ಒಕ್ಕೂಟ ಸರ್ಕಾರದ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ‘ಬ್ಲೂ ಟಿಕ್’ ಬ್ಯಾಡ್ಜ್‌ಗಾಗಿ ಟ್ವಿಟ್ಟರ್ ಜೊತೆ ಹೋರಾಡುವ ಬದಲು ಕೊರೊನಾ ವಿರುದ್ಧ ನಾಗರಿಕರಿಗೆ ಲಸಿಕೆ ಹಾಕುವ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಮಹಾರಾಷ್ಟ್ರ ಸಚಿವ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ವಕ್ತಾರ ನವಾಬ್ ಮಲಿಕ್ ಸೋಮವಾರ ಹೇಳಿದ್ದಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಆರ್‌ಎಸ್‌ಎಸ್ ಉನ್ನತ ನಾಯಕರ ವೈಯಕ್ತಿಕ ಖಾತೆಗಳ ‘ಬ್ಲೂ ಟಿಕ್’ ಅನ್ನು ಟ್ವಿಟರ್ ತೆಗೆದು ಹಾಕಿತ್ತು ಮತ್ತು ನಂತರ ಅದನ್ನು ಮರು ಸ್ಥಾಪಿಸಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಕೆಲವೇ ದಿನಗಳ ನಂತರ ನವಾಬ್ ಮಲಿಕ್ ಸುದ್ದಿಗಾರರೊಂದಿಗೆ ಮಾತನಾಡಿ ಒಕ್ಕೂಟ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಬ್ಲೂಟಿಕ್ ತೆಗೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರ್, “ಬ್ಲೂಟಿಕ್ ಬ್ಯಾಡ್ಜ್ ಇರುವ ಟ್ವಿಟರ್ ಖಾತೆಯು ಆರು ತಿಂಗಳವರೆಗೆ ನಿಷ್ಕ್ರಿಯವಾಗಿದ್ದರೆ ಅಥವಾ ಅದರ ಪರಿಶೀಲನೆಯು ಅಪೂರ್ಣವಾಗಿದ್ದರೆ ಅದು ಸ್ವಯಂಚಾಲಿತವಾಗಿ ತೆಗೆದುಹಾಕಬಹುದು” ಎಂದು ಹೇಳಿತ್ತು.
ಇದನ್ನೂ ಓದಿ: ರೈತರಿಂದ ಕ್ರಾಂತಿ ದಿವಸ್ ಆಚರಣೆ; ಕೃಷಿ ಕಾನೂನಿನ ಪ್ರತಿ ಸುಡುವ ಮೂಲಕ ದೇಶಾದ್ಯಂತ ಪ್ರತಿಭಟನೆ
‘ಬ್ಲೂ ಟಿಕ್’ ವಿಷಯದ ಬಗ್ಗೆ ಬಿಜೆಪಿ ಮತ್ತು ಒಕ್ಕೂಟ ಸರ್ಕಾರ ಟ್ವಿಟ್ಟರ್ ಜೊತೆ ಹೋರಾಡುತ್ತಿರುವಾಗ, ದೇಶದ ನಾಗರಿಕರು ಕೊರೊನಾ ವಿರುದ್ಧ ಲಸಿಕೆ ಹಾಕಲು ಹೋರಾಡುತ್ತಿದ್ದಾರೆ ಎಂದು ನವಾಬ್ ಮಲಿಕ್ ಸೋಮವಾರ ಹೇಳಿದ್ದಾರೆ.
“ಇದು ಬ್ಲೂಟಿಕ್ ಆಗಿರಲಿ ಅಥವಾ ವ್ಯಾಕ್ಸಿನೇಷನ್ ವಿಷಯವಾಗಿರಲಿ ಒಕ್ಕೂಟ ಸರ್ಕಾರವನ್ನು ಟೀಕಿಸಲಾಗುತ್ತಿದೆ. ಆದರೆ ಒಕ್ಕೂಟ ಸರ್ಕಾರವು ಟೀಕೆಗಳನ್ನು ನಿರ್ಲಕ್ಷಿಸುತ್ತಾ ತನ್ನ ದುರಹಂಕಾರ ಪ್ರದರ್ಶಿಸುತ್ತಿದೆ. ಟ್ವಿಟರ್‌ನೊಂದಿಗೆ ಬ್ಲೂಟಿಕ್ ವಿರುದ್ಧ ಹೋರಾಡುವ ಬದಲು ನಾಗರಿಕರಿಗೆ ಲಸಿಕೆ ಹಾಕುವಲ್ಲಿ ಬಿಜೆಪಿ ಹೆಚ್ಚು ಗಮನ ಹರಿಸಬೇಕು” ಎಂದು ಅವರು ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ನವಾಬ್ ಮಲಿಕ್, “ಜನರು ಕೊರೊನಾ ತಡೆಗಟ್ಟುವ ಮಾನದಂಡಗಳನ್ನು ಅನುಸರಿಸಿದರೆ, ಇಡೀ ಮಹಾರಾಷ್ಟ್ರವು ಲಾಕ್‌ಡೌನ್ ನಿರ್ಬಂಧಗಳಿಂದ ಹೊರಬರುತ್ತದೆ” ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಆಡಳಿತವಿದೆ.
ಇದನ್ನೂ ಓದಿ: ಪಿಜ್ಜಾ, ಬರ್ಗರ್, ಸ್ಮಾರ್ಟ್‌ಫೋನ್ ಮನೆ ಬಾಗಿಲಿಗೆ ಬರುವುದಾದರೇ, ಪಡಿತರವೇಕೆ ಬೇಡ? ಕೇಂದ್ರಕ್ಕೆ ಕೇಜ್ರಿವಾಲ್ ಪ್ರಶ್ನೆ


