ಮೀರತ್‌ನಲ್ಲಿರುವ ಸರ್ಕಾರಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ರಾಮದೇವ್, ಯೋಗಿ ಆದಿತ್ಯನಾಥರನ್ನು ದಾರ್ಶನಿಕರು ಎಂದು ಈಗಾಗಲೇ ತನ್ನ ಪಠ್ಯಕ್ರಮದಲ್ಲಿ ಸೇರಿಸಿದ್ದು, ಉಳಿದ ವಿವಿಗಳು ಶೀಘ್ರದಲ್ಲೇ ಅನುಸರಿಸುವ ಸಾಧ್ಯತೆಯಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಉತ್ತರ ಪ್ರದೇಶ ಕೋವಿಡ್ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಈಗಾಗಲೇ ಟೀಕೆ ಎದುರಿಸಿದ್ದಾರೆ. ಅಲೋಪತಿ ವೈದ್ಯ ಪದ್ದತಿಯನ್ನು ಅವಹೇಳನ ಮಾಡಿದ ಕಾರಣಕ್ಕಾಗಿ ಬಾಬಾ ರಾಮ್‌ದೇವ್ ದೊಡ್ಡ ವಿರೋಧ ಎದುರಿಸಿದ್ದಾರೆ. ಆದರೆ ಈ ಇಬ್ಬರನ್ನು ಹೀರೋ ಮಾಡಲು ಬಿಜೆಪಿ ಹೊರಟಿದೆಯೇ? ಕೋವಿಡ್‌ಗಿಂತ ಮುಂದಿನ ವರ್ಷದ ಉತ್ತರಪ್ರದೇಶದ ಚುನಾವಣೆಯೇ ಬಿಜೆಪಿಗೆ ಆದ್ಯತೆಯಾಗಿದೆಯೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಕುರಿತು ಉತ್ತರ ಪ್ರದೇಶದ ರಾಜ್ಯ ಸಮಿತಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಬರೆದ ಪುಸ್ತಕಗಳನ್ನು ರಾಜ್ಯದಾದ್ಯಂತದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಅಂಗಸಂಸ್ಥೆ ಕಾಲೇಜುಗಳಲ್ಲಿ ತತ್ವಶಾಸ್ತ್ರ ಕೋರ್ಸ್ ಅಡಿಯಲ್ಲಿ ಈ ಎರಡು ಪುಸ್ತಕಗಳನ್ನು ಶಿಫಾರಸು ಮಾಡಲಾಗಿದೆ.
ಉತ್ತರಪ್ರದೇಶದ ಸರ್ಕಾರದ ಅಧೀನದಲ್ಲಿ ಇರುವ ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ (ಸಿಸಿಎಸ್‌ಯು) ಈಗಾಗಲೇ ತನ್ನ ಪಠ್ಯಕ್ರಮದಲ್ಲಿ ಪುಸ್ತಕಗಳನ್ನು ಸಂಯೋಜಿಸಿದೆ. ಇದರಲ್ಲಿ ‘ದಾರ್ಶನಿಕರಾದ’ ಬಾಬಾ ಮತ್ತು ಯೋಗಿ ಅವರ ಬಗ್ಗೆಯೇ ಪುಸ್ತಕಗಳಿವೆ, ಅವರು ಬರೆದ ಪುಸ್ತಕಗಳೇ ಪಠ್ಯವಾಗಿವೆ ಮತ್ತು ಕೆಲವು ಕಡೆ ಪಾಠಗಳೂ ಇವೆ.
ಆದಿತ್ಯನಾಥ್ ಅವರ ಹತ್ಯೋಗ ಕಾ ಸ್ವರೂಪ್ ವಾ ಸಾಧನಾ ಮತ್ತು ಬಾಬಾ ರಾಮದೇವ್ ಅವರ ಯೋಗ ಸಾಧನಾ ವಾ ಯೋಗ ಚಿಕಿತ್ಸಾ ರಹಸ್ಯ ಈಗ ವಿಶ್ವವಿದ್ಯಾಲಯದ ಎರಡನೇ ಸೆಮಿಸ್ಟರ್ ಪದವಿಪೂರ್ವ ತತ್ವಶಾಸ್ತ್ರ ಪಠ್ಯಕ್ರಮದ ಭಾಗವಾಗಿವೆ!
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ ಬಂಜಗೆರೆ ಜಯಪ್ರಕಾಶ್, ‘ಈ ಹೊಸ ಶಿಕ್ಷಣ ನೀತಿ ಎಂಬುದೇ ಒಂದು ಅಜೆಂಡಾ. ಈ ನೀತಿ ಜಾರಿ ತಂದಿರುವುದೇ ದೇಶಪ್ರೇಮ, ರಾಷ್ಟ್ರವಾದದ ಹೆಸರಿನಲ್ಲಿ ಜನರನ್ನು ಒಡೆಯುವ ಭಾಗವಾಗಿಯೇ. ಯೋಗಿ, ರಾಮದೇವ್ ಫಿಲಾಸಫಿ ಪಠ್ಯಗಳಲ್ಲಿ ಬಂದಿರುವುದು ಹೊಸ ಶಿಕ್ಷಣ ನೀತಿಯ ಹುನ್ನಾರಗಳಿಗೆ ಮೊದಲ ಸಾಕ್ಷಿಯಂತಿದೆ. ‘ಮುಂದಿನ ದಿನಗಳಲ್ಲಿ ಗೋಮೂತ್ರ ಸೇವನೆ, ಸೆಗಣಿ ಸ್ನಾನ ಕೂಡ ವಿಜ್ಞಾನ ಮತ್ತು ವೈದ್ಯಕೀಯ ಪಠ್ಯಗಳಲ್ಲಿ ಬಂದರೂ ಬರಬಹುದು’ ಎಂದರು.
ಶೈಕ್ಷಣಿಕ, ಸಾಹಿತ್ಯಿಕ ಮೌಲ್ಯವಂತೆ!
ಹೆಸರಿಸಲು ಇಚ್ಛಿಸದ ಪಠ್ಯಕ್ರಮ ಅಭಿವೃದ್ಧಿ ಸಮಿತಿಯ ಸದಸ್ಯರೊಬ್ಬರು, ಈ ಪುಸ್ತಕಗಳನ್ನು ಅವುಗಳ “ಉನ್ನತ ಸಾಹಿತ್ಯಿಕ ಮೌಲ್ಯ”ದ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ದಿ ಪ್ರಿಂಟ್‌ಗೆ ಹೇಳಿದ್ದಾರೆ.
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಅಲಪಾನ್ ಬಂದೋಪಾದ್ಯಾಯ್‌ರವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರಕ್ಕಿದೆಯೇ?


