ಅಲೋಪಥಿ ಚಿಕಿತ್ಸೆಯ ಕುರಿತು ಬಾಬಾ ರಾಮ್‌ದೇವ್ ಹೇಳಿಕೆ ದೇಶಾದ್ಯಂತ ವೈದ್ಯ ಸಮೂಹದಲ್ಲಿ ಆಕ್ರೋಶವನ್ನು ಹುಟ್ಟಿಸಿದೆ. ಬಾಬಾ ರಾಮ್ ದೇವ್ ಅವರ ಇಂಗ್ಲೀಷ್ ಮೆಡಿಸಿನ್ ಎಂಬ ಆಧುನಿಕ ವೈದ್ಯ ಪದ್ಧತಿ ಬೋಗಸ್ ಹೇಳಿಕೆಗೆ ದೇಶಾದ್ಯಂತ ನೂರಾರು ಸಂಖ್ಯೆಯ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ದೆಹಲಿ ನಗರದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಇಂದು ಕಪ್ಪು ರಿಬ್ಬನ್ ಧರಿಸಿ ಕರ್ತವ್ಯಕ್ಕೆ ಹಾಜಾರಾಗುವ ಮೂಲಕ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ದೆಹಲಿಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಈ ಪ್ರತಿಭಟನೆಗೆ ಕರೆಕೊಟ್ಟಿದ್ದು ಸಂಘಟನೆಗೆ ಸೇರಿದ ಸರಿ ಸುಮಾರು 20 ಸಾವಿರ ವೈದ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಎಲ್ಲಾ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದದ್ದು ಜೂನ್ 1 ಮಂಗಳವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
Safdarjung Doctors wearing black ribbons while doing their work and saving the lives of patients. They are demanding action against Ramdev. pic.twitter.com/RTN6oRiVV0
— Hemant Rajaura (@hemantrajora_) June 1, 2021
ಎಂದಿನಂತೆ ನಾವು ಕರ್ತವ್ಯಕ್ಕೆ ಹಾಜರಾಗುತ್ತೇವೆ. ನಮ್ಮ ಕರ್ತವ್ಯವನ್ನು ಮುಂದುವರೆಸುತ್ತೇವೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವೈದ್ಯರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರ ತ್ಯಾಗಕ್ಕೆ ದೇಶದ ಸೇವೆಗೆ ಅವಮಾನ ಮಾಡುವಂತಹ ವರ್ತನೆ ವಿರುದ್ಧ ನಮ್ಮ ಶಾಂತಿಯುತ ಪ್ರತಿಭಟನೆ ಮುಂದುವರೆಯುತ್ತದೆ. ಲಕ್ಷಕ್ಕೂ ಅಧಿಕ ವೈದ್ಯರು ತಮ್ಮ ಜೀವವನ್ನೂ ಲೆಕ್ಕಿಸದೇ ಜನರಿಗೆ ಚಿಕಿತ್ಸೆ ನೀಡುತ್ತಿರುವ ಈ ಸಂದರ್ಭದಲ್ಲಿ ವೈದ್ಯರ ಮತ್ತು ವೈದ್ಯಕೀಯ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟಿಸುವ ಹೇಳಿಕೆ ಮತ್ತು ವರ್ತನೆಗಳನ್ನು ಸಹಿಸಲು ಸಾಧ್ಯವಿಲ್ಲ ಹಾಗಾಗಿ ನಾವು ಕಪ್ಪು ಪಟ್ಟಿ ಧರಿಸಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂದು ದೆಹಲಿಯ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ’ಯಾರಿಂದಲೂ ನನ್ನ ಅರೆಸ್ಟ್ ಮಾಡಲು ಸಾಧ್ಯವಿಲ್ಲ’- ಬಾಬಾ ರಾಮ್‌ದೇವ್ ಹೇಳಿಕೆ
ನಮ್ಮ ಪ್ರತಿಭಟನೆ ಆಯುರ್ವೇದ ಚಿಕಿತ್ಸಾ ಪದ್ಧತಿಯ ವಿರುದ್ಧವಲ್ಲ. ಪದೇ ಪದೇ ವೈದ್ಯ ಸಮೂಹವನ್ನು ಅವಮಾನಿಸುತ್ತಿರುವ ಬಾಬಾ ರಾಮ್ ದೇವ್ ವಿರುದ್ಧ ನಮ್ಮ ಪ್ರತಿಭಟನೆ ಎಂದು ದೆಹಲಿ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮನಿಶ್ ಕುಮಾರ್ ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (IMA) ಮತ್ತು IMA ಕಿರಿಯ ವೈದ್ಯರ ಸಮೂಹ ಸಹ ಈ ಪ್ರತಿಭಟನೆಗೆ ಬೆಂಬಲಿಸಿದೆ. ಕಳೆದ ಮಂಗಳವಾರವೇ ವೈದ್ಯಕೀಯ ಸಂಘಗಳು ತಮ್ಮ ಸದಸ್ಯರಿಗೆ ಪ್ರತಿಭಟನೆ ಕುರಿತು ಮಾಹಿತಿ ನೀಡಿದ್ದವು. ಅಖಿಲ ಭಾರತ ವೈದ್ಯಕೀಯ ಸಂಸ್ಥೆ(AIIMS) ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದೆ. AIIMS ನ ವೈದ್ಯರು ಕೆಲವು ದಿನಗಳ ಹಿಂದೆ ಕೂಡ ಬಾಬಾ ರಾಮದೇವ್ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.
AIIMS ಹೃಷಿಕೇಶ್, IMA ರಾಜಸ್ಥಾನ್, ಮಹರಾಷ್ಟ್ರ ಸ್ಟೇಟ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್, (MARD) ಕರ್ನಾಟಕ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (KARD) ಸೇರಿ ದೇಶಾದ್ಯಂತ ಹಲವಾರು ವೈದ್ಯಕೀಯ ಸಂಘಟನೆಗಳು ಬಾಬಾ ರಾಮದೇವ್ ಹೇಳಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿವೆ.
ಇದನ್ನೂ ಓದಿ; ಯಾರು ಈ ಬಾಬಾ ರಾಮದೇವ್? ಏನು ಈ ಪತಂಜಲಿ?: ಆಧ್ಯಾತ್ಮಿಕ ಬಂಡವಾಳಶಾಹಿಯ ಸಂಪೂರ್ಣ ಡಿಟೇಲ್ಸ್….


