ಮಾರುಕಟ್ಟೆ ಮಂತ್ರ ಹೇಳಿಕೊಟ್ಟ ಮಹನೀಯ. ಆತನ ಕಾಲದಲ್ಲಿ ದೆಹಲಿಗೆ ಆಗಮಿಸಿದ ಟರ್ಕಿಶ್ ಜನರಿಂದಾಗಿ ಒಂದೇ ಸಮನೆ ಏರತೊಡಗಿದ್ದ ಬೆಲೆಗಳನ್ನು ನಿಯಂತ್ರಿಸಲು ಆತ ಹೆಣಗಾಡಿದ್ದು ಕುತೂಹಲಕರವಾಗಿದೆ. ಅಲೈ ದರ್ವಾಜಾ, ಹೌಸ್ ಖಾಸ್ ಕೆರೆಗಳನ್ನು ನಿರ್ಮಿಸಿದ ಆತ ದೆಹಲಿಯ ಜನರಿಗೆ ಇಂದಿಗೂ ಸುಂದರ ನೆನಪು. ಖಿಲ್ಜಿ ವಂಶ ಕೊನೆಗೊಂಡಾನಂತರ ದೆಹಲಿ ಆಡಳಿತ ಹಿಡಿದ ತುಘಲಕ್ ವಂಶಸ್ಥರು ಬೃಹತ್ ಕೋಟೆಗಳನ್ನು ಕಟ್ಟಿದರು, ದೆಹಲಿಯನ್ನು ದೇವಗಿರಿಗೆ ವರ್ಗಾಯಿಸಲು ಪ್ರಯತ್ನಿಸಿದರು. ಲೋಧಿ ಅರಸರ ಸಮಾಧಿ ಸ್ಥಳ ಇಂದು ಪ್ರೇಮಿಗಳ ಸಂಧಿಸ್ಥಳವಾಗಿದೆ.

1500ರ ಸುಮಾರಿಗೆ ದೆಹಲಿಯನ್ನಾಳಲು ಆರಂಭಿಸಿದ ಮೊಘಲರ ನೆನಪುಗಳು ಇಂದಿನ ದೆಹಲಿಯ ತುಂಬ ವ್ಯಾಪಕವಾಗಿ ಹರಡಿಕೊಡಿದೆ. ಹುಮಾಯೂನ, ಅಕ್ಬರ, ಜಹಾಂಗೀರ, ಷಹಾಜಹಾನ್, ದಾರಾಶಿಖೋ, ಔರಂಗಜೇಬ ಮೊದಲಾದವರು ದೆಹಲಿಯ ಮುಖ್ಯ ರಸ್ತೆಗಳ ಹೆಸರಾಗಿಯಾದರೂ ಹೊಸ ತಲೆಮಾರಿಗೆ ತಿಳಿಯುತ್ತಿದೆ. ಯಮುನೆಯ ದಡದಲ್ಲಿ ತಲೆ ಎತ್ತಿ ನಿಂತಿರುವ ಕೆಂಪುಕೋಟೆಯಿಂದ ಇಂದು ಸ್ವತಂತ್ರ ಭಾರತದ ಬಾವುಟ ಹಾರಾಡುತ್ತಿದೆ. ಮೊಘಲರ ಕೊನೆ ಅರಸನಾದ ಬಹದೂರ್ ಶಾ ಜಫರ್‌ನಿಗೆ ಊಟ ತಯಾರು ಮಾಡಿಕೊಡುತ್ತಿದ್ದ ಕರೀಂ ಸಾಬರ ಚಿಕನ್ ಶಾಪ್ ಈಗಲೂ ಜಾಮಾ ಮಸೀದಿ ಬಳಿ ಕಾರ್ಯನಿರತವಾಗಿದೆ. ಮೊಘಲರ ಕೊನೆಯ ಅರಸನನ್ನು ಸುಲಭವಾಗಿ ಸೋಲಿಸುವುದರೊಂದಿಗೆ ದೆಹಲಿಗೆ ಪ್ರವೇಶ ಪಡೆದ ಬ್ರಿಟಿಷರು ಆರಂಭಿಕ ಹಂದಲ್ಲಿ ಕಲ್ಕತ್ತವನ್ನೇ ರಾಜಧಾನಿ ಮಾಡಿಕೊಂಡಿದ್ದರು. ಆದರೆ ೧೯೦೦ರ ಬಳಿಕ ಕಾಣಿಸಿಕೊಂಡ ಬಂಗಾಳ ಪ್ರಕ್ಷುಬ್ಧತೆ, ಕಲ್ಕತ್ತದ ಪ್ರತಿಕೂಲ ಹವೆಗಳಿಂದ ಬೇಸತ್ತ ಬ್ರಿಟಿಷರು ಕಲ್ಕತ್ತ ತೊರೆದು ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಲು ಯೋಚಿಸಿದರು. 1900ರಲ್ಲಿ ಭಾರತಕ್ಕೆ ಆಗಮಿಸಿದ ಬ್ರಿಟಿಷ್ ಚಕ್ರವರ್ತಿ ಐದನೇ ಜಾರ್ಜ್ ಈ ಕುರಿತು ಆದೇಶ ಹೊರಡಿಸಿದ ಆನಂತರ ’ರಾಜಧಾನಿ ನವದೆಹಲಿ’ಯನ್ನು ಕಟ್ಟಲು ಆರಂಭಿಸಲಾಯಿತು.

ದೆಹಲಿಯನ್ನು ಬ್ರಿಟಿಷ್ ಸಾಮ್ರಾಜ್ಯದ ’ಇಂಡಿಯಾ ಕ್ಯಾಪಿಟಲ್ ಆಗಿಸುವ ಹೊಣೆ ಹೊತ್ತವನು ಲ್ಯುಟಿನ್ಸ್ ಎಂಬ ಅಸಾಧಾರಣ ಪ್ರತಿಭೆಯ ವಾಸ್ತುಶಿಲ್ಪಿ. ಆ ಕಾಲದ ಜಗತ್ತಿನ ಪ್ರಮುಖ ನಗರಗಳಾದ ಪ್ಯಾರಿಸ್, ಬರ್ಲಿನ್, ಲಂಡನ್, ಸಿಡ್ನಿ ಮತ್ತು ವಾಷಿಂಗ್ಟನ್ ಡಿ ಸಿ. ನಗರಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದ ಲುಟಿನ್ಸ್ ವೈಯಕ್ತಿಕವಾಗಿ ಬಹಳ ದುರಹಂಕಾರಿಯಾಗಿದ್ದ. ಆತನು ಕಟ್ಟಲಿದ್ದ ನವದೆಹಲಿಯ ಬಗ್ಗೆ ಬ್ರಿಟಿಷ್ ಸಂಸತ್ತಿನಲ್ಲಿ ಸುದೀರ್ಘವಾಗಿ ಚರ್ಚೆಯಾಗಿತ್ತು. ಪ್ರತಿಭೆಗೆ ಮನ್ನಣೆ ನೀಡುವ ಬ್ರಿಟಿಷ್ ಸಂಸತ್ತು ಲ್ಯುಟಿನ್ಸ್‌ನ್ನು ಕೇಳಿಕೊಂಡಾಗ “ನೀನು ಕಟ್ಟಲಿರುವ ಆಧುನಿಕ ದೆಹಲಿಯ ವಾಸ್ತುಶಿಲ್ಪಕ್ಕೆ ಭಾರತದ ಪಾರಂಪರಿಕ ವಾಸ್ತುಶಿಲ್ಪದ ಸ್ಪರ್ಶ ಇರಲಿ” ಎಂಬ ಸೂಚನೆ ನೀಡಿದ್ದರು. ಸಿಟ್ಟಿಗೆದ್ದ ಲ್ಯುಟಿನ್ಸ್‌ನು ಚಕ್ರವರ್ತಿ ಜಾರ್ಜ್‌ನ ಚಿತ್ರ ಬರೆದು ಅವನ ಮುಖಕ್ಕೆ ಷಹಜಹಾನನ ಗಡ್ಡ ಅಂಟಿಸಿದ ಮತ್ತು ಮಹಾರಾಣಿಯ ಚಿತ್ರ ಬರೆದು ಅದಕ್ಕೆ ಬುರುಖಾ ಹಾಕಿ “ಬ್ರಿಟಿಷರ ಆಧುನಿಕತೆಗೆ ಭಾರತದ ಪರಂಪರೆಯನ್ನು ಜೋಡಿಸುವುದೆಂದರೆ ಹೀಗೆ” ಅಂತ ಹೇಳಿ ಬ್ರಿಟಿಷ್ ಪತ್ರಿಕೆಗಳಲ್ಲಿ ಅವಳಿ ಚಿತ್ರಗಳನ್ನು ಪ್ರಕಟಿಸಿಬಿಟ್ಟ. ಇಷ್ಟಿದ್ದರೂ ಆತ ಕೊನೆಗೆ ಮೊಘಲ್ ವಾಸ್ತುಶಿಲ್ಪದ ಕೆಲವು ಅತ್ಯುತ್ತಮ ಭಾಗಗಳನ್ನು ಅಳವಡಿಸಿಕೊಂಡು, ಅರಾವಳಿ ಪರ್ವತ ಶ್ರೇಣಿಯ ಭಾಗವಾದ ರೈಸ್ನಾ ದಿಬ್ಬದ ಮೇಲೆ ಅದ್ಭುತವಾದ ’ವೈಸರಾಯ್ ಬಂಗಲೆ’ಯನ್ನು, ಅದರ ಎಡಬಲಗಳಲ್ಲಿ ಕಚೇರಿಗಳನ್ನು ಕಟ್ಟಿದ. ಇದಕ್ಕೆ ಸುಮಾರು ೩೫ ವರ್ಷಗಳ ಕಾಲ ಸಾವಿರಾರು ಜನ ದುಡಿದರು. ಸ್ವಾತಂತ್ರ್ಯಾನಂತರ ಈ ’ಬಂಗಲೆ’ಯನ್ನು ’ರಾಷ್ಟ್ರಪತಿ ಭವನ’ವನ್ನಾಗಿ ಮಾರ್ಪಡಿಸಲಾಯಿತು. ಅದರ ಎಡಬಲದ ಕಚೇರಿಗಳಲ್ಲಿ ಇಂದು ಪ್ರಧಾನಮಂತ್ರಿಗಳ ಮತ್ತು ಇತರ ಮಂತ್ರಿಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ಲ್ಯುಟಿನ್ಸ್ ವೈಸರಾಯ್‌ಗೆ ಕಟ್ಟಿದ ಅರಮನೆಯಂಥ ಬಂಗಲೆಗೆ ಹೈದರಾಬಾದಿನ ನಿಜಾಮ, ಬರೋಡದ ಮತ್ತು ಜೈಪುರದ ಅರಸರು ಉದಾರವಾಗಿ ದೇಣಿಗೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಆ ಅರಸರು ಇಂದಿನ ’ಇಂಡಿಯಾ
ಗೇಟ್ನ ಸುತ್ತ ಸ್ವಲ್ಪ ಜಾಗ ಪಡಕೊಂಡರು. ಲ್ಯುಟಿನ್ಸ್ ಅವರಿಗೂ ಬಂಗಲೆ ಕಟ್ಟಿಸಿದ. ನಮ್ಮ ಮೈಸೂರಿನ ಅರಸರಿಗೆ ದೇಣಿಗೆ ನೀಡಲಾಗಿಲ್ಲ. ಕಾರಣ, ಆಯಕಟ್ಟಿನ ಜಾಗದಲ್ಲಿ ಮೈಸೂರು ಹೌಸ್ ಬರಲಿಲ್ಲ. ಇಂದು ದೆಹಲಿಯ ಸುತ್ತಮುತ್ತ ನೊಯ್ಡಾ, ಫರಿದಾಬಾದ್, ಗುರ್ಗಾಂವ್‌ಗಳು ಇತಿಹಾಸದ ಭಾರವಿಲ್ಲದೆ ಅತ್ಯಾಧುನಿಕವಾಗಿ ಬೆಳೆದುನಿಂತಿವೆ. ದೆಹಲಿ ಮಾತ್ರ ಒಂದೆಡೆಯಲ್ಲಿ ಹಜರತ್ ನಿಜಾಮುದ್ದೀನ್‌ನಲ್ಲಿನ ಮಧ್ಯಕಾಲೀನ ಯುಗದ ಕವಾಲಿಗಳಿಗೆ ಇನ್ನೂ ಕಿವಿಗೊಡುತ್ತಿದೆ, ಆದರೆ ಅಲ್ಲಿಯೇ ನಿಲ್ಲದೆ ಇನ್ನೊಂದೆಡೆ ಅತ್ಯಾಧುನಿಕವಾದ ಮೆಟ್ರೋ ರೈಲನ್ನು ಸಾಧ್ಯಮಾಡಿದೆ. ಜೊತೆಗೆ ಮಹಾಭಾರತದ ಕುರುಕ್ಷೇತ್ರ ಯುದ್ಧದಿಂದ ಆರಂಭವಾದ ದೆಹಲಿಯ ರಕ್ತ-ಸಿಕ್ತ ಇತಿಹಾಸ ಆಗಾಗ ಮರುಕಳಿಸುತ್ತಾ ಬಂದಿರುವುದೂ ನಿಜ.

ಕಳೆದ ನೂರಾ ಹತ್ತು ವರ್ಷದ ಇತಿಹಾಸ ನಮಗೆ ತಿಳಿದಿದೆ, ಮುಂದಿನದನ್ನು ಊಹಿಸಲಾಗುತ್ತಿಲ್ಲ. ಭಾರತೀಯ ಪರಂಪರೆಯ ಬಗ್ಗೆ ಬಹಳ ಮಾತಾಡುವ ಬಿಜೆಪಿ ಸರಕಾರವು ಸೆಂಟ್ರಲ್ ವಿಸ್ತಾದ ಮೂಲಕ ಎಂಥಾ ರಾಜಧಾನಿಯನ್ನು ನಮಗೆ ಕಟ್ಟಿಕೊಡುತ್ತಿದೆ ಎಂದು ಊಹಿಸುವಾಗ ಮಾತ್ರ ನಿರಾಶೆಯಾಗುತ್ತಿದೆ. ಸುತ್ತೆಲ್ಲ ಜನರು ಸಾಯುತ್ತಿರುವಾಗ, ಆರ್ಥಿಕತೆ ನೆಲ ಕಚ್ಚಿರುವಾಗ ಇಷ್ಟೊಂದು ಅವಸರದಲ್ಲಿ ಇದನ್ನು ಯಾಕೆ ಕಟ್ಟುತ್ತಿದ್ದಾರೋ ತಿಳಿಯದು. ಮಾತಾಡುವಾಗ ಸರಸ್ವತಿ ನದಿ ತೀರದಲ್ಲಿ ಬದುಕಿದ್ದ ಋಷಿಮುನಿಗಳ ಪರಂಪರೆ, ವ್ಯವಹಾರಕ್ಕೆ ಪಂಚತಾರಾ ಹೋಟೆಲಿನಂಥ ವ್ಯವಸ್ಥೆ! ಈ ವೈರುಧ್ಯಗಳ ನಡುವೆ ಇಂದಿನ ಭಾರತ ಏದುಸಿರು ಬಿಡುತ್ತಿರುವುದಂತೂ ನಿಜ.

ಪ್ರೊ. ಪುರುಷೋತ್ತಮ ಬಿಳಿಮಲೆ
ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಜೆಎನ್‌ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಬಿಳಿಮಲೆ, ಅವರ ’ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಇದನ್ನೂ ಓದಿ: ಲ್ಯುಟಿನ್ಸ್ ದೆಹಲಿಯ ಐಶಾರಾಮದ ಬಗ್ಗೆ ಗೇಲಿ; ಸಾವಿನ ಸರಣಿಯ ಮಧ್ಯೆ 20 ಸಾವಿರ ಕೋಟಿ ಮಹಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...