ಬಿಜೆಪಿಯ ಹಿರಿಯ ಮುಖಂಡ, ಉತ್ತರಪ್ರದೇಶ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಭಾನುವಾರ ಲಖನೌದಲ್ಲಿ ಭೇಟಿಯಾಗಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಈಗ ಉತ್ತರಪ್ರದೇಶದ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಯೋಗಿ ಆದಿತ್ಯನಾಥರ ಜನ್ಮದಿನಕ್ಕೆ ಮೋದಿಯವರು ಟ್ವೀಟ್‍ ಮಾಡಿ ಶುಭಾಶಯ ಕೋರಲಿಲ್ಲ ಮತ್ತು ಉತ್ತರಪ್ರದೇಶದ ಸರ್ಕಾರಿ ಜಾಹಿರಾತುಗಳಲ್ಲಿ  ಕಳೆದ ವಾರದಿಂದ ಮೋದಿಯವರ ಭಾವಚಿತ್ರ ಮಾಯವಾಗಿದೆ. ಈ ಎರಡೂ ಅಂಶಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ನೋಡಿದಾಗ, ಕೇಂದ್ರ ನಾಯಕರು ಮತ್ತು ಯೋಗಿ ಆದಿತ್ಯನಾಥ್‍ ಅವರ ನಡುವೆ ಅಧಿಕಾರದ ಮುಸುಕಿನ ಗುದ್ದಾಟ ಆರಂಭವಾದಂತಿದೆ.

ಕಳೆದ ವಾರವಷ್ಟೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‍ ಸಂತೋಷ್‍ ಮತ್ತು ಬಿಜೆಪಿ ಉಸ್ತುವಾರಿ ರಾಧಾ ಮೋಹನ್‍ ಸಿಂಗ್‍ ಲಕ್ನೋಗೆ ವಿಶೇಷ ಭೇಟಿ ನೀಡಿದ್ದರು. ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ಮಂತ್ರಿಗಳು ಮತ್ತು ಪಕ್ಷದ ಮುಖಂಡರೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದ್ದರು. ಅವರಿಬ್ಬರೂ ದೆಹಲಿ ತಲುಪಿ ಹಿರಿಯ ನಾಯಕರೊಂದಿಗೆ ಮಾತನಾಡಿದ ನಂತರ, ಭಾನುವಾರ ದಿಢೀರನೆ ರಾಧಾ ಮೋಹನ್‍ ಸಿಂಗ್‍ ಮರಳಿ ಲಕ್ನೋಗೆ ಬಂದು ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ರಾಜ್ಯಪಾಲರ ಭೇಟಿಯ ನಂತರ ಮಾಧ್ಯಮಗಳು ಕೇಳಿದ ಯಾವ ಪ್ರಶ್ನೆಗಳಿಗೂ ರಾಧಾ ಮೋಹನ್‍ ಸಿಂಗ್‍ ಸ್ಪಷ್ಟವಾಗಿ ಉತ್ತರಿಸಿಲ್ಲ. ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದೀರಾ ಎಂದು ಕೇಳಿದಾಗ ಸಿಂಗ್ ಅವರು, ಸಚಿವ ಸಂಪುಟವನ್ನು ವಿಸ್ತರಿಸುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

ರಾಜ್ಯಪಾಲರ ಜೊತೆಗಿನ ಭೇಟಿಯನ್ನು ಸೌಜನ್ಯದ ಭೇಟಿ ಎಂದು ಹೇಳಿದ ಸಿಂಗ್, ನಾನು ರಾಜ್ಯದ ಉಸ್ತುವಾರಿ ವಹಿಸಿಕೊಂಡಾಗಿನಿಂದ, ರಾಜ್ಯಪಾಲರನ್ನು ಭೇಟಿ ಮಾಡಿರಲಿಲ್ಲ ಎಂದು ಹೇಳಿದರು.

ಹಲವಾರು ಬಿಜೆಪಿ ಶಾಸಕರು ಮತ್ತು ಸಂಸದರು ಯೋಗಿ ಅವರ ಕೋವಿಡ್‍ ನಿರ್ವಹಣೆಯ ಬಗ್ಗೆ ಸಾರ್ವಜನಿಕವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು.

ಭಾನುವಾರದ ಭೇಟಿಯ ನಂತರ ಯೋಗಿಯವರೇ ಮುಂದುವರೆಯುತ್ತಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದರೆ, ಸದ್ಯಕ್ಕೆ ಈ ಸಂದರ್ಭದಲ್ಲಿ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದು ಪಕ್ಷದಲ್ಲಿ ಗೊಂದಲ, ಊಹಾಪೋಹಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿಯವರ ಬಗ್ಗೆ ಕೇಳಿದಾಗ, ‘ಯೋಗಿ ಆದಿತ್ಯನಾಥ್ ಉತ್ತಮ ಕೆಲಸ  ಮಾಡುತ್ತಿದ್ದಾರೆ ಎಂದಿರುವ ಸಿಂಗ್‍,  “ಪ್ರತಿಯೊಬ್ಬರೂ ಯೋಗಿಯವರ ನಾಯಕತ್ವವನ್ನು ನಂಬುತ್ತಾರೆ, ಅವರು ಇತ್ತೀಚೆಗೆ ಕೊರೋನಾ ನಿರ್ವಹಣೆಯನ್ನು ಚೆನ್ನಾಗಿ ಮಾಡಿದ್ದಾರೆಂದು ಎಲ್ಲರಿಗೂ ತಿಳಿದಿದೆ” ಎಂದು ಅವರು ಹೇಳಿದ್ದಾರೆ.

2022ರ ಚುನಾವಣೆಯ ತಯಾರಿ?

ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಉತ್ತರಪ್ರದೇಶದ ಸರ್ಕಾರದ ಬಗ್ಗೆ ಚಿಂತಿತಗೊಂಡಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ಪಕ್ಷಕ್ಕೆ ಆತಂಕ ಶುರುವಾಗಿದೆ ಎಂದು ಕಳೆದ ವಾರ ಎನ್‍ಡಿಟಿವಿ ವರದಿ ಮಾಡಿತ್ತು.

ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರು ಮತ್ತು ಸಂಸದರು ಯೋಗಿ ಸರ್ಕಾರದ ಕೋವಿಡ್‍ ನಿರ್ವಹಣೆಯ ವಿಫಲತೆಯ ಬಗ್ಗೆ ಸಾರ್ವಜನಿಕವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರತಿನಿಧಿಗಳಿಗೇ ಆರೋಗ್ಯ ಸೌಲಭ್ಯ ಪಡೆಯಲು ಆಗುತ್ತಿಲ್ಲ ಎಂಬ ಟೀಕೆ ಕೇಳಿ ಬರುತ್ತಿವೆ.

ಮುಂದಿನ ವರ್ಷ ನಡೆಯುವ ನಿರ್ಣಾಯಕ ಚುನಾವಣೆಗೆ ಮುಂಚಿತವಾಗಿ, 2024 ರ ಲೋಕಸಭಾ ಚುನಾವಣೆಯ ಮೇಲೆ ಇದರ ಪರಿಣಾಮಗಳನ್ನು ಈಗಲೇ ಪರಿಗಣಿಸಿ ಬದಲಾವಣೆಗಳನ್ನು ತರುವ ಬಗ್ಗೆ ಯೋಚಿಸಬೇಕು ಎಂಬ ವದಂತಿಗಳು ಹರಡಿವೆ. ಯೋಗಿ ಅಥವಾ ಅವರ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಬದಲಿಸುವ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ ಎನ್ನಲಾಗಿದೆ.

ಸದ್ಯ ಯೋಗಿ ಮತ್ತು ನರೇಂದ್ರ ಮೋದಿಯವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಎನ್ನಲಾದ ಮಾಜಿ ಅಧಿಕಾರಿ ಎ.ಕೆ. ಶರ್ಮಾ ಅವರಿಗೆ ರಾಜ್ಯ ಸರ್ಕಾರದಲ್ಲಿ ಪ್ರಮುಖ ಪಾತ್ರ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಯೋಗಿಯವರ ಆಡಳಿತವನ್ನು ನಿಯಂತ್ರಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಬಹುದು ಎನ್ನಲಾಗಿದೆ.


ಇದನ್ನೂ ಓದಿ: ಹೊಸ ಪ್ರವಾಸೋದ್ಯಮ ನೀತಿ ವಿರೋಧಿಸಿ ಲಕ್ಷದ್ವೀಪ ನಿವಾಸಿಗಳಿಂದ ಉಪವಾಸ ಸತ್ಯಾಗ್ರಹ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here